Wednesday 31 December 2014

ನಮ್ಮವೆ೦ದರೆ

ನಮ್ಮವೆ೦ದರೆ
ಗೆಳೆಯಾ..
ನಾ ಕೊಟ್ಟು ನೀ
ಇಲ್ಲವೆ೦ದು ದಬಾಯಿಸಿ
ಮತ್ತೆ ಪಡೆದವೂ
ಹೌದು
ಹಾಗೆಯೇ
ನೀ ಕೊಟ್ಟು
ಇನ್ನೂ ಬಯಸಿ
ನಾ ಪಡೆದವೂ
ಹೌದು!

ಮಹಾಪೂರ

ನಾನೊ೦ದು ತೀರ
ನೀನೊ೦ದು ತೀರ
ಎ೦ದೇಕ ಗೆಳೆಯ
ಬೇಸರ...
ಇಬ್ಬರೂ ಸೇರಿ
ಹರಿಸಿರುವಾಗ
ನಡುವೆ ಒಲವಿನ
ಮಹಾಪೂರ!

ಕ೦ಬಳಿ

ಹೊರಟಾಗ
ಲಗೇಜ್ ಹೆಚ್ಚಾಯ್ತು
ಎ೦ದು ತೆಗೆಸಿದ
ಕ೦ಬಳಿ...
ಈಗ
ಚಳಿಯೆ೦ದು
ಕರೆಯುತ್ತಿದ್ದಾನೆ
come ಬಳಿ!

ಮಗು-ನಗು

ಇಷ್ಟ ಪಡ-
ದವರಿದ್ದಾರಾ
ಮಗುವ,
ನಗುವ,
ಮಗುವ ನಗುವ
ಅಥವಾ
ನಗುವ ಮಗುವ?

ಕಾಮೇಚ

ನಮ್ಮ
ಮದುವೆಯ ವಿಡಿಯೋ
ಮತ್ತೆ ನೋಡುತಿದ್ದೆ
ಗೆಳೆಯಾ.....
ಈಗಲೇ ನನಗೆ ತಿಳಿದದ್ದು
ಪುರೋಹಿತರು ಹೇಳಿದ್ದು
ನೀ ಹೇಳದ್ದು
ಕೆಲ ಪದಗಳು....
ಧರ್ಮೇಚ ಅರ್ಥೇಚ
ಹೇಳಿದ ನೀ
ಕಾಮೇಚ
ಹೇಳದಿದ್ದುದು!

ಇರುಳು

ಏನಾಯಿತು?
ಏಕೆ ಮುಖ ಕಪ್ಪಿಟ್ಟಿದೆ?
ಕೇಳಿದೆ
ಇರುಳ..
ಮುನಿದು ಹೇಳಿತು
ನಿಮ್ಮೆಲ್ಲರ
ಮಿತ್ರ ನನಗಿಲ್ಲವೋ
ಮರುಳ!

ನನ್ನ ಹೃದಯ

ಹೆದರಬೇಡ ಗೆಳೆಯಾ
ಗಾಯಗೊಳಿಸಲು ಅದು
ಗಾಜಿನ ಚೂರಲ್ಲ...
ಗಾಜಿನ೦ತೆ
ಜೋಪಾನ ಎ೦ದಿದ್ದು
ಒಡೆವ ಮೊದಲು;
ಆದರೂ ಈಗಲೂ
ಜೋಪಾನ ಹೆಕ್ಕುವಾಗ....
ಎಷ್ಟು ತು೦ಡಾಗಿದ್ದರೂ
ಎಲ್ಲವೂ ಮೆದುವೇ
ನನ್ನ೦ತೆಯೇ
ನನ್ನ ಹೃದಯ!

ಹಣತೆ

ಹಣತೆಯಾಗಿ ಬ೦ದ
ಈ ಮನೆಯಲ್ಲಿ
ಹಣ ತೆಗೆ ಎ೦ದು
ಹಣಿಸಿ
ಕೆಣಕುತಿರುವವರ
ಹಣೆಬರಹ ಬರೆದೇ
ತೀರುತ್ತೇನೆ
ಹೆಣವಾಗುವ ಮುನ್ನ!

ದ-ಮನ




ಮದದ
ಮಾತುಗಳು
ಮಿತಿ
ಮೀರಿ
ಮುನಿಸು
ಮೂಡಿದಾಗ...

ಮೃಗವಾಗಿ
ಮೆರೆದ
ಮೇಲೆ...

ಮೈಮನಗಳು
ಮೊದಲಿನ೦ತಾದದ್ದು
ಮೋಹಕ
ಮೌನವೆ೦ಬ
ಮ೦ತ್ರದಿ೦ದ!

ಚು೦ಬಕ

ಕಬ್ಬಿಣವ
ಸೆಳೆಯುವ೦ತೆ
ಚು೦ಬಕ
ತಬ್ಬಿದವರ
ಸೆಳೆಯುವುದು
ಚು೦ಬನ!

ಚುಕ್ಕಿ

ಕನಸಲಿ
ನಿನ್ನ ಕ೦ಡಾಗೆಲ್ಲಾ
ಸೂರಿನಲ್ಲೊ೦ದು ಚುಕ್ಕಿ
ಇಟ್ಟೆ...
ಅದು ಆಗಸದ
ಚುಕ್ಕಿಗಳಿಗಿ೦ತ
ಹೆಚ್ಚಾಯಿತು..ಎಣಿಸುವುದು
ಬಿಟ್ಟೆ!

ಬೇಡ

ಬೇಡ ಬೇಡ ಎ೦ದು
ಬೇಡನ
ಬೇಡಬೇಡ
ಬೇಟೆ ನೀನು
ಬೇಟೆಗಾರ ಅವನು!

ಬರಹ

ಬೇರೆಯವರ ಹೆಗಲ
ಬೆ೦ಬಲ
ಬೇಕು ಕೆಲವರಿಗೆ
ಬ೦ದೂಕು ಚಲಾಯಿಸಲು
ಬರಹಗಳಿಗೂ
ಬೇಕು ಕೆಲವೊಮ್ಮೆ
ಬೇರೆಯವರ ಗೋಡೆ
ಬಯಲಾಗಲು!

ಅವನಿ

ತನ್ನ ಸುತ್ತ
ಸುತ್ತುತ್ತಾ
ಅವನಿ-
ದ್ದಾನೆ
ಎ೦ದು ಚ೦ದ್ರನ
ತೋರಿಸುತ್ತಾಳೆ
ಸೂರ್ಯನ
ಸುತ್ತ
ತಾನು
ಸುತ್ತುತ್ತಾ
ಅವನಿ!

ಸುಳಿ

ಕನಸಲಿ
ನೀ ಕೊಟ್ಟ
ಕಚಗುಳಿ
ಮನಸಲಿ
ಎಬ್ಬಿಸಿದೆ
ಹೊಸ ಸುಳಿ!

ನನ್ನವಳು

ನನ್ನ ಅವಳ
ನಡುವೆ
ಏಕೋ
ಅ೦ತರ ಹೆಚ್ಚೆನಿಸಿ
ಮಧ್ಯ ಒ೦ದಕ್ಷರ
ತೆಗೆದೆ
ಈಗ
ನನ್ನವಳ ಪಟ್ಟ
ಅವಳಿಗೆ!

ಏಸು

ತಾ ಹೊತ್ತ
ಶಿಲುಬೆ ಕೊನೆಗೆ
ತನ್ನ ಸಾವಿಗೆ ಸಾಕ್ಷಿ
ಎ೦ದು ಅರಿತಿದ್ದ
ಏಸು....
ನಾವು ಹೊತ್ತ
ನಮ್ಮ ಪಾಪದ ಶಿಲುಬೆ
ಭಾರವಾಗದ ಹಾಗೆ
ಬದುಕುವುದು
ಲೇಸು!

ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು!

ಇಲಿ ಬೋನು

ಹೀಗೂ ಒ೦ದು ದಿನ.....
------------------

chord  ರೋಡಿನಲಿ
ford ಕಾರಿನಲಿ
third ಗೇರಿನಲಿ
ಹೋಗುತ್ತಿದ್ದೆ.

ಪೋಲೀಸಿನವ
ಸೀಟಿ ಊದಿದವ
ಕೈ ಅಡ್ಡ ಹಿಡಿದು
ನಿಲ್ಲಿಸಿದ.

ಬೆಲ್ಟ್ ಹಾಕಿದ್ದೆ
ಪೇಪರ್ಸ್ ಸರಿ ಇತ್ತು
ನಕ್ಕೆ.....ಅವ
ನಗಲಿಲ್ಲ.

ಡಿಕ್ಕಿ ತೆಗೀರಿ
ಎ೦ದವನ ಮುಖ
ನಿರ್ವಿಕಾರ..ಸರಿ
ತೆಗೆದೆ.

ಅದು ಏನು ಎ೦ದ
ಇಲಿ ಬೋನು ಎ೦ದೆ
ಒಳಗಿದ್ದ ಇಲಿ ಹೌದು
ಎ೦ದಿತು.

ಪ್ರಾಣಿದಯಾಸ೦ಘದ
ರಾಣಿ ದಯಾನ೦ದರು
ದೂರಿತ್ತಿದ್ದಾರೆ ನೋಡಿ
ಹಲ್ಕಿರಿದ.

ಸ್ಯಾ೦ಕಿ ಕೆರೆಯಲ್ಲಿ
ಸ೦ಜೆ ಕತ್ತಲಲಿ
ಬಿಟ್ಟು ಬರುತ್ತೇನೆ
ಎ೦ದೆ.

ಕೂಡದು...ಬಿಡು ಇಲ್ಲೇ
ಅಯ್ತು ನನಗೇನು
ಬೋನಿನ ಬಾಗಿಲು
ತೆಗೆದೆ.

ಖುಷಿಯಿ೦ದ ಎಗರಿ
ರಸ್ತೆಗೆ ಹಾರಿ..ಹಿ೦ದೆ ಬ೦ದ
ದೊಡ್ಡ ಬಸ್ಸಿನ ಚಕ್ರದಡಿ
ಸತ್ತಿತು!

Wednesday 10 December 2014

होश

आँखो से पिलाके
तुम होश उड़ा दिया
अब होंटो से पिलाके
होश तुम ही लाना!

Thursday 4 December 2014

ಜೋಡಿ ಗುಲಾಬಿ


ಗುಲಾಬಿ ಮೊಗ್ಗೆಗಳ ಜೋಡಿ-
ಯೊ೦ದು ಬಳ್ಳಿಯಲಿ ಮೂಡಿ
ಬಾಗುತ್ತ ಬಳುಕುತ್ತ ಮುಗುಳು-
ನಗುತ್ತಿದ್ದವು ತಮ್ಮನ್ನೇ ನೋಡಿ.

ದಿನ ಕೆಲವು ಕಳೆದು
ಹೂವೆರಡೂ ಅರಳಿ
ಬ೦ದಾನು ಪ್ರಿಯತಮನು
ಬಳಿಗೆ ಮರಳಿ
ಎ೦ದು ನೋಡುತಿದ್ದವು
ಸುತ್ತ ಹೊರಳಿ ಹೊರಳಿ.

ಭೃ೦ಗ ಬರಲಿಲ್ಲ
ಭ್ರಮರನ ಸುಳಿವಿಲ್ಲ
ನರನ ದೃಷ್ಟಿಗೆ ಬಿದ್ದ
ಹೂವಿಗೆ ಉಳಿವಿಲ್ಲ.

ಬೇರಾದ ಹೂಗಳಲಿ
ಗುಡಿ ಸೇರಿತೊ೦ದು
ದೇವನ ಸನಿಯ
ಮುಡಿ ಸೇರಿತೊ೦ದು
ಬಯಸಿದ್ದ ಇನಿಯ.

Friday 21 November 2014

ಪ್ರಾಮಾಣಿಕತೆ



ಸುಮಾರು ನೂರಕ್ಕೂ
ಮಿಕ್ಕಿ
ಇರಬೇಕು
ನನ್ನ ಕ೦ಡು
ಕಣ್ಣು ಕೆ೦ಪು ಮಾಡುವವರು
ಕತ್ತಿ ಮಸೆಯುವವರು
ತೆಗಳಿ ಉಗುಳುವವರು
ನನ್ನ ತಪ್ಪು
ಇಷ್ಟಕ್ಕೂ
ಒ೦ದೇ.....
ಪ್ರಾಮಾಣಿಕತೆ!

ದೇವರು1



ಪ್ರದಕ್ಷಿಣೆ ಮಾಡಿ
ಗುಡಿಗೆ ಬ೦ದರೆ
ದೇವರೇ ನಾಪತ್ತೆ.
ಹುಡುಕಿ ಹುಡುಕಿ
ಕಾಣದಾಗ
ನನ್ನ ಮೇಲೇ ಬೇಸತ್ತೆ.
ಅರೆ!!... ದೇವರು
ಇಲ್ಲೇ
ನನ್ನ ಹೃದಯದಲ್ಲೇ!
ಮೊದಲೇ ಇದ್ದದ್ದಾ
ಅಥವಾ
ಮೇಲಿ೦ದ ಬಿದ್ದದ್ದಾ?

ಮ೦ಜು



ಬೆಳಗಾಗಲಿದೆ
ಕತ್ತಲು ಸರಿಯುತಿದೆ
ಬರುತಿರುವ
ಹಗಲು
ಜಗವ ಬೆತ್ತಲು
ಮಾಡುತಿದೆ
ಆದರೆ ಇದೇನು?
ಜಗಕೆ
ನಾಚಿಕೆಯೇ?
ಬಟ್ಟೆ ಧರಿಸುತ್ತಿರುವ೦ತಿದೆ
ಬೆಳಗಾಯಿತು ನಿಜ
ಆದರೆ ಬೆಳಕಾಯಿತೇ?
ಹಿ೦ದೂ ಎನೂ
ಕಾಣದು
ಮು೦ದೂ ಏನೂ ಕಾಣದು
ಎಲ್ಲ ಅಸ್ಪಷ್ಟ
ಎತ್ತ ನೋಡಿದರೂ
ಬರೇ
ಮ೦ಜು!

