Wednesday, 22 April 2020

ಸಾವು

ಸುತ್ತ ನೆರೆದವರ ದಿಟ್ಟಿಸಿದೆನೊಮ್ಮೆ
ಎತ್ತಣಿಂದಿವರೆಲ್ಲ ಜೊತೆಯಾದರೆನಗೆ?
ಕಿತ್ತು ಹೋಗದೆ ಉಳಿದ ಬಂಧುಗಳು
ಸತ್ತ ಮೇಲೆ ನನ್ನವರ ನೆನೆವರೇನು?
ಆಗೊಮ್ಮೆ ಈಗೊಮ್ಮೆ ಬೆರೆತಿದ್ದು ನಿಜ
ಸೋಗಿನ ಮಾತುಗಳ ವಿನಿಮಯವಿತ್ತು
ನಗು ಅಳುಗಳ ನಕಲು ಎಲ್ಲರೊಡನೆ
ಬಿಗುಮಾನದ ಗತ್ತು ಅಗಲುವ ಕ್ಷಣಕೆ
ಬದುಕಿನುದ್ದಕ್ಕೂ ನನ್ನದ ನನ್ನದಲ್ಲದ
ಹದಕೆ ಹದವಿಟ್ಟ ಅದೆಷ್ಟು ಕ್ಷಣಗಳು
ಮೃದು ಮಧುರ ಭಾವಗಳ ಜೊತೆಗೆ
ಎದುರಾದ ನೂರಾರು ಕಠೋರತೆಗಳು
ನಾನು ನನಗೆ ನನ್ನಿಂದ ನನಗಾಗಿ
ಏನೆಲ್ಲ ಪಡೆದೆ ಬಿಡದೆ ಕೊಡುವಾಗ
'ನಾನು' ಮೈಗಂಟಿಕೊಂಡ ಹಾಗೆ
ಕನಸಿನಲು ನನ್ನ ವಿಜೃಂಭಿಸುತಿದ್ದೆ
ಈಗ ನಿಚ್ಚಳ ಸಾಯುವ ಕಣ್ಮುಂದೆ
ಜಾಗ ಎನಗಿಲ್ಲ ಇನ್ನು ಬದುಕಲು ಇಲ್ಲಿ
ಬೇಗ ಬಂದುಬಿಡಲಿ ಸಾವಿನ ಆ ಕರೆ
ಸಾಗಬೇಕಿದೆ ದೂರದ ಒಂಟಿಪಯಣ!
ಬೇಗ ಬಂದುಬಿಡಲಿ ಸಾವಿನ ಆ ಕರೆ
ಸಾಗಬೇಕಿದೆ ದೂರದ ಒಂಟಿಪಯಣ!!
------ ತಲಕಾಡು ಶ್ರೀನಿಧಿ