Saturday 29 June 2019

ಜೋರ್_ಕ_ಝಟ್ಕ

#ಸಣ್ಣಕಥೆ

ತಂಗಾಳಿ. ಏಕಾಂತ. ಹುಣ್ಣಿಮೆಯ ಬೆಳದಿಂಗಳು. ಬಾಲ್ಕನಿಯಲ್ಲಿ ಕುಳಿತ ಅವರಿಗೆ ಇಹದ ಪರಿವೆಯೇ ಇರಲಿಲ್ಲ. ಒಂದು ಕೈಯಿಂದ ಅವಳನ್ನು ಅಪ್ಪಿ ಮತ್ತೊಂದು ಕೈ ಅವಳ ಕೈ ಬೆರಳುಗಳೊಡನೆ ಬೆಸೆದಿದ್ದ. ಅವಳು ಹಾಗೆಯೇ ಅವನೆದೆಗೆ ಒರಗಿ ತೆಳುನಗೆಯೊಂದಿಗೆ ಕಣ್ಣು ಮುಚ್ಚಿ ಮೈ ಮರೆತಿದ್ದಳು. ಇದ್ದಕ್ಕಿದ್ದಂತೆ ಅವ ಮೆಲ್ಲನುಲಿದ "ಕಚ್ಚಿಬಿಡುವಾಸೆ". ಸ್ವಗತವೋ ಎನ್ನುವಷ್ಟು ಮೆಲ್ಲಗೆ. ಅವನು "ಬೇಡ" ಎಂಬುದನ್ನು ನಿರೀಕ್ಷಿಸಿರಲಿಲ್ಲ. ಅವಳೂ ಹೇಳಲಿಲ್ಲ. ಮೌನ ಸಮ್ಮತಿಯಲ್ಲವೇ. ಅವಳು ಇನ್ನೂ ಹತ್ತಿರವಾಗಿ ಮುಖ ತುಸು ಮೇಲೆತ್ತಿದಳು. ಕಣ್ಣು ಮಾತ್ರ ಮುಚ್ಚಿಯೇ ಇತ್ತು. ಕೆನ್ನೆ ರಂಗೇರಿತ್ತು. ತುಟಿ ಗಾಳಿಗೆ ಮಾತ್ರ ಪ್ರವೇಶ ಕೊಡುವಷ್ಟು ಬಿರಿದಿತ್ತು. ನಿಮಿಷಗಳೇ ಕಳೆದರೂ ಅವನ ಬಿಸಿಯುಸಿರು ಕೂಡ ಅವಳ ಅನುಭವಕ್ಕೆ ಬರದಿದ್ದಾಗ ಮೆಲ್ಲನೆ ಕಣ್ಣು ತೆರೆದಳು. ಅವನ ಬೆರಳುಗಳೊಂದಿಗೆ ಬೆಸೆದಿದ್ದ ಅವಳ ಕೈ ಬೆರಳೊಂದು ಅವನ ತುಟಿಯ ಬಳಿ. ಈಗ ಅವ ಕಣ್ಣು ಮುಚ್ಚಿದ್ದ. ಆ ಬೆರಳ ನೀಳ ಉಗುರನ್ನು ಮೆಲ್ಲನೆ ಅವಳಿಗೇ ತಿಳಿಯದಂತೆ ಕಚ್ಚುತ್ತಿದ್ದ. ಇನ್ನೆರಡು ಬೆರಳ ಉಗುರುಗಳು ಆಗಲೇ ಮಾಟವಾಗಿ ಮಾಯವಾಗಿದ್ದವು. ಅವಳ ಗೊಂದಲ ದೂರ ಮಾಡುತ್ತ ಅವನೆಂದ " ನಿನ್ನ ನೀಳ ಉಗುರುಗಳ ಕಚ್ಚುವಾಸೆ ತಡೆಯದಾದೆ. ಕ್ಷಮಿಸು". ಮೇಲೆ ಚಂದ್ರ ನಗುತ್ತಿದ್ದ.