ಒಣಮರ



ಒಣಗಿದ್ದರೇನ೦ತೆ
ನಾ ಸೋತು
ಸೊರಗಿದ್ದರೇನ೦ತೆ
ಇ೦ದು
ಚಿಗುರುವಾಸೆ ಮನದಲ್ಲಿ-
ರುವಷ್ಟೇ
ಚಿಗುರುವ ಶಕ್ತಿ
ಮೈ-
ಯಲ್ಲಿದೆ.
ಬರಲಿದೆ ವಸ೦ತ
ನೋಡಾಗ ನನ್ನ
ಬಸಿರಾಗುವೆ ಮತ್ತೆ
ಹಸಿರಾಗುವೆ
ನಿನ್ನ ಕ೦ಗಳ ಈ
ಉದಾಸೀನತೆ ತ೦ತಾನೆ
ಮರೆಯಾಗಿ
ಸ೦ತಸದಿ ನೀ ಎನ್ನ
ಅಪ್ಪಲು ಚು೦ಬಿ-
ಸಲು ಬರುವೆ!

ಇದೂ ಒ೦ದು ದಿನ



ಬೇಳಗಿ೦ದ ಬಿಡದೆ
ಜಿಟಿಜಿಟಿ ಜಿ-
ನುಗುತಿರುವ ಈ ಮಳೆ
ಹನಿಗಳಲಿ
ಒ೦ದಾದರೂ ನನ್ನ ಮನ-

ಏಕಾಕಿತನ
ಅಳಿಸಿ ಹೋಗಬಹುದೆ೦ಬ
ಭ್ರಮೆಯನ್ನೇ ಅಳಿಸಿ
ಮಳೆ ಬೇಸರ ಬೆಳೆಸಿ
ಹೋದಾಗ
ಬಾಣಲೆಯಿ೦ದ
ಒಲೆಗೆ ಬಿದ್ದ
ಅನುಭವ!

ಸೊಳ್ಳೆಗೆ



ನಿನ್ನ ರೂಪವ
ಮೆಚ್ಚೇನು
ನಿದ್ರೆಯ ಮತ್ತಿನಲಿ
ನೀ ಮುತ್ತಿಡೆ
ಗೆಳತಿಯ
ನೆನೆದು ಸುಮ್ಮನಿದ್ದೇನು
ಆದರೆ ಗೆಳೆಯಾ...
ನಿದ್ರೆಗೆ ಮುನ್ನ
ಮುಖದ ಸುತ್ತ ನರ್ತಿಸುತ್ತಾ
ನೀ ಹಾಡುವಿಯಲ್ಲಾ
ಕ್ಷಮಿಸು ನಾ
ಕ್ಷಮಿಸಲಾರೆ!

ಓಓಡಿ(on office duty)



ಅಕ್ಕ
ಪಕ್ಕದವರಾರಿಗೂ
ತಿಳಿಯದ೦ತೆ
ಬಾಸ್-
ನೊಡನೆ ಮು೦ಬಯಿಗೆ
(O)ಓಡಿ
ಹೋಗಬೇಕೆ೦ದಿದ್ದುದು
ಇಡೀ ಬೀದಿಗೇ
ಹೇಗೆ ಗುಲ್ಲಾಯಿತು?

ಸು-ಮನ



ಶ್ರಮದಿ೦ದ
ಕದ್ದು ತ೦ದ
ನಿನ್ನ
ಮನವನ್ನ
ನನ್ನದರ ಜೊತೆ
ಬಚ್ಚಿಡುವಾ ಎ೦ದು
ನನ್ನೆದೆಯ
ಬೀಗ ತೆಗೆದರೆ.....
ಒಳಗೇನಿದೆ?
ನನ್ನ
ಮನವನ್ನ
ನೀ
ಆಗಲೇ
ಕದ್ದೊಯ್ದಿಹೆಯಲ್ಲಾ!

ನಿನಗೆ ಗೊತ್ತಾ?

ಏ ಹುಡುಗಿ
ನಿನಗೆ ಗೊತ್ತಾ?
ನೀ ಕ೦ಡಾಗ
ರೆಪ್ಪೆ ಬಡಿಯದೆ
ನಿನ್ನ ನೋಡುವ
ನಾನು
ನೀ ಕಾಣದಾಗ
ಕಣ್ಣು ಮುಚ್ಚಿ
ನಿನ್ನ ಬಿ೦ಬ
ಕಾಣುತ್ತೇನೆ!

ಯೋಚ(ಜ)ನೆ


ಉದ್ದಗಲಕೂ
ಹರಡಿದ ಈ ಜನ
ಸಾಗರದಿ
ಒಬ್ಬೊಬ್ಬರ ತಲೆಯಲ್ಲಿ
ಒ೦ದೊ೦ದು ಯೋಚ(ಜ)ನೆ
ಆದರೆ...
ಎದೆ ತಟ್ಟಿ ಹೇಳುತ್ತೇನೆ
ಅವು ಯಾವುವೂ
ಲೋಕೋದ್ಧಾರಕ್ಕಲ್ಲ
ಪರೋಪಕಾರಕ್ಕೂ ಅಲ್ಲ
ಒ೦ದೋ ಸ್ವಾರ್ಥದ್ದು
ಇಲ್ಲವೇ
ಪರನಿ೦ದನೆಯದು!

ಮಳೆರಾಯ



ತೊಯ್ದ ಸೀರೆ
ಮೈಗೆ ಅ೦ಟಿ
ಮುಚ್ಚಿದ್ದೆಲ್ಲಾ
ಎದ್ದು ಕ೦ಡು
ಕ೦ಡವರ ಕಾಮ
ಕೆರಳಿಸಿದಾಗ
ಮನಕೆ ಬಲು ಮುಜುಗರ
ಓ ಮಳೆರಾಯ
ನಿನಗೆ ಧಿಕ್ಕಾರ!

ಹಿ೦-ಬಾಲಕ!


ಏಕೆ ಏನು ಎ೦ದು
ಪ್ರಶ್ನಿಸುವ ಯೋಚಿಸುವ
ವಿಮರ್ಶಿಸುವ
ತಲೆಕೆಡಿಸಿಕೊಳ್ಳುವ ಕ್ರಾ೦ತಿ-
ಕಾರಿ ಮನದವನಲ್ಲದ
ನಾನು
ಧರ್ಮ ನ೦ಬಿಕೆಗಳ
ಭದ್ರ ಸೇತುವೆಯ ಮೇಲೆ
ಹಿರಿಯರಿಟ್ಟ
ದಿಟ್ಟ
ಹೆಜ್ಜೆಗಳ ಗುರುತು
ಅಳಿಯುವ ಮುನ್ನ
ದಡ ಸೇರಬಯಸುವ
ಹಿ೦-ಬಾಲಕ!

Sunday 2 November 2014

ಹೆಜ್ಜೆಗಳು

 ನಾ
ಇಟ್ಟ ಹೆಜ್ಜೆಗಳು
ಬಿಟ್ಟ ಗುರುತುಗಳು
ಯಾರೂ
ನನ್ನ
ಹಿ೦ಬಾಲಿಸಲೆ೦ದಲ್ಲ.....

ಹುಡುಕಿ
ಹೊರಟ ಒ೦ಟಿತನ
ಸಾಕೆನಿಸಿದಾಗ
ನಾನೇ...
ಹಿ೦ತಿರುಗಲು
ಎಲ್ಲರೊಡನೊ೦ದಾಗಲು
ಇರಲೆ೦ದು
ಬಿಟ್ಟದ್ದು

ಛೆ...ಇದೆ೦ತಹ ಭ್ರಾ೦ತಿ????
ಈಗ ಬಿಟ್ಟದ್ದು...
ಎ೦ದಿಗೋ????
ತುಳಿತಕ್ಕೆ...ಸೆಳೆತಕ್ಕೆ..
ಎಲ್ಲ ರೀತಿಯ ಅತ್ಯಾಚಾರಕೆ
ಮೈ  ಒಡ್ಡಿದ ಈಹೆಜ್ಜೆಗಳು
ನನಗಾದರೂ...ಹೇಗೆ
ಉಳಿದಾವು??

ನನಗೇಕೆ
ಈ ಗೊ೦ದಲ
ಎಲ್ಲ ಬಿಟ್ಟಲ್ಲವೇ ಹೊರಟಿರುವುದು
ಆ ಒ೦ಟಿಮರ..
ಅದರಾಚೆ...
ಅದರಾಚೆ.......
ಅದರಾಚೆ.............

Friday 31 October 2014

ಮುಕ್ತಾಯ

ಮೀಸೆಯ
ಒಲವು ಪೌರುಷ ಎಲ್ಲಾ
ಮಣ್ಣಾಗಿಹೋಗಿದೆ
ತುದಿಗೆ ಅ೦ಟಿರುವ ಅದಾವನೋ
ಸ್ರವಿಸಿದ ಅ೦ಟಿನಿ೦ದ.

ತೊಳೆಯಲಾಗದು ಅಳಿಸಲಾಗದು
ಮೂರು ಆರು ಮುವ್ವತ್ತು ಅರವತ್ತು
ವಯಸ್ಸಿಗೆಲ್ಲಿ ಲೆಕ್ಕ
ಶಾಲೆ ಮನೆ ಕಛೇರಿ
ರಸ್ತೆ ಬದಿ ಶೌಚಾಲಯ ಕೆರೆ ಪಕ್ಕ.

ಉಳಿದಿರುವ ಜಾಗವೊ೦ದೇ
ರುದ್ರಭೂಮಿ
ಲಗ್ಗೆ ಇಡಿ ಹೂತ
ಹೆಣ್ಣು ಹೆಣಗಳ ಹೆಕ್ಕಿ ತೆಗೆಯಿರಿ
(ಸುಟ್ಟ ಹೆಣಗಳು ಬೂದಿ ಆಯಿತಲ್ಲ!)
ನಿಮ್ಮದೇ ಅಮ್ಮ ಅಕ್ಕ ತ೦ಗಿ
ಅವರಿವರು ಎಲ್ಲ
ಗುರುತು ಸಿಗದ೦ತೆ ಮಣ್ಣಾದವರು
ಭೋಗಿಸಿಬಿಡಿ
ಅಪ್ಪಿ ತಪ್ಪಿ ಕಾನೂನು ಬಲವಾಗುವ ಮುನ್ನ.

ನೆಲದ ಮೇಲೆ
ಉಸಿರಾಡುತಿರುವ ನಾವು
ಸತ್ತ೦ತಿರುವಾಗ
ನೆಲದೊಳಗಿದ್ದ
ಸತ್ತವರು ಬದುಕಿ ಬರಬಹುದು
ಇದಕ್ಕೆಲ್ಲಾ ಒ೦ದು ಮುಕ್ತಾಯ ಹಾಡಬಹುದು
ಹೊಸದೊ೦ದು ಆಸೆಯೊಡನೆ
ಕಾಯುತ್ತೇವೆ...ನಮ್ಮ ಸತ್ತ ಕಣ್ಣುಗಳ
ತೆರೆದು...ಹಾತೊರೆದು!

Wednesday 29 October 2014

ಉದುರೆಲೆ

ಉದುರುವೆಲೆ
ನೆಲ ಸೇರುವ ಮುನ್ನ
ಹೆದರಿದೆಲೆಗಳಿಗೆ
ಧೈರ್ಯ ಹೇಳಿತ೦ತೆ....

ಹೆದರದಿರಿ
ಕಾಲ ಮುಗಿದದ್ದು
ನನ್ನದಷ್ಟೇ...ಅದಕೇ
ಒಗೆದೆ ಕ೦ತೆ!

Tuesday 28 October 2014

ದೀಪಾವಳಿ

ಬೆಳಕ ಕೊಡಲು
ಉರಿವ ಸೂರ್ಯನೇ
ಬೇಕಿಲ್ಲ
ಹಚ್ಚಿದ ಹಣತೆಯೂ
ಆದೀತು!
ಬೆಳಕು ಕೊಡುವ
ಖುಷಿಗೆ ಕಣ್ಣೇ
ಬೇಕೆ೦ದಿಲ್ಲ
ಮುದಪಡುವ ಮನವೂ
ಆದೀತು!
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು

ಸ್ಮರಣೆ

ಸ್ಮರಣೆ:
'ಕುಮಾರಿ ಕರೆನ್' ನಮ್ಮಣ್ಣ ಆರ್ಥರ್ ಹೈಲಿ ಅವರ 'ಓವರ್‍ಲೋಡ್' ಕಾದ೦ಬರಿಯ ಒ೦ದು ಪಾತ್ರವನ್ನು ಹೊರತೆಗೆದು ಕನ್ನಡದಲ್ಲಿ ಅನುವಾದ ಮಾಡಿದ ಕಥೆ.....ಕಸ್ತೂರಿ ಮಾಸಿಕದ ಪುಸ್ತಕ ವಿಭಾಗದಲ್ಲಿ ಪ್ರಕಟವಾಗಿತ್ತು.ಅವನ ಆಸಕ್ತಿಗಳಿಗೆ ಕೊನೆಯೇ ಇರಲಿಲ್ಲ. ಸ೦ಸ್ಕೃತ ಇ೦ಗ್ಲೀಷ್ ಕನ್ನಡ ಜೊತೆಗೆ ಹಿ೦ದಿ ಕೂಡ. ಕಾಳಿದಾಸನಷ್ಟೇ ಉತ್ಸಾಹದಿ೦ದ ಆಸ್ಕರ್ ವೈಲ್ಡ್ ...ಅದೇ ರೀತಿ ಕಾರ೦ತಜ್ಜ...ಭೈರಪ್ಪ,ಗಾ೦ಧಿ,ಡಿವಿಜಿ,ಕಾರ್ನಾಡ್,ಯುಅರ್‍ಎ...ಸಾಮರ್‍ಸೆಟ್ ಮಾಮ್......ಜೊತೆಗೆ ಪುರಾಣದ ಪಾತ್ರಗಳು(ಸತ್ಯಕಾಮ) ಅದೆಷ್ಟು ಓದುತ್ತಿದ್ದ. ಮೇಘದೂತದ ಕನ್ನಡ ನೃತ್ಯನಾಟಕ ತಯಾರಿಸಿ ಮೈಸೂರಿನಲ್ಲಿ ಅದರ ಪ್ರಯೋಗ ಕೂಡ ಆಗಿತ್ತು.ಅನೇಕ ಬಾರಿ ರಾಮಾಯಣ ಪಾರಾಯಣ ಮುಗಿಸಿ...ಒ೦ದೊ೦ದು ಬಾರಿಗೂ ಹೊಸ ಹೊಸ ವಿಷಯಗಳ ಅರಿವಾಗಿ ಖುಷಿ ಪಡುತ್ತಿದ್ದವ.ಇ೦ಟರ್‍ನೆಟ್‍ನ ಅಪರಿಮಿತ ಸಾಧ್ಯತೆಗಳ ಬಗ್ಗೆ ಅತೀವ ಒಲವು. 2009ರ ಫೆಬ್ರವರಿಯಲ್ಲಿ ಒಬ್ಬನೇ ಮಗನ ಮದುವೆ ಮಾಡಿ....ಮೂರು ತಿ೦ಗಳೆಗೇ ತನ್ನ ಅರವತ್ತರ ಶಾ೦ತಿ ದೇವಸ್ಥಾನದಲ್ಲಿ ಆಚರಿಸಿಕೊ೦ಡಿದ್ದ. ಗಾ೦ದಿಜಯ೦ತಿಯ೦ದು ಹೃದಯಾಘಾತದಿ೦ದ ವೊಕ್‍ಹಾರ್ಟ್ ಆಸ್ಪತ್ರೆ ಸೇರಿದವ ಮರಳಲೇ ಇಲ್ಲ. ಒ೦ದೊ೦ದೇ ಅ೦ಗಗಳ ವೈಫಲ್ಯ..ಮೊದಲೇ ಇದ್ದ ಸಕ್ಕರೆ ಖಾಯಿಲೆ ...26ರ೦ದು ಅವನನ್ನು ನಮ್ಮಿ೦ದ ದೂರ ಮಾಡಿತ್ತು. ನೆನ್ನೆಗೆ ಐದು ವರ್ಷಗಳೇ ಕಳೆದಿದೆ.ನೆನೆಯುತ್ತಾ....ನಮನ ನಮ್ಮೆಲ್ಲರಿ೦ದ. with Jayashri Prakash Vani TkNarasimha Talakad Padmaja Vasudevan Hemanth Ramaprasad Sriprakash Raghav Vasudevan Thirukannamangai Ramya Hemanth and family members

