Saturday 5 November 2016

ಹಕ್ಕಿಯಾಗಿ

ತಿಳಿಯಾಗಿದ್ದ
ಮನದ ಕೊಳದಲಿಣಿಕಿ
ನನ್ನನ್ನು ನಾನು
ನೋಡಿಕೊಳ್ಳುವವನಿದ್ದೆ...
ಎಲ್ಲಿಂದಲೋ
ಒಂದು ಕಲ್ಲು ಅಷ್ಟರಲಿ
ನೀರನಾಡಿಸಿ ಬಗ್ಗಡ
ಮಾಡಿತ್ತು!
ಅಲ್ಲಿ ಕಂಡ ನನ್ನ
ನೂರು ಮುಖಗಳು...ಅಲ್ಲ
ಮುಖವಾಡಗಳು
ತಮ್ಮೊಳಗೇ ಕಚ್ಚಾಡುತ್ತಾ
ಅಣಕಿಸುತ್ತಾ ನನ್ನ
ಹೆದರಿಸುತ್ತಾ...
ಸುತ್ತಾ...ಮುತ್ತಾ....
ಕಣ್ಣು ಮಂಜಾಯಿತು!
ಮತ್ತೆ ಕಣ್ಣು
ಬಿಟ್ಟೆ...ಶಾಂತ ಕೊಳ
ಇಣುಕಿದೆ
ಎಲ್ಲ ಮುಖವಾಡಗಳು
ನನ್ನ ಹಿಂದೆ ಎಡಬಲ ಎಲ್ಲೆಡೆ
ರಾವಣನಾಗಿಬಿಟ್ಟೆನಾ?
ಬೇಡ....ಮತ್ತೆ
ನೀರ ನಾನೇ ಕೆದಕಿದೆ
ಮುಖಗಳೆಲ್ಲಾ....ಚೆಲ್ಲಾಪಿಲ್ಲಿ
ಹಿಗ್ಗುತ್ತಾ ಕುಗ್ಗುತ್ತಾ...ಆಡುತ್ತಾ!
ಈಗ ಧೈರ್ಯ ಬಂದಿತ್ತು
ನೋಡುತ್ತಲೇ ಇದ್ದೆ....ನನ್ನನ್ನೇ
ಮುಖಗಳಾಚೆ
ಮುಖವಾಡಗಳಾಚೆ!
ಆ ಒಂದು ದಿವ್ಯ ದಿಟ್ತ ಬೆಳಕಿನಲ್ಲಿ
ಅದೊಂದು ವಿಶಾಲ ಆಗಸದ
ಪುಟ್ಟ ಚುಕ್ಕಿಯಾಗಿ
ಗುಂಪು ಬಿಟ್ಟು ಹಾರುತಿರುವ
ಹಕ್ಕಿಯಾಗಿ!!

