Friday, 29 March 2019

#bald&beautiful!



 ರವಿಯ ಹೊಂಗಿರಣ
 ಶಿರದ ಮೇಲಿನ ದ್ವೀಪದಿಂ
 ಪ್ರತಿಫಲಿಸಿ ಕನ್ನಡಿಯೊಳು
 ಹಾದು ಎದುರು ಗೋಡೆಯ
 ಮೇಲೆ ಕಾಮನಬಿಲ್ಲು ಮೂಡಿತು
 ಕಂಡ ಅವಳ ಮೊಗದಲ್ಲಿ
 ಮೂಡಿದ್ದು ಹಾಲು ಬೆಳದಿಂಗಳು!

Tuesday, 19 March 2019

ಗೆಳೆಯಾ4

ಬದಲಾಗಿದ್ದೇನೆ
ಗೆಳೆಯಾ
ನಾನು ನಾನೇ ಆಗಿ
ಬೇಸತ್ತಿದ್ದೇನೆ
ಈಗ ನಿನಗೆ
ನಿನ್ನನೇ ತೋರುವ
ಕನ್ನಡಿಯಾಗಿದ್ದೇನೆ
ನೋಡುವ ಧೈರ್ಯ
ನಿನಗಿದೆಯಾ?

Friday, 15 March 2019

#ಹಾಸನ



ಈಗ ಹಾಸನ ಹೆಚ್ಚು ಹೆಚ್ಚು ಮತಾಗಿರುವುದರಿಂದ ನನಗೆ ನನ್ನಜ್ಜ ಹೇಳುತ್ತಿದ್ದ ಕಥೆಯೊಂದು ನೆನಪಾಗುತ್ತಿದೆ. ನಗ್ತೀರೋ ಬೈಕೋತೀರೋ ನಿಮಗೆ ಬಿಟ್ಟದ್ದು. ಈಗ ಓದಿ:

ಬಡ ಬ್ರಾಹ್ಮಣನೊಬ್ಬ ಅರಸರಿಂದ ಏನಾದರೂ ದಾನ ಪಡೆಯುವ ಉದ್ದಿಶ್ಯದಿಂದ ರಾಜಸಭೆಗೆ ಬಂದು ಸಭಿಕವರ್ಗದಲ್ಲಿ ಕಾತರದಿಂದ ಕುಳಿತಿರುತ್ತಾನೆ. ಅರಸರು ಬಂದು ಕೆಲ ಮುಖ್ಯ ಅಹವಾಲುಗಳನ್ನು ಆಲಿಸಿ ಪರಿಹಾರಗಳನ್ನು ಘೋಷಿಸಿದ್ದಾರೆ. ಮಧ್ಯೆ ಒಂದು ಸನ್ನ ಮೌನದ ಸಮಯಕ್ಕೆ ಸರಿಯಾಗಿ ರಾಜರೇ ಜೋರಾಗಿ ಹೋಸಿಬಿಡುವುದೇ. ಎಲ್ಲರೂ ಮುಸಿಮುಸಿ ಮರೆಯಲ್ಲಿ ನಗುತ್ತಾ ಇರುವಾಗ ರಾಜರು ಒಮ್ಮೆ ಗುಡುಗಿದರು ' ಯಾರದು ಸಭೆಯಲ್ಲಿ ಹೂಸಿದ್ದು?'. ರಾಜರೆಂದು ಎಲ್ಲರಿಗೂ ಗೊತ್ತು. ಆದರೆ ಹೇಗೆ ತಾನೇ ಹೇಳಿಯಾರು. ಸದವಕಾಶ ಕಂಡ ನಮ್ಮ ಬ್ರಾಹ್ಮಣ 'ಮಹಾಸ್ವಾಮಿ ತಪ್ಪು ನನ್ನಿಂದ ನಡೆಯಿತು. ಕ್ಷಮಿಸಿ' ಎಂದ. ಮಹಾರಾಜರು ತಕ್ಶಃಅಣವೇ ಮಂತ್ರಿಗೆ ಹೇಳಿ ಆ ಬ್ರಾಹ್ಮಣನಿಗೆ ಹೊನ್ನಿನ ಚೀಲವನ್ನೂ ಬೇಕಾದಷ್ಟು ಸಾಮಾನುಸರಂಜಾಮುಗಳನ್ನೂ ಕೊಟ್ಟು ಜೊತೆಗೆ ನಗರದಾಚೆಯ ಒಂದಿಷ್ಟು ಭೂಮಿಯನ್ನೂ ಕೊಟ್ಟು ಕಳಿಸಿಕೊಟ್ಟರು.ಸಮಯದಲ್ಲಿ ರಾಜನ ಮರ್ಯಾದೆ ಕಾಯ್ದ ಆ ಬ್ರಾಹ್ಮಣನ ಅದೃಷ್ಟ ಕಂಡು ಎಲ್ಲರೂ ಅಚ್ಚರಿಯಿಂದ  ಅಭಿನಂದಿಸಿದರು. ಅವನ ನೆರೆಮನೆಯ ಬ್ರಾಹ್ಮಣನ ಹೆಂಡತಿಗೆ ಮಾತ್ರ ಎಲ್ಲಿಲ್ಲದ ಅಸೂಯೆ. ಅವಳು ತನ್ನ ಗಂಡನಿಗೆ ದುಂಬಾಲು ಬಿದ್ದಳು ಅವನೂ ಹೂಸಿ ದಾನ ಪಡೆದು ಬರಬೇಕೆಂದು ಆಗ್ರಹಿಸಿದಳು.