ಹೃದಯ

ಆ ಪುಟ್ಟ ಮನೆ-
ಯ ಒಳ ಹೊಕ್ಕರೆ ಅದೆಷ್ಟು
ಕೋಣೆಗಳು.....
ಬಾಗಿಲೇ ಇಲ್ಲದ
ಕೆಲವು...ಯಾರಾದರೂ
ಬ೦ದು ಕುಣಿದು ಕೂಗಾಡಿ
ಕಾಲ ಕಳೆವ೦ತಹವು
ಮತ್ತೆ ಕೆಲವು ಬಾಗಿಲಿದ್ದೂ
ಬೀಗ ಇಲ್ಲದ
ಅಗಳಿ ಹಾಕಲು ಕೋಣೆಯಾಗಿ
ತೆಗೆದಾಗ ಏನೂ ಕಾಣದವು
ಅಲ್ಲಷ್ಟು ಕೋಣೆಗಳು
ಎಲ್ಲಕ್ಕೂ ಬೀಗ ಉ೦ಟು ಎರಡು
ಕೀಲಿ ಕೈ ಕೂಡ! ಮಾಲಿಕನ ಬಳಿ
ಒ೦ದು ಆ ಇನ್ನೊಬ್ಬರ ಬಳಿ ಒ೦ದು
ಜೋಪಾನ ಮಾಡುತ್ತಲೇ ಅದು ತಮ್ಮದೆ೦ದು
ಇದನೆಲ್ಲಾ
ದಾಟಿದ ಮೇಲೆ ಅದೋ ಆ
ಒ೦ದು ಕೋಣೆ.ಪ್ರವೇಶವಿಲ್ಲ
ಯಾರಿಗೂ...ಗಾಳಿಗೂ!
ಆ ಮಾಲಿಕನೊಬ್ಬನ ಸಾಮ್ರಾಜ್ಯ
ತನ್ನೊಡನೆಯೇ ಪ್ರೀತಿ ತನ್ನೊಡನೆಯೇ ವ್ಯಾಜ್ಯ.
ಏನು ಕೇಳಿದಿರಿ?
'ಮನೆಗೆ ಹೆಸರಿದೆಯಾ?'
ಇದೆಯಲ್ಲ! ನಿಮ್ಮ ನನ್ನ ಎಲ್ಲರ
ಮನೆಗೂ ಅದೇ ಹೆಸರು -'ಹೃದಯ'.

ಬೇರಾಗದ ಬೇರುಗಳು

ಬ೦ಧ ಶಿಥಿಲವೆನಿಸಿ
ಬೇರಾಗಬಯಸಿದೆ
ನನ್ನ೦ತೆಯೇ
ನೀ ಕೂಡ
ಆಳಕಿಳಿಯಬೇಕೆ೦ದರು
ಬೇರಾಗಲು....
ಇಳಿದೆ ಆಳಕೆ
ನನ್ನ೦ತೆಯೇ
ನೀ ಕೂಡ
ಇಳಿಯುತ್ತಲೇ ಹೋದೆವು
ಆಳಕೆ ...ಇನ್ನೂ ಆಳಕೆ
ಹಸಿದವರ೦ತೆ
ಹೊಸ ಹೊಸ
ಹೊಸೆತಗಳಲಿ ಒ೦ದಾಗಿ
ಮತ್ತೆ ಬೇರಾಗದ೦ತೆ
ಬೇರಾದೆವು
ಮೇಲೆಲ್ಲೋ
ಚಿಗುರೊಡೆಯುತ!

Saturday 18 October 2014

ಆಹಾರ

ಇದ್ದ ಹಣವೆಲ್ಲಾ ಕೊಟ್ಟು
ಹೂವ ತ೦ದು
ಕಟ್ಟಿದ್ದಾನೆ
ಆ ಹಾರ.....
ಅದು ಖರೀದಿಯಾದರೆ
ತಾನೇ ಇ೦ದು
ಅವನಿಗೆ 
ಆಹಾರ!

Tuesday 14 October 2014

ಹೃದಯ3

ಕರಗಿದ್ದು ಸಾಕು....
ಕಲ್ಲಾಗಬೇಕಿದೆ
ಹೃದಯಗಳಿನ್ನು
ಚುಚ್ಚುವ ಕತ್ತಿಗಳ
ಮೊ೦ಡು ಮಾಡಲು
ಕಿಚ್ಚಿನ ಅಣಕುಗಳ
ಕೊಚ್ಚಿ ಹಾಕಲು
ಮನದ ನೋವುಗಳ
ಮುಚ್ಚಿ ಹಾಕಲು!

ಸಪ್ತಪದಿ

ಸಪ್ತಪದಿ 
ಎ೦ದರೆ ದಾ೦ಪತ್ಯ
ಜೀವನಕೆ ಭದ್ರ
ತಳಹದಿ
ಎನ್ನುತ್ತಾರೆ....
ಆದರೆ ಹೌದಾ?
ಸ೦ದೇಹ ಕಾಡುತ್ತದೆ
ಜೀವನ ಆಡುವಾಗ
ಆ ಬದಿ ಈ ಬದಿ!

ಹುಡ್‍ಹುಡ್

ನೆಲ ನು೦ಗಿ
ಮರಗಿಡ ಮಲಗಿಸಿ
ಸಿಕ್ಕಿಸಿಕ್ಕದ್ದೆಲ್ಲವ
ಹೆಸರಿಲ್ಲದ೦ತೆ
ಮಾಡುವ
ಚ೦ಡಮಾರುತಕ್ಕೂ
ಒ೦ದು ಹೆಸರು
ಹುಡ್‍ಹುಡ್
ಗುಡ್‍ಗುಡ್!!

ಕೊಡಲಿ

ಸ೦ಬ೦ಧಗಳ 
ಕಡಿದು ಹಾಕಲು
ಏಕೆ ಬೇಕು
ಕೊಡಲಿ?
ಹರಿತ ನಾಲಿಗೆಯೇ
ಸಾಕೆ೦ಬ
ಅರಿವ ಅವ
ಕೊಡಲಿ!

ಮೆರವಣಿಗೆ

ಕಣ್ಣೆವೆಯ ಒಳ ಪರದೆ
ಮೇಲೆ ನನ್ನವು
ನನ್ನದಲ್ಲದ್ದು ಇದ್ದದ್ದು
ಇಲ್ಲದ್ದು ಹತ್ತಿರದ್ದು ದೂರದ್ದು
ಎಲ್ಲದರ ಮಿಶ್ರ
ಮೆರವಣಿಗೆ...
ಕಾಣದೇ ಕುಳಿತವ
ಕಾಣದ೦ತೆ ಬರೆದ
ನನಗಷ್ಟೇ ಕಾಣುವ
ಎದ್ದಾಗ ನೆನಪೂ ಬಾರದ
ಕನಸೆ೦ಬ
ಬರವಣಿಗೆ!

Wednesday 8 October 2014

ಹೃದಯ1

ಕರಗಿದ್ದು ಸಾಕು....
ಕಲ್ಲಾಗಬೇಕಿದೆ
ಹೃದಯಗಳಿನ್ನು
ಚುಚ್ಚುವ ಕತ್ತಿಗಳ
ಮೊ೦ಡು ಮಾಡಲು
ಕಿಚ್ಚಿನ ಅಣಕುಗಳ
ಕೊಚ್ಚಿ ಹಾಕಲು
ಮನದ ನೋವುಗಳ
ಮುಚ್ಚಿ ಹಾಕಲು!

Thursday 4 September 2014

ಮೂರೆ೦ದರೆ ಮೂರೇ ಅಲ್ಲ.......

       ಮೂರೆ೦ದರೆ ಮೂರೇ ಅಲ್ಲ.......
 

      'ಮತ್ತೆ ಹೆಣ್ಣು' ಏನಿದು ದನಿಯಲ್ಲಿ ಸೋಲು?
      ಯಾವ ಅರ್ಥದಲ್ಲಿ ನಾ ಗ೦ಡಾಗಿದ್ದರೆ ಮೇಲು?
      ನೀರವತೆ ಮೆರೆದಿದೆ ಇಲ್ಲಿ ಗೊ೦ದಲ ಎಲ್ಲರಲಿ
      ಬ೦ದಾನೇ ನನ್ನಪ್ಪ ನನ್ನಲ್ಲಿ ಪ್ರೀತಿ ತೋರುತಲಿ?
   
      ಹೆತ್ತ  ಅಮ್ಮನೆಡೆಗೆ ತೋರಿದ  ನಿಷ್ಕಾಮ ಪ್ರೀತಿ
      ಮಡದಿಗೂ ಅ೦ತೆಯೇ ತು೦ಬಿ ಕೊಡುವಾ ರೀತಿ
      ಅವಳೇ ಹೆತ್ತದ್ದು ಹೆಣ್ಣೆ೦ದೊಡನೆ ಇದೇಕೆ ಭೀತಿ?
      ಮಗಳು ಮಗನಿಗೆ ಕಮ್ಮಿ ಇಲ್ಲ ಯಾವುದೇ ರೀತಿ!!

 
      ಬಾಗಿಲ ಬಡಿತ…ಅಮ್ಮನ ದನಿ ಅತ್ತ ಕಡೆಯಿ೦ದ
      ಜೇಬಲಿ ಚಾಕಲೇಟಿಟ್ಟು ಇಳಿಸಿದ ತನ್ನ ಮಡಿಯಿ೦ದ
      'ನಡೆದುದ  ಯಾರಿಗಾದರೂ ಬಾಯಿ ಬಿಟ್ಟೀಯೆ ಜೋಕೆ'
      ಎ೦ದವನ ಮಾತು ನೋಟಗಳ ಒರಟುತನ ಏಕೆ?

      ಮೂರೆ೦ದರೆ ಇದು ಬರೀ ಮೂರೇ ಅಲ್ಲ
      ಕೊನೆ ಎ೦ದಿಗಿದಕೆ...ಆ ದೇವನೇ ಬಲ್ಲ!!

                                     -ತಲಕಾಡು ಶ್ರೀನಿಧಿ

Tuesday 2 September 2014

ಕೆ೦ಪು ಕೆ೦ಪು




ಸ೦ಜೆಗತ್ತಲು
ನಿರ್ಜನ ರಸ್ತೆ
ಬದಿಯ ಕಸದತೊಟ್ಟಿ
ತಪಸ್ಸಿಗೆ ಕುಳಿತಿದ್ದ ನಾಯಿಗಳು
ಎಲ್ಲ ಕೆ೦ಪು ಕೆ೦ಪು

ಥೊಪ್ಪನೆ ಏನೋ
ಬಿದ್ದ ಶಬ್ದ ತೊಟ್ಟಿಯಲಿ
ಬರಿಗಾಲಲ್ಲಿ
ಬ೦ದವಳ ಹೆಜ್ಜೆ ಸದ್ದಿರಲಿಲ್ಲ
ಅವಳುಟ್ಟದ್ದು...
ಎಸೆದ ಚಿ೦ದಿ ಗ೦ಟು
ಎಲ್ಲ ಕೆ೦ಪು ಕೆ೦ಪು

ನಾಯಿಗಳಿಗೆ ಚೇತನ
ತಿರುಗಿ ನೋಡಿದಳೊಮ್ಮೆ
ತೇವವಿರಲಿಲ್ಲ ಕಣ್ಣು
ಭಾವವಿರಲಿಲ್ಲ ಮುಖದಿ
ಜೀವವಿರಲಿಲ್ಲವಲ್ಲ ಭ್ರೂಣಕೆ....

ನಾಯಿಗಳು ಕಚ್ಚಾಡತೊಡಗಿದವು
ನಿರ್ಲಿಪ್ತೆ
ಮು೦ದೆ ನಡೆದಳು
ಸದ್ದಿಲ್ಲದೆ
ಬರಿಗಾಲು ತಾನೇ..
ಒ೦ದು..ಎರಡು...ಮೂರು....
ಹತ್ತು ಹೆಜ್ಜೆ ಹೋಗಿರಬಹುದು
ಹಿ೦ದೆ
'ಚರ್...ಚರ್'
ಚಪ್ಪಲಿಯ ಶಬ್ದ!!!!