Wednesday 19 June 2019

#ಮೀನರಾಶಿ



ನದಿ ಸಾಗರಗಳೊಳಗಿನ ಮೀನುಗಳು
ಕೂಪಮಂಡೂಕಗಳಲ್ಲ
ಏಕೆಂದರೆ ಅವುಗಳಿಗೆ ನೀರೊಳಗೇ
ಇದೆ ಹೊರಗಿಗಿಂತ ಬೃಹತ್ ಸಾಮ್ರಾಜ್ಯ|

ನೀರಲಿಳಿದರೆ ಕಚಗುಳಿಯಿಡುವವೂ ಇವೆ
ನಮ್ಮನ್ನೇ ಗುಳುಮ್ಮನೆ ನುಂಗುವವೂ ಇವೆ|

ಬಲೆಗೆ ಸಿಕ್ಕು ವಿಲವಿಲನೆ ಆಡಿ
ಕೊನೆಯುಸಿರು ಎಳೆದ ನತದೃಷ್ಟದವು
ಮಾತ್ರ ಮಲಗಿವೆ ಇಲ್ಲಿ
ಈ ಮೀನಲೋಚನೆಯರ ಎದುರಲ್ಲಿ|

'ಮೀನ' ರಾಶಿಯವರ ಮುಂದಿದೆ ಈ ಮೀನರಾಶಿ
ಅವರ ಹಸಿವಿಂಗಿಸುವ ಸಾಧನಗಳಾಗಿ
ಕಾಸಿತ್ತು ಕೊಳ್ಳುವವರ ಭೋಜನವಾಗಿ
ಮೂಗು ಮುಚ್ಚಿ ಹೋಗುವವರ ದು:ಸ್ವಪ್ನವಾಗಿ||

Friday 10 May 2019

ಗಡಿಯಾರ



ಗೋಡೆಯಲೊಂದು ಗೂಡಿತ್ತು
ಗೂಡಿನಲ್ಲೊಂದು ಗಡಿಯಾರ||

ಅದರೊಳಗೆ ದೊಡ್ಡ ಮುಳ್ಳಿತ್ತು
ಜೊತೆಗೆ ಇನ್ನೊಂದು ಕುಳ್ಳಿತ್ತು|
ಅಪ್ಪುತಿದ್ದವು ಪ್ರತಿ ಗಂಟೆಗೊಮ್ಮೆ
ಎರಡಕ್ಕೂ ಇತ್ತು ಇದುವೇ ಹೆಮ್ಮೆ||

ಇವುಗಳೆರಡಕೂ ಸೇರಿಯೇ ತಾಗಿ
ಓಡುತಿದೆ ಮತ್ತೊಂದು ನಿಲ್ಲದೆ ಸಾಗಿ|
ನಿಮಿಷಕ್ಕೆ ಅದರದು ಅರವತ್ತು
ನಿಯತ ಚಲನೆಯ ಕಸರತ್ತು||

ಇದರ ನಡಿಗೆ ತುಸು ಕೆಟ್ಟರೂ ಆಗ
ಮುಳ್ಳುಗಳಿಗೆ ಬದಲಾಗುವ ವೇಗ|
ಪರಿಣತ ವೈದ್ಯ ಬರಬೇಕು ಬೇಗ
ಗುಣಪಡಿಸಲು ಗಡಿಯಾರದ ರೋಗ||
                       
                              - ತಲಕಾಡು ಶ್ರೀನಿಧಿ

Monday 29 April 2019

ಆಶಯ



ಬೆರೆಯಬೇಕೆನಿಸುತ್ತದೆ ಕೆಲವೊಮ್ಮೆ
ಬೇರೆ ಇರಬೇಕೆನಿಸುತ್ತದೆ ಇನ್ನು ಕೆಲವೊಮ್ಮೆ
ಬಿರಿದ ಹೂವಾಗುತ್ತದೆ ಮನ ಕೆಲವೊಮ್ಮೆ
ಬರಿದೆ ಮೊಗ್ಗಾಗಿಯೇ ಇರುತ್ತದೆ ಮತ್ತೆ ಕೆಲವೊಮ್ಮೆ
ಬುರುಬುರನೆ ಉಕ್ಕುವ ಉತ್ಸಾಹ ಕೆಲವೊಮ್ಮೆ
ಬರದೆ ಮೊಂಡು ಹಿಡಿದು ನಿಂತ ದನದಂತೆ ಕೆಲವೊಮ್ಮೆ
ಬೇರೆ ಬೇರೆಯದೇ ಆಯಾಮಗಳು ಬದುಕಿನುದ್ದಕೂ
ಬೇರಿಗೆ ಬೆಸೆದುಕೊಂಡ ನೂರು ಕೊಂಡಿಗಳು
ಬರಸೆಳೆದೋ ಬರೆ ಎಳೆದೋ ನಾ
ಬರಿದಾಗುವವರೆಗೆ ಬರೆಸುತ್ತಲೇ ಇರಬೇಕು!