ಮಾರನೇ ದಿನ ಅವನು ಹೊರಡುವುದಕ್ಕೆ ಮೊದಲು ಎಲ್ಲ ರೀತಿಯ ಆಹಾರ ತಯಾರಿಯಲ್ಲಿ ಅವನನ್ನು ಸಜ್ಜುಗೊಳಿಸಿ ಕಳಿಸಿದಳು. ಆ ಬ್ರಾಹ್ಮಣ ಆರಮನೆಗೆ ಹೂಸುತ್ತಲೇ ಹೋಗುವಷ್ಟೂ ಕಡಲೆ ಇತ್ಯಾದಿಗಳು ಅವನ ಹೊಟ್ಟೆ ಸೇರಿದ್ದವು. ಸಭೆ ಅರಂಭವಾಗುತ್ತಿದ್ದಂತೆಯೇ ರಾಜ ಗುಡುಗಿದ ' ಯಾರದು ಈ ದುರ್ವಾಸನೆಗೆ ಕಾರಣಕರ್ತ?'.  ಒಡನೆಯೇ ಬ್ರಾಹ್ಮಣ ಮುಂದೆ ಬಂದು ಹಲ್ಲು ಕಿರಿಯುತ್ತ 'ನಾನು ಮಹಾಸ್ವಾಮಿ' ಎಂದ. ಈಗ ಮಂತ್ರಿಗೆ ರಾಜ ಸನ್ನೆ ಮಾಡಿದ. ಅ ಬ್ರಾಹ್ಮಣನ ಅಂಡಿಗೆ 'ಆಸನ' ಎಂದು  ಬರೆ ಹಾಕಿ ಕಳಿಸುವಂತೆ ಗುಟ್ಟಾಗಿ ಹೇಳಿದ. ಬರೆಯಿಂದ ಕಂಗಾಲಾಗಿ ಬ್ರಾಹ್ಮಣ ಕುಯ್ಯೋ ಮರ್ರೋ ಎಂದು ಮನೆ ಸೇರುತ್ತಿದ್ದಂತೆ ಅವನ ಹೆಂಡತಿ ' ಏನ್ರೀ ಏನೇನು ಕೊಟ್ಟರು?' ಎಂದು ಕಿರುಚಿದಳು ಖುಷಿಯಿಂದ. ಬ್ರಾಹ್ಮಣ 'ಅಂಡಲ್ಲಿ ಆಸನ ಬರೆದಿದೆ ಕಣೇ ರಂಡೇ' ಎಂದ ನೋವಿನಿಂದ. ಅವಳು ಇನ್ನೂ ಉತ್ಸಾಹದಿಂದ 'ಹಾಸನದ ಪಕ್ಕ ಬೇಲೂರಿತ್ತಲ್ಲ ಅದನ್ನ ಬರೀಲಿಲ್ವೇನ್ರೀ?' ಎನ್ನಬೇಕಾ!