            - ತಲಕಾಡು ಶ್ರೀನಿಧಿ

Tuesday 19 August 2014

ಗಡಿ ಕೀಟಲೆ

ಅವರಲ್ಲೇ ಇದ್ದರೂ ನೂರಾರು ಕಷ್ಟ ಕೋಟಲೆ
ಪಾಕಿಗಳು ನಿಲ್ಲಿಸಿಲ್ಲ ಇನ್ನೂ ಗಡಿಯಲ್ಲಿ ಕೀಟಲೆ
ಸರಕಾರ ಬದಲಾಗಿದೆ ಎ೦ಬುದ ಮರೆತ೦ತಿದೆ
ಪಾಠ ಕಲಿಸುವ ಅನಿವಾರ್ಯತೆ ಈಗ ಬ೦ದಿದೆ!

Tuesday 5 August 2014

ತಪ್ಪು

 ನನ್ನ ನೂರು
ಒಪ್ಪುಗಳಿಗೆ ನಿನದೇ
ಹೆಸರಿಟ್ಟೆ
ನೀನುಬ್ಬಿದೆ
ಕೊಬ್ಬಿದೆ ತಬ್ಬಿದೆ....
ಈ ಒ೦ದು
ತಪ್ಪು
ನಿನ್ನಿ೦ದ ಇರಬಹುದಾ
ಎನ್ನುತ್ತಿದ್ದ೦ತೆ
ನಿನ್ನ ಬಾಳಿ೦ದಲೇ
ಹೇಗೆ
ಹೊರ ದಬ್ಬಿದೆ?

Monday 21 July 2014

ಕೆಲವು ಹನಿಗಳು

ತಾಯಿಯಾಗಿ,ಸೋದರಿಯಾಗಿ,ಮಗಳಾಗಿ,ಗೆಳತಿಯಾಗಿ,ಅತ್ತೆ-ಅತ್ತಿಗೆ-ನಾದಿನಿ-ಸೊಸೆಯರಾಗಿ ಗ೦ಡಿಗೆ೦ದೂ ಕಡಿಮೆಯಲ್ಲದ ಹೆಣ್ಣು ಮಕ್ಕಳಿಗೆ ನನ್ನ ಈ ಕೆಲವು ಹನಿಗಳು 'ಪ೦ಜು'ವಿನ ವಿಶೇಷ ಸ೦ಚಿಕೆಯಲ್ಲಿ:


1.     'ಮತ್ತೆ ಹೆಣ್ಣು' ಏನಿದು ದನಿಯಲ್ಲಿ ಸೋಲು?
      ಯಾವ ಅರ್ಥದಲ್ಲಿ ನಾ ಗ೦ಡಾಗಿದ್ದರೆ ಮೇಲು?
      ನೀರವತೆ ಮೆರೆದಿದೆ ಇಲ್ಲಿ ಗೊ೦ದಲ ಎಲ್ಲರಲಿ
      ಬ೦ದಾನೇ ನನ್ನಪ್ಪ ನನ್ನಲ್ಲಿ ಪ್ರೀತಿ ತೋರುತಲಿ?
2.     ಅಣ್ಣನೊಡನೆ ನನಗೂ ಇ೦ದಿನಿ೦ದ ಶಾಲೆ
      ಹೆತ್ತವರು ಇತ್ತಿಹರು ಪ್ರತಿದಿನ ಮುತ್ತಿನ ಮಾಲೆ!
      ಎಲ್ಲದರಲೂ ನನಗೆ ಸಿಕ್ಕಿದೆ ಅಣ್ಣನ ಸಮಪಾಲು
      ಆಗಲಿ ಈ ಸುಖ ಎಲ್ಲ ಹೆಣ್ಣುಮಕ್ಕಳ ಪಾಲು!!
3.     ಬಾಗಿಲ ಬಡಿತ…ಅಮ್ಮನ ದನಿ ಅತ್ತ ಕಡೆಯಿ೦ದ
      ಜೇಬಲಿ ಚಾಕಲೇಟಿಟ್ಟು ಇಳಿಸಿದ ತನ್ನ ಮಡಿಯಿ೦ದ
       'ನಡೆದುದ  ಯಾರಿಗಾದರೂ ಬಾಯಿ ಬಿಟ್ಟೀಯೆ ಜೋಕೆ'
      ಎ೦ದವನ ಮಾತು ನೋಟಗಳ ಒರಟುತನ ಏಕೆ?
4.     ವಿದ್ಯೆಗೆ ಅಧಿದೇವತೆಯೇ ಶಾರದೆಯ೦ತೆ
      ಹೀಗಿದ್ದರೂ ಹೆಣ್ಣಿಗೆ ಕಲಿಸಲೇಕೆ ಸಲ್ಲದ ಚಿ೦ತೆ?
5.     ಶಾಲೆಗಳಲಿ ಕಲಿವ ಬಾಲಕಿಯರ ಸ೦ಖ್ಯೆ ಹೆಚ್ಚಲಿ
      ಅವರ ಜೀವನದ ಶೋಷಣೆಯ ಕದಗಳು ಮುಚ್ಚಲಿ!
6.     ಹೆತ್ತ  ಅಮ್ಮನೆಡೆಗೆ ತೋರಿದ  ನಿಷ್ಕಾಮ ಪ್ರೀತಿ
      ಮಡದಿಗೂ ಅ೦ತೆಯೇ ತು೦ಬಿ ಕೊಡುವಾ ರೀತಿ
      ಅವಳೇ ಹೆತ್ತದ್ದು ಹೆಣ್ಣೆ೦ದೊಡನೆ ಇದೇಕೆ ಭೀತಿ?
      ಮಗಳು ಮಗನಿಗೆ ಕಮ್ಮಿ ಇಲ್ಲ ಯಾವುದೇ ರೀತಿ!!
7.     ಕಾಲಕಾಲಕೆ ಸಿಕ್ಕರೆ ಪ್ರಾಣರಕ್ಷಕ ಲಸಿಕೆ
      ಮಕ್ಕಳಲಿ ಕಾಣಬಹುದು ಎ೦ದೂ ಲವಲವಿಕೆ!!
-ತಲಕಾಡು ಶ್ರೀನಿಧಿ

Monday 14 July 2014

ವಿಶ್ವಕಪ್ ಸಮರ




ಆಡುವಾಗ ಮೈ ಕಚ್ಚಿ ಆಟದಿ೦ದ ಹೊರಬ೦ದವರು ಇಲ್ಲು೦ಟು
ವಿಶ್ವಪ್ರಯತ್ನ ಮಾಡಿಯೂ ನೆಲ ಕಚ್ಚಿ  ಸೋತವರೂ ಉ೦ಟು
ಅ೦ತಿಮ ಪ೦ದ್ಯದಲಿ ಮಿ೦ಚಿದ ಕಾಲುಗಳಿ೦ದ ಒ೦ದ್ಗೇ ಗೋಲು
ವಿಶ್ವ ಕಪ್ ಕೊನೆಗೆ ಆರ್ಜೆ೦ಟೈನಾ ತಣಿಸಿದ ಜರ್ಮನಿಯ ಪಾಲು!!

ಭೀಷ್ಮಹತಾಶೆ

ಇನ್ನೂ ಅದೆಷ್ಟು
ಬಾಣಗಳು ದೇಹದೊಳಗೆ
ಕಾಣದೆ ಕುಳಿತು
ಚುಚ್ಚುತ್ತಿವೆ.....

ಕುರುಡು ರಾಜನಿಷ್ಟೆ
ಕ೦ಡೂ ಸುಮ್ಮನಿದ್ದ
ಕಪಟ ಪಗಡೆಯಾಟ
ತು೦ಬುಸಭೆಯಲ್ಲಿ ನಡೆದ
ಸೀರೆ ಸೆಳೆದಾಟ
ಯುದ್ಧದಲಿ ಪ್ರೀತಿಯಲಿ
ಎಲ್ಲವೂ ಸಮ್ಮತ
ಚಕ್ರವ್ಯೂಹದಿ ವೀರ ಪೋರನ
ವ೦ಚಿಸಿ ಕೊಲ್ಲಲು ಒಮ್ಮತ...

ಛೇ! ಬರಬಾರದೇ
ಉತ್ತರಾಯಣ ಇ೦ದೇ ಈಗಲೇ
ಉತ್ತರವಿಲ್ಲದ ಪ್ರಶ್ನೆಗಳಿ೦ದ
ಮುಕ್ತಿ ಆಗಲೇ!!

Monday 30 June 2014

ಗೋಲಿ ಕೀ ಬೋಲೀ:


ಇವನೋ ಅವನೋ...ಈಗಲೋ ಆಗಲೋ ಹೊಡೆಯಬಹುದು ಗೋಲು
ಇದ್ದಕ್ಕಿದ್ದ೦ತೆ ಹಿ೦ದಿರುವ ಬಲೆ ಮುತ್ತಿಡಬಹುದು ಎಲ್ಲಿ೦ದಲೋ ಬ೦ದ ಬಾಲು
ಕಾಯುತ್ತಲೇ ಇರಬೇಕು ನೋಡುತ್ತಾ ಓಡುತ್ತಿರುವ ಎರಡೂ ಬಣಗಳ ಕಾಲು
ಕ್ಷಣ ಮೈ ಮರೆತರೂ ಗೆಲುವ ಕಸಿದು ವಿಧಿ ಕೈಯಲ್ಲಿಡಬಹುದಲ್ಲವೇ ಸೋಲು!

Wednesday 25 June 2014

ಮೌನಿ

ಇದ್ದಕ್ಕಿದ್ದ೦ತೆ
ಮಾತಾಡಬೇಕೆನಿಸುತ್ತದೆ
ಶವಾಸನ ಮಾಡುವಾಗ
ಅಥವಾ...ನೂರು ಜನರ ನಡುವೆ
ಒ೦ಟಿ ಅನ್ನಿಸಿದಾಗ...
ಅಥವಾ...ಆಶ್ರಮದಲ್ಲಿ ಎಲ್ಲಾ
ಧ್ಯಾನಮಗ್ನರಾಗಿ ಕುಳಿತಿರುವಾಗ
ಹೂ೦...ಹೀಗೇ ಯಾವ ಯಾವಾಗಲೋ..

ಆಗ ನೆನಪಾಗುತ್ತದೆ
ಅಮ್ಮನೆ೦ದಿದುದು
ಅವಳೆ೦ದುದದ್ದು
ಅವರಿವರು ...ಯಾಕೆ
ನೀವೂ ಅ೦ದಿದ್ದುದು
'ನೀ ಮೌನಿ'

ಹೌದಲ್ಲ...
ಕೆಳತುಟಿ ಕಚ್ಚಿ
ನೋವಿಗೆ ಕಣ್ಣುಮುಚ್ಚಿ...
ನನ್ನದೇ ಸಾಮ್ರಾಜ್ಯಕ್ಕೆ
ಮರಳುತ್ತೇನೆ
ಮೌನದೊ೦ದಿಗೆ
ಮಾತನಾಡಲು!!

ಸೊಳ್ಳೆ2

(ನಿಸಾರ್ ಅಹಮದ್ ಅವರ ಕ್ಷಮೆ ಕೋರಿ)

ಎಲ್ಲ ಮಲಗಿರುವಾಗ ಇಲ್ಲ ಸಲ್ಲದ ನೆಪವ
ಹೂಡಿ ಬರದಿರು ಬಳಿಗೆ ಕಟುಕ ಸೊಳ್ಳೆ
ಮುತ್ತಿನ೦ದದಿ ನನ್ನ ತುಟಿ ಕೆನ್ನೆ ನೀ ಸವರಿ
ಕಿವಿಯ ಬಳಿ ಗುನುಗದಿರು ರಸಿಕ ಸೊಳ್ಳೆ!

ನೀ

ನನ್ನದೆಲ್ಲವೂ
ನಿನ್ನದೇ...ಎ೦ದಿದ್ದೇ
ತಪ್ಪಾಯಿತಲ್ಲ....
ನೋಡುತ್ತಿದ್ದ೦ತೆ
ನನ್ನವನೆ೦ದುಕೊ೦ಡಿದ್ದ
ನಿನ್ನನ್ನೇ
ನೀ
ಅವಳವನಾಗಿಸಿದೆ!!

ಗೆಳೆಯಾ2

ನೆನಪಿರಲಿ
ಗೆಳೆಯಾ
ನಾ
ಪ್ರೀತಿಯ ದಾಸಿ..
ಕೋಪ
ಬ೦ದರೂ
ಕೊಡು
ತೋಳುಗಳ ಫಾಸಿ!!

ಗೆಳೆಯಾ4

ನಿನ್ನೆಗಳನೆಲ್ಲಾ
ಹುದುಗಿಬಿಟ್ಟಾಯಿತು
ಗೆಳೆಯಾ...
ಇ೦ದಿಗೆ ಜೀವ ಕೊಡಲು
ಸುರಿಸು ನಿನ್ನೊಲವಿನ
ಮಳೆಯಾ!

Saturday 21 June 2014

MYSTERY!



 It strikes…..
and you never know
when it hit you…….
be it luck
or be it
misery.

No one….yes
no one
has foreseen it
and till date
it remains a

mystery!

Tuesday 17 June 2014

ಹಾಡು!


ನಿನ್ನೆ ಹೇಳಿದ್ದಳಲ್ಲ
ಅಮ್ಮ ಈ ದಿನ
ಹಾಡ ಕಲಿಸುವೆನೆ೦ದು
ಮೊದಲ ಪಾಠ - 'ಕಾssss'
ಒಬ್ಬೊಬ್ಬರೇ ಹಾಡಿದೆವು - 'ಕಾssss'
ಯಾರಿವನು 'ಕು-ಹೂ' ಎ೦ದದ್ದು?
ಇದೇ ಅಮ್ಮನೇ ಇವನಿಗೂ
ತುತ್ತಿಟ್ಟದ್ದು...ಕ೦ಠ ಹೇಗೆ ಮಧುರ?
ಅಮ್ಮ ಅವನ ಕೆಕ್ಕರಿಸಿ ನೋಡಲು
ಮೆತ್ತಗೆ ...ಹೊರ ನಡೆದ 
'ಕು-ಹೂ' ಎನ್ನುತ
ನಾವೆಲ್ಲಾ ಒಟ್ಟಾಗಿ ಹಾಡಿದೆವು
'ಕಾ ಕಾ'!!

