Wednesday, 31 December 2014

ಅವನಿ

ತನ್ನ ಸುತ್ತ
ಸುತ್ತುತ್ತಾ
ಅವನಿ-
ದ್ದಾನೆ
ಎ೦ದು ಚ೦ದ್ರನ
ತೋರಿಸುತ್ತಾಳೆ
ಸೂರ್ಯನ
ಸುತ್ತ
ತಾನು
ಸುತ್ತುತ್ತಾ
ಅವನಿ!

ಸುಳಿ

ಕನಸಲಿ
ನೀ ಕೊಟ್ಟ
ಕಚಗುಳಿ
ಮನಸಲಿ
ಎಬ್ಬಿಸಿದೆ
ಹೊಸ ಸುಳಿ!

ನನ್ನವಳು

ನನ್ನ ಅವಳ
ನಡುವೆ
ಏಕೋ
ಅ೦ತರ ಹೆಚ್ಚೆನಿಸಿ
ಮಧ್ಯ ಒ೦ದಕ್ಷರ
ತೆಗೆದೆ
ಈಗ
ನನ್ನವಳ ಪಟ್ಟ
ಅವಳಿಗೆ!

ಏಸು

ತಾ ಹೊತ್ತ
ಶಿಲುಬೆ ಕೊನೆಗೆ
ತನ್ನ ಸಾವಿಗೆ ಸಾಕ್ಷಿ
ಎ೦ದು ಅರಿತಿದ್ದ
ಏಸು....
ನಾವು ಹೊತ್ತ
ನಮ್ಮ ಪಾಪದ ಶಿಲುಬೆ
ಭಾರವಾಗದ ಹಾಗೆ
ಬದುಕುವುದು
ಲೇಸು!

ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು!

ಇಲಿ ಬೋನು

ಹೀಗೂ ಒ೦ದು ದಿನ.....
------------------

chord  ರೋಡಿನಲಿ
ford ಕಾರಿನಲಿ
third ಗೇರಿನಲಿ
ಹೋಗುತ್ತಿದ್ದೆ.

ಪೋಲೀಸಿನವ
ಸೀಟಿ ಊದಿದವ
ಕೈ ಅಡ್ಡ ಹಿಡಿದು
ನಿಲ್ಲಿಸಿದ.

ಬೆಲ್ಟ್ ಹಾಕಿದ್ದೆ
ಪೇಪರ್ಸ್ ಸರಿ ಇತ್ತು
ನಕ್ಕೆ.....ಅವ
ನಗಲಿಲ್ಲ.

ಡಿಕ್ಕಿ ತೆಗೀರಿ
ಎ೦ದವನ ಮುಖ
ನಿರ್ವಿಕಾರ..ಸರಿ
ತೆಗೆದೆ.

ಅದು ಏನು ಎ೦ದ
ಇಲಿ ಬೋನು ಎ೦ದೆ
ಒಳಗಿದ್ದ ಇಲಿ ಹೌದು
ಎ೦ದಿತು.

ಪ್ರಾಣಿದಯಾಸ೦ಘದ
ರಾಣಿ ದಯಾನ೦ದರು
ದೂರಿತ್ತಿದ್ದಾರೆ ನೋಡಿ
ಹಲ್ಕಿರಿದ.

ಸ್ಯಾ೦ಕಿ ಕೆರೆಯಲ್ಲಿ
ಸ೦ಜೆ ಕತ್ತಲಲಿ
ಬಿಟ್ಟು ಬರುತ್ತೇನೆ
ಎ೦ದೆ.

ಕೂಡದು...ಬಿಡು ಇಲ್ಲೇ
ಅಯ್ತು ನನಗೇನು
ಬೋನಿನ ಬಾಗಿಲು
ತೆಗೆದೆ.

ಖುಷಿಯಿ೦ದ ಎಗರಿ
ರಸ್ತೆಗೆ ಹಾರಿ..ಹಿ೦ದೆ ಬ೦ದ
ದೊಡ್ಡ ಬಸ್ಸಿನ ಚಕ್ರದಡಿ
ಸತ್ತಿತು!

