Tuesday, 29 September 2020

ಆಯುಧಪೂಜೆ

 ಆಯುಧಪೂಜೆ

ಇಲ್ಲ ಗುಂಡಿಯ

ಪಾಲಿಗೆ....

ಏಕೆಂದರೆ ಅವಳ

ಏಕೈಕ ಆಯುಧ

ನಾಲಿಗೆ!

ಗೋಹತ್ಯೆ

 

ಕಾನೂನಿರಲಿಲ್ಲ
ಆದರೂ ಪುಣ್ಯಕೋಟಿಗೊಂದು
ಅವಕಾಶ ಕೊಟ್ಟಿತ್ತು
ಅಂದು ಹುಲಿ...
ಕಾನೂನಿದ್ದರೂ
ಅದರ ದೃಷ್ಟಿಯನು ದಾಟಿ
ಹಸುಗಳು ಆಗುತ್ತವೆ
ಇಂದು ಬಲಿ!

Tuesday, 25 August 2020

ಕುಚೇಲ

 ಕೃಷ್ಣನಂತ

ಗೆಳೆಯನ ಪಡೆಯಲು
ಅವ lucky...

ಅದಕೇ ಇರಬೇಕು
ಗೆಳೆಯನಿಗೆ ತಂದ
ಅವಲಕ್ಕಿ!

ಚೋರ್ ಮಚಾಯೇ ಶೋರ್

 'ಚೋರ್ ಮಚಾಯೇ ಶೋರ್' ಚಿತ್ರದ ಈ ಕಾಡುವ ಗೀತೆಯ ಅನುವಾದದ ಪ್ರಯತ್ನ!

ghunghroo ki tarah....
ಗೆಜ್ಜೆಯಂತೆ ದನಿಸುತ್ತಲೇ ಇದ್ದೆ ನಾ
ಒಮ್ಮೆ ಈ ಕಾಲಲಿ ಒಮ್ಮೆ ಆ ಕಾಲಲಿ
ಬಂಧಿಯಾಗುತ್ತಲೇ ಇದ್ದೆ ನಾ!
ಒಮ್ಮೆ ಒಡೆದುಬಿದ್ದೆ ಒಮ್ಮೆ ಒಡೆದುಹಾಕಿದರು
ನೂರು ಬಾರಿ ನನ್ನ ಮತ್ತೆ ಜೋಡಿಸಿದರು
ಹೀಗೇ ಹಾಳಾಗುತ ಹೀಗೇ ಬೀಳಾಗುತಾ
ಮತ್ತೆ ಹುಟ್ಟುತ್ತಲಿದ್ದೆ ನಾ!
ಬೇರೆಯವರ ನುಡಿಯ ನಾ ಪಾಲಿಸುತ್ತಾ
ನನ್ನ ಮಾತನು ನಾ ಒಳಗೇ ಅದುಮುತಾ
ಒಮ್ಮೆ ಗುಡಿಯಲ್ಲಿ ಒಮ್ಮೆ ಚಾವಡಿಯಲ್ಲಿ
ಅಣಿಯಾಗುತ್ತಲಿದ್ದೆ ನಾ!
ನಮ್ಮವರಲ್ಲೋ ಬೇರೆಯವರಲ್ಲೋ
ಗೆಜ್ಜೆಯ ಇರವಂತೂ ಕಾಲಲ್ಲೇ
ಮತ್ತೇಕೆ ಚಿಂತೆ ಜಗ ಕೊಟ್ಟದ್ದೇ
ಸಹಿಸುತ್ತಲೇ ಇರುವೆ ನಾ!

Wednesday, 22 April 2020

ಸಾವು

ಸುತ್ತ ನೆರೆದವರ ದಿಟ್ಟಿಸಿದೆನೊಮ್ಮೆ
ಎತ್ತಣಿಂದಿವರೆಲ್ಲ ಜೊತೆಯಾದರೆನಗೆ?
ಕಿತ್ತು ಹೋಗದೆ ಉಳಿದ ಬಂಧುಗಳು
ಸತ್ತ ಮೇಲೆ ನನ್ನವರ ನೆನೆವರೇನು?
ಆಗೊಮ್ಮೆ ಈಗೊಮ್ಮೆ ಬೆರೆತಿದ್ದು ನಿಜ
ಸೋಗಿನ ಮಾತುಗಳ ವಿನಿಮಯವಿತ್ತು
ನಗು ಅಳುಗಳ ನಕಲು ಎಲ್ಲರೊಡನೆ
ಬಿಗುಮಾನದ ಗತ್ತು ಅಗಲುವ ಕ್ಷಣಕೆ
ಬದುಕಿನುದ್ದಕ್ಕೂ ನನ್ನದ ನನ್ನದಲ್ಲದ
ಹದಕೆ ಹದವಿಟ್ಟ ಅದೆಷ್ಟು ಕ್ಷಣಗಳು
ಮೃದು ಮಧುರ ಭಾವಗಳ ಜೊತೆಗೆ
ಎದುರಾದ ನೂರಾರು ಕಠೋರತೆಗಳು
ನಾನು ನನಗೆ ನನ್ನಿಂದ ನನಗಾಗಿ
ಏನೆಲ್ಲ ಪಡೆದೆ ಬಿಡದೆ ಕೊಡುವಾಗ
'ನಾನು' ಮೈಗಂಟಿಕೊಂಡ ಹಾಗೆ
ಕನಸಿನಲು ನನ್ನ ವಿಜೃಂಭಿಸುತಿದ್ದೆ
ಈಗ ನಿಚ್ಚಳ ಸಾಯುವ ಕಣ್ಮುಂದೆ
ಜಾಗ ಎನಗಿಲ್ಲ ಇನ್ನು ಬದುಕಲು ಇಲ್ಲಿ
ಬೇಗ ಬಂದುಬಿಡಲಿ ಸಾವಿನ ಆ ಕರೆ
ಸಾಗಬೇಕಿದೆ ದೂರದ ಒಂಟಿಪಯಣ!
ಬೇಗ ಬಂದುಬಿಡಲಿ ಸಾವಿನ ಆ ಕರೆ
ಸಾಗಬೇಕಿದೆ ದೂರದ ಒಂಟಿಪಯಣ!!
------ ತಲಕಾಡು ಶ್ರೀನಿಧಿ