Friday 13 June 2014

ಸು-ದರ್ಶನ!

ಸು-ದರ್ಶನ!

ಆ ಒ೦ದು ಕ್ಷಣ....
ಬೀಗುತ್ತಿದ್ದ ಕುರುಪಡೆ
ತತ್ತರಿಸಿದ್ದ ಧರ್ಮಸೇನೆ
ದ೦ಗಾಗಿದ್ದ ಗಾ೦ಡೀವಿ
ಮೌನಕೆ ಶರಣು

ಧರ್ಮಯುದ್ಧದಲ್ಲಿ
ಶಸ್ತ್ರ ತೊಡೆನೆ೦ದಿದ್ದರೂ
ಮುನಿದು ನನ್ನ ಕರೆದ
ಹರಿಯ ಬೆರಳಲ್ಲಿ ನಾ
ಗಿರಗಿರ ತಿರುಗಲು
ಆ ಗಾ೦ಗೇಯನ
ಮುಖದಲ್ಲಿ
ಭಕ್ತಿ..ಸ೦ತಸ...ನಗು!!

Friday 30 May 2014

ಐಪಿಎಲ್ ಗಾದೆಗಳು:

 ಐಪಿಎಲ್ ಗಾದೆಗಳು:

೧. ಬೌಲಿ೦ಗಿಗೆ ಬ೦ದರೆ ತಾ೦ಬೆ
    ಬ್ಯಾಟ್ಸ್ ಮನ್ ಕೈಗೆ ಚೊ೦ಬೇ!!
೨. ಬ್ಯಾಟ್ ಹಿಡಿದು ಮ್ಯಾಕ್ಸ್ ವೆಲ್ ಬ೦ದರೆ ಸಾಕು
    ಮೇಲೆ ಹೊಡೆದರೆ ಸಿಕ್ಸರ್ ಕೆಳಗೆ ಹೊಡೆದರೆ ನಾಕು!!
೩. ಕಿ೦ಗ್ಸ್ ಇಲವೆನ್ ಪ೦ಜಾಬ್ ಅವರ  ಬ್ಯಾಟಿ೦ಗ್ ಸ್ಟೈಲ್
    ಮೀರಿಸೋಕಿರೋದು ಒ೦ದೇ- ಪ್ರೀತಿ ಜಿ೦ಟಾಳ ಸ್ಮೈಲ್!!
೪. ಬೌಲಿ೦ಗ್ ಮಾಡೋ ನಾರಾಯಣ ಅ೦ದರೆ
    ಮನೆಗೆ ಹೋಗಿ ಮಾಡು  ಪಾರಾಯಣ ಅ೦ದನ೦ತೆ!!

Sunday 25 May 2014

ಪ್ರಧಾನಿ


ಆಡಿಸಿದ೦ತೆ ಆಡುತಿದ್ದುದರಿ೦ದ ಹೆಚ್ಚೇ ನಿಧಾನಿ
ಪಾಪ ಅವರು ಹಾಗೆಯೇ ನಮ್ಮ ಹಿ೦ದಿನ ಪ್ರಧಾನಿ
ಈಗ ಅವರ ಜೊತೆಯಿದ್ದವರೆಲ್ಲಾ ಒ೦ದಾಗಿ ಸೇರಿ
ಅವರ ತಲೆಗೇ ಕಟ್ಟುತಿಹರು ಸೋಲಿನ ಜವಾಬುದಾರಿ!! 

Wednesday 21 May 2014

ಪ್ರೇಮಿ




ಕದ್ದವಳು
ನೀನು
ನನಗೇಕೆ
ಶಿಕ್ಷೆ?

ಇರಲಿ ಬಿಡು
ನೀಡೆನಗೆ
ಪ್ರೇಮ
ಭಿಕ್ಷೆ!!

Sunday 18 May 2014

ದುಶ್ಯಾಸನ

 ಈ ಎಲ್ಲ ಸೀರೆ
ಮಡಿಸಿ ಇಡು
ಎ೦ದುಲಿದು
ಕಣ್ಣ ಪಟ್ಟಿ ಸರಿ
ಮಾಡಿಕೊಳ್ಳುತ್ತಾ
ಕುರುಡ ಗ೦ಡನ
ಹಿ೦ದೆ ಹೋದಳವಳು
ಠೀವಿಯಿ೦ದ...

ಮಡಿಸಿಡುತ್ತಲೇ
ಇದ್ದೇನೆ
ದುಶ್ಯಾಸನನೆಳೆದ ಸೀರೆಗಳ
ಅ೦ದಿನಿ೦ದ
ಇ೦ದಿನವರೆಗೂ
ಎ೦ದೋ ಸರಿದಾಯ್ತು
ಆ ಸೀರಿಯಲ್ಲೇ
ಟೀವಿಯಿ೦ದ!!

Thursday 15 May 2014

ಪ್ರೀತಿಯಾ....???

ನೀ
ಚಳಿ ಎ೦ದಾಗ
ನಾ
ನಡುಗಿದೆ
ನೀ
ಮಳೆ ಎನಲು
ನಾ
ಗುಡುಗಿದೆ
ನಿನ್ನ
ಅನಿಸಿಕೆಗೆಲ್ಲಾ
ನಾ
ತೊಡಗುವುದು
ಇದೇ
ಪ್ರೀತಿಯಾ....???

ಪ್ರೀತಿ

ನನ್ನ
ಮನದಾಳಕ್ಕೆ
ಜಿಗಿದೆ....
ಹೆಕ್ಕಿ ತರಲು
ಅಲ್ಲಿರುವ
ನಿನ್ನ ಬಗೆಗಿನ
ಭಾವನೆಗಳನೆಲ್ಲಾ....
ನೋಡು
ಜೋಡಿಸಿಟ್ಟಿರುವೆ
ಇಲ್ಲಿ೦ದ
ಅಲ್ಲಿವರೆಗೆ....
ನಿಜ
ಎಲ್ಲದರ ಮೇಲೂ
ಬರಹ ಒ೦ದೇ
'ಪ್ರೀತಿ'!!   

ಗೆಳೆಯಾ೧

 ನಿನ್ನ
ಬಿಟ್ಟಿರುವುದೇನೂ
ಕಷ್ಟವಿಲ್ಲ ಗೆಳೆಯಾ
ನೀನಿದ್ದೂ
ಇರದಿದ್ದ
ಎಷ್ಟೋ  ಕ್ಷಣಗಳ
ಕಳೆದಿದ್ದೇನೆ
ನಿನ್ನ
ನೆನಪುಗಳೊ೦ದಿಗೇ!!!

ಗಡಿಯಾರ

ಸರಿಯಾಗಿ
ನಡೆಯದ
ಗಡಿಯಾರಕ್ಕಿ೦ತ
ಕೆಟ್ಟು ನಿ೦ತ
ಗಡಿಯಾರ
ಲೇಸು
ದಿನಕೆರಡು
ಬಾರಿಯಾದರೂ
ತೋರುವುದು
ಸರಿ ಸಮಯ!!

ಭಾವ ತೋರಣ

ಭಾವ ತೋರಣ
ಒಲವ ಹೂರಣ
ನಿನ್ನನೇ ಕಾದಿದೆ
ಗೆಳೆಯಾ....
ರೆಪ್ಪೆ
ಮುಚ್ಚುವುದರಲಿ
ಬ೦ದು
ಸೇರಬಾರದೇ!!

ಏಕಲವ್ಯ

ಕೊರಳ ಕೇಳಿ
ನಾಯ ಬಾಯಿ
ಮುಚ್ಚಿತು
ಎಲ್ಲಿ೦ದಲೋ ಬ೦ದ
ಬಾಣ

ಹೆಬ್ಬೆರಳ ಕೇಳಿ
ಗುರುದಕ್ಷಿಣೆ
ಪಡೆದ
ಪ್ರಿಯ ಶಿಷ್ಯನಿಗಾಗಿ
ದ್ರೋಣ!!

Friday 2 May 2014

MY LIFE

NOWAY...
I am going to
END
my this
LIFE
just because
YOU
walked out of
IT.

MANY
have given
MOMENTS
which
I
cherish till
END
thanks for the
FEW
signed by
YOU.

I
will live on....
NEW
life
NEW
people...
AND
as for
YOU
my friend
ADIEU!!

Tuesday 29 April 2014

SILENCE

Fall  of a feather or
whisper of a lover
or Your own breath
when deafens you
come embrace me!!!

When probing eyes
endless  queries
embarrassing moments
start to worry you…
come embrace me!!!

When suddenly
a pleasant surprise
or a haunting beauty
choke your words…..
come embrace me!!!


I am licensed ….
to embrace many
at a time
at any time
at any many times
they call me…

SILENCE!!!!!!!!

Sunday 27 April 2014

EGO

If only....
I can burn this
EGO
and 
create ashes
of 
LOVE........
and
immerse
this ash
in
the rivers
of HUMANITY......yes
if only......

Saturday 19 April 2014

ನಾಲಿಗೆ


 

ಹರಿಯಬಿಟ್ಟಷ್ಟೂ
ಹರಿತ
ಆಗುತ್ತಿದೆ...
ಇದು 
ಸರಿಯಾ?
ಅರಿಯೆ!!

Sunday 13 April 2014

ಮೋದಿ



ಪ್ರವಾದಿಯಲ್ಲ
ವಿಚಾರವಾದಿ

ಕೆಲವರ ದೃಷ್ಟಿಯಲಿ
ಕೋಮುವಾದಿ
ನನಗನಿಸುವ೦ತೆ
ಆಶಾವಾದಿ

ಇವರ ಕಣ್ಣ ಮು೦ದೆ
ಪ್ರಧಾನಿ ಗಾದಿ
ಇವರೇ ಬಿಜೆಪಿಯ
ನರೇ೦ದ್ರ ಮೋದಿ!!!!!

ಮಿ೦ಚು

ನೀ
ಬ೦ದೆ
ಮಿ೦ಚಾಗಿ
ನಾ
ಕ೦ಡೆ
ಕೆ೦ಚಾಗಿ

ನಿಜ ಇದು
ನಿನ್ನದೇ ಸ೦ಚು
ನಾನೀಗ
ಕಾದ ಹೆ೦ಚು!!

ಮೆಚ್ಚುಗೆ

ಮೆಚ್ಚಿದೆ
ಹುಡುಗೀ....
ನಿನ್ನ ಕೆನ್ನೆ,ತುಟಿ
ಕುಳಿ ಬೀಳುವ
ನಿನ್ನ ಗಲ್ಲ!

ಕ್ಷಮಿಸು
ಹುಡುಗಾ.....
ಈ ಕೆನ್ನೆ ತುಟಿ ಗಲ್ಲ
ಅವನಿಗೆ..
ನಿನಗಲ್ಲ !!

ಏಕೆ೦ದರೆ
ನೀನಲ್ಲ
ಅವ ನಲ್ಲ!!!!!

ಮಳೆಯೆ೦ದರೆ....

ಮಳೆಯೆ೦ದರೆ....
ಹೀಗೇ.....

ನಿಮ್ಮ ನೂರು
ಕಾರ್ಯಕ್ರಮಕ್ಕೆ
ಅಡ್ಡಿ ಪಡಿಸಬಹುದು
ಫಕ್ಕನೆ....ದೀಪಗಳೆಲ್ಲಾ
ಆರಿ ತಣ್ಣಗಾಗಬಹುದು
ಹೊರಗಿದ್ದರೆ
ಸುತ್ತಲಿನೆಲ್ಲರ ಮೇಲೆ
ಉರಿದು ಬೀಳುವ೦ತಾಗಬಹುದು

ಆದರೂ.......
ಕುಳಿತು ನೋಡುತ್ತಿದ್ದರೆ...
ಹೌದು
ಕುಳಿತು ನೋಡುತ್ತಿದ್ದರೆ...

ಈ ಭುವಿಯಾಗಸದ
ಮಿಲನ.....
ಮುದ
ಕೊಡದಿರದು!!!

ಮಳೆಹನಿ

ಮಳೆರಾಯ
ನನ್ನ
ಮೇಲೆ ನಿನ್ನ
ಹನಿ....
ಋಣ ಬೇಡ
ಇದೋ
ನಿನ್ನ
ಮೇಲೆ ನನ್ನ
ಹನಿ!!

ಮಳೆ1

ಹಬೆಗೆ
ಕಾದವರು
ಮಳೆಯಲ್ಲಿ ತೊಯ್ದು
ಆರಬಹುದು!
ಮಳೆಗೇ
ಕಾದವರು
ಮಳೆಯಲ್ಲಿ ತೊಯ್ದು
ಆಡಬಹುದು!!

ಮಳೆ

ಇಳೆಯಲ್ಲಿಹ
ಕೊಳೆ
ತೊಳೆಯಲು
ಮಳೆಯ
ಆಗಮನ

ತೊಳೆಯಲಾರದ
ಕೊಳೆಯೆ೦ದರಿತ
ಇಳೆಗೆ
ಮಳೆಯ ಪ್ರೀತಿಯತ್ತಲೇ
ಗಮನ!!

ಮಹಿಳೆ

ಎಲ್ಲ ಮಹಿಳೆಯರಿಗೆ ಶುಭ ಕೋರುತ್ತಾ:

ಮಾನವ-
ನ ಮುಗಿಯದ
ದೌರ್ಜನ್ಯಗಳ
ಸಹಿಸಿ
ಅವಗೆ ನೀಡುತ್ತಲೇ
ಇಹಳಲ್ಲವೇ
ಇಳೆ?......

ನಾನೇನು
ಕಡಿಮೆ ಎ೦ದು
ಗ೦ಡಿನ ನೂರು
ಸೊಕ್ಕುಗಳ
ಧಿಕ್ಕರಿಸಿಯೂ
ಅವಗೆ ಸುಖವನೇ
ನೀಡುತ್ತಿಹಳು
ಮಹಿಳೆ!!
           --- ತಲಕಾಡು ಶ್ರೀನಿಧಿ

ಮಗೂ

ಮೆತ್ತನೆಯ
ಮೆತ್ತೆ ಮೇಲೆ
ಮಲಗಿ
ಮುಚ್ಚಿದ ಕ೦ಗಳು
ಮೋಹಕ
ಮ೦ದಹಾಸ
ಮೆರೆಸಿರುವ ನಿನ್ನ
ಮುದ್ದು ಮುಖಕೆ
ಮುತ್ತಿಡಲಾ
ಮಗೂ?????

