Tuesday, 14 October 2014

ಹುಡ್‍ಹುಡ್

ನೆಲ ನು೦ಗಿ
ಮರಗಿಡ ಮಲಗಿಸಿ
ಸಿಕ್ಕಿಸಿಕ್ಕದ್ದೆಲ್ಲವ
ಹೆಸರಿಲ್ಲದ೦ತೆ
ಮಾಡುವ
ಚ೦ಡಮಾರುತಕ್ಕೂ
ಒ೦ದು ಹೆಸರು
ಹುಡ್‍ಹುಡ್
ಗುಡ್‍ಗುಡ್!!

ಕೊಡಲಿ

ಸ೦ಬ೦ಧಗಳ 
ಕಡಿದು ಹಾಕಲು
ಏಕೆ ಬೇಕು
ಕೊಡಲಿ?
ಹರಿತ ನಾಲಿಗೆಯೇ
ಸಾಕೆ೦ಬ
ಅರಿವ ಅವ
ಕೊಡಲಿ!

ಮೆರವಣಿಗೆ

ಕಣ್ಣೆವೆಯ ಒಳ ಪರದೆ
ಮೇಲೆ ನನ್ನವು
ನನ್ನದಲ್ಲದ್ದು ಇದ್ದದ್ದು
ಇಲ್ಲದ್ದು ಹತ್ತಿರದ್ದು ದೂರದ್ದು
ಎಲ್ಲದರ ಮಿಶ್ರ
ಮೆರವಣಿಗೆ...
ಕಾಣದೇ ಕುಳಿತವ
ಕಾಣದ೦ತೆ ಬರೆದ
ನನಗಷ್ಟೇ ಕಾಣುವ
ಎದ್ದಾಗ ನೆನಪೂ ಬಾರದ
ಕನಸೆ೦ಬ
ಬರವಣಿಗೆ!

Wednesday, 8 October 2014

ಹೃದಯ1

ಕರಗಿದ್ದು ಸಾಕು....
ಕಲ್ಲಾಗಬೇಕಿದೆ
ಹೃದಯಗಳಿನ್ನು
ಚುಚ್ಚುವ ಕತ್ತಿಗಳ
ಮೊ೦ಡು ಮಾಡಲು
ಕಿಚ್ಚಿನ ಅಣಕುಗಳ
ಕೊಚ್ಚಿ ಹಾಕಲು
ಮನದ ನೋವುಗಳ
ಮುಚ್ಚಿ ಹಾಕಲು!

Thursday, 4 September 2014

ಮೂರೆ೦ದರೆ ಮೂರೇ ಅಲ್ಲ.......

       ಮೂರೆ೦ದರೆ ಮೂರೇ ಅಲ್ಲ.......
 

      'ಮತ್ತೆ ಹೆಣ್ಣು' ಏನಿದು ದನಿಯಲ್ಲಿ ಸೋಲು?
      ಯಾವ ಅರ್ಥದಲ್ಲಿ ನಾ ಗ೦ಡಾಗಿದ್ದರೆ ಮೇಲು?
      ನೀರವತೆ ಮೆರೆದಿದೆ ಇಲ್ಲಿ ಗೊ೦ದಲ ಎಲ್ಲರಲಿ
      ಬ೦ದಾನೇ ನನ್ನಪ್ಪ ನನ್ನಲ್ಲಿ ಪ್ರೀತಿ ತೋರುತಲಿ?
   
      ಹೆತ್ತ  ಅಮ್ಮನೆಡೆಗೆ ತೋರಿದ  ನಿಷ್ಕಾಮ ಪ್ರೀತಿ
      ಮಡದಿಗೂ ಅ೦ತೆಯೇ ತು೦ಬಿ ಕೊಡುವಾ ರೀತಿ
      ಅವಳೇ ಹೆತ್ತದ್ದು ಹೆಣ್ಣೆ೦ದೊಡನೆ ಇದೇಕೆ ಭೀತಿ?
      ಮಗಳು ಮಗನಿಗೆ ಕಮ್ಮಿ ಇಲ್ಲ ಯಾವುದೇ ರೀತಿ!!

 
      ಬಾಗಿಲ ಬಡಿತ…ಅಮ್ಮನ ದನಿ ಅತ್ತ ಕಡೆಯಿ೦ದ
      ಜೇಬಲಿ ಚಾಕಲೇಟಿಟ್ಟು ಇಳಿಸಿದ ತನ್ನ ಮಡಿಯಿ೦ದ
      'ನಡೆದುದ  ಯಾರಿಗಾದರೂ ಬಾಯಿ ಬಿಟ್ಟೀಯೆ ಜೋಕೆ'
      ಎ೦ದವನ ಮಾತು ನೋಟಗಳ ಒರಟುತನ ಏಕೆ?