Saturday 20 April 2019

ಏಕಾಕಿತನ

ಇಷ್ಟಮಿತ್ರರು
ಸನಿಹವಿದ್ದರೂ ಕೆಲವೊಮ್ಮೆ
ಏತಕಾಗಿ ಈ ಮನ
ಹಂಬಲಿಸುತ್ತದೆ
ಸಂಭ್ರಮಿಸಲು ಕ್ಷಣಕಾಲ
ಏಕಾಕಿತನ?

Sunday 14 April 2019

ಕೊ ಳ ಲು

ನಾ ಮೇಲು 
ಅಲ್ಲ ನಾ ಮೇಲು
ನನ್ನದೇ ಹೆಚ್ಚುಗಾರಿಕೆ
ನಿನ್ನದೇನು ಮಹಾ


ಹರಿಯ ಶಿರವೇರಿರುವೆ
ಹೆಮ್ಮೆಯಿಂದ ಬೀಗಿತು
ಅಂದದ ನವಿಲುಗರಿ

ಮಾಧವನ ಎದೆಯಲಿರುವೆ
ಗರ್ವದಿಂದ ತೂಗಿತು
ಹಸಿರು ತುಳಸೀಮಾಲೆ

ಮುಗಿಯದ ಪೈಪೋಟಿ
ಯಾರ ಗೆಲುವು 
ಯಾರಿಗೆ ಸೋಲು?

ಹೆಮ್ಮೆ ಗರ್ವಗಳು
ಕೊಚ್ಚಿ ಹೋದವು ಆಲಿಸಿ
ಮುರಳೀಲೋಲನ ಅಳಲು

ಸಾಕಾಗಿತ್ತು ಕೃಷ್ಣನಿಗೆ
ಜಂಭದ ಒಣ ಮಾತುಗಳು
ಬೇಕಿತ್ತು ಏಕಾಂತ ಜೊತೆಗೆ
ಮುದ ನೀಡುವ 
ಆ ತ ನ್ನ ಕೊ ಳ ಲು!

Friday 5 April 2019

IPL2019RCB

#IPL

ಪ್ರತಿ ಮ್ಯಾಚಿಗೆ ಮೊದಲು ವಿರಾಟ್ ಎದುರಾಳಿ ತಂಡದ ನಾಯಕನಿಗೆ ಫೋನಾಯಿಸಿದಾಗ:

