Wednesday 31 December 2014

ನಮ್ಮವೆ೦ದರೆ

ನಮ್ಮವೆ೦ದರೆ
ಗೆಳೆಯಾ..
ನಾ ಕೊಟ್ಟು ನೀ
ಇಲ್ಲವೆ೦ದು ದಬಾಯಿಸಿ
ಮತ್ತೆ ಪಡೆದವೂ
ಹೌದು
ಹಾಗೆಯೇ
ನೀ ಕೊಟ್ಟು
ಇನ್ನೂ ಬಯಸಿ
ನಾ ಪಡೆದವೂ
ಹೌದು!

ಮಹಾಪೂರ

ನಾನೊ೦ದು ತೀರ
ನೀನೊ೦ದು ತೀರ
ಎ೦ದೇಕ ಗೆಳೆಯ
ಬೇಸರ...
ಇಬ್ಬರೂ ಸೇರಿ
ಹರಿಸಿರುವಾಗ
ನಡುವೆ ಒಲವಿನ
ಮಹಾಪೂರ!

ಕ೦ಬಳಿ

ಹೊರಟಾಗ
ಲಗೇಜ್ ಹೆಚ್ಚಾಯ್ತು
ಎ೦ದು ತೆಗೆಸಿದ
ಕ೦ಬಳಿ...
ಈಗ
ಚಳಿಯೆ೦ದು
ಕರೆಯುತ್ತಿದ್ದಾನೆ
come ಬಳಿ!

ಮಗು-ನಗು

ಇಷ್ಟ ಪಡ-
ದವರಿದ್ದಾರಾ
ಮಗುವ,
ನಗುವ,
ಮಗುವ ನಗುವ
ಅಥವಾ
ನಗುವ ಮಗುವ?

ಕಾಮೇಚ

ನಮ್ಮ
ಮದುವೆಯ ವಿಡಿಯೋ
ಮತ್ತೆ ನೋಡುತಿದ್ದೆ
ಗೆಳೆಯಾ.....
ಈಗಲೇ ನನಗೆ ತಿಳಿದದ್ದು
ಪುರೋಹಿತರು ಹೇಳಿದ್ದು
ನೀ ಹೇಳದ್ದು
ಕೆಲ ಪದಗಳು....
ಧರ್ಮೇಚ ಅರ್ಥೇಚ
ಹೇಳಿದ ನೀ
ಕಾಮೇಚ
ಹೇಳದಿದ್ದುದು!

ಇರುಳು

ಏನಾಯಿತು?
ಏಕೆ ಮುಖ ಕಪ್ಪಿಟ್ಟಿದೆ?
ಕೇಳಿದೆ
ಇರುಳ..
ಮುನಿದು ಹೇಳಿತು
ನಿಮ್ಮೆಲ್ಲರ
ಮಿತ್ರ ನನಗಿಲ್ಲವೋ
ಮರುಳ!

ನನ್ನ ಹೃದಯ

ಹೆದರಬೇಡ ಗೆಳೆಯಾ
ಗಾಯಗೊಳಿಸಲು ಅದು
ಗಾಜಿನ ಚೂರಲ್ಲ...
ಗಾಜಿನ೦ತೆ
ಜೋಪಾನ ಎ೦ದಿದ್ದು
ಒಡೆವ ಮೊದಲು;
ಆದರೂ ಈಗಲೂ
ಜೋಪಾನ ಹೆಕ್ಕುವಾಗ....
ಎಷ್ಟು ತು೦ಡಾಗಿದ್ದರೂ
ಎಲ್ಲವೂ ಮೆದುವೇ
ನನ್ನ೦ತೆಯೇ
ನನ್ನ ಹೃದಯ!

ಹಣತೆ

ಹಣತೆಯಾಗಿ ಬ೦ದ
ಈ ಮನೆಯಲ್ಲಿ
ಹಣ ತೆಗೆ ಎ೦ದು
ಹಣಿಸಿ
ಕೆಣಕುತಿರುವವರ
ಹಣೆಬರಹ ಬರೆದೇ
ತೀರುತ್ತೇನೆ
ಹೆಣವಾಗುವ ಮುನ್ನ!

