Friday, 29 January 2016

ಅದೆಷ್ಟು ಬೇಗನೆ?

ವಾಹನಗಳ ಸಂದಣಿಯಿಂದ
ಸದ್ದು ಮಾಡುತ್ತಲೇ ಬೇರಾಗಿ
ಕೀಂವ್...ಕೀಂವ್....ಕೀಂವ್
ಕೆಂಪು ಅಗ್ನಿಶಾಮಕ ವಾಹನ
ಬೆಂಕಿ ನಾಲಗೆ ಸಣ್ಣವಾಗುತ್ತಿದ್ದರೂ
ಇನ್ನೂ ಹೊಗೆಯಾಡುತ್ತಿರುವ ಆ ಅಲ್ಲಿಗೆ
ಬಂದು ತಲುಪಿತು...ಅದೆಷ್ಟು ಬೇಗನೆ?
ಮುಖ ಮುಚ್ಚಿಕೊಂಡ ಅಷ್ಟು ಜನ
ದಡದಡನೆ ಇಳಿದವರು ವಾಹನದ ಅತ್ತಿತ್ತ
ನಿಶ್ಚಿತ ರೂಪುರೇಖೆಯಲ್ಲಿ ತೊಡಗುತ್ತಾ
ಸುರಕ್ಷೆಯ ಅಂತರದಲ್ಲಿ ಪೈಪುಗಳೊಡನೆ
ಸಜ್ಜಾದರು.....ಅದೆಷ್ಟು ಬೇಗನೆ?
ಒಂದು ಸನ್ನೆಗೇ ಕಾದರು ಆದೇಶಕೆ
ಒಗ್ಗಟ್ಟಿನಿಂದ....ಎಷ್ಟೋ ಬಾರಿ ಮಾಡಿದಂತೆ
ಅದೋ...ಎಲ್ಲರೂ ಏಕಕಾಲಕ್ಕೆ ಬೆಂಕಿಯತ್ತ
ಗುರಿಯಿಟ್ಟು ನೀರು ಚಿಮ್ಮಲು ತೊಡಗಿದರು
ಬೆಂಕಿ ಆರಲಿಲ್ಲ....ಭುಗಿಲೆದ್ದಿತು ಸಧ್ಯ ದೂರ ಇದ್ದಾರೆ
ನೀರು ನೀರಾಗಿರಲಿಲ್ಲ......ಮತ್ತೆ?ಪೆಟ್ರೋಲ್??
ಓ ದೇವರೇ...ಮುಖವಾಡದ ಹಿಂದಿನ ಮುಖಗಳಲ್ಲಿ
ಅಚ್ಚರಿ ಭಯ ಗಾಭರಿ....ಒಂದೆರಡರಲ್ಲಿ
ಸಮಾಧಾನ ಕೂಡ!
ಬೆಂಕಿ ನಾಲಿಗೆ ಮುಗಿಲೆತ್ತರ ಚಾಚಿದೆ
ನಮ್ಮ ನಿಮ್ಮೆಲ್ಲರೆಡೆ ಅಟ್ಟಹಾಸದ ನೋಟ ಬೀರುತ್ತಾ!
ಇದೂ ಹೊಸತೇನಲ್ಲ......ಕಂಡಿದ್ದೇವೆ ತಾನೇ
ಮತ್ತೆ ನಮ್ಮದೇ ಕೆಲಸಗಳಿಗೆ ನಾವು...
ಅದೆಷ್ಟು ಬೇಗನೆ?
  

ಗಾಯ

ಇಷ್ಟು ದಿನ ಕಾಡುತಿತ್ತು
ಎದೆಯಲ್ಲೊಂದು
ಮಾಯದ
ಗಾಯ...
ನಿನ್ನ ಕೈ ಸೋಕಲು
ಗೆಳತಿ...ಈಗ
ಗಾಯವೇ
ಮಾಯ!

ನೆಮ್ಮದಿ

ನಿನ್ನದೇ 
ಹಿಡಿತದಲ್ಲಿರಲು ನಿನ್ನ
ನಾಲಿಗೆ...
ನೆಮ್ಮದಿ 
ಸುಖ ಸಂತಸ ನಿನ್ನ
ಪಾಲಿಗೆ!