Monday 24 October 2016

ಜಾಹಿರಾತು



ಅರವತ್ತರ ದಶಕದಲ್ಲಿ ಪತ್ರಿಕೆಗಳಲ್ಲಿನ ಸಿನಿಮಾ ಜಾಹಿರಾತುಗಳು ಅಪರೂಪಕ್ಕೆ ಚಿತ್ರಮಂದಿರದಲ್ಲಿ ಕಂಡ ಕೆಲ ಜಾಹಿರಾತುಗಳು (ಉದಾ: ಲೈಫ್‍ಬಾಯ್) ಅಲ್ಲದೆ ಹೊಸ ಚಲನಚಿತ್ರ ಬಿಡುಗಡೆಯಾದಾಗ ಜಟಕಾಬಂಡಿಯಲ್ಲಿ ಬೀದಿಬೀದಿಗಳಲ್ಲಿ ಮೈಕಿನಲ್ಲಿ ಅರಚುತ್ತಿದ್ದ 'ಇಂದೇ ನೋಡಲು ಮರೆಯದಿರಿ...ನರೆತು ನಿರಾಶರಾಗದಿರಿ' ಇಂದಿಗೂ ಕಣ್ಣಿಗೆ ಕಟ್ಟುವಂತಿದೆ.ಈ ಗಾಡಿಯವರಂತೂ ದೊಡ್ದವರಿಗೆ ಮಾತ್ರ ಅಂಗೈಯಗಲದ ಆ ಚಿತ್ರದ ಜಾಹಿರಾತು ಚೀಟಿ ಕೊಟ್ಟು ನಮ್ಮಂತ ಮಕ್ಕಳಉ ಅವರ ಹಿಂದೆಯೇ ಓಡುವಂತೆ ಮಾಡಿ ಇದ್ದಕ್ಕಿದ್ದಂತೆ ಒಂದಷ್ಟು ಚೀಟಿಗಳನ್ನು ಮೇಲೆಸೆಯುತ್ತಿದ್ದರು. ಸಿಕ್ಕಿದವರಿಗೆ ಸೀರುಂಡೆ. ಬುಟ್ಟಿ ಹೊತ್ತು ಬರುತ್ತಿದ್ದ ಮೊಸರು ಹೂವು ತರಕಾರಿಯವರು.....ಸೈಕಲ್ ಮೇಲೆ ಬರುತ್ತಿದ್ದ ಹಳೇಪೇಪರ್ ಖಾಲಿಸೀಸೆಯವ ಹಾಗೆಯೇ ಬ್ರೆಡ್ ಬನ್ ಖಾರಾರೊಟ್ಟಿ ತರುತ್ತಿದ್ದವ  ಅವರವರ ಸಮಯಕ್ಕೆ ಬೀದಿಗಳಲ್ಲಿ ಹಾಜರಾಗುತ್ತಿದ್ದರು. ಈಗೆಲ್ಲಾ ತರಕಾರಿಯವರು ಗಾಡಿಗಳನ್ನೂ ಬಿಟ್ಟು ಟೆಂಪೋಗಳಲ್ಲಿ ಮೈಕ್ ಅಳವಡಿಸಿ ಆರಾಮವಾಗಿ ಕುಳಿತು ವ್ಯಾಪಾರ ಮಾಡುವುದನ್ನೂ ಹಾಗೇ ಹಳೇ ಪೇಪರ್ನವರು ಕೂಡ ಇದೇ ತಂತ್ರ ಉಪಯೋಗಿಸಿ ಹೆಚ್ಚು ಆಯಾಸ ಮಾಡಿಕೊಳ್ಳದೇ  ಇರುವುದೂ ಒಂದು ರೀತಿಯ ಅಭಿವೃದ್ಧಿಯ ಲಕ್ಷಣವಾ ಎಂದು ಯೋಚಿಸುತ್ತಿದ್ದೇನೆ.