Sunday, 24 February 2019

ರಾಧಾ_ಮಾಧವ



ಒಂಟಿಯಾಗಿ ರಾಧೆ
ತನ್ನಷ್ಟಕೇ ಕುಣಿದಾಡುತಿದ್ದಳು
ಕೃಷ್ಣನ ಸೇರಲು ಸಮಯ
ಪ್ರಶಸ್ತವೆಂದು ಗೋಪಿಯರು
ಅವನ ಹುಡುಕತೊಡಗಿದರು|

ಇಲ್ಲಿಲ್ಲ ಅಲ್ಲಿಲ್ಲ ಅವನೆಲ್ಲಿ?
ಊರೆಲ್ಲ ಹುಡುಕಾಡಿ ಸೋತು
ಯಮುನೆಯ ತೀರದಿ
ಬಂದು ಕುಸಿದು ಕುಳಿತರು ಎಲ್ಲ|

ಮತ್ತೆ ಊರೊಳಗಿಂದಲೇ
ಕೊಳಲು ನುಡಿಸುತ ಬಂದ
ನಂದಗೋಪಿಯ ಕಂದ
ಅಚ್ಚರಿಯ ಜೊತೆಗವರಿಗಾನಂದ|

ಇಂಚಿಂಚು ಊರಲೆದಿದ್ದು ನಿಜ
ಇಷ್ಟು ಕಣ್‍ತಪ್ಪಿಸಿ ಎಲ್ಲಿದ್ದೆ ರಾಜ?

ರಾಧೆಯ ಖುಷಿಯ ಕಂಡವರು ನೀವು
ನಾ ಜೊತೆಗಿರದೆ ಅದು ಸಾಧ್ಯವೇ
ಹುಚ್ಚಮ್ಮಗಳಿರಾ ನಾನಿದ್ದುದಲ್ಲೇ
ಅವಳು ನನ್ನಲಿ ನಾ ಅವಳಲ್ಲೇ||

Tuesday, 25 December 2018

ಆಗಮನ

ನಸುಕಿನಲಿ
ಮೂಡಣದಿ
ನೇಸರನ
ಆಗಮನ!

ಮುದಗೊಳಿಸೆ
ಚೇತನವ
ಕುಣಿದೆದ್ದಿತು
ಆಗ ಮನ!!

Friday, 14 December 2018

ಕವನ ಗೀಚೋರೆಲ್ಲರ ಪರವಾಗಿ......

ಕವನ ಗೀಚೋರೆಲ್ಲರ ಪರವಾಗಿ......

ನನ್ನ ಬರಹದ
'ನಾನು'
ನಾನೇ ಎಂಬ ಸಂಶಯ ಬೇಡ
ಹಾಗೆಯೇ ಅಲ್ಲಿನ
'ನೀನು'
ನೀನೆಂದು ಅಲ್ಲವೇ ಅಲ್ಲ
ಇಲ್ಲಿಯ
'ಅವನು/ಅವಳು'
ನಾನಲ್ಲವೆಂದು
ಪ್ರಮಾಣಿಸಲಾರೆ
ಮತ್ತು
ನೀನಲ್ಲವೆಂದೂ ನಂಬಬೇಕಿಲ್ಲ
ಕೆಲವೊಮ್ಮೆ
ಹೀಗೆ
ಮತ್ತೆ ಕೆಲವೊಮ್ಮೆ
ಹಾಗೆ
ಯಾರು ಎಂಬ ಕುತೂಹಲ
ಬಿಟ್ಟು ಯಾರೋ ಎಂಬ
ಸಮಾಧಾನ ಒಳ್ಳೆಯದು
ನಿಮಗೂ.....
ನನಗೂ!
                     - ತಲಕಾಡು ಶ್ರೀನಿಧಿ


ಇಂದ: ತಲಕಾಡು ಶ್ರೀನಿಧಿ
      731, 4ನೇ ಅಡ್ಡರಸ್ತೆ, ಬಿ ಇ ಎಂ ಎಲ್ ಬಡಾವಣೆ 3ನೇ ಹಂತ,
      ರಾಜರಾಜೇಶ್ವರಿನಗರ, ಬೆಂಗಳೂರು-560098
      ಮೊ: 97390 96785

Wednesday, 14 November 2018

ಅವಳೇ

ಹಗಲೆಂದರೆ
ಅವಳೇ
ಕಂಗಳಲಿ ರವಿಯ ತೇಜ
ನಗೆಯಲಿ ಹರಡಿದ ಬೆಳಗು!

