Thursday, 23 June 2022

ಸಹಸ್ರ'ನಾಮ'

 

ಅಮ್ಮ ಬಹಳ ಕಟ್ಟುನಿಟ್ಟು. ಹಲ್ಲುಜ್ಜದೇ ಕಾಫಿ ಇಲ್ಲ ಸ್ನಾನ ಸಂಧ್ಯಾವಂದನೆ ಇಲ್ದೆ ತಿಂಡಿ ಇಲ್ಲ.ಸಂಜೆ ಸಂಧ್ಯಾವಂದನೆ ಸಹಸ್ರನಾಮ ಆದ್ಮೇಲಷ್ಟೇ ಊಟ. ತಿನ್ನೋದೇ ಆಟಕ್ಕೆ ಸಮನಾದ ಫೇವರೆಟ್ ನಮಗೆಲ್ಲ. ಅದಕ್ಕೆ ಎಲ್ಲ ನಿಯಮಪಾಲನೆ ಆಗ್ತಾನೇ ಇತ್ತು. ಸಂಧ್ಯಾವಂದನೆ ಓಕೆ. ಆದರೆ ಈ ಸಹಸ್ರನಾಮ ಎಷ್ಟೇ ವೇಗಾಗಿ ಹೇಳಿದ್ರೂ 25 ನಿಮಿಷ ಆಗ್ಬಿಡೋದು. ಕಡಿದು ಗುಡ್ಡೆ ಹಾಕೋದು ಏನೂ ಇಲ್ದಿದ್ರೂ ತಾಳ್ಮೆ ಇರ್ತಿರ್ಲಿಲ್ಲ. ಹಾಗೇ ಯೋಚಿಸ್ತಿದ್ದೆ ಕರೆದ್ರೆ ಓ ಅನ್ದೇ ಇರೋ ಈ ದೇವರಿಗೆ ಸಾವಿರ ಹೆಸರು ಬೇಕಿತ್ತಾ ಅಂತ. ಹೋಗ್ಲಿ ಲಕ್ಷ್ಮಿ ಅಷ್ಟೋತ್ತರದ ತರಹ 108ಕ್ಕೆ ನಿಲ್ಲಿಸಬಾರದಿತ್ತಾ?ಬೈಕೊಂಡೇ ಹೇಳ್ತಿದ್ರೂ ಅದರಲ್ಲಿ ಒಂದು ಸಾಲು ನನಗೆ ಭಾರಿ ಇಷ್ಟ. ಯಾವುದು ಹೇಳೀ? ಅದೇ 65ನೆ ಶ್ಲೋಕದ ಈ ಸಾಲು 'ಶ್ರೀದ: ಶ್ರೀಶ: ಶ್ರೀನಿವಾಸ: ಶ್ರೀನಿಧಿ ಶ್ರೀವಿಭಾವನ:'.ಯಾಕೆ ಗೊತ್ತಾಯ್ತಲ್ಲ. ಇನ್ನೊಂದು ಯೋಚನೆ ಬರೋದು ಆ ವಿಷ್ಣುಗೆ ನನ್ನ ಹೆಸರೂ ಇದೆ ಅಂದ ಮೇಲೆ ಅವನ ಎಲ್ಲಾ ಹೆಸರೂ ನನಗೂ ಇಟ್ಟ ಹಾಗೇ ಅಲ್ವಾ ಅಂತ.