Sunday, 22 November 2015

ಮೊದಲ ಪಾಠಶಾಲೆ

ಮನೆಯೇ ಮೊದಲ ಪಾಠಶಾಲೆ
ತಾಯಿಯೇ ಅಲ್ವಾ ಮೊದಲ ಗುರು
ಬಯಸಿದುದ ಕೊಡುವ ಕಾಮಧೇನು
ನಾನೆಂದಿಗೂ ಅವಳ ಮುದ್ದು ಕರು
ಮನೆಯೇ ಮೊದಲ ಗಾನಮಂದಿರ
ಅಮ್ಮನ ಜೋಗುಳ ತೋರುತ ಚಂದಿರ
ಮನೆಯಲೇ ಇಟ್ಟದ್ದು ಮೊದಲ ಹೆಜ್ಜೆ
ಆಗಲೇ ಅಮ್ಮ ತಂದು ಕಟ್ಟಿದಳು ಗೆಜ್ಜೆ
ಮನೆಯೇ ಮೊದಲ ನಾಟ್ಯಶಾಲೆ
ಬೆಳೆಸಿದಳವಳು ಇದ ಕಲಿಸುತಲೆ
ಮನೆಯಲೇ ಇದ್ದುದು ಮೊದಲ ಗುಡಿ
ಸ್ತೋತ್ರವ ಹೇಳಿದ ತೊದಲ ನುಡಿ
ಮನೆಯೇ ಮೊದಲ ವ್ಯಾಯಾಮಶಾಲೆ
ಬಗ್ಗುತ ಬೀಳುತ ತಟ್ಟಿದ ಚಪ್ಪಾಳೆ
ಮನೆಯಲೇ ತೆಗೆದುದು ನನ್ನ ಮೊದಲ ಚಿತ್ರ
ಫೋನಿನಲ್ಲೇ ಕ್ಯಾಮರ..ಎಂಥ ವಿಚಿತ್ರ
ಮನೆಯ ಟೀವಿಯೇ ತೋರಿದೆ ನನಗೆ ವಿಶ್ವವೆಲ್ಲ
ನಾ ಕಂಡದೆಷ್ಟೋ ಪಾಪ ನೀವೇ ಕಂಡಿಲ್ಲ!

ಸೆಲ್ಫಿ

ಎಲ್ಲ ರಾಜಕೀಯ 
ಮುಖಂಡರೊಡನೆಯ ಸೆಲ್ಫಿಗಳು
ಮುರುಕು ಗೋಡೆಯಲಿ
ರಾರಾಜಿಸುತ್ತಿದ್ದವು
ಒಲೆ ಹಚ್ಚಲು ಇದ್ದ
ಸೀಮೆಣ್ಣೆ ಸುರಿದುಕೊಂಡು
ಸತ್ತ ಆ ರೈತನ
ಮೃತದೇಹದೊಂದಿಗೆ!

ಅಂತಿಮ ಆಕ್ರಮಣ


 
ಸೀಟಿ ಶಬ್ದ ಮಾಡಿತು
ಮಧ್ಯದ ಗೆರೆ ಕಣ್ಣಿಗೊತ್ತಿಕೊಂಡು
ಮುಂದೆ ನುಗ್ಗಿದೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಕೊನೆಯ ಆಕ್ರಮಣ
ನನ್ನ ಈ ಆಕ್ರಮಣದ ಮೇಲೇ
ಈ ಪಂದ್ಯ ನಿಂತಿದೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಎದುರಲ್ಲಿರುವವರ ಕಣ್ಣಲ್ಲಿ ಸವಾಲು
ಹಿಂದಿನಿಂದ ಒಕ್ಕೊರಲಿನ
ಪ್ರಚೋದನೆ 'ಕಮಾನ್'
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಈಗ ಕಣ್ಣು ಅವರುಗಳ ಕಾಲಿನ
ಕೈಗಳ ಮೇಲೆ ಕೇಂದ್ರೀಕೃತ
ಒಮ್ಮೆ ಒಬ್ಬರನ್ನಾದರೂ ಮುಟ್ಟೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇದೇನು ಎದುರಿಗೆ ಇಷ್ಟೊಂದು
ಕಾಲುಗಳು..ತಲೆ ಎತ್ತಿದೆ ಅಲ್ಲಿ
ಎಷ್ಟೊಂದು ಜನ ಎಲ್ಲ ಔಟಾಗಿದ್ದವರು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಗಾಂಧಿ,ನೆಹರು,ಭಗತ್,ಆಝಾದ್
ಅಣ್ಣಾವ್ರು,ಶಂಕರ್,ವಿಷ್ಣು ಕೂಡ
ಕಾರಂತ ಕುವೆಂಪು ಬೇಂದ್ರೆ ಅಜ್ಜಂದಿರು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಲಕ್ಷಾಂತರ ಜನ ಎಲ್ಲ ಅಲ್ಲೆ
ದೂರು ಸಲ್ಲಿಸುವೆನೆಂದು ಅತ್ತ
ರೆಫರಿಯೆಡೆಗೆ ನೋಡಿದರೆ-ನಿರ್ಲಿಪ್ತ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇರಲಿ ನಾನು ವಿರೋಧ ಸೂಚಿಸುವೆ ನಂತರ
ನನ್ನ ಪಂದ್ಯಶ್ರೇಷ್ಟ ಪ್ರಶಸ್ತಿಗಳ ಹಿಂದಿರುಗಿಸಿ
ಮೊದಲು ಒಂದಾದರೂ ಅಂಕ ಬೇಕು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ವೌವ್! ಅಲ್ಲಿ ನೋಡು ಅಪ್ಪ ಅಮ್ಮ ಅಣ್ಣ
ಅಜ್ಜಿ ಅಜ್ಜಂದಿರು ಎಲ್ಲ ನನ್ನವರು
ಅಲ್ಲಿಂದಲೇ ಹುರಿದುಂಬಿಸುತ್ತಿದ್ದಾರೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇದೇನು ಅಷ್ಟರಲ್ಲಿ ಈ ಗಟ್ಟಿ ಹಿಡಿತ
ಓ...ಕೇಡಿ ಏಡಿ ಹಿಡಿದಿರುವುದು
ಹಿಂದೆ ತಿರುಗಿದೆ ಗೆರೆ ಮುಟ್ಟಲು
"ಕಬಡ್ಡಿ...ಕಬ..ಡ್ಡಿ...ಕ..ಬ..ಡ್ಡಿ'
'ಕಮಾನ್','ನಿಧೀ','ಟಿಕ‍ಎಸ್'
'ಸರ್','ಗುರೂ','ರೀ','ಅಪ್ಪಾ'
ಎಷ್ಟೊಂದು ಜನರ ಬೆಂಬಲ ಮತ್ತೆ
"ಕ ಬ ಡ್ಡಿ ಕ ಬ ಡ್ಡಿ ಕ ಬ ಡ್ಡಿ'
ಸಿಕ್ಕಲಿಲ್ಲ ಇನ್ನೂ..ಇನ್ನೂ ಹಿಡಿದವು
ಏಡಿಗಳು ಎಲ್ಲೆಡೆ..ಕೊಸರಿದೆ ಆಗಲಿಲ್ಲ
ಬಿದ್ದೆ..ತಲೆ ಕೆಳಗೆ ಅಮ್ಮನ ಮಡಿಲು
"ಕ ..ಬ.. ಡ್ಡಿ...ಕ ...ಬ '
ಗೆರೆ ಸಿಕ್ಕಂತಾಯಿತು ಒಮ್ಮೆ
ರೆಫರಿಯತ್ತ ನೋಡಿದೆ ಆಸೆಯಿಂದ
ಅವನ ಕತ್ತಲ್ಲಿ ಸ್ಟೆತಾಸ್ಕೋಪ್ ಹೇಗೆ?
ತಲೆಯಾಡಿಸಿದ.......ಎಲ್ಲ ಸ್ತಬ್ಧ
ನಾನು...ಅವನು.....ಎಲ್ಲರೂ!

