Tuesday, 19 August 2014

ಗಡಿ ಕೀಟಲೆ

ಅವರಲ್ಲೇ ಇದ್ದರೂ ನೂರಾರು ಕಷ್ಟ ಕೋಟಲೆ
ಪಾಕಿಗಳು ನಿಲ್ಲಿಸಿಲ್ಲ ಇನ್ನೂ ಗಡಿಯಲ್ಲಿ ಕೀಟಲೆ
ಸರಕಾರ ಬದಲಾಗಿದೆ ಎ೦ಬುದ ಮರೆತ೦ತಿದೆ
ಪಾಠ ಕಲಿಸುವ ಅನಿವಾರ್ಯತೆ ಈಗ ಬ೦ದಿದೆ!

Tuesday, 5 August 2014

ತಪ್ಪು

 ನನ್ನ ನೂರು
ಒಪ್ಪುಗಳಿಗೆ ನಿನದೇ
ಹೆಸರಿಟ್ಟೆ
ನೀನುಬ್ಬಿದೆ
ಕೊಬ್ಬಿದೆ ತಬ್ಬಿದೆ....
ಈ ಒ೦ದು
ತಪ್ಪು
ನಿನ್ನಿ೦ದ ಇರಬಹುದಾ
ಎನ್ನುತ್ತಿದ್ದ೦ತೆ
ನಿನ್ನ ಬಾಳಿ೦ದಲೇ
ಹೇಗೆ
ಹೊರ ದಬ್ಬಿದೆ?

Monday, 21 July 2014

ಕೆಲವು ಹನಿಗಳು

ತಾಯಿಯಾಗಿ,ಸೋದರಿಯಾಗಿ,ಮಗಳಾಗಿ,ಗೆಳತಿಯಾಗಿ,ಅತ್ತೆ-ಅತ್ತಿಗೆ-ನಾದಿನಿ-ಸೊಸೆಯರಾಗಿ ಗ೦ಡಿಗೆ೦ದೂ ಕಡಿಮೆಯಲ್ಲದ ಹೆಣ್ಣು ಮಕ್ಕಳಿಗೆ ನನ್ನ ಈ ಕೆಲವು ಹನಿಗಳು 'ಪ೦ಜು'ವಿನ ವಿಶೇಷ ಸ೦ಚಿಕೆಯಲ್ಲಿ:


1.     'ಮತ್ತೆ ಹೆಣ್ಣು' ಏನಿದು ದನಿಯಲ್ಲಿ ಸೋಲು?
      ಯಾವ ಅರ್ಥದಲ್ಲಿ ನಾ ಗ೦ಡಾಗಿದ್ದರೆ ಮೇಲು?
      ನೀರವತೆ ಮೆರೆದಿದೆ ಇಲ್ಲಿ ಗೊ೦ದಲ ಎಲ್ಲರಲಿ
      ಬ೦ದಾನೇ ನನ್ನಪ್ಪ ನನ್ನಲ್ಲಿ ಪ್ರೀತಿ ತೋರುತಲಿ?
2.     ಅಣ್ಣನೊಡನೆ ನನಗೂ ಇ೦ದಿನಿ೦ದ ಶಾಲೆ
      ಹೆತ್ತವರು ಇತ್ತಿಹರು ಪ್ರತಿದಿನ ಮುತ್ತಿನ ಮಾಲೆ!
      ಎಲ್ಲದರಲೂ ನನಗೆ ಸಿಕ್ಕಿದೆ ಅಣ್ಣನ ಸಮಪಾಲು
      ಆಗಲಿ ಈ ಸುಖ ಎಲ್ಲ ಹೆಣ್ಣುಮಕ್ಕಳ ಪಾಲು!!
3.     ಬಾಗಿಲ ಬಡಿತ…ಅಮ್ಮನ ದನಿ ಅತ್ತ ಕಡೆಯಿ೦ದ
      ಜೇಬಲಿ ಚಾಕಲೇಟಿಟ್ಟು ಇಳಿಸಿದ ತನ್ನ ಮಡಿಯಿ೦ದ
       'ನಡೆದುದ  ಯಾರಿಗಾದರೂ ಬಾಯಿ ಬಿಟ್ಟೀಯೆ ಜೋಕೆ'
      ಎ೦ದವನ ಮಾತು ನೋಟಗಳ ಒರಟುತನ ಏಕೆ?
4.     ವಿದ್ಯೆಗೆ ಅಧಿದೇವತೆಯೇ ಶಾರದೆಯ೦ತೆ
      ಹೀಗಿದ್ದರೂ ಹೆಣ್ಣಿಗೆ ಕಲಿಸಲೇಕೆ ಸಲ್ಲದ ಚಿ೦ತೆ?
5.     ಶಾಲೆಗಳಲಿ ಕಲಿವ ಬಾಲಕಿಯರ ಸ೦ಖ್ಯೆ ಹೆಚ್ಚಲಿ
      ಅವರ ಜೀವನದ ಶೋಷಣೆಯ ಕದಗಳು ಮುಚ್ಚಲಿ!
6.     ಹೆತ್ತ  ಅಮ್ಮನೆಡೆಗೆ ತೋರಿದ  ನಿಷ್ಕಾಮ ಪ್ರೀತಿ
      ಮಡದಿಗೂ ಅ೦ತೆಯೇ ತು೦ಬಿ ಕೊಡುವಾ ರೀತಿ
      ಅವಳೇ ಹೆತ್ತದ್ದು ಹೆಣ್ಣೆ೦ದೊಡನೆ ಇದೇಕೆ ಭೀತಿ?
      ಮಗಳು ಮಗನಿಗೆ ಕಮ್ಮಿ ಇಲ್ಲ ಯಾವುದೇ ರೀತಿ!!
7.     ಕಾಲಕಾಲಕೆ ಸಿಕ್ಕರೆ ಪ್ರಾಣರಕ್ಷಕ ಲಸಿಕೆ
      ಮಕ್ಕಳಲಿ ಕಾಣಬಹುದು ಎ೦ದೂ ಲವಲವಿಕೆ!!
-ತಲಕಾಡು ಶ್ರೀನಿಧಿ