Friday, 27 March 2020

ಮನೆಯ ಪಕ್ಕ

ಮನೆಯ ಪಕ್ಕ ವರ್ಷಗಳಿಂದ
ಇರುವ ಈ ಬೃಹತ್ತಾದ ಮರ
ನಮಗೆ ಅಂದಿನಿಂದ ಬಯಸದೇ
ದೊರೆತಿರುವ ದೊಡ್ಡದೊಂದು ವರ.

ಈ ಪುಟ್ಟ ಮನೆಯ ತಣ್ಣಗಾಗಿಸುತ
ಕಾಡುವ ಪ್ರತಿ ಸುಡುಬೇಸಿಗೆಯಲ್ಲಿ
ಹದ್ದು, ಕೋಗಿಲೆ, ಕಾಗೆಗಳಂತೆ
ಅಳಿಲು ಕೂಡ ಕ್ಷೇಮ ವಾಸಿಯಿಲ್ಲಿ.

ರಸ್ತೆಯಗಲವ ದಾಟಿ ಹರಡಿದೆ
ಈ ದೊಡ್ಡ ಮರದ ನೆರಳು
ಕತ್ತಲಾವರಿಸಿದಾಗ ನೋಡಲು
ಇದು ಲಲನೆಯೊಬ್ಬಳ ಹೆರಳು!

ಬಲಹೀನ ಮರಿ ಟೊಂಗೆಗಳು
ಆಗೀಗ ಮುರಿದು ಬೀಳುತ್ತವೆ ನಿಜ
ಬಳಲಿದ  ಜಾನುವಾರುಗಳಿಗಿದು
ಸಾಂತ್ವನದ ತಂಗುದಾಣವೂ ನಿಜ.

ಬೆಳಗಿನಿಂದ ಕೇಳುತಲಿರುವ
ಇಲ್ಲಿನ ಪುಟ್ಟ ಹಕ್ಕಿಗಳ ಚಿಲಿಪಿಲಿ
ಮರೆಸುವುದು ಖಂಡಿತ ಜನಗಳ
ಹೊರಗಿನ ಅನವಶ್ಯ ಗಲಿಬಿಲಿ!! 

Saturday, 14 March 2020

ಮಾರು ದೂರ

ಸರಳತೆಯ
ಮಾತಿಗೆ
ಮಾರು
ಹೋದೆ...
ಮಾತು
ಸರಳತೆಗೆ
ದೂರ
ಹೋದಾಗ
ಮಾರು
ದೂರ
ಹೋದೆ!

Monday, 9 March 2020

ಸಂವಾದ


  
ಈವರೆಗೆ
ಇತ್ತು ನಿನ್ನ
ಮಾತುಗಳ
ವರದಿ.....
ಈಗ
ಇದೋ ನನ್ನ
ಮೌನದ
ಸರದಿ!!

ಹನಿಗವನ

ಹನಿಗವನ
ಬರೆಯಲು ಈಗ
ಬೇಕಿಲ್ಲ
penಉ.....
ಆದರೂ
ಓದಿಸಿಕೊಳ್ಳಲು
ಇರಬೇಕು
punಉ..
ಹೌದು
ಹಾಗೇ
ಸ್ವಲ್ಪ
funಉ!

ಸೂರ್ಯನಮಸ್ಕಾರ

ವಿಜ್ಞಾನ ಹೇಳುವ
ನಿನ್ನ ಸುತ್ತ ಭೂಮಿ...
ಅದರ ಸುತ್ತ ಚಂದ್ರ
ಸುತ್ತುವ ಕಥೆಯೆಲ್ಲಾ
ನಾ ನಂಬುವುದಿಲ್ಲ ಬಿಡು.
ಸಮುದ್ರದಲ್ಲಿ
ನೆನ್ನೆ ಮುಳುಗಿದವ
ಎರಡು ಬೆಟ್ಟಗಳ
ನಡುವೆ ಅರ್ಧ ಕಂಡು
ಮೇಲೆದ್ದ ನೀನು
ನನಗೊಬ್ಬ
ದೇವರೇ ಸರಿ.
ಹೇ ಚೇತೋಹಾರಿ ನಿನಗೆ ವಂದನೆ.