Friday 24 July 2015

ಬುದ್ಧಿವಂತ

'ನೀ ತುಂಬ ದಡ್ಡಿ ಕಣೇ' ಗಂಡನೆಂದ ಕೋಪದಿಂದ.
'ಅದು ನಿಮ್ಮನ್ನ ಮದುವೆ ಆಗಿದ್ದರಲ್ಲೇ ಗೊತ್ತಾಗುತ್ತಲ್ಲ' ನಗುತ್ತಲೇ ಹೇಳಿದಳು.
'ನಾ ಭಾರಿ ಬುದ್ಧಿವಂತ ಬಿಡು' ಎಂದ ಈಗ ಮುಖ ಅರಳಿಸುತ್ತಾ.
'ಅದೂ ನನ್ನನ್ನು ಮದುವೆ ಆಗಿದ್ದರಲ್ಲೇ ತಿಳಿಯುತ್ತಲ್ಲ!!!!' ಎಂದಳು ಹಾಗೇ ನಗುತ್ತಾ.
ಅವ ಸದ್ದಿಲ್ಲದೆ ಜಾಗ ಖಾಲಿ ಮಾಡಿದ.

ಸೂರ್ಯೋದಯದ ಸೊಬಗು



ಒಂದು ತಣ್ಣನೆಯ ರವಿವಾರದ ನಸುಕು
ಸುತ್ತ ಎಲ್ಲವೂ ಮುಸುಕು ಮುಸುಕು
ಸೂರ್ಯೋದಯದ ಸೊಬಗಿನ ಗುಂಗಿನಲಿ
ಓಡಿ ಸೇರಿದೆ ನೋಡಲು ಲಾಲ್‍ಬಾಗಿನಲಿ!

ತೀವ್ರ ಗತಿಯಲಿ ಓಡುತ್ತಿರುವವರ
ಮಂದಗತಿಯಲಿ ಓಡಾಡುತ್ತಿರುವವರ
ಸುಮ್ಮನೇ ಕುಳಿತು ನೋಡುತ್ತಿರುವವರ
ದಾಟಿ ಸೇರಿದೆ ಬಂಡೆ ಮೇಲಿನ ಎತ್ತರದ ಗೋಪುರ!

ಆಗಸ ಇನ್ನೂ ನೀಲಿಯಾಗೇ ಇತ್ತು
ಅಲ್ಲೊಂದು ಇಲ್ಲೊಂದು ಬಿಳಿ ಮೋಡ ತೇಲುತ್ತಿತ್ತು
ಮರೆತು ಇಹದ ಎಲ್ಲ ಚಿಂತೆ
ಮೂಡಲ ದಿಕ್ಕಿನಲಿ ನೋಡುತ್ತ ನಿಂತೆ!

ಅಗೋ ಬಾನಿನಲಿ ಒಂದು ಬಣ್ಣದೋಕುಳಿ
ಮೈ ಮನಗಳಲಿ ಕಾತರದ ಕಚಗುಳಿ
ಹೊರಗಿನ ಚಿಲಿಪಿಲಿಗಳಿಗೆ ಕಿವುಡಾದೆ
ಇತರರ ಇರುವಿಗೆ ಕುರುಡಾದೆ!

ಮೂಡಿತಾಗ ದೂರದಲಿ ಕಿತ್ತಳೆಯ ಚೆಂಡು
ನಾಚಿ ಕೆಂಪಾಗುತ್ತಾ ಈ ಇಳೆಯ ಕಂಡು
ಕಣ್ಣಲಿ ತುಂಬಿಕೊಂಡೆ ಈ ಸೂರ್ಯೋದಯವ
ಕ್ಷಣದಲಿ ಧನ್ಯನೆನಿಸಿದ ಸೂರ್ಯನ ದಯವ!!

ಅಹಲ್ಯೆ

ಕಲ್ಲಾಗಿದ್ದುದು
ಅಹಲ್ಯೆಯಷ್ಟೇ ಅಲ್ಲ
ಶಪಿಸಿದ ಹೃದಯ ಕೂಡ!

ನೋವಹನಿ

PENಯಿಂದ ಮೂಡಿ 
PUNಯಿಂದ ಕೂಡಿ 
Lಅರ ಮೆಚ್ಚುಗೆ ಪಡೆದ
ಅವನ ನಗೆ-
ಹನಿಗಳು
ಮರೆಸಿದವು
ನೋವ ನುಂಗಿದ್ದ ಅವನ
ಹೃದಯ ಸುರಿಸಿದ ಕಣ್ಣ
ಹನಿಗಳ!