ಮನುಷ್ಯತ್ವ

ಇಲ್ಲಿ
ಬೀಳುವ ಹೆಣಗಳಿಗೆ
ಬ್ರಹ್ಮ ವಿಧಿ ಎಂಬೆಲ್ಲಾ 
ಲಿಖಿತಗಳಿಲ್ಲ
ಈಗ ತುಂಬಾ
ಮುಂದೆ ಹೋಗಿಯಾಗಿದೆ
ನರಜನ್ಮದ ಕಬಂಧ ಬಾಹುಗಳು
ಯಾರು
ಯಾರನ್ನಾದರೂ ಹೇಗೆಯಾದರೂ
ಎಲ್ಲಿಯಾದರೂ
ಕೊಚ್ಚಿ ಇಲ್ಲವಾಗಿಸಿಬಿಡುತ್ತೇವೆ
ಹೌದು
ಮೊದಲು ಆ ಮನುಷ್ಯತ್ವ
ಎಂಬುದನ್ನೇ
ಕೊಂದು ಹಾಕಿದ್ದೇವೆ
ಈಗೇನು
ಮನುಷ್ಯ ಮಾನವ ಎಂದೆಲ್ಲಾ
ಅನ್ನದಿದ್ದರೆ.....
who cares
ರಕ್ತ ಕೆಂಪಗೂ ಇದೆ
ತಂಪಾಗೂ ಇದೆ!

ಅಹವಾಲು!

ಪಟ್ಟಿಯಲ್ಲಿರುವ
ಸಾಲು ಸಾಲು
ಗೆಳೆಯರಲ್ಲಿ
ನನ್ನದೊಂದು ಪುಟ್ತ
ಅಹವಾಲು!
ದಿನಕ್ಕೊಮ್ಮೆ
ನೋಡಬಾರದೇಕೆ
ನನ್ನ ಈ wallಉ?
ಒಂದಾದರೂ ಸಿಗಬಹುದು
ಒಳ್ಳೆಯ ಸಾಲು
ಬೇಡವಾ? ಬಿಡಿ ನನಗೆ
ಅದು ಮಾಮೂಲು!

ಅಳಿಸುವುದು

ಅಳಿಸುವುದು ಸುಲಭ
ಗೆಳೆಯಾ
ಕೆನ್ನೆಮೇಲಿನ
ಕಂಬನಿಯ ಕಲೆ
ಅಳಿಸಲಾರೆ 
ಘಾಸಿಗೊಂಡ
ಹೃದಯದ ಕಲೆ!

ಲೇಖನಿ

ಅಂದು ಬರೆವವರ
ಲೇಖನಿಗಿತ್ತು ವಿಷ ಕಕ್ಕದೆ
ಸಮಾಜ ತಿದ್ದುವ 
ಶಕ್ತಿ 
ಇಂದು ಮಸಿ ಮುಖಕೆ
ಲೇಖನಿಯಲಿ ವಿಷ
ಹಿಂತಿರುಗಿಸುತ್ತಿದ್ದಾರೆ
ಪ್ರಶಸ್ತಿ!