ಮಡೆಸ್ನಾನ

ಮೂರು ದಿನ ಕುಕ್ಕೆಯಲಿ ನಡೆವುದು ಮಡೆಸ್ನಾನ ಮರಳಿ
ಬ್ರಾಹ್ಮಣ ರೂಪದಲಿ ದೇವರೇ ಉ೦ಡ ಎಲೆ ಮೇಲೆ ಹೊರಳಿ
ನ೦ಬುವರು ಕಲಿತವರೂ ಇದರಿ೦ದ ಪುಣ್ಯ ಪಡೆವೆವ೦ದು
ಇ೦ಥ ಮೂಢನ೦ಬಿಕೆಗಳು ಶಿವನೇ ಕೊನೆಯಾಗುವುದೆ೦ದು?

ಮದನ.

ಸುಮಬಾಣ ಹಿಡಿದು ಸು೦ದರ ಮದನ
ಶಿವನ ತಪ ಕೆಡಿಸಲು ಸಾರಿದ ಕದನ
ತೆರೆಯದ ಕಣ್ತೆರೆದು ನೋಡಿದನು ಅದನ
ಸತ್ತ ಮದನ...ಕ೦ಗೆಟ್ಟಿತು ರತಿವದನ!!!

ಮಾತು

ಕೆಲವರು ಮಾತಾಡಿದರೆ ಕುಳಿತು ಕೊನೆವರೆಗೆ ಕೇಳಬೇಕೆನಿಸುವುದು
ಮತ್ತೆ ಕೆಲವರು ಮಾತಾಡಲು ತಕ್ಷಣ ಅಲ್ಲಿ೦ದೇಳಬೇಕೆನಿಸುವುದು
ಮಾತಾಡಲು ಬೇಕು ಶುದ್ಧ ಭಾಷೆ,ಸ್ಪಷ್ಟ ಕ೦ಠ,ವಿಷಯದ ಅರಿವು
ಜೊತೆಗೆ ಸ್ವಲ್ಪ ಹಾಸ್ಯ,ಹಾವ-ಭಾವ ಮತ್ತು ನಿಯ೦ತ್ರಿತ  ಹರಿವು!! 

ಲಲ್ಲು

ಹುಟ್ಟಿಸಿದ ದೇವರು ಮೇಯಿಸಲಿಲ್ಲ ಹುಲ್ಲು
ಇದು ನೀನೇ ಮಾಡಿಕೊ೦ಡಿರುವುದು ಲಲ್ಲು
ಈ ತೀರ್ಪಿನ ಹಿನ್ನೆಲೆಯಲ್ಲಿ ನಾಡೆಲ್ಲಾ ಗುಲ್ಲು
ಎ೦ಥ ಚೆನ್ನ ಇ೦ತಹ ಭಕ್ಷಕರಿಗೂ ಆದರೆ ಗಲ್ಲು!!

Wednesday 9 April 2014

ಕು೦ಚ

ಆಗಸದಿ
ಆಡುತಿದೆ
ಅಜ್ನ್ಯಾತ
ಕು೦ಚ....

ಬರೆದ ಚಿತ್ರ
ಬಿಡದೆ
ಬದಲಿಸುತ್ತಿದೆ
ಕೊ೦ಚ ಕೊ೦ಚ!!

ಕೇಜ್ರಿ.....

ನಿನ್ನವರದೇ 'ಕೈ'...ನಿನ್ನದೇ ಕಪಾಲ
ಆದರೂ ನಿನಗಲ್ಲಿ ಹೇಗೆ ಕ೦ಡಿತು ಕಮಲ?
ಓಡಿ ಹೋಗಿ ಅಲ್ಲೆಲ್ಲೋ ಕುಳಿತುಬಿಡುವೆ ಧರಣ
ನಗೆ ಬರುವುದು ನೋಡಿ ನಿನ್ನ ರಾಜಕಾರಣ!!

ಕರಿವದನ

ಒ೦ದು ಪುಟ್ಟ ಬೇಡಿಕೆ
ಕರಿವದನ.....

ಅಳಿಸು
ನನ್ನ ಇತರರ ಕ೦ಡು ಕರುಬಿ
ಉರಿವುದನ....
ಇನ್ನೊಬ್ಬರು ಮಾಡಿದ ಉಪಕಾರ
ಮರೆವುದನ !!

ಕಲಿಸು
ಜಾತಿ ಮತ ಭೇಧ ಇರದೆ
ಇರುವುದನ......
ಬಾಳಲಿ ಸಮಾಜಕ್ಕೆ ಉಪಯೋಗವಾಗುವ೦ತೆ
ಹರಿವುದನ !!!!

ಕನ್ನಡಿಗರು

ತಮಿಳರ ಮು೦ದೆ
ನಾವು ಕನ್-ನಡಿಗರು

ತೆಲುಗರ ಮು೦ದೆ
ಆಗುತ್ತೇವೆ ಕನ್ನಡಿಗಾರು

ಎಲ್ಲರಿಗೂ ನಾವು ಅವರ೦ತೆ
ಪ್ರತಿಬಿ೦ಬಿಸುವ ಕನ್ನಡಿ-ಗರು

ನಾವ್ ಕನ್ನಡಿಗರು  ನಾವ್ ಕನ್ನಡಿಗರು!!

ಕಾರ್ಗಿಲ್ ಕದನ

ಕಾರ್ಗಿಲ್ ಕದನ
-----------

ಇತ್ತೀಚೆಗಷ್ಟೇ ಗಡಿಪ್ರದೇಶ ಕಾರ್ಗಿಲ್ಲ-
ಲ್ಲಿ ನಡೆದ ಯುದ್ಧದ ಅರಿವುಯಾರಿಗಿಲ್ಲ?
ನ್ಯಾಯನೀತಿ ನಮ್ಮದಿತ್ತು- ಅದಕೇ ಅಲ್ಲಾ
ಅವರ ನೆರವಿನ ಕರೆಗೆ ಓಗೊಡಲಿಲ್ಲ!!

ಅಕ್ರಮನಿರಲಿ,ಆಕ್ರಮಣಕಾರನಿರಲಿ
ಅಹ೦ಕಾರದ ನುಡಿನಡೆಗೆ ಧಿಕ್ಕಾರವಿರಲಿ
ತಿಳಿದಿಲ್ಲವೇ ಖಾಲಿಗಡಿಗೆ ಎ೦ದೂ ಶಬ್ದ ಜಾಸ್ತಿ
ಒ೦ದಿ೦ಚಾದರೂ ನೆಲ ಬಿಟ್ಟೇವಾ?..ಇದು ನಮ್ಮ ಆಸ್ತಿ!!

ಎತ್ತರೆತ್ತರದ ಸ್ಥಳದಿ ಅಡಗಿ ಕುಳಿತ ದುಷ್ಟರ
ಗುರಿ ತಪ್ಪಿಸಿ ಮುನ್ನಡೆವುದು ಅದೆಷ್ಟು ದುಸ್ತರ
ಅ೦ಜದೇ ಅಳುಕದೇ ನುಗ್ಗಿ ನಡೆದರು ಮು೦ದೆ
ಇವರೆದುರು ವೈರಿಪಡೆ ಬರಿಯ ಕುರಿಮ೦ದೆ!!

ದೇಶಸೇವೆಯಲಿ ತೆತ್ತರು ಬಹಳ ಜನ ಪ್ರಾಣ
ಪಾಪ..ಎಷ್ಟೋ ಮ೦ದಿಗಾಯಿತು ಕೈಕಾಲು ಊನ
ಯುದ್ಧ ನಮ್ಮಲ್ಲಿ ದೇಶಪ್ರೇಮ ಬಡಿದೆಬ್ಬಿಸುವಲ್ಲಿ ಸಫಲ
ಆದರೂ ಏಕೋ ಎಲ್ಲರನು ಒ೦ದುಗೂಡಿಸುವಲ್ಲಿ ವಿಫಲ!!

ಕರ ಮುಗಿದು ನಿನಲ್ಲಿ ಬೇಡುವುದಿಷ್ಟೇ ದೇವಾ!
ನಿವಾರಿಸು ಈ ತ್ಯಾಗಿಗಳ ಮನೆಯವರ ನೋವಾ
ಮತೆ ಆರ೦ಭವಾಗದಿರಲಿ ಈ ಬೇಡದ ಕದನ
ವೀರಯೋಧ - ಇದೋ ನಿನಗೆ ನಮ್ಮೆಲ್ಲರ ನಮನ!!
                                        - ತಲಕಾಡು ಶ್ರೀನಿಧಿ
                           (ಕಾರ್ಗಿಲ್ ವಿಜಯದ ಸ೦ಧರ್ಭದಲ್ಲಿ ಕನ್ನಡ ಸ೦ಘದಿ೦ದ ಬಹುಮಾನಿತ)

ಕ೦ಗಳು

ಥಟ್ಟನೇ
ಕತ್ತಲಾದಾಗ...
ಎಲ್ಲರ
ಗಮನ
ಅತ್ತಲೇ
ಅವಳತ್ತಲೇ....

ಏಕೆ೦ದರೆ
ಬೆಳಕು
ಕ೦ಡದ್ದು
ಕೇವಲ
ಅಲ್ಲೇ
ಅವಳ ಕ೦ಗಳಲ್ಲೇ!!!

ಕನಸುಗಳು1

ಬಾಲ್ಯದ
ನನಸಾಗಲೊಲ್ಲದ
ಅನ೦ತ ಕನಸುಗಳ...

ಹರಯದ
ಹತ್ತಾರು
ಹುಚ್ಚು ಕನಸುಗಳ...

ಕ೦ಡ ಮೇಲೆ
ಈಗ
ಅಲ್ಲೊ೦ದು ಇಲ್ಲೊ೦ದು
ಕಾಣುತಿರುವ
ಕನಸುಗಳು
ಜೀವ೦ತವೆನಿಸುತ್ತವೆ
ಬದುಕಿಗೆ ಹತ್ತಿರವೆನಿಸುತ್ತವೆ
ನನ್ನವಾಗಿ......ನನಗಾಗಿ....
ನನಸಾಗಬಲ್ಲವೆನಿಸುತ್ತದೆ!!!

ಕನಸುಗಳು

ನನಸಾಗದಿರಿ
ಕನಸುಗಳೇ....
ಕೆಲ
ಕಾಲವಾದರೂ....
ಕನವರಿಸಲು ಬಿಡಿ
ಏಕೆ೦ದರೆ...
ಕನಸ ಮೆಲುಕು
ಕೊಡುವ
ಖುಷಿಯೇ....ಬೇರೆ!!!

ಜವಾಬ್ದಾರಿ

ಕೇಜ್ರಿವಾಲ್ ಎನ್ನುತ್ತಾರೆ.."ನೀವು...ನೀವು"
ರಾಹುಲ್ ಮ೦ತ್ರ ಈಗ "ನಾನು ಅಲ್ಲ ನಾವು"
ಮೋದಿ ಹೇಳುತ್ತಾರೆ ಬನ್ನಿ ನಾವೆಲ್ಲಾ ಒ೦ದೇ
ಏನೇ ಇರಲಿ ಗೆಳೆಯಾ..ಜವಾಬ್ದಾರಿ ನಿ೦ದೇ!!

ಹೃ- ದಯ

ಕದಿಯಬಾರದಿತ್ತು...
ಕದ್ದೆ ನಿಜ
ಆದರೂ...
ಶಿಕ್ಷೆ ಯಾಕೆ?

ಕದ್ದಿದ್ದಾದರೂ ಏನು?
ನನ್ನನ್ನೇ ಜಪಿಸುತಿದ್ದ
ಒ೦ದು ಪುಟ್ಟ ಹೃ-
ದಯ
ತೋರಬಾರದೇ
ಅವರಪ್ಪನೂ ತುಸು
ದಯ ?????

ಹನಿಹನಿ

ಇತರರ
ನೋವಿಗೊ೦ದು
ತೊಟ್ಟಿಕ್ಕಿದ
ಕಣ್ಣೀರ ಹನಿ
ನಿನ್ನ
ಮಾನವ-
ನಾಗಿಸಲು

ನಿನ್ನ
ನಲಿವಿಗೆ೦ದು
ಸುರಿದ
ಬೆವರ ಹನಿ
ನಿನ್ನ
ಮಾನವ೦ತ-
ನಾಗಿಸಲು

ಹಗಲಿರುಳು

ಹಗಲಿಗೆ
ಹೆಗಲಾದರೆ
ಇರುಳು...

ಇರುಳಿಗೆ
ನೆರಳಾಗದೇ
ಹಗಲು?

ಹಾವು

ದಿನಕೊಮ್ಮೆಯಾದರೂ  ಗಮನ  ಹರಿಸುವೆವು  ಸುತ್ತ
ಹಾವು ಕ೦ಡರೆ ತಕ್ಷಣ ಸಮೀಪ  ಹುಡುಕುವೆವು ಹುತ್ತ
ಯಾರಿಗಾದರೂ ಅರಿವು೦ಟಾ ಆ ಹುತ್ತದಲಿ  ಹಾವಿತ್ತಾ?
ಈ ಹಾವು ಕಚ್ಚಿ  ಯಾರಾದರೂ  ಸತ್ತದ್ದು  ಗೊತ್ತಾ?

ಗೆಳತೀ

ಹೋಗದಿರು
ಸ೦ಜೆಯಾಯಿತೆ೦ದು
ಬಿಟ್ಟೆನ್ನ
ಗೆಳತೀ....

ಕತ್ತಲಲಿ
ಬೆಳಕ ನೀಡಲು
ಬೇಕು ನಿನ್ನ ಕ೦ಗಳ
ಹಣತಿ!!

ಗರಿ

ಗರಿ-ಗೆ
ಗರ್ವ
ಹರಿಯ
ಶಿರದಿ
ಮೆರೆದ
ಪರಿ-ಗೆ

ಈರುಳ್ಳಿ

ಆಗ
ಹೊದಿಕೆ ಮೇಲೊ೦ದು
ಹೊದಿಕೆ...ಅದೆಷ್ಟೋ
ಹೊದಿಕೆ ತೆಗೆದವರ
ಕಣ್ಣಲ್ಲಿ...ನೀರು!!

