Friday, 29 January 2016

ಗಾಯ

ಇಷ್ಟು ದಿನ ಕಾಡುತಿತ್ತು
ಎದೆಯಲ್ಲೊಂದು
ಮಾಯದ
ಗಾಯ...
ನಿನ್ನ ಕೈ ಸೋಕಲು
ಗೆಳತಿ...ಈಗ
ಗಾಯವೇ
ಮಾಯ!

ನೆಮ್ಮದಿ

ನಿನ್ನದೇ 
ಹಿಡಿತದಲ್ಲಿರಲು ನಿನ್ನ
ನಾಲಿಗೆ...
ನೆಮ್ಮದಿ 
ಸುಖ ಸಂತಸ ನಿನ್ನ
ಪಾಲಿಗೆ!

Sunday, 22 November 2015

ಮೊದಲ ಪಾಠಶಾಲೆ

ಮನೆಯೇ ಮೊದಲ ಪಾಠಶಾಲೆ
ತಾಯಿಯೇ ಅಲ್ವಾ ಮೊದಲ ಗುರು
ಬಯಸಿದುದ ಕೊಡುವ ಕಾಮಧೇನು
ನಾನೆಂದಿಗೂ ಅವಳ ಮುದ್ದು ಕರು
ಮನೆಯೇ ಮೊದಲ ಗಾನಮಂದಿರ
ಅಮ್ಮನ ಜೋಗುಳ ತೋರುತ ಚಂದಿರ
ಮನೆಯಲೇ ಇಟ್ಟದ್ದು ಮೊದಲ ಹೆಜ್ಜೆ
ಆಗಲೇ ಅಮ್ಮ ತಂದು ಕಟ್ಟಿದಳು ಗೆಜ್ಜೆ
ಮನೆಯೇ ಮೊದಲ ನಾಟ್ಯಶಾಲೆ
ಬೆಳೆಸಿದಳವಳು ಇದ ಕಲಿಸುತಲೆ
ಮನೆಯಲೇ ಇದ್ದುದು ಮೊದಲ ಗುಡಿ
ಸ್ತೋತ್ರವ ಹೇಳಿದ ತೊದಲ ನುಡಿ
ಮನೆಯೇ ಮೊದಲ ವ್ಯಾಯಾಮಶಾಲೆ
ಬಗ್ಗುತ ಬೀಳುತ ತಟ್ಟಿದ ಚಪ್ಪಾಳೆ
ಮನೆಯಲೇ ತೆಗೆದುದು ನನ್ನ ಮೊದಲ ಚಿತ್ರ
ಫೋನಿನಲ್ಲೇ ಕ್ಯಾಮರ..ಎಂಥ ವಿಚಿತ್ರ
ಮನೆಯ ಟೀವಿಯೇ ತೋರಿದೆ ನನಗೆ ವಿಶ್ವವೆಲ್ಲ
ನಾ ಕಂಡದೆಷ್ಟೋ ಪಾಪ ನೀವೇ ಕಂಡಿಲ್ಲ!

ಸೆಲ್ಫಿ

ಎಲ್ಲ ರಾಜಕೀಯ 
ಮುಖಂಡರೊಡನೆಯ ಸೆಲ್ಫಿಗಳು
ಮುರುಕು ಗೋಡೆಯಲಿ
ರಾರಾಜಿಸುತ್ತಿದ್ದವು
ಒಲೆ ಹಚ್ಚಲು ಇದ್ದ
ಸೀಮೆಣ್ಣೆ ಸುರಿದುಕೊಂಡು
ಸತ್ತ ಆ ರೈತನ
ಮೃತದೇಹದೊಂದಿಗೆ!

