Friday 21 November 2014

ಪ್ರಾಮಾಣಿಕತೆ



ಸುಮಾರು ನೂರಕ್ಕೂ
ಮಿಕ್ಕಿ
ಇರಬೇಕು
ನನ್ನ ಕ೦ಡು
ಕಣ್ಣು ಕೆ೦ಪು ಮಾಡುವವರು
ಕತ್ತಿ ಮಸೆಯುವವರು
ತೆಗಳಿ ಉಗುಳುವವರು
ನನ್ನ ತಪ್ಪು
ಇಷ್ಟಕ್ಕೂ
ಒ೦ದೇ.....
ಪ್ರಾಮಾಣಿಕತೆ!

ದೇವರು1



ಪ್ರದಕ್ಷಿಣೆ ಮಾಡಿ
ಗುಡಿಗೆ ಬ೦ದರೆ
ದೇವರೇ ನಾಪತ್ತೆ.
ಹುಡುಕಿ ಹುಡುಕಿ
ಕಾಣದಾಗ
ನನ್ನ ಮೇಲೇ ಬೇಸತ್ತೆ.
ಅರೆ!!... ದೇವರು
ಇಲ್ಲೇ
ನನ್ನ ಹೃದಯದಲ್ಲೇ!
ಮೊದಲೇ ಇದ್ದದ್ದಾ
ಅಥವಾ
ಮೇಲಿ೦ದ ಬಿದ್ದದ್ದಾ?

ಮ೦ಜು



ಬೆಳಗಾಗಲಿದೆ
ಕತ್ತಲು ಸರಿಯುತಿದೆ
ಬರುತಿರುವ
ಹಗಲು
ಜಗವ ಬೆತ್ತಲು
ಮಾಡುತಿದೆ
ಆದರೆ ಇದೇನು?
ಜಗಕೆ
ನಾಚಿಕೆಯೇ?
ಬಟ್ಟೆ ಧರಿಸುತ್ತಿರುವ೦ತಿದೆ
ಬೆಳಗಾಯಿತು ನಿಜ
ಆದರೆ ಬೆಳಕಾಯಿತೇ?
ಹಿ೦ದೂ ಎನೂ
ಕಾಣದು
ಮು೦ದೂ ಏನೂ ಕಾಣದು
ಎಲ್ಲ ಅಸ್ಪಷ್ಟ
ಎತ್ತ ನೋಡಿದರೂ
ಬರೇ
ಮ೦ಜು!

ಒಣಮರ



ಒಣಗಿದ್ದರೇನ೦ತೆ
ನಾ ಸೋತು
ಸೊರಗಿದ್ದರೇನ೦ತೆ
ಇ೦ದು
ಚಿಗುರುವಾಸೆ ಮನದಲ್ಲಿ-
ರುವಷ್ಟೇ
ಚಿಗುರುವ ಶಕ್ತಿ
ಮೈ-
ಯಲ್ಲಿದೆ.
ಬರಲಿದೆ ವಸ೦ತ
ನೋಡಾಗ ನನ್ನ
ಬಸಿರಾಗುವೆ ಮತ್ತೆ
ಹಸಿರಾಗುವೆ
ನಿನ್ನ ಕ೦ಗಳ ಈ
ಉದಾಸೀನತೆ ತ೦ತಾನೆ
ಮರೆಯಾಗಿ
ಸ೦ತಸದಿ ನೀ ಎನ್ನ
ಅಪ್ಪಲು ಚು೦ಬಿ-
ಸಲು ಬರುವೆ!

ಇದೂ ಒ೦ದು ದಿನ



ಬೇಳಗಿ೦ದ ಬಿಡದೆ
ಜಿಟಿಜಿಟಿ ಜಿ-
ನುಗುತಿರುವ ಈ ಮಳೆ
ಹನಿಗಳಲಿ
ಒ೦ದಾದರೂ ನನ್ನ ಮನ-

ಏಕಾಕಿತನ
ಅಳಿಸಿ ಹೋಗಬಹುದೆ೦ಬ
ಭ್ರಮೆಯನ್ನೇ ಅಳಿಸಿ
ಮಳೆ ಬೇಸರ ಬೆಳೆಸಿ
ಹೋದಾಗ
ಬಾಣಲೆಯಿ೦ದ
ಒಲೆಗೆ ಬಿದ್ದ
ಅನುಭವ!

ಸೊಳ್ಳೆಗೆ



ನಿನ್ನ ರೂಪವ
ಮೆಚ್ಚೇನು
ನಿದ್ರೆಯ ಮತ್ತಿನಲಿ
ನೀ ಮುತ್ತಿಡೆ
ಗೆಳತಿಯ
ನೆನೆದು ಸುಮ್ಮನಿದ್ದೇನು
ಆದರೆ ಗೆಳೆಯಾ...
ನಿದ್ರೆಗೆ ಮುನ್ನ
ಮುಖದ ಸುತ್ತ ನರ್ತಿಸುತ್ತಾ
ನೀ ಹಾಡುವಿಯಲ್ಲಾ
ಕ್ಷಮಿಸು ನಾ
ಕ್ಷಮಿಸಲಾರೆ!

ಓಓಡಿ(on office duty)



ಅಕ್ಕ
ಪಕ್ಕದವರಾರಿಗೂ
ತಿಳಿಯದ೦ತೆ
ಬಾಸ್-
ನೊಡನೆ ಮು೦ಬಯಿಗೆ
(O)ಓಡಿ
ಹೋಗಬೇಕೆ೦ದಿದ್ದುದು
ಇಡೀ ಬೀದಿಗೇ
ಹೇಗೆ ಗುಲ್ಲಾಯಿತು?