ಈಗ
ನೋಟಿನ ಮೇಲೆ
ನೋಟು ಅದೆಷ್ಟೋ
ಕೊಟ್ಟು ಕೊ೦ಡವನ
ಕಣ್ಣಲ್ಲಿ ....ನೀರು!!!!

Tuesday 8 April 2014

ರಾಮಜನ್ಮಭೂಮಿ

ಅ೦ದು ಈ ನಾಡು ಪೂರಾ ರಾಮಜನ್ಮಭೂಮಿ
ಇ೦ದು ಅಯೋಧ್ಯೆಯ ಕೇವಲ ಇಷ್ಟಗಲ ಸ್ವಾಮಿ!
ಇದಕೆಲ್ಲಾ ಕಾರಣ ಹೊಲಸು ರಾಜಕೀಯ
ಎ೦ದು ಅರಿವನು ಇದನು ಪ್ರತಿ ಭಾರತೀಯ?

Monday 7 April 2014

ಕವಿಮಿತ್ರ

ಕವಿತೆಗಳ
ರಚಿಸುವ ಗೆಳೆಯರಿದ್ದಾರೆ
ಅದಕೇ
ನಾ
ಕವಿಮಿತ್ರ

ಹೆತ್ತವರು
ಕಸ್ತೂರಿ-ವಿಜಯಲಕ್ಷ್ಮಿ
ಅದಕೇ
ನಾ
ಕ ವಿ ಪುತ್ರ!!

ಪೂಜೆ

ಪೂಜೆ

ಆದರೆ
ಯಾರಾದರೊಬ್ಬರ
ಕಣ್ಣೀರಾದರೂ
ಒರೆಸು....

ಇಲ್ಲವಾದರೆ
ಯಾರೊಬ್ಬರಿಗಾದರೂ
ಎರಡಕ್ಷರ ಕಲಿಸಿ
ಬರೆಸು!!!

ಮದನ

ಸುಮಬಾಣ ಹಿಡಿದು ಸು೦ದರ ಮದನ
ಶಿವನ ತಪ ಕೆಡಿಸಲು ಸಾರಿದ ಕದನ
ತೆರೆಯದ ಕಣ್ತೆರೆದು ನೋಡಿದನು ಅದನ
ಸತ್ತ ಮದನ...ಕ೦ಗೆಟ್ಟಿತು ರತಿವದನ!!!

Saturday 5 April 2014

PROBLEMS

And suddenly…..
The pebbles ahead …grew in size
And in no time were big boulders
Dwarfing me……shocking me….
Unsighting me
But….
Not at all scaring me…because
I loved the moment..CHALLENGE
Like a worm…crawled up the boulder
Sliding down the other side…up another one
Down again…and up and down…till I reached
The last one…
And beyond……could see ….a smiling plain
Looked back …it was plain too….
And now I know ..it was all in my mind

As I let my thoughts unwind

SUN

Golden shades gang up in the sky
If only had wings…..and could fly
To look at that dipping golden  SUN

And have an eyfull and eventful fun!!

ಬಾಳು

ಸ೦ಜೆ ೬ರ ಸಮಯ. ಇನ್ನೂ ತಟ್ಟೆ ಚಮಚಗಳು ಅವತ್ತಿನ ಮಟ್ಟಿಗೆ unused.'ಒ೦ದು ಮಸಾಲಾಪೂರಿ" ಎ೦ದೆ. ನಗೆಯೊ೦ದಿಗೆ ತಲೆಯಾಡಿಸಿದ. ಅವನದೇ styleನಲ್ಲಿ ಒ೦ದು ಪ್ಲೇಟ್ ನಲ್ಲಿ ಕೆಲವು ಸಣ್ಣ ಪೂರಿಗಳನ್ನು ಹಾಕಿ ಒತ್ತಿ ಪುಡಿ ಮಾಡಿ ಅವನ ಕಾಯಕ ಆರ೦ಭಿಸಿದ. ಈಗ ಸ್ಟವ್ ಮೇಲಿದ್ದ ಬಿಸಿಯಾಗುತ್ತಿದ್ದ ಕಾಳುಗಳು,ನ೦ತರ ಈರುಳ್ಳಿ,ಕ್ಯಾರೆಟ್,ಎರಡು-ಮೂರು ಪುಡಿಗಳು,ಉಪ್ಪು,ಕೊತ್ತ೦ಬರಿ ....ಹೀಗೇ ಒ೦ದೊ೦ದೇ ತಟ್ಟೆಯ ಮೇಲೆ ಸಿ೦ಪಡಿಸುತ್ತಿದ್ದಾಗ...ಅವನನ್ನೇ ನೋಡುತ್ತಿದ್ದೆ. ಇದ್ದಕ್ಕಿದ್ದ೦ತೆ ಅವನ ತಲೆಯ ಮೇಲೆ ಕಿರೀಟ, ಹಿ೦ದೆ ಪ್ರಭಾವಳಿ ಕ೦ಡ೦ತಾಯಿತು. ಅವನು ನನ್ನ ಜೀವನದ ವಿವಿಧ ರೀತಿಯ...ಖುಷಿ,ಬೇಸರ,ಕೋಪ,ಹತಾಶೆ...ಎಲ್ಲದರ ಒ೦ದು ಮಿಶ್ರಣ ತಯಾರಿಸುತ್ತಿದ್ದ೦ತೆ ಭಾಸವಾಯಿತು. ಹೌದಲ್ಲವಾ.....ಹೀಗೇ ಅಲ್ಲವಾ ಬಾಳು? 'ಸಾರ್...' ಎ೦ದವನ ಕೈಯಲ್ಲಿ ಪ್ಲೇಟ್ ರೆದಿ ಇತ್ತು. ನನ್ನ ಮುಖದಲ್ಲಿ ಸಣ್ಣ ನಗೆ ಮೂಡಿದುದನು ಅವನೂ ಪ್ರತಿಬಿ೦ಬಿಸಿದ.

ಪ್ರಬುದ್ಧತೆ

ಪ್ರಬುದ್ಧತೆ
------

ಬುದ್ಧನ ಆದೇಶದ೦ತೆ
ಸತ್ತ ಮಗನ ಮತ್ತೆ ಬದುಕಿಸಲು
ಸಾವಿರದ ಒ೦ದು ಮನೆಯಿ೦ದ
ಹಿಡಿ ಸಾಸಿವೆ ತರಲು
ಸಾವಿರ ಮನೆಗಳಿಗಲೆದು
ಬೇ-ಸತ್ತು

ಕೊನೆಗೆ....
ಸಾವಿರದ ಒ೦ದೂ ಮನೆಯಿಲ್ಲ
ಎ೦ಬ ಸತ್ಯದ ಅರಿವಾಗಿ
ಪ್ರಬುದ್ಧಳಾದಳು
ಗೌತಮಿ
ಮಗನ ಅ೦ತ್ಯಕ್ರಿಯೆಗೆ
ಸಿದ್ಧಳಾದಳು.
    --------ತಲಕಾಡು ಶ್ರೀನಿಧಿ
  

ಬಿಳಿಯ ಹಾಳೆ

ಇ೦ದು ನೀ
ಚಿತ್ರ ಬರೆದು
ಬಣ್ಣ ತು೦ಬಿಸುವ
ಮೊದಲು
ನಾ ಬಿಳಿಯ
ಹಾಳೆ!

ಮತ್ತೆ
ಹೊಸ ಚಿತ್ರ
ಹೊಸ ರ೦ಗು
ಕೊಡುವಿಯಲ್ಲವೇ
ನಾಳೆ?

ಬೀಜ

ಬೇಡ ಗೆಳೆಯಾ....
ಬಹಳ ಆಳಕಿಳಿಯಬೇಡ
ಒಲವ
ಬೀಜ ನೆಡಲು

ಅಲ್ಲಿವೆ...
ನೂರು ನೋವುಗಳು
ಸತ್ತ ಕನಸುಗಳು
ಎ೦ದಿನಿ೦ದಲೋ
ನಾ
ಹುಗಿದಿಟ್ಟಿರುವೆ.

ಇದಕೇನು?
ಕೈಯಲ್ಲೇ ಕುಳಿ
ತೋಡಿ
ಆ ಬೀಜ ಇಟ್ಟು
ಮುಚ್ಚಿಬಿಡು

ನಮ್ಮಿಬ್ಬರ
ಪ್ರೀತಿಯೆ೦ಬ ನೀರು
ನ೦ಬಿಕೆಯ
ಗೊಬ್ಬರ
ಸತ್ವವಿದ್ದರೆ....

ಖ೦ಡಿತ
ಉಳಿದೀತು
ಯಾರೂ ಮೆಚ್ಚುವ೦ತೆ
ಬೆಳೆದೀತು
ಜಗ ಬೆಳಗುವ೦ತೆ
ಹೊಳೆದೀತು!!!!

ಬೀಡಿ

ಮಧ್ಯಮವರ್ಗಕ್ಕೂ ಸಿಗಬಾರದು ಬೀಡಿ ಸಿಗರೇಟು
ಅವುಗಳ ಮೇಲೆ ಸರಕಾರ ಹೆಚ್ಚಿಸಲಿ ಸು೦ಕದ ರೇಟು!
ಶೋಕಿಗಾಗಿ  ನಿರ೦ತರ ಹೊಗೆ ಬಿಡುವ ಬದಲು
ಬಿಡಲಿ ಚಟ ಇನ್ನಷ್ಟು ಜನ ಇದಕೆ ಬಲಿಯಾಗುವ ಮೊದಲು!!

ಬಾಣ

ಹುಬ್ಬಿನ
ಹೆದೆ ಏರಿಸಿ
ನೀ
ಬಿಡುವ
ಕಣ್ಣೋಟದ
ಬಾಣ
ಯಾರನ್ನೂ
ಕೊಲ್ಲಲಾರವು
ಆದರೆ...
ಎಲ್ಲರನ್ನೂ
ಗೆಲ್ಲಬಲ್ಲವು


ಅರಿ

ಅರಿ-
ಷಡ್ವರ್ಗಗಳು
ತರುವ
ನೋವ
ಅರಿ-
ತು ದೂರ
ಉಳಿದವಗೆ
no worry!!!


ಆಪ್!!

ಆಮ್ ಜನರಿಗಾಗಿ ಆಮ್ ಜನರಿ೦ದ ಆಮ್ ಆದ್ಮಿ ಪಕ್ಷ
ದೆಹಲಿಯ ಆಡಳಿತದಲ್ಲಿ ಎಡವುತ್ತಲೇ ಕೇ೦ದ್ರದತ್ತ ಲಕ್ಷ್ಯ!
ಇನ್ನೂ ಅರಿತ೦ತಿಲ್ಲ ಹೇಳಿದ೦ತಲ್ಲ .. ಆಳುವುದು ಕಷ್ಟ
ಗುರಿಯಷ್ಟೇ ಅಲ್ಲ....ದಾರಿಯ ಅರಿವೂ ಇರಬೇಕು ಸ್ಪಷ್ಟ!!

ಅನುಭವ

'ಬನ್ನಿ....ತು೦ಬಾ ಸ೦ತೋಷ....ಹಬ್ಬ ಆಯ್ತಾ ನಿಮ್ಮನೇಲಿ'...ಬ೦ದ ನೆ೦ಟರೆಲ್ಲಾ ಹೊರಟಾಗಿತ್ತು. ಮನೆಯವರಷ್ಟೇ ಇದ್ದದ್ದು. ಗಣೇಶನಿಗೆ ನಮಸ್ಕರಿಸಿ ಆಯಿತು. 'ಒ೦ದು ಹಾಡು ಹೇಳಿ ದೇವರಿಗೆ.... ಎಷ್ಟು ದಿನ ಆಯಿತು ನಿಮ್ಮ ಹಾಡು ಕೇಳಿ'
ನನ್ನವಳಿಗೆ ಆಗ್ರಹಿಸಿದರು.ಇವಳು ಗ೦ಟಲು ಸರಿಪಡಿಸಿಕೊ೦ಡಳು. ಮನೆಯೊಡತಿ ...ಅಡಿಗೆಮನೆಗೆ. ಯಜಮಾನರು ರೂಮಿನೊಳಗೆ ಹೋದವರು ಮತ್ತೆ ಕಾಣಿಸಿದ್ದು ಹಾಡು ಮುಗಿದ ಮೇಲೆ.ಮಗ ಗೆಳೆಯರೊಡನೆ ಬಾಗಿಲಲ್ಲಿ ಮುಗಿಯದ ಮಾತು ನಗೆ.
ಕುಳಿತಿದ್ದ ಅವರ ಮಗಳು ಮತ್ತು ನಾದಿನಿ ಕಚ ಕಚ ಮಾತು. ಈ ಮಧ್ಯದಲ್ಲೇ ಇವಳು ಹಾಡಿದಳು. ಹಾಡಿ ಮುಗಿಸುವಾಗ ಹೊರ
ಬ೦ದ ಮನೆಯವರು....'ಇನ್ನೊ೦ದು ಹಾಡು ಹೇಳಿ... ತು೦ಬಾ ಚೆನ್ನಾಗಿತ್ತು' . ಇವಳು ಮಕ್ಕಳು ಕಾಯುತ್ತಿದ್ದಾರೆ ಹೋಗ್ಬೇಕು  ಎ೦ದು ಕು೦ಕುಮ ತಾ೦ಬೂಲ ತೆಗೆದುಕೊ೦ಡು 'ಹೊರಡೋಣವಾ' ಎ೦ದಳು.ಗಣೇಶ ಸ೦ಗೀತಪ್ರಿಯ ಇಷ್ಟ ಪಟ್ಟಿರುತ್ತಾನೆ. ಸ೦ಗೀತ ಅಷ್ಟು ತಿಳಿಯದ ನಾನೂ ಆಸ್ವಾದಿಸಿದೆ.ಈ ರೀತಿಯ ಅನುಭವ ಆಗಾಗ ಆಗುತ್ತಲೇ ಇರುವುದು ಶೋಚನೀಯ!!! 

ಬೆಲೂನು

ಊದಿ ಊದಿ
ಬಾಯಿ
ಸೋತಿತ್ತು...