ಅಂತಿಮ ಆಕ್ರಮಣ


 
ಸೀಟಿ ಶಬ್ದ ಮಾಡಿತು
ಮಧ್ಯದ ಗೆರೆ ಕಣ್ಣಿಗೊತ್ತಿಕೊಂಡು
ಮುಂದೆ ನುಗ್ಗಿದೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಕೊನೆಯ ಆಕ್ರಮಣ
ನನ್ನ ಈ ಆಕ್ರಮಣದ ಮೇಲೇ
ಈ ಪಂದ್ಯ ನಿಂತಿದೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಎದುರಲ್ಲಿರುವವರ ಕಣ್ಣಲ್ಲಿ ಸವಾಲು
ಹಿಂದಿನಿಂದ ಒಕ್ಕೊರಲಿನ
ಪ್ರಚೋದನೆ 'ಕಮಾನ್'
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಈಗ ಕಣ್ಣು ಅವರುಗಳ ಕಾಲಿನ
ಕೈಗಳ ಮೇಲೆ ಕೇಂದ್ರೀಕೃತ
ಒಮ್ಮೆ ಒಬ್ಬರನ್ನಾದರೂ ಮುಟ್ಟೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇದೇನು ಎದುರಿಗೆ ಇಷ್ಟೊಂದು
ಕಾಲುಗಳು..ತಲೆ ಎತ್ತಿದೆ ಅಲ್ಲಿ
ಎಷ್ಟೊಂದು ಜನ ಎಲ್ಲ ಔಟಾಗಿದ್ದವರು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಗಾಂಧಿ,ನೆಹರು,ಭಗತ್,ಆಝಾದ್
ಅಣ್ಣಾವ್ರು,ಶಂಕರ್,ವಿಷ್ಣು ಕೂಡ
ಕಾರಂತ ಕುವೆಂಪು ಬೇಂದ್ರೆ ಅಜ್ಜಂದಿರು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಲಕ್ಷಾಂತರ ಜನ ಎಲ್ಲ ಅಲ್ಲೆ
ದೂರು ಸಲ್ಲಿಸುವೆನೆಂದು ಅತ್ತ
ರೆಫರಿಯೆಡೆಗೆ ನೋಡಿದರೆ-ನಿರ್ಲಿಪ್ತ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇರಲಿ ನಾನು ವಿರೋಧ ಸೂಚಿಸುವೆ ನಂತರ
ನನ್ನ ಪಂದ್ಯಶ್ರೇಷ್ಟ ಪ್ರಶಸ್ತಿಗಳ ಹಿಂದಿರುಗಿಸಿ
ಮೊದಲು ಒಂದಾದರೂ ಅಂಕ ಬೇಕು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ವೌವ್! ಅಲ್ಲಿ ನೋಡು ಅಪ್ಪ ಅಮ್ಮ ಅಣ್ಣ
ಅಜ್ಜಿ ಅಜ್ಜಂದಿರು ಎಲ್ಲ ನನ್ನವರು
ಅಲ್ಲಿಂದಲೇ ಹುರಿದುಂಬಿಸುತ್ತಿದ್ದಾರೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇದೇನು ಅಷ್ಟರಲ್ಲಿ ಈ ಗಟ್ಟಿ ಹಿಡಿತ
ಓ...ಕೇಡಿ ಏಡಿ ಹಿಡಿದಿರುವುದು
ಹಿಂದೆ ತಿರುಗಿದೆ ಗೆರೆ ಮುಟ್ಟಲು
"ಕಬಡ್ಡಿ...ಕಬ..ಡ್ಡಿ...ಕ..ಬ..ಡ್ಡಿ'
'ಕಮಾನ್','ನಿಧೀ','ಟಿಕ‍ಎಸ್'
'ಸರ್','ಗುರೂ','ರೀ','ಅಪ್ಪಾ'
ಎಷ್ಟೊಂದು ಜನರ ಬೆಂಬಲ ಮತ್ತೆ
"ಕ ಬ ಡ್ಡಿ ಕ ಬ ಡ್ಡಿ ಕ ಬ ಡ್ಡಿ'
ಸಿಕ್ಕಲಿಲ್ಲ ಇನ್ನೂ..ಇನ್ನೂ ಹಿಡಿದವು
ಏಡಿಗಳು ಎಲ್ಲೆಡೆ..ಕೊಸರಿದೆ ಆಗಲಿಲ್ಲ
ಬಿದ್ದೆ..ತಲೆ ಕೆಳಗೆ ಅಮ್ಮನ ಮಡಿಲು
"ಕ ..ಬ.. ಡ್ಡಿ...ಕ ...ಬ '
ಗೆರೆ ಸಿಕ್ಕಂತಾಯಿತು ಒಮ್ಮೆ
ರೆಫರಿಯತ್ತ ನೋಡಿದೆ ಆಸೆಯಿಂದ
ಅವನ ಕತ್ತಲ್ಲಿ ಸ್ಟೆತಾಸ್ಕೋಪ್ ಹೇಗೆ?
ತಲೆಯಾಡಿಸಿದ.......ಎಲ್ಲ ಸ್ತಬ್ಧ
ನಾನು...ಅವನು.....ಎಲ್ಲರೂ!