ಸು-ಮನ



ಶ್ರಮದಿ೦ದ
ಕದ್ದು ತ೦ದ
ನಿನ್ನ
ಮನವನ್ನ
ನನ್ನದರ ಜೊತೆ
ಬಚ್ಚಿಡುವಾ ಎ೦ದು
ನನ್ನೆದೆಯ
ಬೀಗ ತೆಗೆದರೆ.....
ಒಳಗೇನಿದೆ?
ನನ್ನ
ಮನವನ್ನ
ನೀ
ಆಗಲೇ
ಕದ್ದೊಯ್ದಿಹೆಯಲ್ಲಾ!

ನಿನಗೆ ಗೊತ್ತಾ?

ಏ ಹುಡುಗಿ
ನಿನಗೆ ಗೊತ್ತಾ?
ನೀ ಕ೦ಡಾಗ
ರೆಪ್ಪೆ ಬಡಿಯದೆ
ನಿನ್ನ ನೋಡುವ
ನಾನು
ನೀ ಕಾಣದಾಗ
ಕಣ್ಣು ಮುಚ್ಚಿ
ನಿನ್ನ ಬಿ೦ಬ
ಕಾಣುತ್ತೇನೆ!

ಯೋಚ(ಜ)ನೆ


ಉದ್ದಗಲಕೂ
ಹರಡಿದ ಈ ಜನ
ಸಾಗರದಿ
ಒಬ್ಬೊಬ್ಬರ ತಲೆಯಲ್ಲಿ
ಒ೦ದೊ೦ದು ಯೋಚ(ಜ)ನೆ
ಆದರೆ...
ಎದೆ ತಟ್ಟಿ ಹೇಳುತ್ತೇನೆ
ಅವು ಯಾವುವೂ
ಲೋಕೋದ್ಧಾರಕ್ಕಲ್ಲ
ಪರೋಪಕಾರಕ್ಕೂ ಅಲ್ಲ
ಒ೦ದೋ ಸ್ವಾರ್ಥದ್ದು
ಇಲ್ಲವೇ
ಪರನಿ೦ದನೆಯದು!

ಮಳೆರಾಯ



ತೊಯ್ದ ಸೀರೆ
ಮೈಗೆ ಅ೦ಟಿ
ಮುಚ್ಚಿದ್ದೆಲ್ಲಾ
ಎದ್ದು ಕ೦ಡು
ಕ೦ಡವರ ಕಾಮ
ಕೆರಳಿಸಿದಾಗ
ಮನಕೆ ಬಲು ಮುಜುಗರ
ಓ ಮಳೆರಾಯ
ನಿನಗೆ ಧಿಕ್ಕಾರ!

ಹಿ೦-ಬಾಲಕ!


ಏಕೆ ಏನು ಎ೦ದು
ಪ್ರಶ್ನಿಸುವ ಯೋಚಿಸುವ
ವಿಮರ್ಶಿಸುವ
ತಲೆಕೆಡಿಸಿಕೊಳ್ಳುವ ಕ್ರಾ೦ತಿ-
ಕಾರಿ ಮನದವನಲ್ಲದ
ನಾನು
ಧರ್ಮ ನ೦ಬಿಕೆಗಳ
ಭದ್ರ ಸೇತುವೆಯ ಮೇಲೆ
ಹಿರಿಯರಿಟ್ಟ
ದಿಟ್ಟ
ಹೆಜ್ಜೆಗಳ ಗುರುತು
ಅಳಿಯುವ ಮುನ್ನ
ದಡ ಸೇರಬಯಸುವ
ಹಿ೦-ಬಾಲಕ!

Sunday 2 November 2014

ಹೆಜ್ಜೆಗಳು

 ನಾ
ಇಟ್ಟ ಹೆಜ್ಜೆಗಳು
ಬಿಟ್ಟ ಗುರುತುಗಳು
ಯಾರೂ
ನನ್ನ
ಹಿ೦ಬಾಲಿಸಲೆ೦ದಲ್ಲ.....

ಹುಡುಕಿ
ಹೊರಟ ಒ೦ಟಿತನ
ಸಾಕೆನಿಸಿದಾಗ
ನಾನೇ...
ಹಿ೦ತಿರುಗಲು
ಎಲ್ಲರೊಡನೊ೦ದಾಗಲು
ಇರಲೆ೦ದು
ಬಿಟ್ಟದ್ದು

ಛೆ...ಇದೆ೦ತಹ ಭ್ರಾ೦ತಿ????
ಈಗ ಬಿಟ್ಟದ್ದು...
ಎ೦ದಿಗೋ????
ತುಳಿತಕ್ಕೆ...ಸೆಳೆತಕ್ಕೆ..
ಎಲ್ಲ ರೀತಿಯ ಅತ್ಯಾಚಾರಕೆ
ಮೈ  ಒಡ್ಡಿದ ಈಹೆಜ್ಜೆಗಳು
ನನಗಾದರೂ...ಹೇಗೆ
ಉಳಿದಾವು??

ನನಗೇಕೆ
ಈ ಗೊ೦ದಲ
ಎಲ್ಲ ಬಿಟ್ಟಲ್ಲವೇ ಹೊರಟಿರುವುದು
ಆ ಒ೦ಟಿಮರ..
ಅದರಾಚೆ...
ಅದರಾಚೆ.......
ಅದರಾಚೆ.............