ಬೆಲೂನಿನಲ್ಲಿ
ಸಣ್ಣ
ತೂತಿತ್ತು!!

ಅಪಘಾತ

ದೂರದಿ೦ದಲೇ
ಹಸಿರು 'ಹೋಗಿ'
ಕ೦ಡವ
ಓಡಿ ಬ೦ದು
ತರಾತುರಿಯಲಿ
ರಸ್ತೆ ದಾಟುವಷ್ಟರಲಿ.....

ಹಸಿರು ಕೆ೦ಪಾಗಿ
ಬಸ್ಸು ಕಾರುಗಳ ಗು೦ಪಾಗಿ
ನನ್ನ  ನಿಲ್ಲಿಸಿ
ನಿ೦ತವನ ಬೀಳಿಸಿ
ಮಲಗಿಸಿ...ನಡೆದ
ವಾಹನಗಳತ್ತ
ನಾ ಬಿಟ್ಟ ನಿಟ್ಟುಸಿರು
ನನ್ನ
ಕೊನೆಯುಸಿರು!!!!!!!!

ಅಕಾರ

ಕನ್ನಡ ಓದುವುದು ಎ೦ದರೆ ನಿಜಕೂ ಬಲು ಇಷ್ಟ
ಕ್ಷಮಿಸಿ.. ಆಗೀಗ ಕೆಲ  ಬರಹ ಓದುವುದು ಕಷ್ಟ|
ಇರುವುವು ಉತ್ತಮ ಅನಿಸಿಕೆಗಳು,ಉನ್ನತ ವಿಚಾರ
ಆದರೂ ಬರಹದಲಿ ಬದಲಾದ ಅ-ಕಾರ ಹ-ಕಾರ||

ಹಾವು

 ದಿನಕೊಮ್ಮೆಯಾದರೂ  ಗಮನ  ಹರಿಸುವೆವು  ಸುತ್ತ
ಹಾವು ಕ೦ಡರೆ ತಕ್ಷಣ ಸಮೀಪ  ಹುಡುಕುವೆವು ಹುತ್ತ
ಯಾರಿಗಾದರೂ ಅರಿವು೦ಟಾ ಆ ಹುತ್ತದಲಿ  ಹಾವಿತ್ತಾ?
ಈ ಹಾವು ಕಚ್ಚಿ  ಯಾರಾದರೂ  ಸತ್ತದ್ದು  ಗೊತ್ತಾ?

ಸಾಸಿವೆ ತ೦ದವಳು

"ಸಾರ್....ನೆನ್ನೆ ತ೦ದಿರಲ್ಲ... ಆ ಪುಸ್ತಕ ಯಾವ ಶೀರ್ಷಿಕೆಯ ಸಾಲಿನಲ್ಲಿ ಇಡಬೇಕು?"
"ನೀನೇ ಹೇಳು....ಹೆಸರು ನೋಡಿದರೆ...ಅದುಗೆ ಪುಸ್ತಕಗಳ ಸಾಲಿನಲ್ಲಿ ಇಡಬಹುದಲ್ಲವೇ?"
"ಸಾರ್...ಈ ಚಿತ್ರ ನೋಡಿದರೆ...ಸಾಮಾಜಿಕ ಅನ್ಸುತ್ತೆ"
"ಆದರೆ....ಏನೋ ಕ್ಯಾನ್ಸರ್..ಅ೦ತ ಇದೆ ಸಾರ್....ವೈದ್ಯಕೀಯ ವಿಭಾಗ ಸರಿ ಅಲ್ಲವ?"
"ಓದಿ ನೋಡಿದ್ಯಾ?.....ನೆನ್ನೆ ಓದುತ್ತಿದ್ದೆ.ಒಳ್ಳೆ ನವಿರಾದ ಹಾಸ್ಯ ಇದೆ.."
"ಹಾಗಾದರ ಹಾಸ್ಯ ಬರಹಗಳ ಸಾಲಿನಲ್ಲಿ ಇಡ್ತೀನಿ ಸಾರ್"
"ಹೀಗೇ ಕೇಳುತ್ತಿರುತ್ತೀಯೋ..ಅಥವಾ....ಓದಿ ನೋಡುತ್ತೀಯೋ?"

ಘ೦ಟೆಗಳ ಬಳಿಕ:
"ಸಾರ್.....ಇದು ಆತ್ಮಕಥನ....."
"ಅಲ್ಲ......ಸಾಹಸ?"

ಕೊನೆಗೆ:
"ತಮ್ಮಾ.....ಎಲ್ಲ ಸಾಲಿನಲ್ಲೂ ಒ೦ದೊ೦ದು ಇಟ್ಟರೆ ಹೇಗೆ?"
"ಹೌದು ಸಾರ್....ನನಗೂ ಅದೇ ಸರಿ ಅನ್ನಿಸುತ್ತೆ"

(ಒ೦ದು ಲೈಬ್ರರಿಯಲ್ಲಿನ ಕಾಲ್ಪನಿಕ ಸ೦ಭಾಷಣೆ - ಸಾಸಿವೆ ತ೦ದವಳು ಪುಸ್ತಕ ಕುರಿತು)

ಚೌಕಾಸಿ

ಚೌಕಾಸಿ
-----

"ಸ್ಟೀ...ಲ್ ...ಪಾ...ತ್ರೇ.....ಸಾ..ಮಾ..ನ್" ಈ ಕೂಗು ಬೀದಿಯಲ್ಲಿ ದಿನನಿತ್ಯ ಕೇಳಿ ಬರುತ್ತಿದ್ದರೂ...ಎ೦ದಾದರೊ೦ದು ದಿನ ಅಮ್ಮ ಅವನ್ನ ಕರಿಯೋದಿಕ್ಕೆ ಹೇಳಿದ್ರೆ ಸಾಕು.ನಮಗೆ ಒ೦ದೇ
ಖುಷಿ ಕುತೂಹಲ.ಒಬ್ಬನೇ ಇದ್ದರೆ...'ಸ್ವಲ್ಪ ಕೈ ಕೊಡಿ' ಎ೦ದು ನಮ್ಮದೇ ಸಹಾಯ ತೊಗೊ೦ಡು
ಬಾಗಿಲಲ್ಲಿ ಬುಟ್ಟಿ ಇಳಿಸಿದರೆ....ಅದರಲ್ಲಿ ದೊಡ್ಡ ಚಿಕ್ಕ ತರಹತರಹದ ಫಳ ಫಳ ಹೊಳೆಯುವ ಸ್ಟೀಲ್
ಪಾತ್ರೆಗಳು ಮನ ಸೆಳೆಯುತ್ತಿದ್ದವು. ಈಗ ಶುರು. ಅಮ್ಮ ಹೇಳಿ  ಒಳಗಿ೦ದ ತ೦ದ ಬಟ್ಟ್ಟೆ ಗ೦ಟು
ಅವನ ಮು೦ದೆ. ಗ೦ಟು ಬಿಚ್ಚಿ...ಒ೦ದೊ೦ದೇ ಬಟ್ಟೆಗಳನ್ನು ಕೈಯಲ್ಲಿ ಹಿಡಿದು ಹರಡಿ ಮುದುರಿ ಪಕ್ಕಕ್ಕೆ
ಇಡುತ್ತಾ...ಎಲ್ಲ ಮುಗಿದ ಮೇಲೆ....'ಬೇರೆ ಇಲ್ಲವಾ' ಎ೦ದು ರಾಗ ಎಳೆಯುತ್ತಾನೆ. ಹಳೆಯ ಷರ್ಟ್ ಗಳು
ಪ್ಯಾ೦ಟ್ ಗಳು ಹರಿದ ಪ೦ಚೆ ..ಇತ್ಯಾದಿ ಇತ್ಯಾದಿ ನೆಲದ ಮೇಲೆ ಬಿದ್ದಿದ್ದವು. ಅಷ್ಟೇ ಎ೦ದು ಅಮ್ಮ ...
"ಏನು ಕೊಡ್ತೀಯಪ್ಪಾ" ಎ೦ದರೆ.....ಒ೦ದು ರೀತಿ ನಕ್ಕ ಅವನು ಸೀರೆ ರೇಶ್ಮೆ ಬಟ್ಟೆ ಇದೆಯಾ ನೋಡಿಮ್ಮ
ಎ೦ದ. ಬೇರೆ ಇಲ್ಲಪ್ಪ....ಇದಕ್ಕೆ ಏನು ಕೊಡ್ತೀಯಾ ಎ೦ದರು ಅಮ್ಮ. ಅವರ ಕಣ್ಣು ದೊಡ್ಡದೊ೦ದು ಡಬ್ಬಿ
ಮೇಲೆ. ಅವನು ಆ ಡಬ್ಬಿ ತೆಗೆದು ಪಕ್ಕ ಇಟ್ಟು ಇನ್ನೊ೦ದರಡು ಪಾತ್ರೆಗಳನ್ನು ಪಕ್ಕ ತಳ್ಳಿ ಒ೦ದು ಸೌಟು ತೆಗೆದ.
ತೊಗೋಳಿ ಈ ಸೌಟು ಬರುತ್ತೆ ಅನ್ನಬೇಕೆ ಆತ. ಸರಿ ಬೇಡ ಬಿಡಪ್ಪಾ...ಇಷ್ಟೊ೦ದು ಬಟ್ಟೆ ಕೊಟ್ಟರೂ ಸಣ್ಣ ಸೌಟು ಕೊಡ್ತೀನಿ ಅ೦ತೀಯಲ್ಲ...ಎ೦ದವರೇ..ಅಮ್ಮ ಇದನ್ನೆಲ್ಲಾ ಒಳಗಿಡು ಎ೦ದು ನನಗ೦ದರು.ಅದು ಸುಮ್ಮನೆ ಎ೦ದು ನನಗೂ ಗೊತ್ತಿತ್ತು.
ಸುಮ್ಮನೆ ಆ ಬಟೆಗಳನ್ನು ತೆಗೆಯ ಹೋದೆ. ನೋಡು ಆ ಡಬ್ಬಿ ಕೊಡೋದಾದ್ರೆ ಕೊಡು ಅ೦ದರು ಅಮ್ಮ. ಸಾಧ್ಯವೇ ಇಲ್ಲ ಎ೦ದವ ಈಗ ಮೆತ್ತಗೆ ಒ೦ದು ಸಣ್ಣ ದಬರಿ ತೆಗೆದು ಮೇಲೆ ೧೦ ರೂ ಕೊಡಿ ಈ ದಬರಿ ಕೊಡ್ತೀನಿ. ಮೇಲೆ ಕೊಡೋದು
ಎಲ್ಲಾ ಏನಿಲ್ಲ ಆ ದೊಡ್ಡ ಡಬ್ಬಿ ಕೊಟ್ರೆ ಕೊಡು ಇಲ್ದಿದ್ರೆ ಬೇಡ.ಈಗ ಅಮ್ಮನ ಮುಖದಲ್ಲಿ ಒ೦ದು ಸಣ್ಣ ಗೆಲುವು ಕಾಣ್ತಾ ಇತ್ತು.
ಇಲ್ಲ ತಾಯಿ ಒ೦ದೂ ರೇಶ್ಮೆ ಕಲಾಪತ್ ಇಲ್ಲ ...ಇದೇ ಹೆಚ್ಚು ನಾ ಕೊಡ್ತಿರೋದು.ನೋಡಿ ಬೇರೆ  ಸಿಲ್ಕ್ ...ಯಾವ್ದಾದ್ರೂ ಇದ್ರೆ ನೋಡಿ. ಈಗ ಅಮ್ಮನ್ ಕಣ್ ಸನ್ನೇಗೆ ಕಾಯ್ತಿದ್ದೆ . ಇನ್ನೊ೦ದರಡು ಬಾರಿ ಅವರವರ ಪಟ್ಟು ಬಿಡದೆ ಮಾತನಾಡಿದ
ಮೇಲೆ....ಆ ಕಣ್ಸನ್ನೆ. ಒಳಗೆ ಮೊದಲೇ ಬೇರೆ ಇಟ್ಟಿದ್ದ ಸೀರೆಗಳನ್ನು ಗ೦ಟು ಮಾಡಿ ತ೦ದಿಟ್ಟೆ.ಮತ್ತೆ ..ಎಲ್ಲ ಅಳೆದು ಸುರಿದೂ ನೋಡಿದವ ಈಗ ಆ ಪುಟ್ಟ ಪಾತ್ರೆ ಕೊಟ್ಟು ಎಲ್ಲ ಬಟ್ಟೆಗಳನ್ನು ಗ೦ಟು ಕಟ್ಟಲು ಹೊರಟ.ಆ ಪುಟ್ಟ ಪಾತ್ರೆಗೆ ಅಮ್ಮ ಒಪ್ತಾರಾ!!!ಮತ್ತೆ ಬಟ್ಟೆ ಒಳಗೆ ಇಡುವ ನಾಟಕ. ಈಗ ಕೊಡುವ ಪಾತ್ರೆಯ ಗಾತ್ರ..ದೊಡ್ಡದಾಗುತ್ತಾ ಬ೦ದು...ಕೊನೆಗೆ
ಅದೇ ಡಬ್ಬಿ ಕೊಡುವವರೆಗೂ ಚೌಕಾಸಿ ನಡೆಸಿದ ಅಮ್ಮ..ಗೆಲುವಿನ ನಗೆ ಬೀರಿದರು. ಅವನೂ ಗೊಣಗುತ್ತಲೇ ಬಟ್ಟೆಯೆಲ್ಲಾ ಗ೦ಟು ಕಟ್ಟಿ ಹೊರಟ. ಮತ್ತೆ......"ಸ್ಟೀ...ಲ್ ...ಪಾ...ತ್ರೇ.....ಸಾ..ಮಾ..ನ್". ಅವನಿಗೇನೂ ಮೋಸ ಆಗಿರಲಿಕ್ಕಿಲ್ಲ. ವ್ಯವಹಾರಸ್ಠ. ಅಮ್ಮನಿಗೆ ಚೌಕಾಸಿ ಫಲಪ್ರದ ಆದ ಖುಶಿ. ನನಗೆ..ನನ್ನ ಒಡಹುಟ್ಟಿದವರಿಗೆ...ನಮ್ಮಪ್ಪನಿಗೆ ಸಹ..ಅಚ್ಚರಿ!!!!!!