ಇರುಳೆಂದರೂ
ಅವಳೇ
ಕಂಗಳಲಿ ತಾರೆಗಳು
ನಗೆಯ ಬೆಳದಿಂಗಳು!!

Monday, 12 November 2018

ಅಶ್ವತ್ಥಾಮ



ಹೆಸರುಸುರಿಸಿ
ಜನಕನ ಕಂಗೆಡಿಸಿ
ಕೆಡವಿದ
ಪಾಂಡುಪುತ್ರರ
ಸೀಳ ಬಂದವನಿಗೆ
ಭ್ರಮೆಯಾಯಿತೆಂತು
ಉಳಿದರದೆಂತು ಈ ಪಂಚರು?

ಅವರ ಚಿಣ್ಣರ ವಧೆ
ಛೇ...ಹಿತವಿಲ್ಲ
ಇದೋ ನಾರಾಯಣಾಸ್ತ್ರದ
ವಂಶವಿನಾಶಿ ಮಂತ್ರದಂಡ!

ಓ....ಗೊಲ್ಲನಲ್ಲೆ
ಇರುವನಲ್ಲ....ಬಳಿಯಲ್ಲೆ
ಉತ್ತರೆಯ ಗರ್ಭವಷ್ಟೇ ಅದಕೆ
ಸಿಕ್ಕ ಬಲಿ!

ಶಾಪ ಹೊತ್ತು ಈಗ ನನಗೆ
ಬೇಕಿದೆಯೇನು
ಈ ಚಿರಂಜೀವಿ ಪಟ್ಟ?

ಕಲಿಯಾಗಿದ್ದೆ ನಿಜ
ಆದರೆ
ಕಲಿಯಲೇ ಇಲ್ಲ!