Saturday 18 July 2015

ತುಪ್ಪ

ಗುಂಡ ಊಟಕ್ಕೆ ಕೂತ.ಹೆ೦ಡತಿ ಬಿಸಿಬಿಸಿ ಅನ್ನ ಬಡಿಸಿ ಒಳಹೋದಳು.
'ತುಪ್ಪ' ಅ೦ದ ಗು೦ಡ ಆಸೆಯಿಂದ.
"ಆಂ....' ಗುಡುಗಿದಳು ಒಳಗಿಂದ.
'ಉಪ್ಪು ಅಂದೆ' ಸ್ವಲ್ಪ ಮೆಲ್ಲನೆ ಹೇಳಿದ.
'ಏನ೦ದಿರಿ?...' ಎನ್ನುತ್ತಾ ಹೊರಬಂದಳು.
'ಉಫ್ ಅಂದೆ ಕಣೇ ...ಬಿಸಿ' ಹಲ್ಲು ಕಿರಿದ!
*ಹಿ೦ದೆ ಓದಿದ್ದು*

ಪಟ್ಟಣದಲ್ಲಿ....

ನಗ್ತೀರಾಪ್ಲೀಸ್!

ಗು೦ಡ ಮೊದಮೊದಲು ಪಟ್ಟಣಕ್ಕೆ ಬಂದಿದ್ದ.ತಿಂಡಿ ತಿಂದು ಹಾಗೇ ಅಡ್ಡಾಡಿ ಬರುತ್ತೇನಂದು ಹೊರಗೆ ಹೊರಟ. ಅವನ ಗೆಳೆಯ ಅವನನ್ನು ಎಚ್ಚರಿಸುವುದು ಮರೆಯಲಿಲ್ಲ. ಪಟ್ಟಣದಲ್ಲಿ ಮೋಸ ಮಾಡುವವರು ಹೆಚ್ಚು....ಹುಷಾರಾಗಿರು ಎಂದ.ನನಗೂ ಗೊತ್ತು ಬಿಡು ಎಂದು ಹೋದವನು ಹಿಂತಿರುಗಿದ್ದು ಮೂರು ಗ೦ಟೆ ಕಳೆದು.ಬಂದವನೇ ಗೆಳೆಯನಿಗೆ ಹೇಳಿದ 'ನಿಮ್ಮ ಪಟ್ಟಣದವರು ಮೂರ್ಖರು...ಏಮಾರಿಸಿ ಬಂದೆ'.ಗೆಳೆಯನಿಗೆ ಆಶ್ಚರ್ಯ.ಏನಾಯಿತು ಹೇಳು ಎಂದ ಕುತೂಹಲ ತಡೆಯಲಾಗದೆ.
ಗುಂಡ ಹೇಳಿದ 'ಇಲ್ಲಿಂದ ಹೋದೆನಾ....ಒಂದು ಮೈಲು ದೂರ ದಾಟಿದಾಗ ಅಲ್ಲೊಂದು ದೊಡ್ಡ ಕಟ್ಟಡ ಕಾಣಿಸಿತು. ಹತ್ತಿರ ಹೋಗಿ ತಲೆ ಎತ್ತಿ ನೋಡಿದೆ.ಬಲು ದೊಡ್ಡದಿತ್ತು. ಅಷ್ಟರಲ್ಲಿ ಒಬ್ಬ ಬಂದು ಬೆನ್ನ ಮೇಲೆ ಕೈ ಹಾಕಿದ'.
ಗೆಳೆಯ ಕೇಳಿದ 'ಯಾರು ...ಅವ ನಿನ್ನ ಹಳ್ಳಿಯ ಗೆಳೆಯನಾ?'.
ಗುಂಡ ಮುಂದುವರೆಸಿದ 'ಇಲ್ಲ ನನಗೆ ಪರಿಚಯದವನಲ್ಲ.ಏನು ಎ೦ದು ಕೇಳಿದೆ. ಏನು ನೋಡ್ತಿದೀಯಾ ಎಂದ. ಇದೇ ...ಕಟ್ಟಡ ದೊಡ್ಡದಿತ್ತಲ್ಲ ...ನೋಡುತ್ತಿದ್ದೆ ಎಂದೆ.'ಎಷ್ಟನೇ ಅಂತಸ್ತು ನೋಡುತ್ತಿದ್ದೆ ಎಂದ. ತಕ್ಷಣ ಮೂರು ಎಂದುಬಿಟ್ಟೆ. ಹಾಗಾದರೆ ಕೊಡು ಮುನ್ನೂರು ರೂಪಾಯಿ ಎಂದು ತೆಗೆದುಕೊಂಡು ಹೋದ' 
ಗೆಳೆಯ ಕೇಳಿದ 'ಪೆದ್ದಾ...ನೀನಲ್ಲವಾ ಏಮಾರಿದ್ದು?'
ಗುಂಡ: 'ಆಹಾಹಾ.....ನಾನು ನೋಡ್ತಿದ್ದುದು ಹದಿನೈದನೇ ಅಂತಸ್ತು! ಹೇಗೆ....!!!!' ಎಂದು ಬೀಗಿದ.
ಗೆಳೆಯ ತಲೆತಲೆ ಚಚ್ಚಿಕೊಂಡ.