ವಿ: ಮಹಿ ನಾನು ವಿರಾಟ್. ನಾಳೆ ಪಂದ್ಯ ನಾವು ಗೆಲ್ಲಬೇಕಲ್ಲ.
ಧೋ: ತಾಕತ್ತಿದ್ದರೆ ಗೆಲ್ಲು ನೋಡೋಣ.
ವಿ: ರೋಹಿತ್. ನಾನು ವಿರಾಟ್. ನಾಳೆ ನೀವು ಸೋಲಬೇಕು.
ರೋ: ಭಾರತದ ನಾಯಕತ್ವಕ್ಕೇ ನಾನು ಉತ್ಸುಕನಾಗಿದ್ದೇನೆ. ಇಲ್ಲಿ ಸೋಲೋದಾ? ನೋ ವೇ.
ವಿ: ಭುವಿ. ನಾನು ವಿರಾಟ್. ವಿಶ್ವ ಕಪ್ ಆಡ್ಬೇಕು ಅಂತಿದೀಯ ತಾನೇ?
ಭು: ನಮ್ ಭಾರತದ ಆಟಗಾರರನ್ನು ಒಪ್ಪಿಸಬಹುದು. ಆದರೆ ಆ ವಿದೇಶಿ ಆರಂಭ ಆಟಗಾರರು ಏನ್ ಮಾಡ್ತಾರೋ ನೋಡ್ಬೇಕು.
ವಿ: ಜಿಂಕ್ಸ್. ನಾನು ವಿರಾಟ್. ಮತ್ತೆ ಭಾರತ ತಂಡಕ್ಕೆ ಬರುವ ಆಸೆ ಇದೆ ತಾನೇ? ನಾಳೆ ಸೋಲ್ಬೇಕು ನಿನ್ ತಂಡ.
ರ: ಅಯ್ಯೋ ಸುಮ್ನಿರಪ್ಪ. ಈ ತಂಡಕ್ಕೇ ನಾಯಕ ಅನ್ನೋದಿಕ್ಕೆ ಇದೀನಿ. ನಮ್ಮದೂ ಗೆಲುವು ಆಗಿಲ್ಲ. ತೊಡೆ ತಟ್ಟೋದೇಯಾ.
ವಿ: ದಿನೇಶ್ ನಾನು ವಿರಾಟ್. ಎಮ್ಮೆಸ್ ಇದ್ರೂ ನಿನಗೆ ಅವಕಾಶ ಸಿಕ್ಕಿದ್ದಕ್ಕೆ ಯರು ಕಾರಣ ಗೊತ್ತಾ? ನಾಳೆ ಮ್ಯಾಚ್?
ದಿ: ಎಲ್ಲರನ್ನೂ ಸುಮ್ಮನಾಗಿಸಬಹುದು ಚೀಕೂ ಭಾಯ್ ..... ಆದರೆ ಆ ರಸೆಲ್ ಏನಾದ್ರೂ ಮಾಡಿದ್ರೆ ನಂಗೊತ್ತಿಲ್ಲ.
ವಿ: ಶ್ರೇಯಸ್ ನಾನು ವಿರಾಟ್.
ಶ್ರೇ: ಹೇಳಿ ಕ್ಯಾಪ್ಟನ್.
ವಿ: ನಾಳೆ ನಮ್ಮ RCB ಗೆಲ್ಬೇಕು. ಅರ್ಥ ಆಯ್ತಾ?
ಶ್ರೇ: ನಮಗೆ ಅಭ್ಯಾಸ ಇದೆ ಬಿಡಿ. ಸಹಜವಾಗಿ ಆಡಿ ಸೋಲ್ತೀವಿ. ನಮ್ಮ ಒಂದಿಬ್ಬರು ಯುವ ಆಟಗಾರರಾದರೂ ಆಯ್ಕೆ ಅಗ್ತಾರೆ ತಾನೇ?
ವಿ: ರವಿ ನನು ವಿರಾಟ್.
ರ: ಆಹಾ ಈಗ ನೆನಪಾಯ್ತಾ? ನಾ ಟೆಸ್ಟ್ ಮ್ಯಾಚ್ ಮಾತ್ರ ಆಡೋಹಾಗೆ ಮಾಡಿರೋ ನಿನ್ನನ್ನು ಸುಮ್ನೆ ಬಿಡೋಲ್ಲ. ಅಲ್ಲದೆ ಈ ರನ್ ಔಟ್ ಬೇರೆ ನನ್ ಪ್ರಾಣ ತಿಂತಿದೆ. wait and see.
ವಿರಾಟ್ (ಸ್ವಗತ) ನನ್ ಮಕ್ಕಳು ನಮ್ ಟೀಮ್ ಬಿಟ್ಟು ಹೋದವ್ರೆಲ್ಲ ಚೆನ್ನಾಗೇ ಆಡ್ತಿದ್ದಾರಲ್ಲ. ಇದೇನ್ ಅನಿಲ್(ಕುಂಬ್ಳೆ) ಶಾಪಾನಾ ಗುರೂ?
                                           _____ ತಲಕಾಡು ಶ್ರೀನಿಧಿ.

Friday 29 March 2019

#bald&beautiful!



 ರವಿಯ ಹೊಂಗಿರಣ
 ಶಿರದ ಮೇಲಿನ ದ್ವೀಪದಿಂ
 ಪ್ರತಿಫಲಿಸಿ ಕನ್ನಡಿಯೊಳು
 ಹಾದು ಎದುರು ಗೋಡೆಯ
 ಮೇಲೆ ಕಾಮನಬಿಲ್ಲು ಮೂಡಿತು
 ಕಂಡ ಅವಳ ಮೊಗದಲ್ಲಿ
 ಮೂಡಿದ್ದು ಹಾಲು ಬೆಳದಿಂಗಳು!

Tuesday 19 March 2019

ಗೆಳೆಯಾ4

ಬದಲಾಗಿದ್ದೇನೆ
ಗೆಳೆಯಾ
ನಾನು ನಾನೇ ಆಗಿ
ಬೇಸತ್ತಿದ್ದೇನೆ
ಈಗ ನಿನಗೆ
ನಿನ್ನನೇ ತೋರುವ
ಕನ್ನಡಿಯಾಗಿದ್ದೇನೆ
ನೋಡುವ ಧೈರ್ಯ
ನಿನಗಿದೆಯಾ?