ಇರಲಿ. ಆಸೆ ಇದ್ದರೆ ಸಾಕಾ? ಅಷ್ಟು ಅಲ್ಲದಿದ್ದರೂ ಕೆಲವಾದರೂ ಅಡ್ಡ ಹೆಸರುಗಳು ನನಗೆ ಬಿರುದು ಕೊಟ್ಟ ಹಾಗೇ ಅಂಟಿಕೊಂಡಿದ್ದಂತೂ ಹೌದು. ಯಾಕ್ ನಗ್ತೀರಾ? ನಿಮಗಿಲ್ವಾ? ನಿಮ್ಮ ಸುತ್ತ ನೋಡಿ ಹೇಳಿ ಯಾರಿಗಾದ್ರೂ ಒಂದೇ ಹೆಸರಿದೆಯಾ? ಮುದ್ದಿಗೆ ಪ್ರೀತಿಗೆ ಮೂದಲಿಕೆಗೆ ಅಸೂಯೆಗೆ ಹೀಗೆಲ್ಲ ಬೇರೆಯವರಿಗೆ ಹೆಸರಿಡುವುದು ನಮ್ಮೆಲ್ಲರ ಆಜನ್ಮ ಸಿದ್ಧ ಹಕ್ಕು ಅಲುವರಾ? ಇದು ಸ್ವಲ್ಪ ವಿವರವಾಗಿ ನೋಡೋಣ.
ಮೊಟಕು ಅಡ್ಡಹೆಸರಾಗೋದು ಬೇಡ ಅಂತಲೇ ತುಂಬಾ ಜನ ಎರಡಕ್ಷರದ ಹೆಸರೇ ಇಡ್ತಾರಲ್ವಾ. ಆದ್ರೂ ಆಮೇಲೆ ಅವರ ಬಾಯಲ್ಲೇ ಅದು ಒಂಚೂರು ಹ್ರ್ಸಸ್ವ ಅಥವಾ ಧೀರ್ಘ ಆಗಿ ಇನ್ನೊಂದು ಹೆಸರಂತೂ ಆಗಿರುತ್ತೆ.ಸ್ವಲ್ಪ್ ಉದ್ದನೆ ಹೆಸರುಗಳಾದರೆ ಸಾಮಾನ್ಯವಾಗಿ ಅದು ಇನಿಷಿಯಲ್ ಇಂದ ಮಾತ್ರ ಕರೆಯೋ ಹಾಗಾಗ್ತಿತ್ತು. ಇದು ನೋಡಿ. ನಾರಾಯಣ ಎನ್ನೋದು ನಾಣಿ ಆಗೋದೇ ಹೆಚ್ಚು. ಆದ್ರೂ ನಾರಿ ಅಗಿರೋದು ನೋಡಿದ್ದೀನಿ. ಶ್ರೀ ಇಂದ ಹೆಸರುಗಳೆಲ್ಲ ಬರೀ ಶ್ರೀ ಅಗಿರೋದು ಕಾಮನ್.
ಚೀದಿ ಚೀನಿ ಸೀನಾ ಶೀನ ಎಂದು ಶ್ರೀಧರ ಶ್ರೀನಿವಾಸ ಅವರುಗಳು ಹೆಸರಾಗ್ತಿದ್ದರು. ವೆಂಕಟೇಶ ಅನ್ನೋದು ವೆಂಕಿ ಬೆಂಕಿ(ಬಂಗಾಲಿಗಳ ಉಚ್ಛಾರಣೆ) ಅಲ್ಲದೆ ಟೇಶಿ ಆಗಿದ್ದೂ ಇದೆ. ಒಂದು ಮನೇಲಿ ಎಲ್ಲ ಮಕ್ಕಳಿಗೂ ಅವರ ಇನಿಷಿಯಲ್ ಹಿಡಿದೇ ಕರೆಯುತ್ತಿದ್ದುದೂ ಬಹಳ ಸಾಮಾನ್ಯ ಸಂಗತಿ. ನರಸಿಂಹ ನರಸಿ ಅಥವ ನಚ್ಚಿ ಆಗ್ತಿದ್ದ ಅಲ್ವಾ? ಸಿಂಹ ಸಿಮ್ ಕೂಡ ಆಗಬಹುದು.
