Sunday, 21 March 2021

ಗುಬ್ಬಿ


ಕಾಗೆಯೂ ಗಿಣಿಯೂ
ಹದ್ದೂ ಬಂದಿವೆ ನೋಡ
ಬಂದವು ಮೈನಾ
ಬುಲ್ಬುಲ್ ಕೂಡ|
ಎಲ್ಲಿರುವೆ ನೀನು
ಬೇಗ ಬಾರೇ ಗುಬ್ಬಿ
ಕಾಯುತಿರುವೆ ನಾನು
ಆಡಲು ನಿನ್ನ ತಬ್ಬಿ|
ಬೂದು ಮೈಯಲಿ
ಕಣ್ಣು ಕಪ್ಪು ಚುಕ್ಕೆ
ದೇಹ ಪುಟ್ಟವಾದರೂ
ಗಟ್ಟಿ ನಿನ್ನ ರೆಕ್ಕೆ|
ಸಣ್ಣನೆ ದನಿಯು
ತಣ್ಣಗಿದೆ ಮೈ
ನಿಂತಲ್ಲಿ ನಿಲ್ಲದೆ
ಕುಣಿವೆ ಥೈಥೈ|
ಕಾಗೆ ಹದ್ದುಗಳ
ಓಡಿಸುವೆ ದೂರ
ಹೆದರದೆ ಈಗಲೇ
ನನ್ನೆಡೆ ಬಾರ||
- ತಲಕಾಡು ಶ್ರೀನಿಧಿ

Friday, 5 March 2021

ಬಿಕರಿ

 


(ಶ್ರೀ ಹರಿವಂಶರಾಯ್ ಬಚ್ಚನ್ ಅವರ ಒಂದು ಸುಂದರ ಕವನದ ಅನುವಾದದ ಪ್ರಯತ್ನ. )

ಇಲ್ಲಿ ಎಲ್ಲ ಬಿಕರಿಯಾಗುತ್ತದೆ
ಗೆಳೆಯಾ ಜಾಗರೂಕನಾಗಿರು
ಗಾಳಿಯನ್ನೂ ಬಲೂನಿನಲ್ಲಿ
ತುಂಬಿ ಮಾರಿಬಿಡುವರು|
ನಿಜ ಮಾರಾಟವಾಗುತ್ತದೆ, ಸುಳ್ಳು ಕೂಡ
ಕಥೆ ಕಟ್ಟಿ ಎಲ್ಲವನ್ನೂ ಮಾರಬಹುದಿಲ್ಲಿ
ಮೂರು ಲೋಕಗಳಲ್ಲು ಸಮೃದ್ಧವಾಗಿ
ಹರಡಿರುವ ನೀರೂ ದೊರೆವುದು ಬಾಟಲಿಯಲ್ಲಿ|
ಹೂವಿನಂತೆಂದೂ ಬದುಕದಿರಿಲ್ಲಿ
ಅರಳುತ್ತಿದ್ದಂತೆ ಬೇಗ ಉದುರಿಬಿಡುವೆ
ಸಾಧ್ಯವಾದರೆ ಶಿಲೆಯಾಗಿ ಬಾಳು
ಉಳಿಯ ಹೊಡೆತಕ್ಕೆ ದೇವನೇ ಆಗಿಬಿಡುವೆ||