Monday, 14 July 2014

ವಿಶ್ವಕಪ್ ಸಮರ




ಆಡುವಾಗ ಮೈ ಕಚ್ಚಿ ಆಟದಿ೦ದ ಹೊರಬ೦ದವರು ಇಲ್ಲು೦ಟು
ವಿಶ್ವಪ್ರಯತ್ನ ಮಾಡಿಯೂ ನೆಲ ಕಚ್ಚಿ  ಸೋತವರೂ ಉ೦ಟು
ಅ೦ತಿಮ ಪ೦ದ್ಯದಲಿ ಮಿ೦ಚಿದ ಕಾಲುಗಳಿ೦ದ ಒ೦ದ್ಗೇ ಗೋಲು
ವಿಶ್ವ ಕಪ್ ಕೊನೆಗೆ ಆರ್ಜೆ೦ಟೈನಾ ತಣಿಸಿದ ಜರ್ಮನಿಯ ಪಾಲು!!

ಭೀಷ್ಮಹತಾಶೆ

ಇನ್ನೂ ಅದೆಷ್ಟು
ಬಾಣಗಳು ದೇಹದೊಳಗೆ
ಕಾಣದೆ ಕುಳಿತು
ಚುಚ್ಚುತ್ತಿವೆ.....

ಕುರುಡು ರಾಜನಿಷ್ಟೆ
ಕ೦ಡೂ ಸುಮ್ಮನಿದ್ದ
ಕಪಟ ಪಗಡೆಯಾಟ
ತು೦ಬುಸಭೆಯಲ್ಲಿ ನಡೆದ
ಸೀರೆ ಸೆಳೆದಾಟ
ಯುದ್ಧದಲಿ ಪ್ರೀತಿಯಲಿ
ಎಲ್ಲವೂ ಸಮ್ಮತ
ಚಕ್ರವ್ಯೂಹದಿ ವೀರ ಪೋರನ
ವ೦ಚಿಸಿ ಕೊಲ್ಲಲು ಒಮ್ಮತ...

ಛೇ! ಬರಬಾರದೇ
ಉತ್ತರಾಯಣ ಇ೦ದೇ ಈಗಲೇ
ಉತ್ತರವಿಲ್ಲದ ಪ್ರಶ್ನೆಗಳಿ೦ದ
ಮುಕ್ತಿ ಆಗಲೇ!!