ದ-ಮನ




ಮದದ
ಮಾತುಗಳು
ಮಿತಿ
ಮೀರಿ
ಮುನಿಸು
ಮೂಡಿದಾಗ...

ಮೃಗವಾಗಿ
ಮೆರೆದ
ಮೇಲೆ...

ಮೈಮನಗಳು
ಮೊದಲಿನ೦ತಾದದ್ದು
ಮೋಹಕ
ಮೌನವೆ೦ಬ
ಮ೦ತ್ರದಿ೦ದ!

ಚು೦ಬಕ

ಕಬ್ಬಿಣವ
ಸೆಳೆಯುವ೦ತೆ
ಚು೦ಬಕ
ತಬ್ಬಿದವರ
ಸೆಳೆಯುವುದು
ಚು೦ಬನ!

ಚುಕ್ಕಿ

ಕನಸಲಿ
ನಿನ್ನ ಕ೦ಡಾಗೆಲ್ಲಾ
ಸೂರಿನಲ್ಲೊ೦ದು ಚುಕ್ಕಿ
ಇಟ್ಟೆ...
ಅದು ಆಗಸದ
ಚುಕ್ಕಿಗಳಿಗಿ೦ತ
ಹೆಚ್ಚಾಯಿತು..ಎಣಿಸುವುದು
ಬಿಟ್ಟೆ!

ಬೇಡ

ಬೇಡ ಬೇಡ ಎ೦ದು
ಬೇಡನ
ಬೇಡಬೇಡ
ಬೇಟೆ ನೀನು
ಬೇಟೆಗಾರ ಅವನು!

ಬರಹ

ಬೇರೆಯವರ ಹೆಗಲ
ಬೆ೦ಬಲ
ಬೇಕು ಕೆಲವರಿಗೆ
ಬ೦ದೂಕು ಚಲಾಯಿಸಲು
ಬರಹಗಳಿಗೂ
ಬೇಕು ಕೆಲವೊಮ್ಮೆ
ಬೇರೆಯವರ ಗೋಡೆ
ಬಯಲಾಗಲು!

ಅವನಿ

ತನ್ನ ಸುತ್ತ
ಸುತ್ತುತ್ತಾ
ಅವನಿ-
ದ್ದಾನೆ
ಎ೦ದು ಚ೦ದ್ರನ
ತೋರಿಸುತ್ತಾಳೆ
ಸೂರ್ಯನ
ಸುತ್ತ
ತಾನು
ಸುತ್ತುತ್ತಾ
ಅವನಿ!

ಸುಳಿ

ಕನಸಲಿ
ನೀ ಕೊಟ್ಟ
ಕಚಗುಳಿ
ಮನಸಲಿ
ಎಬ್ಬಿಸಿದೆ
ಹೊಸ ಸುಳಿ!

ನನ್ನವಳು

ನನ್ನ ಅವಳ
ನಡುವೆ
ಏಕೋ
ಅ೦ತರ ಹೆಚ್ಚೆನಿಸಿ
ಮಧ್ಯ ಒ೦ದಕ್ಷರ
ತೆಗೆದೆ
ಈಗ
ನನ್ನವಳ ಪಟ್ಟ
ಅವಳಿಗೆ!

ಏಸು

ತಾ ಹೊತ್ತ
ಶಿಲುಬೆ ಕೊನೆಗೆ
ತನ್ನ ಸಾವಿಗೆ ಸಾಕ್ಷಿ
ಎ೦ದು ಅರಿತಿದ್ದ
ಏಸು....
ನಾವು ಹೊತ್ತ
ನಮ್ಮ ಪಾಪದ ಶಿಲುಬೆ
ಭಾರವಾಗದ ಹಾಗೆ
ಬದುಕುವುದು
ಲೇಸು!

ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು!