ಮನುಷ್ಯತ್ವ

ಇಲ್ಲಿ
ಬೀಳುವ ಹೆಣಗಳಿಗೆ
ಬ್ರಹ್ಮ ವಿಧಿ ಎಂಬೆಲ್ಲಾ 
ಲಿಖಿತಗಳಿಲ್ಲ
ಈಗ ತುಂಬಾ
ಮುಂದೆ ಹೋಗಿಯಾಗಿದೆ
ನರಜನ್ಮದ ಕಬಂಧ ಬಾಹುಗಳು
ಯಾರು
ಯಾರನ್ನಾದರೂ ಹೇಗೆಯಾದರೂ
ಎಲ್ಲಿಯಾದರೂ
ಕೊಚ್ಚಿ ಇಲ್ಲವಾಗಿಸಿಬಿಡುತ್ತೇವೆ
ಹೌದು
ಮೊದಲು ಆ ಮನುಷ್ಯತ್ವ
ಎಂಬುದನ್ನೇ
ಕೊಂದು ಹಾಕಿದ್ದೇವೆ
ಈಗೇನು
ಮನುಷ್ಯ ಮಾನವ ಎಂದೆಲ್ಲಾ
ಅನ್ನದಿದ್ದರೆ.....
who cares
ರಕ್ತ ಕೆಂಪಗೂ ಇದೆ
ತಂಪಾಗೂ ಇದೆ!

ಅಹವಾಲು!

ಪಟ್ಟಿಯಲ್ಲಿರುವ
ಸಾಲು ಸಾಲು
ಗೆಳೆಯರಲ್ಲಿ
ನನ್ನದೊಂದು ಪುಟ್ತ
ಅಹವಾಲು!
ದಿನಕ್ಕೊಮ್ಮೆ
ನೋಡಬಾರದೇಕೆ
ನನ್ನ ಈ wallಉ?
ಒಂದಾದರೂ ಸಿಗಬಹುದು
ಒಳ್ಳೆಯ ಸಾಲು
ಬೇಡವಾ? ಬಿಡಿ ನನಗೆ
ಅದು ಮಾಮೂಲು!

ಅಳಿಸುವುದು

ಅಳಿಸುವುದು ಸುಲಭ
ಗೆಳೆಯಾ
ಕೆನ್ನೆಮೇಲಿನ
ಕಂಬನಿಯ ಕಲೆ
ಅಳಿಸಲಾರೆ 
ಘಾಸಿಗೊಂಡ
ಹೃದಯದ ಕಲೆ!

ಲೇಖನಿ

ಅಂದು ಬರೆವವರ
ಲೇಖನಿಗಿತ್ತು ವಿಷ ಕಕ್ಕದೆ
ಸಮಾಜ ತಿದ್ದುವ 
ಶಕ್ತಿ 
ಇಂದು ಮಸಿ ಮುಖಕೆ
ಲೇಖನಿಯಲಿ ವಿಷ
ಹಿಂತಿರುಗಿಸುತ್ತಿದ್ದಾರೆ
ಪ್ರಶಸ್ತಿ!

ಗೋಡೆಗಳು

ಗೋಡೆಗಳು
ಎಷ್ಟು ವಿಧ ಎಷ್ಟು ಭಿನ್ನ!
ಒಂದಕ್ಕೊಂದು
ಅಂಟಿಕೊಂಡೂ ಒಂದಕ್ಕೊಂದು
ಸಂಭಂಧವಿಲ್ಲದ್ದು
ದಿನಕ್ಕೊಂದು ಪಟ
ಬದಲಿಸುತ್ತಾ ಅಥವಾ
ಅಕ್ಕರಗಳ ಮೆರವಣಿಗೆ ಮಾಡುತ್ತಾ
ಕೆಲವರ ಬೆನ್ನುತಟ್ಟುತ್ತಾ
ಮತ್ತೆ ಕೆಲವರ ಕಾಲೆಳೆಯುತ್ತಾ
ಖುಷಿಯ ಬಣ್ಣದೋಕುಳಿಯಂತೆಯೇ
ಕೆಸರೆರಚಾಟದ ಕೀಟಲೆಗಳು
ನಗಿಸುವ ಅಳಿಸುವ
ಅಳಿಸಲಾಗದೆ ಮನದಲ್ಲೇ ಉಳಿಸುವ
ನೂರು ಬರಹಗಳು
ಆಗೀಗ ತಡೆಗೋಡೆಗಳು
ಒಂದೊಮ್ಮೆ
ನಿರಾಳವಾಗಬೇಕೆಂದರೆ ಮತ್ತೆ
ಪ್ರೈಮರ್ ಹೊಡೆದು ಒಂದೆರಡು
ಪದರ ಬಿಳಿಯ ಬಣ್ಣ ಬಳಿದ
ಶುಭ್ರ ಸ್ವಚ್ಛ ಗೋಡೆ
ಬೇಕೆನಿಸುತ್ತಿದೆ!