Saturday, 13 October 2018

nage131018

#ನಗ್ತೀರಾ_ಪ್ಲೀಸ್

'ರ್ರೀssssss' ಅವಳ ಗಾಭರಿಯ ಕೂಗು ಮಲಗಿದ್ದ ಗಂಡನನ್ನು ಬಡಿದೆಬ್ಬಿಸಿತು. ಅರ್ಧ ತೆರೆದ ಕಂಗಳಿಂದ ಅವಳತ್ತ ನೋಡಿದ. ಬೆಳಿಗ್ಯೆ ಐದೂವರೆಗೆ ಎದ್ದೊಡನೆ ಮೊಬೈಲ್ ನೋಡಿ ನಂತರ ಕರಾಗ್ರೇ ವಸತೇ ಲಕ್ಷ್ಮೀ ಎನ್ನುವ ಅವಳ ಅಭ್ಯಾಸ ಗೊತ್ತೇ ಇತ್ತು. ಈಗಲೂ ಕೈಯಲ್ಲಿ ಮೊಬೈಲ್ ಇರುವುದು ಕಾಣಿಸ್ತಿತ್ತು. ಆದರೆ ನಿದ್ದೆಗಣ್ಣಿಗೂ ಅವಳ ಮುಖದ ಮೇಳಿದ್ದ ಗಾಭರಿ ಎದ್ದು ಕಾಣುತ್ತಿತ್ತು. ಎದ್ದು ಕುಳಿತು ಏನಾಯ್ತೇ ಎಂದ. 'ಈ ಫೇಸ್‍ಬುಕ್ ಫ್ರೆಂಡ್ಸ್ ಎಲ್ಲಾ ತುಂಬಾ ಮೋಸರೀ....' ಅಂದಳು. ಛಾನ್ಸ್ ಸಿಕ್ಕಾಗ ಬಿಟ್ಟಾನಾ? 'ಅದಕ್ಕೇ ಅಲ್ವೇನೇ ಆ ದರಿದ್ರ ಫೇಸ್‍ಬುಕ್ ಟ್ವಿಟ್ಟರ್ ಎಲ್ಲ ಬಿಟ್ಟು ಹಾಕು ಅಂತ ನಾ ಹೇಳ್ತಾ ಇದ್ದದ್ದು' ಅಂದ. 'ಅಯ್ಯೋ...ನಿಮಗೇನೂ ಗೊತ್ತಾಗೊಲ್ಲ ಬಿಡಿ' ಎಂದಳು. ಸರಿ ಎಂದವನೇ ಮತ್ತೆ ದಿಂಬಿಗೆ ತಲೆ ಇಟ್ಟ. ಆದರೆ ಅವಳ ಬಿಕ್ಕು ಕೇಳಿಸಿ ಮತ್ತೆ ಎದ್ದು ಕುಳಿತ. 'ಸರಿ ಏನಾಯ್ತು ಹೇಳು' ಎಂದ ಸಮಾಧಾನ ಪಡಿಸುವ ದನಿಯಲ್ಲಿ. ಮೂಗೊರೆಸುತ್ತಾ ಹೇಳಿದಳು ' ನೆನ್ನೆ ವರೆಗೆ 3200 ಫ್ರೆಂಡ್ಸ್ ಇದ್ದರು. ಈಗ ಬರೀ 800ಕ್ಕೆ ಇಳಿದಿದೆಯಲ್ಲರೀ.....ಇದೇಕೆ ಹೀಗಾಯ್ತು? ಯಾರೋ ನನ್ನ ಅಕೌಂಟ್ ಹ್ಯಾಕ್ ಮಾಡಿರಬೇಕು ರೀ...ಈಗ ಏನು ಮಾಡಲಿ....ಸೈಬರ್ ಕಂಪ್ಲೇಂಟ್ ಮಾಡ್ಬೇಕಾ..." ಕೇಳುತ್ತಲೇ ಹೋದಳು. ಅವನು ಎದ್ದಾಗಲೂ ಬಿದ್ದಾಗಲೂ ಯಾವಾಗಲೂ ಮಹಿ ತರ ಕೂಲ್ ಕೂಲ್. ತಲೆ ಮೇಲೆ ಕೈ ಆಡಿಸಿದ ಕೂದಲಲ್ಲಿ....ಅಲ್ಲ ಅಲ್ಲ...ಕೂದಲೆಲ್ಲಿತ್ತು? ಬೊಕ್ಕ ತಲೆಯ ಮೇಲೆ. ನೆನ್ನೆ ಮಲಗುವ ಮೊದಲು ಹಾಕಿದ ಕಡೆಯ ಸ್ಟೇಟಸ್ ಯಾವುದು ಎಂದು ಪತ್ತೇದಾರನ ಸ್ಟೈಲಲ್ಲಿ ಕೇಳಿದ. ಅದು ಏನೂ ಇಲ್ಲ ಬಿಡಿ ಎಂದು ಹಾರಿಕೆಯ ಉತ್ತರ ಕೊಟ್ಟಳು. ಪರವಾಗಿಲ್ಲ ಹೇಳು ಅದರ ಪರಿಣಾಮ ಇತಬಹುದಲ್ಲವಾ ಎಂದ. 'ಏನಿಲ್ಲ ಎಲ್ಲರೂ ಹಾಕ್ತಾ ಇದ್ದಾರಲ್ಲ ಅಂತ ..... ಒಂದು app  ಇದೆಯಲ್ಲಾ ಅದನ್ನು download ಮಾಡಿಕೊಂಡು ಒಂದು ದೇವರನಾಮ ಹಾಡಿದೆ ರೀ.....ನಿಮ್ ಫ್ರೆಂಡ್ ಜನಾರ್ಧನ್ ತಕ್ಷಣವೇ ತುಂಬಾ ಚೆನ್ನಾಗಿದೆ ಅಂತ ಹಾಕಿದ್ರು.....ಅದರಿಂದ ಇರಲಿಕ್ಕಿಲ್ಲ' ಅಂದಳು. ಸರಿ ಅವಳ ಮೊಬೈಲ್ ಕಿತ್ತುಕೊಂಡು ಅದಾವ ಹಾಡು ಎಂದು ಕೇಳ ಹೊರಟ. ಹಾಗೇ ಅಲ್ಲ ಕಿವಿಗೆ ಈ ಇಯರ್ಫೋನ್ ಹಾಕಿ ಕೇಳಿ ಚೆನ್ನಾಗಿರುತ್ತೆ ಅಂತ ಕಿವಿಗೆ ತುರುಕಿದಳು. ಕಣ್ಣೂ ಮುಚ್ಚಿದ್ದ ಅವನ ಪ್ರತಿಕ್ರಿಯೆ ಅವಳಿಗೆ ಕಾಣದಿರಲೆಂದು. ಮೂರು ನಿಮಿಷದ ಹಾಡು ಮುವತ್ತು ನಿಮಿಷ ಆದರೂ ಕೇಳುತ್ತಲೇ ಇದ್ದ. ಅವಳಿಗೆ ಯಾಕೋ ಅನುಮಾನ. ಮೆಲ್ಲಗೆ ಅವನನ್ನು ಅಲುಗಿಸಿದಳು. ಮೊಬೈಲ್ ಕೈಯಿಂದ ಬಿತ್ತು. ಅವನು ಪಾಪ ಪ್ರಜ್ಣ್ಯೆ ತಪ್ಪಿದ್ದ. ಅವಳಿಗೆ ಅರ್ಥ ಆಗಿರಬೇಕು.