Friday 15 March 2019

#ಹಾಸನ



ಈಗ ಹಾಸನ ಹೆಚ್ಚು ಹೆಚ್ಚು ಮತಾಗಿರುವುದರಿಂದ ನನಗೆ ನನ್ನಜ್ಜ ಹೇಳುತ್ತಿದ್ದ ಕಥೆಯೊಂದು ನೆನಪಾಗುತ್ತಿದೆ. ನಗ್ತೀರೋ ಬೈಕೋತೀರೋ ನಿಮಗೆ ಬಿಟ್ಟದ್ದು. ಈಗ ಓದಿ:

ಬಡ ಬ್ರಾಹ್ಮಣನೊಬ್ಬ ಅರಸರಿಂದ ಏನಾದರೂ ದಾನ ಪಡೆಯುವ ಉದ್ದಿಶ್ಯದಿಂದ ರಾಜಸಭೆಗೆ ಬಂದು ಸಭಿಕವರ್ಗದಲ್ಲಿ ಕಾತರದಿಂದ ಕುಳಿತಿರುತ್ತಾನೆ. ಅರಸರು ಬಂದು ಕೆಲ ಮುಖ್ಯ ಅಹವಾಲುಗಳನ್ನು ಆಲಿಸಿ ಪರಿಹಾರಗಳನ್ನು ಘೋಷಿಸಿದ್ದಾರೆ. ಮಧ್ಯೆ ಒಂದು ಸನ್ನ ಮೌನದ ಸಮಯಕ್ಕೆ ಸರಿಯಾಗಿ ರಾಜರೇ ಜೋರಾಗಿ ಹೋಸಿಬಿಡುವುದೇ. ಎಲ್ಲರೂ ಮುಸಿಮುಸಿ ಮರೆಯಲ್ಲಿ ನಗುತ್ತಾ ಇರುವಾಗ ರಾಜರು ಒಮ್ಮೆ ಗುಡುಗಿದರು ' ಯಾರದು ಸಭೆಯಲ್ಲಿ ಹೂಸಿದ್ದು?'. ರಾಜರೆಂದು ಎಲ್ಲರಿಗೂ ಗೊತ್ತು. ಆದರೆ ಹೇಗೆ ತಾನೇ ಹೇಳಿಯಾರು. ಸದವಕಾಶ ಕಂಡ ನಮ್ಮ ಬ್ರಾಹ್ಮಣ 'ಮಹಾಸ್ವಾಮಿ ತಪ್ಪು ನನ್ನಿಂದ ನಡೆಯಿತು. ಕ್ಷಮಿಸಿ' ಎಂದ. ಮಹಾರಾಜರು ತಕ್ಶಃಅಣವೇ ಮಂತ್ರಿಗೆ ಹೇಳಿ ಆ ಬ್ರಾಹ್ಮಣನಿಗೆ ಹೊನ್ನಿನ ಚೀಲವನ್ನೂ ಬೇಕಾದಷ್ಟು ಸಾಮಾನುಸರಂಜಾಮುಗಳನ್ನೂ ಕೊಟ್ಟು ಜೊತೆಗೆ ನಗರದಾಚೆಯ ಒಂದಿಷ್ಟು ಭೂಮಿಯನ್ನೂ ಕೊಟ್ಟು ಕಳಿಸಿಕೊಟ್ಟರು.ಸಮಯದಲ್ಲಿ ರಾಜನ ಮರ್ಯಾದೆ ಕಾಯ್ದ ಆ ಬ್ರಾಹ್ಮಣನ ಅದೃಷ್ಟ ಕಂಡು ಎಲ್ಲರೂ ಅಚ್ಚರಿಯಿಂದ  ಅಭಿನಂದಿಸಿದರು. ಅವನ ನೆರೆಮನೆಯ ಬ್ರಾಹ್ಮಣನ ಹೆಂಡತಿಗೆ ಮಾತ್ರ ಎಲ್ಲಿಲ್ಲದ ಅಸೂಯೆ. ಅವಳು ತನ್ನ ಗಂಡನಿಗೆ ದುಂಬಾಲು ಬಿದ್ದಳು ಅವನೂ ಹೂಸಿ ದಾನ ಪಡೆದು ಬರಬೇಕೆಂದು ಆಗ್ರಹಿಸಿದಳು.