*ಹಿಂದೆ ಓದಿದ್ದು*

Friday 17 July 2015

ರಾಹುಕೇತು

ರಾಹು ಕೇತು ಶನಿ
ಯಾವ ಮನೆಯಲ್ಲಿ
ಇದ್ದರೇನ೦ತೆ....
ನನ್ನವರು ನನ್ನೊಡನೆ
ಮನೆಯಲಿ ಇರಲು
ನನಗಿಲ್ಲ ಚಿ೦ತೆ!

Wednesday 15 July 2015

ಪ್ರೇಮಪತ್ರ

ಗಂಟೆಗಟ್ಟಲೆ
ಕುಳಿತು ಬರೆದಿದ್ದೆ
ಅವಳಿಗೆ ದೊಡ್ಡ
ಪ್ರೇಮಪತ್ರ 
ಮೊದಲ ಬಾರಿ .....
ಮುಖ ತಿರುಗಿಸಿ
ಹೋಗುವ ಮುನ್ನ
ಅವಳಿಂದ ಬಂದದ್ದು
ಪುಟ್ಟ ಉತ್ತರ
'I am sorry'!!!!!

ಮದಿರೆ!

ನೊ೦ದ ಮನ
ಬೆ೦ದ ಹೃದಯ
ದೂರಾಗಿದೆ ನಿದಿರೆ... 
ಎಲ್ಲ ಕಾಲಕ್ಕೂ
ಇದಕೊ೦ದೇ ಮದ್ದು
ಬೇಕಾಗಿದೆ ಮದಿರೆ!

ಗಾಂಧಾರಿ!

ಛೇ!ತಪ್ಪು ಮಾಡಿದೆ ಎನಿಸುತ್ತಿದೆ
ಅವ ಕುರುಡನಾದರೆ
ನಾ ಅವನ ಕಣ್ಣಾಗಿರಬೇಕಿತ್ತು
ನಾನೇಕೆ ಕೆಟ್ಟ ಅಹಮ್ಮಿನಲ್ಲಿ
ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳಬೇಕಿತ್ತು?
ಕಣ್ಣಿದ್ದ ಅಮ್ಮನ ಮು೦ದೆ
ಮಗ ಬೇರೆ ರೀತಿಯೇ
ವ್ಯವಹರಿಸುತ್ತಿದ್ದನೋ ಏನೋ
ಅಪ್ಪನ ಹೊಟ್ಟೆಯುರಿಗೆ ಅವನೇ
ಮದ್ದಾಗಿರಬಹುದಿತ್ತು!
ಪಾ೦ಡುಪುತ್ರರ
ಜೊತೆಜೊತೆಯಲ್ಲಿ ಅರ್ಧರಾಜ್ಯವಾದರೂ
ನೆಮ್ಮದಿಯಿಂದ ಆಳಿ ರಾಮರಾಜ್ಯವ
ಮರೆಸುವಂತೆ ಕುರುರಾಜ್ಯ ಸ್ಥಾಪಿಸಿ...
ಓಹ್! ಈ ಯುದ್ಧಭೂಮಿಯ
ಅಗತ್ಯವೆಲ್ಲಿತ್ತು ಆಗ?
ಆ ಚಿತ್ರ - ಅದೇ....
ಧರ್ಮಜ-ಸುಯೋಧನರ ಜೋಡಿ
ಬೆನ್ನಿಗೆ ನಿ೦ತ ಭೀಷ್ಮ ದ್ರೋಣರು
ಮಕ್ಕಳು ಮೊಮ್ಮಕ್ಕಳು ಮನೆತುಂಬ
ಆ ಚಿತ್ರ
ಕಣ್ಣಿಗೆ ಕಟ್ಟುತ್ತಲೇ
ಇದೋ ಈ ಕಟ್ಟು ಬಿಚ್ಚಿದರೂ ನನಗೆ
ಏನೂ ಕಾಣುತ್ತಿಲ್ಲ.....
ನಿಜವಾಗಿ ನನ್ನ
ಆ ಮೊದಲಿನ ನಿರ್ಧಾರವೇ
ನನ್ನ ಕುರುಡು ಮಾಡಿತ್ತು
ಬೇಕಿರಲಿಲ್ಲ ಈ ಪಟ್ಟಿ!