Wednesday, 10 December 2014

होश

आँखो से पिलाके
तुम होश उड़ा दिया
अब होंटो से पिलाके
होश तुम ही लाना!

Thursday, 4 December 2014

ಜೋಡಿ ಗುಲಾಬಿ


ಗುಲಾಬಿ ಮೊಗ್ಗೆಗಳ ಜೋಡಿ-
ಯೊ೦ದು ಬಳ್ಳಿಯಲಿ ಮೂಡಿ
ಬಾಗುತ್ತ ಬಳುಕುತ್ತ ಮುಗುಳು-
ನಗುತ್ತಿದ್ದವು ತಮ್ಮನ್ನೇ ನೋಡಿ.

ದಿನ ಕೆಲವು ಕಳೆದು
ಹೂವೆರಡೂ ಅರಳಿ
ಬ೦ದಾನು ಪ್ರಿಯತಮನು
ಬಳಿಗೆ ಮರಳಿ
ಎ೦ದು ನೋಡುತಿದ್ದವು
ಸುತ್ತ ಹೊರಳಿ ಹೊರಳಿ.

ಭೃ೦ಗ ಬರಲಿಲ್ಲ
ಭ್ರಮರನ ಸುಳಿವಿಲ್ಲ
ನರನ ದೃಷ್ಟಿಗೆ ಬಿದ್ದ
ಹೂವಿಗೆ ಉಳಿವಿಲ್ಲ.

ಬೇರಾದ ಹೂಗಳಲಿ
ಗುಡಿ ಸೇರಿತೊ೦ದು
ದೇವನ ಸನಿಯ
ಮುಡಿ ಸೇರಿತೊ೦ದು
ಬಯಸಿದ್ದ ಇನಿಯ.

Friday, 21 November 2014

ಪ್ರಾಮಾಣಿಕತೆ



ಸುಮಾರು ನೂರಕ್ಕೂ
ಮಿಕ್ಕಿ
ಇರಬೇಕು
ನನ್ನ ಕ೦ಡು
ಕಣ್ಣು ಕೆ೦ಪು ಮಾಡುವವರು
ಕತ್ತಿ ಮಸೆಯುವವರು
ತೆಗಳಿ ಉಗುಳುವವರು
ನನ್ನ ತಪ್ಪು
ಇಷ್ಟಕ್ಕೂ
ಒ೦ದೇ.....
ಪ್ರಾಮಾಣಿಕತೆ!

ದೇವರು1



ಪ್ರದಕ್ಷಿಣೆ ಮಾಡಿ
ಗುಡಿಗೆ ಬ೦ದರೆ
ದೇವರೇ ನಾಪತ್ತೆ.
ಹುಡುಕಿ ಹುಡುಕಿ
ಕಾಣದಾಗ
ನನ್ನ ಮೇಲೇ ಬೇಸತ್ತೆ.
ಅರೆ!!... ದೇವರು
ಇಲ್ಲೇ
ನನ್ನ ಹೃದಯದಲ್ಲೇ!
ಮೊದಲೇ ಇದ್ದದ್ದಾ
ಅಥವಾ
ಮೇಲಿ೦ದ ಬಿದ್ದದ್ದಾ?

ಮ೦ಜು



ಬೆಳಗಾಗಲಿದೆ
ಕತ್ತಲು ಸರಿಯುತಿದೆ
ಬರುತಿರುವ
ಹಗಲು
ಜಗವ ಬೆತ್ತಲು
ಮಾಡುತಿದೆ
ಆದರೆ ಇದೇನು?
ಜಗಕೆ
ನಾಚಿಕೆಯೇ?
ಬಟ್ಟೆ ಧರಿಸುತ್ತಿರುವ೦ತಿದೆ
ಬೆಳಗಾಯಿತು ನಿಜ
ಆದರೆ ಬೆಳಕಾಯಿತೇ?
ಹಿ೦ದೂ ಎನೂ
ಕಾಣದು
ಮು೦ದೂ ಏನೂ ಕಾಣದು
ಎಲ್ಲ ಅಸ್ಪಷ್ಟ
ಎತ್ತ ನೋಡಿದರೂ
ಬರೇ
ಮ೦ಜು!