ಮಾರನೇ ದಿನ ಅವನು ಹೊರಡುವುದಕ್ಕೆ ಮೊದಲು ಎಲ್ಲ ರೀತಿಯ ಆಹಾರ ತಯಾರಿಯಲ್ಲಿ ಅವನನ್ನು ಸಜ್ಜುಗೊಳಿಸಿ ಕಳಿಸಿದಳು. ಆ ಬ್ರಾಹ್ಮಣ ಆರಮನೆಗೆ ಹೂಸುತ್ತಲೇ ಹೋಗುವಷ್ಟೂ ಕಡಲೆ ಇತ್ಯಾದಿಗಳು ಅವನ ಹೊಟ್ಟೆ ಸೇರಿದ್ದವು. ಸಭೆ ಅರಂಭವಾಗುತ್ತಿದ್ದಂತೆಯೇ ರಾಜ ಗುಡುಗಿದ ' ಯಾರದು ಈ ದುರ್ವಾಸನೆಗೆ ಕಾರಣಕರ್ತ?'.  ಒಡನೆಯೇ ಬ್ರಾಹ್ಮಣ ಮುಂದೆ ಬಂದು ಹಲ್ಲು ಕಿರಿಯುತ್ತ 'ನಾನು ಮಹಾಸ್ವಾಮಿ' ಎಂದ. ಈಗ ಮಂತ್ರಿಗೆ ರಾಜ ಸನ್ನೆ ಮಾಡಿದ. ಅ ಬ್ರಾಹ್ಮಣನ ಅಂಡಿಗೆ 'ಆಸನ' ಎಂದು  ಬರೆ ಹಾಕಿ ಕಳಿಸುವಂತೆ ಗುಟ್ಟಾಗಿ ಹೇಳಿದ. ಬರೆಯಿಂದ ಕಂಗಾಲಾಗಿ ಬ್ರಾಹ್ಮಣ ಕುಯ್ಯೋ ಮರ್ರೋ ಎಂದು ಮನೆ ಸೇರುತ್ತಿದ್ದಂತೆ ಅವನ ಹೆಂಡತಿ ' ಏನ್ರೀ ಏನೇನು ಕೊಟ್ಟರು?' ಎಂದು ಕಿರುಚಿದಳು ಖುಷಿಯಿಂದ. ಬ್ರಾಹ್ಮಣ 'ಅಂಡಲ್ಲಿ ಆಸನ ಬರೆದಿದೆ ಕಣೇ ರಂಡೇ' ಎಂದ ನೋವಿನಿಂದ. ಅವಳು ಇನ್ನೂ ಉತ್ಸಾಹದಿಂದ 'ಹಾಸನದ ಪಕ್ಕ ಬೇಲೂರಿತ್ತಲ್ಲ ಅದನ್ನ ಬರೀಲಿಲ್ವೇನ್ರೀ?' ಎನ್ನಬೇಕಾ!

Sunday 24 February 2019

ರಾಧಾ_ಮಾಧವ



ಒಂಟಿಯಾಗಿ ರಾಧೆ
ತನ್ನಷ್ಟಕೇ ಕುಣಿದಾಡುತಿದ್ದಳು
ಕೃಷ್ಣನ ಸೇರಲು ಸಮಯ
ಪ್ರಶಸ್ತವೆಂದು ಗೋಪಿಯರು
ಅವನ ಹುಡುಕತೊಡಗಿದರು|

ಇಲ್ಲಿಲ್ಲ ಅಲ್ಲಿಲ್ಲ ಅವನೆಲ್ಲಿ?
ಊರೆಲ್ಲ ಹುಡುಕಾಡಿ ಸೋತು
ಯಮುನೆಯ ತೀರದಿ
ಬಂದು ಕುಸಿದು ಕುಳಿತರು ಎಲ್ಲ|

ಮತ್ತೆ ಊರೊಳಗಿಂದಲೇ
ಕೊಳಲು ನುಡಿಸುತ ಬಂದ
ನಂದಗೋಪಿಯ ಕಂದ
ಅಚ್ಚರಿಯ ಜೊತೆಗವರಿಗಾನಂದ|

ಇಂಚಿಂಚು ಊರಲೆದಿದ್ದು ನಿಜ
ಇಷ್ಟು ಕಣ್‍ತಪ್ಪಿಸಿ ಎಲ್ಲಿದ್ದೆ ರಾಜ?

ರಾಧೆಯ ಖುಷಿಯ ಕಂಡವರು ನೀವು
ನಾ ಜೊತೆಗಿರದೆ ಅದು ಸಾಧ್ಯವೇ
ಹುಚ್ಚಮ್ಮಗಳಿರಾ ನಾನಿದ್ದುದಲ್ಲೇ
ಅವಳು ನನ್ನಲಿ ನಾ ಅವಳಲ್ಲೇ||