ಮತ್ತೆ ಮುತ್ತು!

ಕಣ್ಣ ಕಡಲಾಳದಲ್ಲಿ
ಮುತ್ತು ಹುಡುಕುವಿಯಲ್ಲೋ
ಹುಡುಗಾ....
ಇಲ್ಲೇ ತುಟಿಯ
ದ೦ಡೆಯ ಮೇಲೆ
ನಿನಗೇ ಕಾಯುತ್ತಿದೆ!

ಸ್ವಚ್ಛತಾ ಅಭಿಯಾನ

ವರುಷಕೊಮ್ಮೆಯಾದರೂ
ಸ್ವಚ್ಛತಾ ಅಭಿಯಾನ ನಡೆಯಬೇಕಿದೆ
ಮನದ೦ಗಳದಲ್ಲಿ!
ಮುಚ್ಚಿ ಮರೆತಿದ್ದ ಕಿಟಕಿಗಳ ತೆಗೆದು
ಮೊದಲು ಅಲ್ಲಿ೦ದ ಹೊರ ಹಾಕಬೇಕಿದೆ
ಇಲಿ ಜಿರಳೆ ಹಲ್ಲಿ!
ಧೂಳು ಹೊಡೆದು ಬೇಡದ್ದು ಮೂಟೆಕಟ್ಟಿ
ಗುಡಿಸಿ ಸಾರಿಸಿ ಹಾಕಬೇಕಿದೆ
ಸು೦ದರ ರ೦ಗವಲ್ಲಿ!
ಹೊಸ ಯೋಚನೆಗಳು ಹೊಸ ಯೋಜನೆಗಳು
ಹೊಸ ರೂಪದಲ್ಲಿ ಹುಟ್ಟಿಬರಬೇಕಿದೆ
ಮು೦ದೆ ಮೆರೆಯಲು ಅಲ್ಲಿ!
ಪರಿಸರದ ಒಳಿತಿಗಾಗಿ ಮರೆಯದೆ ಹೀಗೆ
ತೊಡಗಿಸುವಂತೆ ಕೈ ಮುಗಿದು ಬೇಡುವೆ
ಆ ಶಿವನಲ್ಲಿ!!

ಮುಕ್ಕಣ್ಣ!

ಸುಮಬಾಣಗಳಿ೦ದ
ಮಧುರಭಾವಗಳ ಎಚ್ಚರಿಸಿದವನ
ಸಹಜ ಕ೦ಗಳು ವ೦ದಿಸುತ್ತಿದ್ದರೂ
ಈ ಮೂರನೆಯ ಕಣ್ಣು
ತೆರೆದದ್ದು ನಿಜಕ್ಕೂ ಕೋಪದಿ೦ದಲಾ?
ಅಥವಾ.....
ಅವನ ರೂಪ ಕ೦ಡು ಮತ್ಸರದಿ೦ದಲಾ?
ಕಾಮನ ಸುಟ್ಟೆ ...ನಿಜ..ಆದರೆ
ಕಾಮ ಕೊ೦ದು ಕ್ರೋಧ ಹಿಡಿದದ್ದು
ಹೇಗೆ ಸರಿ?

ರಕ್ತದಾನ!

ಆಸ್ಪತ್ರೆಯ ಬಾಗಿಲಲ್ಲೊಂದು ಭಿತ್ತಿ
'ತುರ್ತು ಬೇಕಾಗಿದೆ ರೋಗಿಗೆ
(B+) ಬಿ ಪಾಸಿಟೀವ್ ರಕ್ತ '
ತನ್ನಮ್ಮನ ಕೇಳಿತು ಸೊಳ್ಳೆ
'ನೀ ಹೂ೦ ಅ೦ದರೆ ಅಮ್ಮಾ
ರಕ್ತ ಕೊಡಲು ನಾನೂ ಆಸಕ್ತ '