Thursday 13 October 2016

ಅಂತಿಮ ಆಕ್ರಮಣ


 
ಸೀಟಿ ಶಬ್ದ ಮಾಡಿತು
ಮಧ್ಯದ ಗೆರೆ ಕಣ್ಣಿಗೊತ್ತಿಕೊಂಡು
ಮುಂದೆ ನುಗ್ಗಿದೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಕೊನೆಯ ಆಕ್ರಮಣ
ನನ್ನ ಈ ಆಕ್ರಮಣದ ಮೇಲೇ
ಈ ಪಂದ್ಯ ನಿಂತಿದೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಎದುರಲ್ಲಿರುವವರ ಕಣ್ಣಲ್ಲಿ ಸವಾಲು
ಹಿಂದಿನಿಂದ ಒಕ್ಕೊರಲಿನ
ಪ್ರಚೋದನೆ 'ಕಮಾನ್'
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಈಗ ಕಣ್ಣು ಅವರುಗಳ ಕಾಲಿನ
ಕೈಗಳ ಮೇಲೆ ಕೇಂದ್ರೀಕೃತ
ಒಮ್ಮೆ ಒಬ್ಬರನ್ನಾದರೂ ಮುಟ್ಟೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇದೇನು ಎದುರಿಗೆ ಇಷ್ಟೊಂದು
ಕಾಲುಗಳು..ತಲೆ ಎತ್ತಿದೆ ಅಲ್ಲಿ
ಎಷ್ಟೊಂದು ಜನ ಎಲ್ಲ ಔಟಾಗಿದ್ದವರು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಗಾಂಧಿ,ನೆಹರು,ಭಗತ್,ಆಝಾದ್
ಅಣ್ಣಾವ್ರು,ಶಂಕರ್,ವಿಷ್ಣು ಕೂಡ
ಕಾರಂತ ಕುವೆಂಪು ಬೇಂದ್ರೆ ಅಜ್ಜಂದಿರು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಲಕ್ಷಾಂತರ ಜನ ಎಲ್ಲ ಅಲ್ಲೆ
ದೂರು ಸಲ್ಲಿಸುವೆನೆಂದು ಅತ್ತ
ರೆಫರಿಯೆಡೆಗೆ ನೋಡಿದರೆ-ನಿರ್ಲಿಪ್ತ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇರಲಿ ನಾನು ವಿರೋಧ ಸೂಚಿಸುವೆ ನಂತರ
ನನ್ನ ಪಂದ್ಯಶ್ರೇಷ್ಟ ಪ್ರಶಸ್ತಿಗಳ ಹಿಂದಿರುಗಿಸಿ
ಮೊದಲು ಒಂದಾದರೂ ಅಂಕ ಬೇಕು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ವೌವ್! ಅಲ್ಲಿ ನೋಡು ಅಪ್ಪ ಅಮ್ಮ ಅಣ್ಣ
ಅಜ್ಜಿ ಅಜ್ಜಂದಿರು ಎಲ್ಲ ನನ್ನವರು
ಅಲ್ಲಿಂದಲೇ ಹುರಿದುಂಬಿಸುತ್ತಿದ್ದಾರೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇದೇನು ಅಷ್ಟರಲ್ಲಿ ಈ ಗಟ್ಟಿ ಹಿಡಿತ
ಓ...ಕೇಡಿ ಏಡಿ ಹಿಡಿದಿರುವುದು
ಹಿಂದೆ ತಿರುಗಿದೆ ಗೆರೆ ಮುಟ್ಟಲು
"ಕಬಡ್ಡಿ...ಕಬ..ಡ್ಡಿ...ಕ..ಬ..ಡ್ಡಿ'
'ಕಮಾನ್','ನಿಧೀ','ಟಿಕ‍ಎಸ್'
'ಸರ್','ಗುರೂ','ರೀ','ಅಪ್ಪಾ'
ಎಷ್ಟೊಂದು ಜನರ ಬೆಂಬಲ ಮತ್ತೆ
"ಕ ಬ ಡ್ಡಿ ಕ ಬ ಡ್ಡಿ ಕ ಬ ಡ್ಡಿ'
ಸಿಕ್ಕಲಿಲ್ಲ ಇನ್ನೂ..ಇನ್ನೂ ಹಿಡಿದವು
ಏಡಿಗಳು ಎಲ್ಲೆಡೆ..ಕೊಸರಿದೆ ಆಗಲಿಲ್ಲ
ಬಿದ್ದೆ..ತಲೆ ಕೆಳಗೆ ಅಮ್ಮನ ಮಡಿಲು
"ಕ ..ಬ.. ಡ್ಡಿ...ಕ ...ಬ '
ಗೆರೆ ಸಿಕ್ಕಂತಾಯಿತು ಒಮ್ಮೆ
ರೆಫರಿಯತ್ತ ನೋಡಿದೆ ಆಸೆಯಿಂದ
ಅವನ ಕತ್ತಲ್ಲಿ ಸ್ಟೆತಾಸ್ಕೋಪ್ ಹೇಗೆ?
ತಲೆಯಾಡಿಸಿದ.......ಎಲ್ಲ ಸ್ತಬ್ಧ
ನಾನು...ಅವನು.....ಎಲ್ಲರೂ!

