Monday, 14 September 2015

ಉಯಿಲು

ಉಸಿರು ನಿಲ್ಲುವ ಸಮಯ ಅದು
ಮಾತು ಬರಿಯ ಸನ್ನೆ
ಉಯಿಲು ಬರೆದು ತಂದ ಅವ
ಒಂದರ ಮುಂದಷ್ಟು ಸೊನ್ನೆ
ಬೇಕಿತ್ತು ನನ್ನ ಸಹಿ ಅದಕೆ
ಅಥವಾ ಹೆಬ್ಬೆಟ್ಟು
ಒತ್ತಲು ಇರಲಿಲ್ಲ ತಾಕತ್ತು
ಒತ್ತಿದ ಅವನೇ ಇಟ್ಟು
ಕೆಲಸ ಮುಗಿಯಿತು
ಬಿಟ್ಟ ತಲೆ ತಕ್ಷಣ
ಪ್ರಾಣ ಹೋಯಿತು ಆಗಲೇ
ಅಪ್ಪನಾದನು ಹೆಣ
ಅವನಿಗೇ ಅರಿವಿಲ್ಲದೆ
ಬಿತ್ತು ಕಣ್ಣ ಹನಿಯೊಂದು
ಅಳಿಸಿತು ಉಯಿಲಿನಲ್ಲಿನ
ಸಂಖ್ಯೆಯಲ್ಲಿ ಆ ಮುಖ್ಯ '1'
ಈಗ ಉಳಿದದ್ದು ಅದರಲ್ಲಿ
ಬರಿಯ ಸೊನ್ನೆ
ಕಣ್ಣು ತುಂಬಿ ಬಂತವಗೆ
ನೋಡುತ ಅದನ್ನೇ!
(ಜಾಹಿರಾತೊಂದರ ಪ್ರೇರಣೆ)

Saturday, 29 August 2015

ಸ್ಪರ್ಧೆ

ಮೊನ್ನೆ ಇತ್ತು
ನಮ್ಮ ಬಡಾವಣೆಯಲ್ಲಿ
ಗೀತೆ ಹಾಡುವ
ಸ್ಪರ್ಧೆ
ನನಗೇ ಬಂತು
ಮೊದಲ ಬಹುಮಾನ
ಹಾಡೋಕೆ ಯಾರೂ
ಬರದೆ!

ಈರುಳ್ಳಿ

ಎದುರಂಗಡಿ ಶೆಟ್ರ
ಮಗಳು ಬಲು ಕಿಲಾಡಿ
ಕುಳ್ಳಿ
ದ್ರಾಕ್ಷಿ ಗೋಡಂಬಿ
ಮುಂದಿಟ್ಟು ಹಿಂದೆ ಸರಿಸಿದ್ದಾಳೆ
ಈರುಳ್ಳಿ!

ಚುನಾವಣೆ

ನೋಟಿಗೊಂದು
ವೋಟು ಕೊಡುವ
ಮತದಾರ
ಇರುವವರೆಗೆ...
ಇರುತ್ತಾನೆ
ವೋಟಿಗೊಂದು
ನೋಟು ಕೊಡುವ
ಉಮೇದುವಾರ!!

ಕುಡುಕವಾಣಿ:


ಕುಡಿದು ಟೈಟಾಗಿದ್ದಾಗ
ಮಾತ್ರ ನಾನೊಬ್ಬ ಸಂತ
ಅದಕ್ಕೇ ದಿನಾ ಕುಡಿಯುತ್ತೇನೆ
ಹಾಗೇ ಬದುಕಬೇಕು ಅಂತ!

ನಿನ್ನೆ ಇಂದು ನಾಳೆ

ನಿನ್ನೆ 
ಪ್ರೀತಿಸಿದ್ದು
ನಿನ್ನೆ
ಇಂದು
ಏಕೋ
ಪ್ರಿಯವಾಗಿದ್ದು
ಇಂದು
ನಾಳೆ?????????

ರಂಡೆ!

ಗುಂಡ ಬೆಳಿಗ್ಯೆ ಕಾಫಿ ಕುಡಿಯುತ್ತಾ ಕುಳಿತಿದ್ದ.
ಮಗಳ ಗೆಳತಿ ಬಂದವಳೇ ' ಅಂಕಲ್, ಪೂಜಾ ಇದ್ದಾಳಾ?' ಎಂದು ಕೇಳಿದಳು. 'ಇಲ್ಲಮ್ಮ. ಆರು ಘಂಟೆಗೇ ಓಡೋಕೆ ಹೋದಳು ರಂಡೆ!' ಎನ್ನಬೇಕೇ ಗುಂಡ. 
ಅವಳು ಸುಮ್ಮನಿರಲಿಲ್ಲ. 'ಯಾಕೆ ಅಂಕಲ್ ಓಡೋಕೆ ಹೋಗಿದ್ರೆ ಬೈತೀರಾ' ಪ್ರಶ್ನಿಸಿದಳು 
'ಅಯ್ಯೋ ಹುಡುಗೀ ಹಾಗಲ್ಲ....ನಾ ಹೇಳಿದ್ದು RUN DAY ಅಂತ' ಎಂದ ಗಡಿಬಿಡಿಯಿಂದ.

ಉತ್ತರಗಳು

ಜೀವನದಲ್ಲಿ ಹಾಗೇ...
ಒಂದೇ ಪ್ರಶ್ನೆಗೆ
ತರಹಾವಾರು ಉತ್ತರಗಳು
ಎಲ್ಲವೂ ಸರಿಯೇ ಅವರವರಿಗೆ
ಸಮಯಕ್ಕೆ ತಕ್ಕಂತೆ
ವ್ಯಕ್ತಿಗಳಿಗೆ ತಕ್ಕಂತೆ!