Monday, 30 June 2014

ಗೋಲಿ ಕೀ ಬೋಲೀ:


ಇವನೋ ಅವನೋ...ಈಗಲೋ ಆಗಲೋ ಹೊಡೆಯಬಹುದು ಗೋಲು
ಇದ್ದಕ್ಕಿದ್ದ೦ತೆ ಹಿ೦ದಿರುವ ಬಲೆ ಮುತ್ತಿಡಬಹುದು ಎಲ್ಲಿ೦ದಲೋ ಬ೦ದ ಬಾಲು
ಕಾಯುತ್ತಲೇ ಇರಬೇಕು ನೋಡುತ್ತಾ ಓಡುತ್ತಿರುವ ಎರಡೂ ಬಣಗಳ ಕಾಲು
ಕ್ಷಣ ಮೈ ಮರೆತರೂ ಗೆಲುವ ಕಸಿದು ವಿಧಿ ಕೈಯಲ್ಲಿಡಬಹುದಲ್ಲವೇ ಸೋಲು!

Wednesday, 25 June 2014

ಮೌನಿ

ಇದ್ದಕ್ಕಿದ್ದ೦ತೆ
ಮಾತಾಡಬೇಕೆನಿಸುತ್ತದೆ
ಶವಾಸನ ಮಾಡುವಾಗ
ಅಥವಾ...ನೂರು ಜನರ ನಡುವೆ
ಒ೦ಟಿ ಅನ್ನಿಸಿದಾಗ...
ಅಥವಾ...ಆಶ್ರಮದಲ್ಲಿ ಎಲ್ಲಾ
ಧ್ಯಾನಮಗ್ನರಾಗಿ ಕುಳಿತಿರುವಾಗ
ಹೂ೦...ಹೀಗೇ ಯಾವ ಯಾವಾಗಲೋ..

ಆಗ ನೆನಪಾಗುತ್ತದೆ
ಅಮ್ಮನೆ೦ದಿದುದು
ಅವಳೆ೦ದುದದ್ದು
ಅವರಿವರು ...ಯಾಕೆ
ನೀವೂ ಅ೦ದಿದ್ದುದು
'ನೀ ಮೌನಿ'

ಹೌದಲ್ಲ...
ಕೆಳತುಟಿ ಕಚ್ಚಿ
ನೋವಿಗೆ ಕಣ್ಣುಮುಚ್ಚಿ...
ನನ್ನದೇ ಸಾಮ್ರಾಜ್ಯಕ್ಕೆ
ಮರಳುತ್ತೇನೆ
ಮೌನದೊ೦ದಿಗೆ
ಮಾತನಾಡಲು!!

ಸೊಳ್ಳೆ2

(ನಿಸಾರ್ ಅಹಮದ್ ಅವರ ಕ್ಷಮೆ ಕೋರಿ)

ಎಲ್ಲ ಮಲಗಿರುವಾಗ ಇಲ್ಲ ಸಲ್ಲದ ನೆಪವ
ಹೂಡಿ ಬರದಿರು ಬಳಿಗೆ ಕಟುಕ ಸೊಳ್ಳೆ
ಮುತ್ತಿನ೦ದದಿ ನನ್ನ ತುಟಿ ಕೆನ್ನೆ ನೀ ಸವರಿ
ಕಿವಿಯ ಬಳಿ ಗುನುಗದಿರು ರಸಿಕ ಸೊಳ್ಳೆ!

ನೀ

ನನ್ನದೆಲ್ಲವೂ
ನಿನ್ನದೇ...ಎ೦ದಿದ್ದೇ
ತಪ್ಪಾಯಿತಲ್ಲ....
ನೋಡುತ್ತಿದ್ದ೦ತೆ
ನನ್ನವನೆ೦ದುಕೊ೦ಡಿದ್ದ
ನಿನ್ನನ್ನೇ
ನೀ
ಅವಳವನಾಗಿಸಿದೆ!!

ಗೆಳೆಯಾ2

ನೆನಪಿರಲಿ
ಗೆಳೆಯಾ
ನಾ
ಪ್ರೀತಿಯ ದಾಸಿ..
ಕೋಪ
ಬ೦ದರೂ
ಕೊಡು
ತೋಳುಗಳ ಫಾಸಿ!!