Wednesday 5 October 2016

dhi-010916

dhi-060916

dhi-070916

dhi-100916

dhi-110916

dhii-150916

dhi-160916

dhi-200916

dhi-031016

dhi-051016

Monday 28 March 2016

HEART

It shattered
silently
yes...as silently as
she declined
my kneeling
proposal!
she added before
leaving me heartbroken
'now that you have
million hearts you
better thank me'!
I did...
but for a different reason!
I know for sure
those million pieces merge
into one
maybe in a few days or
a few years
again filled with pure love !
lesson learnt
not to hand over that
beating part of mine to
people who see it
only as any other body part
come on...it is HEART
MY HEART!!

Monday 29 February 2016

ಆನಿವರ್ಸರಿ!

(  O HENRY ಅವರ ಕಥೆಯೊಂದರ ಭಾವ )

ಅವಳ ಗುಂಗುರುಕೂದಲಿಗೆ
ಅವ ತಂದ
ಒಂದು ಸುಂದರ clip
ತನ್ನ ಗಡಿಯಾರ ಮಾರಿ!
ಅವನ ಅದೇ ಗಡಿಯಾರಕ್ಕೆ
ತಂದಿದ್ದಳವಳು
ಹೊನ್ನ ಬಣ್ಣದ strap
ತನ್ನ ತಲೆಗೂದಲ ಮಾರಿ!
ಏಕೆ worry?
ಅಪ್ಪಿ ಚುಂಬಿಸಿದರು
ಒಬ್ಬರಿನ್ನೊಬ್ಬರಿಗೆ ಹೇಳುತಾ
happy anniversary!

ವಾಸ್ತವ2


ಕುದುರೆಯೊಂದ ಹಿಡಿದು
ಅಪ್ಪ ಮಗ ಬಿಸಿಲಿನಲ್ಲಿ
ನಡೆದು ಹೋಗುತಿದ್ದರು.
ಸುಮ್ಮನಿರದೆ ಕಂಡವರು
ಕುದುರೆಯಿದ್ದೂ ನಡೆದವರ
ಕುಹಕ ಮಾಡುತಿದ್ದರು.
ಬೇಸರಿಸಿದ ಅಪ್ಪ ಮಗ
ಥಟ್ಟನೆ ಆ ಕುದುರೆಯೇರಿ
ಮುಂದೆ ಮುಂದೆ ನಡೆದರು.
ಸುಮ್ಮನಿರದೆ ಕಂಡವರು
'ಪಾಪ ಕುದುರೆಗಿಬ್ಬರ ಹೊರೆ'
ಎಂದು ಮತ್ತೆ ಆಡಿಕೊಂಡರು.
ಅಪ್ಪ ಇಳಿದ ಕೆಳಗೆ
ಮಗ ಕುದುರೆ ಮೇಲೆ
ಈಗ ಸರಿಯೆಂದು ನಡೆದರು.
ಸುಮ್ಮನಿರದೆ ಕಂಡವರು
ಅಪ್ಪನ ನಡೆಸಿ ಕುದುರೆ ಏರಿದ
ಮಗನ ಆಡಿಕೊಂಡರು.
ಅಪ್ಪ ಹತ್ತು ಮೇಲೆ ನಾನು
ಕೆಳಗಿಳಿಯುವೆನೆಂದ ಮಗ
ಸಮಾಧಾನದಿಂದ ನಡೆದನು.
ಸುಮ್ಮನಿರದೆ ಕಂಡವರು
ಚಿಕ್ಕವನಿನ್ನೂ ಪಾಪ ಮಗನ
ನಡೆಸುತಿರುವೆಯಲ್ಲಾ ಎಂದರು.
ಮುಖ ಮುಖ ನೋಡಿ ಅವರು
ಕುದುರೆಯನ್ನೇ ಎತ್ತಿ ಹೊತ್ತು
ಮುಂದೆ ತಮ್ಮ ಹೆಜ್ಜೆ ಇಟ್ಟರು.
ಸುಮ್ಮನಿರದ ಜನ ಈಗ
ಕುದುರೆ ಹೊತ್ತ ಹುಚ್ಚರಿವರು
ಎಂದವರತ್ತ ಕಲ್ಲು ಎಸೆದರು.
ತಿಳಿದರೀಗ ಅಪ್ಪ ಮಗ
ಅನ್ನುವುದು ಈ ಜನರ ರೋಗ
ಬೇಡ ಇವರ ಗೊಡವೆ ಎಂದು
ಕಿವಿ ಮುಚ್ಚಿ ನಡೆದರು
ತಮ್ಮಿಷ್ಟದಂತೆ ನಡೆದರು.