Tuesday, 2 October 2018

ಕನಸುಗಳು

ಕನಸುಗಳು...ಓಹ್
ಯಾರಿಗೆ ಬೇಡ?
ಅಲ್ಲೊಬ್ಬ ನಿಂತು ಮಾರುತ್ತಿದ್ದಾನೆ
ಇಲ್ಲ ಸುಮ್ಮನೆ ಹಂಚುತ್ತಿದ್ದಾನೆ
ಅದಕ್ಕೇ ದೊಡ್ಡ ಗುಂಪು
ಬೆಳೆಯುತ್ತಲೇ ಇದೆ....
ಸನಿಹದಲ್ಲೇ
ಇನ್ನೊಬ್ಬ ಅಂಗಡಿ ತೆಗೆದ
ನೋಡು...ಅಲ್ಲೂ ಜನ
ಸೇರುತ್ತಿದ್ದಾರೆ ಅಷ್ಟಿಲ್ಲ ..ಹೌದು
ಇವನೂ ಬಿಟ್ಟಿ ಕೊಡುತ್ತಿದ್ದಾನೆ
ಕನಸಲ್ಲ ...ಪೆನ್ನುಗಳು
ಇಂಕಿಲ್ಲದ ಪೆನ್ನುಗಳು!
ಕನಸು ನನಸಾಗದೆಂಬ ನಂಬಿಕೆ-
ಯ ಪಿನ್ನುಗಳು ಚುಚ್ಚಲು
ಆ ಕನಸುಗಳ.....ಆದರೆ
ಬೇಕಿತ್ತಾ? ಕನಸೇ ಇಲ್ಲದ ಇಂದಿನ
ವಾಸ್ತವದ ಅಬ್ಬರಗಳು
ಕಲೆಗಳು ನಿರ್ವೀರ್ಯಗೊಳಿಸುತ್ತಿರುವ
ಮೂಕ ರೋದನಗಳು
ಸಹಸ್ರನಾಮಗಳ ಕಕ್ಕುವ ಚೇಷ್ಟೆಗಳು
ಕಣ್ಣು ಮುಚ್ಚಿ ಎಳೆವ ಉರುಳುಗಳು!
ಊಂಹೂಂ....
ಕನಸು ಹತ್ತು ಕಣ್ಣಿಗೆ ಕಟ್ಟಿದರೆ
ನಾಲ್ಕರಲ್ಲಾದರೂ ನನಸು ಮಾಡುವ ಕಿಚ್ಚು
ಹತ್ತಿಸಬಲ್ಲುದು...ಕಾಯುವಾ
ಬೇಕಿದ್ದರೆ ಕನಸ ಪಡೆದು ಇಲ್ಲದಿದ್ದರೆ
ಪಿನ್ನುಗಳ ಸಧ್ಯಕ್ಕೆ ದೂರವಿಟ್ಟು!