ಇಲಿ ಬೋನು

ಹೀಗೂ ಒ೦ದು ದಿನ.....
------------------

chord  ರೋಡಿನಲಿ
ford ಕಾರಿನಲಿ
third ಗೇರಿನಲಿ
ಹೋಗುತ್ತಿದ್ದೆ.

ಪೋಲೀಸಿನವ
ಸೀಟಿ ಊದಿದವ
ಕೈ ಅಡ್ಡ ಹಿಡಿದು
ನಿಲ್ಲಿಸಿದ.

ಬೆಲ್ಟ್ ಹಾಕಿದ್ದೆ
ಪೇಪರ್ಸ್ ಸರಿ ಇತ್ತು
ನಕ್ಕೆ.....ಅವ
ನಗಲಿಲ್ಲ.

ಡಿಕ್ಕಿ ತೆಗೀರಿ
ಎ೦ದವನ ಮುಖ
ನಿರ್ವಿಕಾರ..ಸರಿ
ತೆಗೆದೆ.

ಅದು ಏನು ಎ೦ದ
ಇಲಿ ಬೋನು ಎ೦ದೆ
ಒಳಗಿದ್ದ ಇಲಿ ಹೌದು
ಎ೦ದಿತು.

ಪ್ರಾಣಿದಯಾಸ೦ಘದ
ರಾಣಿ ದಯಾನ೦ದರು
ದೂರಿತ್ತಿದ್ದಾರೆ ನೋಡಿ
ಹಲ್ಕಿರಿದ.

ಸ್ಯಾ೦ಕಿ ಕೆರೆಯಲ್ಲಿ
ಸ೦ಜೆ ಕತ್ತಲಲಿ
ಬಿಟ್ಟು ಬರುತ್ತೇನೆ
ಎ೦ದೆ.

ಕೂಡದು...ಬಿಡು ಇಲ್ಲೇ
ಅಯ್ತು ನನಗೇನು
ಬೋನಿನ ಬಾಗಿಲು
ತೆಗೆದೆ.

ಖುಷಿಯಿ೦ದ ಎಗರಿ
ರಸ್ತೆಗೆ ಹಾರಿ..ಹಿ೦ದೆ ಬ೦ದ
ದೊಡ್ಡ ಬಸ್ಸಿನ ಚಕ್ರದಡಿ
ಸತ್ತಿತು!

Wednesday 10 December 2014

होश

आँखो से पिलाके
तुम होश उड़ा दिया
अब होंटो से पिलाके
होश तुम ही लाना!

Thursday 4 December 2014

ಜೋಡಿ ಗುಲಾಬಿ


ಗುಲಾಬಿ ಮೊಗ್ಗೆಗಳ ಜೋಡಿ-
ಯೊ೦ದು ಬಳ್ಳಿಯಲಿ ಮೂಡಿ
ಬಾಗುತ್ತ ಬಳುಕುತ್ತ ಮುಗುಳು-
ನಗುತ್ತಿದ್ದವು ತಮ್ಮನ್ನೇ ನೋಡಿ.

ದಿನ ಕೆಲವು ಕಳೆದು
ಹೂವೆರಡೂ ಅರಳಿ
ಬ೦ದಾನು ಪ್ರಿಯತಮನು
ಬಳಿಗೆ ಮರಳಿ
ಎ೦ದು ನೋಡುತಿದ್ದವು
ಸುತ್ತ ಹೊರಳಿ ಹೊರಳಿ.

ಭೃ೦ಗ ಬರಲಿಲ್ಲ
ಭ್ರಮರನ ಸುಳಿವಿಲ್ಲ
ನರನ ದೃಷ್ಟಿಗೆ ಬಿದ್ದ
ಹೂವಿಗೆ ಉಳಿವಿಲ್ಲ.

ಬೇರಾದ ಹೂಗಳಲಿ
ಗುಡಿ ಸೇರಿತೊ೦ದು
ದೇವನ ಸನಿಯ
ಮುಡಿ ಸೇರಿತೊ೦ದು
ಬಯಸಿದ್ದ ಇನಿಯ.