ನಾಗಿಣಿ

ಮುನಿದಾಗಷ್ಟೇ
ಗೆಳೆಯಾ ನಾ
ನಾಗಿಣಿ..
ಉಳಿದಂತೆಲ್ಲಾ
ನಿಜವಾಗಿ
ನಾ ಗಿಣಿ!

Tuesday 16 February 2016

ನಾನಲ್ಲ..ಜೇಡ ಹೇಳಿದ್ದು!


ತಲೆಯೂ ನನ್ನದೇ
ಬಲೆಯೂ ನನ್ನದೇ
ಸಾಲದೆಂಬಂತೆ
ಕಲೆಯೂ ನನ್ನದೇ
ನನ್ನ ಕಲೆಯ ಬಲೆಯ
ಸೆರೆ ಹಿಡಿದ ತಲೆ....
ಒಪ್ಪಿದೆ ನಿನ್ನದೇ!

Monday 15 February 2016

ಅವನು

ಬಳಿ ಬಂದಾಗ
ಬದುಕಿಗೆ
ಬಣ್ಣ ತುಂಬಿದ...
ದೂರ ಸರಿದು
ಕಂಬನಿಯಿಂದ
ಕಣ್ಣ ತುಂಬಿದ!

Wednesday 10 February 2016

ಅವಳಿಲ್ಲದೇ....





ಇಲ್ಲೇ ಎಲ್ಲೋ
ಕೇಳಿದಂತಾಯ್ತು ಅವಳ
ಆ ಮೆಲುದನಿ...
ನೆಪವಾಯಿತು
ನೆನಪುಗಳಿಗೆ ತರಲು
ಕಣ್ಣಂಚಲಿ ಹನಿ!

Friday 5 February 2016

ಪಾರ್ಲರ್‍

ಪಾರ್ಲರ್‍ನಿಂದ
ಹೊರಬಂದ ಸುಂದರಿಯ ಕಂಡು
ಸಣ್ಣಗೆ ಸಿಳ್ಳು
ಹೊಡೆದ
'ಇದು ನಾನೇ...
ತೆಪ್ಪಗೆ ನಡೀರಿ' ಎಂದವಳ
ಹಿಂದೆ ಕುರಿಯಂತೆ
ನಡೆದ!

ನೋವು

ಅಳಿಸಿ
ನೋವ-
ನೀವ
ಜನ
ಬಹಳ...
ನೋವ-
ನಳಿಸಿ
ಬೆನ್ನ
ನೀವ-
ಬಲ್ಲ
ಜನ
ವಿರಳ!!

Monday 1 February 2016

ಪಾರ್ಲರ್‍

ಪಾರ್ಲರ್‍ನಿಂದ
ಹೊರಬಂದ ಸುಂದರಿಯ ಕಂಡು
ಸಣ್ಣಗೆ ಸಿಳ್ಳು
ಹೊಡೆದ
'ಇದು ನಾನೇ...
ತೆಪ್ಪಗೆ ನಡೀರಿ' ಎಂದವಳ
ಹಿಂದೆ ಕುರಿಯಂತೆ
ನಡೆದ!

Friday 29 January 2016

ಅದೆಷ್ಟು ಬೇಗನೆ?