ಯಮ

ಯಾರೋ ತಿವಿದಂತಾಯಿತು. ಅರ್ಧ ಕಣ್ತೆರೆದು ನೋಡಿದೆ. ಕೆಂಪು ಕಣ್ಣು ಕೋಣ. ಸ್ವಲ್ಪ ಮೇಲೆ ನೋಡಿದರೆ......ಅದೇ ಕೆಂಪುಕಣ್ಣಿನ ಯಮ ಹಲ್ಲು ಕಿರಿಯುತ್ತಿದ್ದ. ಆಕಳಿಸುತ್ತಾ ಕೇಳಿದೆ 'ಇಲ್ಲೇನು ಕೆಲಸ?'. ಗಲ್ಲು ಎಂದು ಕೇಳ್ಪಟ್ಟೆ ಅದಕ್ಕೇ ಬಂದೆ ಎಂದ. ಗಾಬರಿಯಿಂದ 'ನನಗಾ?' ಎಂದೆ.ನಕ್ಕು ಹಿಂದೆ ನೋಡಿದ. ಅವನ ಶಿಷ್ಯ ಉರುಲು ಸರಿ ಮಾಡುತ್ತಿದ್ದ. ಅದೇನೋ ನೋಡಬಾರದ್ದು ಹುಡುಕುತ್ತಿದ್ದೆಯಂತೆ ಕಂಪ್ಯೂಟರ್ನಲ್ಲಿ ಅಂದ. ಈಗ ಜ್ಞಾನೋದಯ ಆಯಿತು. ಯೋ.....ಅದು ಗಲ್ಲಲ್ಲ....ಗೂಗಲ್ ಅಂದೆ. 'ಅಂದ್ರೆ? ' ಪ್ರಶ್ನಿಸಿದ. ಏನಿಲ್ಲ ನೀವೆಲ್ಲ ಸ್ವರ್ಗದಲ್ಲಿ ದಿನಾ ನೋಡೋದೇ ಅಂದೆ. ನಾವು ದೇವತೆಗಳು ಏನಾದರೂ ಮಾಡ್ತೀವಿ ನೋಡ್ತೀವಿ ಎಂದ ಮೀಸೆ ತಿರುವುತ್ತಾ. ನಮ್ಮಲ್ಲೂ ಎಷ್ಟೋ ರಾಜಕಾರಣಿಗಳು ಸಭೆಯಲ್ಲೇ ನೋಡುತ್ತಾರೆ...ಕೆಲಸದ ಸಮಯದಲ್ಲಿ. ನಾನು ಮನೆಯಲ್ಲಿ ನೋಡಿದರೆ ಏನು ತಪ್ಪು ಯಮಣ್ಣ ಅಂದೆ. ತಪ್ಪಿಲ್ಲ ಬಿಡು ಎಂದ. ಸರಿ ಮತ್ತೆ ಹೊರಡು ಎಂದೆ. ನಿನ್ನನ್ನು ಇಲ್ಲಿ ನೋಡಿದರೆ ಅಂತ್ಯಕ್ರಿಯೆ ಗೆ ರೆಡಿ ಮಾಡಿಬಿಟ್ಟಾರು ಯಾರಾದರೂ .....ರೈಟ್ ಹೇಳು ಎಂದೆ. ಬರಿ ಕೈಲಿ ಹೋಗೋ ಹಾಗಿಲ್ಲ ಎಂದ. ಅದಕ್ಕೆ ನಾನೇನು ಮಾಡಲಿ ಅಂದೆ. ಆ ಕಂಪ್ಯೂಟರ್ ಎತ್ತಿಕೊಂಡು ಹೋಗ್ತೀನಿ ಅಂದ. ಸರಿ ತಗೊಂಡು ಸಾಯಿ ಎಂದೆ. ದನಿ ತಗ್ಗಿಸಿ ' ಅದೇನೋ ನೋಡ್ತಿದ್ಯಲ್ಲ ಅದು ಹೇಗೆ ಅಂತ ಸ್ವಲ್ಪ ಹೇಳಿಬಿಡು ಹೋಗ್ತೀನಿ ' ಎಂದ ನಗುತ್ತಾ. ಸರಿ ಅಂತ ಎದ್ದು ಕುಳಿತೆ. ಬೆಳಕು ಹರಿದಿತ್ತು.

ಆಗಸದ ಏರ್ಪಾಡು

ಭಾರಿ ಕುತೂಹಲ
ಈ ಆಗಸದ ಏರ್ಪಾಡು
ಹಗಲಿನ ನಡವಳಿಕೆಗೆ
ಇರುಳಲಿ ಮಾರ್ಪಾಡು!
ಬೆಳಿಗ್ಗೆ ಪೂರಾ ಇಹುದು
ಸೂರ್ಯನ ಸರ್ವಾಧಿಕಾರ
ಇರುಳಾದರೆ ತಾರೆಗಳೊಡನೆ
ಚಂದಿರನ ಸ್ವೇಚ್ಛಾ ಚಾರ!
ಸೂರ್ಯ ಉರಿಯುವುದು
ಚಂದ್ರನ ಜನಪ್ರಿಯತೆ ಕಂಡೇ?
ಚಂದ್ರನ ತಂಪು ನೀಡುವ ಪರಿ
ಸೂರ್ಯನ ಬೆಳಕನುಂಡೇ!
ರವಿ ಸುತ್ತುವ ಇಳೆಯ ಸುತ್ತುವ
ಚಂದಿರನೆನ್ನುವುದು ವಿಜ್ಞಾನ
ಇಬ್ಬರೂ ನಮಗಾಗಿಯೇ ಬಂದು
ಹೋಗುವರೆನ್ನುವುದು ನನ್ನ ಜ್ಞಾನ!