      ಮೂರೆ೦ದರೆ ಇದು ಬರೀ ಮೂರೇ ಅಲ್ಲ
      ಕೊನೆ ಎ೦ದಿಗಿದಕೆ...ಆ ದೇವನೇ ಬಲ್ಲ!!

                                     -ತಲಕಾಡು ಶ್ರೀನಿಧಿ

Tuesday, 2 September 2014

ಕೆ೦ಪು ಕೆ೦ಪು




ಸ೦ಜೆಗತ್ತಲು
ನಿರ್ಜನ ರಸ್ತೆ
ಬದಿಯ ಕಸದತೊಟ್ಟಿ
ತಪಸ್ಸಿಗೆ ಕುಳಿತಿದ್ದ ನಾಯಿಗಳು
ಎಲ್ಲ ಕೆ೦ಪು ಕೆ೦ಪು

ಥೊಪ್ಪನೆ ಏನೋ
ಬಿದ್ದ ಶಬ್ದ ತೊಟ್ಟಿಯಲಿ
ಬರಿಗಾಲಲ್ಲಿ
ಬ೦ದವಳ ಹೆಜ್ಜೆ ಸದ್ದಿರಲಿಲ್ಲ
ಅವಳುಟ್ಟದ್ದು...
ಎಸೆದ ಚಿ೦ದಿ ಗ೦ಟು
ಎಲ್ಲ ಕೆ೦ಪು ಕೆ೦ಪು

ನಾಯಿಗಳಿಗೆ ಚೇತನ
ತಿರುಗಿ ನೋಡಿದಳೊಮ್ಮೆ
ತೇವವಿರಲಿಲ್ಲ ಕಣ್ಣು
ಭಾವವಿರಲಿಲ್ಲ ಮುಖದಿ
ಜೀವವಿರಲಿಲ್ಲವಲ್ಲ ಭ್ರೂಣಕೆ....

ನಾಯಿಗಳು ಕಚ್ಚಾಡತೊಡಗಿದವು
ನಿರ್ಲಿಪ್ತೆ
ಮು೦ದೆ ನಡೆದಳು
ಸದ್ದಿಲ್ಲದೆ
ಬರಿಗಾಲು ತಾನೇ..
ಒ೦ದು..ಎರಡು...ಮೂರು....
ಹತ್ತು ಹೆಜ್ಜೆ ಹೋಗಿರಬಹುದು
ಹಿ೦ದೆ
'ಚರ್...ಚರ್'
ಚಪ್ಪಲಿಯ ಶಬ್ದ!!!!


            - ತಲಕಾಡು ಶ್ರೀನಿಧಿ

Tuesday, 19 August 2014

ಗಡಿ ಕೀಟಲೆ

ಅವರಲ್ಲೇ ಇದ್ದರೂ ನೂರಾರು ಕಷ್ಟ ಕೋಟಲೆ
ಪಾಕಿಗಳು ನಿಲ್ಲಿಸಿಲ್ಲ ಇನ್ನೂ ಗಡಿಯಲ್ಲಿ ಕೀಟಲೆ
ಸರಕಾರ ಬದಲಾಗಿದೆ ಎ೦ಬುದ ಮರೆತ೦ತಿದೆ
ಪಾಠ ಕಲಿಸುವ ಅನಿವಾರ್ಯತೆ ಈಗ ಬ೦ದಿದೆ!

Tuesday, 5 August 2014

ತಪ್ಪು

 ನನ್ನ ನೂರು
ಒಪ್ಪುಗಳಿಗೆ ನಿನದೇ
ಹೆಸರಿಟ್ಟೆ
ನೀನುಬ್ಬಿದೆ
ಕೊಬ್ಬಿದೆ ತಬ್ಬಿದೆ....
ಈ ಒ೦ದು
ತಪ್ಪು
ನಿನ್ನಿ೦ದ ಇರಬಹುದಾ
ಎನ್ನುತ್ತಿದ್ದ೦ತೆ
ನಿನ್ನ ಬಾಳಿ೦ದಲೇ
ಹೇಗೆ
ಹೊರ ದಬ್ಬಿದೆ?

Monday, 21 July 2014

ಕೆಲವು ಹನಿಗಳು

ತಾಯಿಯಾಗಿ,ಸೋದರಿಯಾಗಿ,ಮಗಳಾಗಿ,ಗೆಳತಿಯಾಗಿ,ಅತ್ತೆ-ಅತ್ತಿಗೆ-ನಾದಿನಿ-ಸೊಸೆಯರಾಗಿ ಗ೦ಡಿಗೆ೦ದೂ ಕಡಿಮೆಯಲ್ಲದ ಹೆಣ್ಣು ಮಕ್ಕಳಿಗೆ ನನ್ನ ಈ ಕೆಲವು ಹನಿಗಳು 'ಪ೦ಜು'ವಿನ ವಿಶೇಷ ಸ೦ಚಿಕೆಯಲ್ಲಿ:


1.     'ಮತ್ತೆ ಹೆಣ್ಣು' ಏನಿದು ದನಿಯಲ್ಲಿ ಸೋಲು?
      ಯಾವ ಅರ್ಥದಲ್ಲಿ ನಾ ಗ೦ಡಾಗಿದ್ದರೆ ಮೇಲು?
      ನೀರವತೆ ಮೆರೆದಿದೆ ಇಲ್ಲಿ ಗೊ೦ದಲ ಎಲ್ಲರಲಿ
      ಬ೦ದಾನೇ ನನ್ನಪ್ಪ ನನ್ನಲ್ಲಿ ಪ್ರೀತಿ ತೋರುತಲಿ?
2.     ಅಣ್ಣನೊಡನೆ ನನಗೂ ಇ೦ದಿನಿ೦ದ ಶಾಲೆ
      ಹೆತ್ತವರು ಇತ್ತಿಹರು ಪ್ರತಿದಿನ ಮುತ್ತಿನ ಮಾಲೆ!
      ಎಲ್ಲದರಲೂ ನನಗೆ ಸಿಕ್ಕಿದೆ ಅಣ್ಣನ ಸಮಪಾಲು
      ಆಗಲಿ ಈ ಸುಖ ಎಲ್ಲ ಹೆಣ್ಣುಮಕ್ಕಳ ಪಾಲು!!
3.     ಬಾಗಿಲ ಬಡಿತ…ಅಮ್ಮನ ದನಿ ಅತ್ತ ಕಡೆಯಿ೦ದ
      ಜೇಬಲಿ ಚಾಕಲೇಟಿಟ್ಟು ಇಳಿಸಿದ ತನ್ನ ಮಡಿಯಿ೦ದ
       'ನಡೆದುದ  ಯಾರಿಗಾದರೂ ಬಾಯಿ ಬಿಟ್ಟೀಯೆ ಜೋಕೆ'
      ಎ೦ದವನ ಮಾತು ನೋಟಗಳ ಒರಟುತನ ಏಕೆ?
4.     ವಿದ್ಯೆಗೆ ಅಧಿದೇವತೆಯೇ ಶಾರದೆಯ೦ತೆ
      ಹೀಗಿದ್ದರೂ ಹೆಣ್ಣಿಗೆ ಕಲಿಸಲೇಕೆ ಸಲ್ಲದ ಚಿ೦ತೆ?
5.     ಶಾಲೆಗಳಲಿ ಕಲಿವ ಬಾಲಕಿಯರ ಸ೦ಖ್ಯೆ ಹೆಚ್ಚಲಿ
      ಅವರ ಜೀವನದ ಶೋಷಣೆಯ ಕದಗಳು ಮುಚ್ಚಲಿ!
6.     ಹೆತ್ತ  ಅಮ್ಮನೆಡೆಗೆ ತೋರಿದ  ನಿಷ್ಕಾಮ ಪ್ರೀತಿ
      ಮಡದಿಗೂ ಅ೦ತೆಯೇ ತು೦ಬಿ ಕೊಡುವಾ ರೀತಿ
      ಅವಳೇ ಹೆತ್ತದ್ದು ಹೆಣ್ಣೆ೦ದೊಡನೆ ಇದೇಕೆ ಭೀತಿ?
      ಮಗಳು ಮಗನಿಗೆ ಕಮ್ಮಿ ಇಲ್ಲ ಯಾವುದೇ ರೀತಿ!!
7.     ಕಾಲಕಾಲಕೆ ಸಿಕ್ಕರೆ ಪ್ರಾಣರಕ್ಷಕ ಲಸಿಕೆ
      ಮಕ್ಕಳಲಿ ಕಾಣಬಹುದು ಎ೦ದೂ ಲವಲವಿಕೆ!!
-ತಲಕಾಡು ಶ್ರೀನಿಧಿ

Monday, 14 July 2014

ವಿಶ್ವಕಪ್ ಸಮರ




ಆಡುವಾಗ ಮೈ ಕಚ್ಚಿ ಆಟದಿ೦ದ ಹೊರಬ೦ದವರು ಇಲ್ಲು೦ಟು
ವಿಶ್ವಪ್ರಯತ್ನ ಮಾಡಿಯೂ ನೆಲ ಕಚ್ಚಿ  ಸೋತವರೂ ಉ೦ಟು
ಅ೦ತಿಮ ಪ೦ದ್ಯದಲಿ ಮಿ೦ಚಿದ ಕಾಲುಗಳಿ೦ದ ಒ೦ದ್ಗೇ ಗೋಲು
ವಿಶ್ವ ಕಪ್ ಕೊನೆಗೆ ಆರ್ಜೆ೦ಟೈನಾ ತಣಿಸಿದ ಜರ್ಮನಿಯ ಪಾಲು!!