ವಾಹನಗಳ ಸಂದಣಿಯಿಂದ
ಸದ್ದು ಮಾಡುತ್ತಲೇ ಬೇರಾಗಿ
ಕೀಂವ್...ಕೀಂವ್....ಕೀಂವ್
ಕೆಂಪು ಅಗ್ನಿಶಾಮಕ ವಾಹನ
ಬೆಂಕಿ ನಾಲಗೆ ಸಣ್ಣವಾಗುತ್ತಿದ್ದರೂ
ಇನ್ನೂ ಹೊಗೆಯಾಡುತ್ತಿರುವ ಆ ಅಲ್ಲಿಗೆ
ಬಂದು ತಲುಪಿತು...ಅದೆಷ್ಟು ಬೇಗನೆ?
ಮುಖ ಮುಚ್ಚಿಕೊಂಡ ಅಷ್ಟು ಜನ
ದಡದಡನೆ ಇಳಿದವರು ವಾಹನದ ಅತ್ತಿತ್ತ
ನಿಶ್ಚಿತ ರೂಪುರೇಖೆಯಲ್ಲಿ ತೊಡಗುತ್ತಾ
ಸುರಕ್ಷೆಯ ಅಂತರದಲ್ಲಿ ಪೈಪುಗಳೊಡನೆ
ಸಜ್ಜಾದರು.....ಅದೆಷ್ಟು ಬೇಗನೆ?
ಒಂದು ಸನ್ನೆಗೇ ಕಾದರು ಆದೇಶಕೆ
ಒಗ್ಗಟ್ಟಿನಿಂದ....ಎಷ್ಟೋ ಬಾರಿ ಮಾಡಿದಂತೆ
ಅದೋ...ಎಲ್ಲರೂ ಏಕಕಾಲಕ್ಕೆ ಬೆಂಕಿಯತ್ತ
ಗುರಿಯಿಟ್ಟು ನೀರು ಚಿಮ್ಮಲು ತೊಡಗಿದರು
ಬೆಂಕಿ ಆರಲಿಲ್ಲ....ಭುಗಿಲೆದ್ದಿತು ಸಧ್ಯ ದೂರ ಇದ್ದಾರೆ
ನೀರು ನೀರಾಗಿರಲಿಲ್ಲ......ಮತ್ತೆ?ಪೆಟ್ರೋಲ್??
ಓ ದೇವರೇ...ಮುಖವಾಡದ ಹಿಂದಿನ ಮುಖಗಳಲ್ಲಿ
ಅಚ್ಚರಿ ಭಯ ಗಾಭರಿ....ಒಂದೆರಡರಲ್ಲಿ
ಸಮಾಧಾನ ಕೂಡ!
ಬೆಂಕಿ ನಾಲಿಗೆ ಮುಗಿಲೆತ್ತರ ಚಾಚಿದೆ
ನಮ್ಮ ನಿಮ್ಮೆಲ್ಲರೆಡೆ ಅಟ್ಟಹಾಸದ ನೋಟ ಬೀರುತ್ತಾ!
ಇದೂ ಹೊಸತೇನಲ್ಲ......ಕಂಡಿದ್ದೇವೆ ತಾನೇ
ಮತ್ತೆ ನಮ್ಮದೇ ಕೆಲಸಗಳಿಗೆ ನಾವು...
ಅದೆಷ್ಟು ಬೇಗನೆ?
  

ಗಾಯ

ಇಷ್ಟು ದಿನ ಕಾಡುತಿತ್ತು
ಎದೆಯಲ್ಲೊಂದು
ಮಾಯದ
ಗಾಯ...
ನಿನ್ನ ಕೈ ಸೋಕಲು
ಗೆಳತಿ...ಈಗ
ಗಾಯವೇ
ಮಾಯ!

ನೆಮ್ಮದಿ

ನಿನ್ನದೇ 
ಹಿಡಿತದಲ್ಲಿರಲು ನಿನ್ನ
ನಾಲಿಗೆ...
ನೆಮ್ಮದಿ 
ಸುಖ ಸಂತಸ ನಿನ್ನ
ಪಾಲಿಗೆ!