ಶೇಷ ಇಂದ ಆರಂಭ ಆಗೋ ಹೆಸರಿನವರೆಲ್ಲ ಚೇಚಿ ಆದಂತೆ ಕೃಷ್ಣ ಇಂದ ಹೆಸರಿನವರು ಕಿಟ್ಟು ಕಿಟ್ಟಿ ಆಗ್ಬಿಟ್ಟರು. ಇದೆಲ್ಲಾ ನಮ್ ಕಾಲದ ಸಾಮಾನ್ಯ ಹೆಸರುಗಳು. ಅದೂ ಗಂಡಸರ ಹೆಸರು. ಇನ್ನು ಲೇಡೀಸ್ ಅಂದ್ರೆ ಜಯಶ್ರೀ ಜಯಲಕ್ಷ್ಮಿ ಎಲ್ಲ ಜಯ್ಯು ಆದ್ರೆ
ಪದ್ಮ ಇಂದ ಹೆಸರು ಬಂದ್ರೆ ಪಮ್ಮಿ ಪದ್ದಿ ಆನ್ನಿಸ್ಕೊಂಡ್ರು. ಇನ್ನು ಸರಸಿ ಅಂಡ್ರೆ ಸರಸ್ವತಿ ಲಚ್ಚಿ ಅಂದ್ರೆ ಲಕ್ಷ್ಮಿ. ನವೀನ ಹೆಸರುಗಳೂ ಈ ಭಾಗ್ಯದಿಂದ ಹೊರತಾಗಿಲ್ಲ. ಸ್ವಲ್ಪ ಅಂಗ್ರೇಜಿ ಮಾದರಿಯಲ್ಲಿ ಬದಲು ಕಂಡ ಹೆಸರುಗಳು ಇವೆ. ರೂಪ್ಸ್ ವಿದ್ಸ್
ಗೀತ್ಸ್ ಅಂತೆಲ್ಲ ಇದ್ದಾರೆ ಅಂತೀನಿ.ಮಗಳಿಗೇ ಶ್ರುತಿ ಅಂತ ಹೆಸರಿಟ್ಟೆ. ಅವಳು ಬರೀ ಶ್ರು ಅಥವಾ ಶ್ರುತ್ ಆಗಿದ್ದಾಳೆ.
ಇನ್ನು ಕೀಟಲೆ ಹುಡುಗಾಟದ ಅಡ್ಡಹೆಸರುಗಳು. ದಪ್ಪಗಿದ್ದರೆ ಡುಮ್ಮ, ಕುಂಬಳಕಾಯಿ ಸಣ್ಣಗಿದ್ದರೆ ಪೆನ್ಸಿಲ್, ಸ್ಕೇಲ್. ತಲೆ ತುಂಬಾ ಕೂದಲಿದ್ದರೆ ಸಾಯಿಬಾಬಾ ಕೂದಲೇ ಇಲ್ದಿದ್ದರೆ ಬಾಣಲೆ, ಮೊಟ್ಟೆ. ಕನ್ನಡಕ ಹಾಕಿದ್ರೆ ಸೋಡಾ ಜುಟ್ಟು ಬಿಟ್ಟಿದ್ರೆ ಕುಡುಮಿ ಅಥವಾ ಜುಟ್ಟುಪಿಳ್ಳೆ. ಇನ್ನೊಂದು ಅಡ್ಡಹೆಸರು ಪಡೆಯೋ ವರ್ಗ ಅಂದ್ರೆ ಮಾಸ್ತರರು. ಪಾಪ ಅದೇನೇನ್ ಹೆಸರೋ ಅವರಿಗೆ. ಸುಮ್ನೆ ಸ್ಯಾಂಪಲ್ ಒಬ್ಬ ಲೆಕ್ಚರರ್ಗೆ 'ಕೆ ಟು ದ ಪವರ್ ಆಫ್ ಫೈವ್' ಅನ್ನೋ ಅಡ್ಡಹೆಸರು. ಅದು ಹೇಗೆ ಅಂದ್ರಾ....ಕಪ್ಪು ಕನ್ನಡಕದ ಕಪ್ಪು ಕುಳ್ಳ ಕೃಷ್ಣಸ್ವಾಮಿ'. ಎಂಗೈತೆ? ನಮ್ಮಜ್ಜ ಈ ತರ ಹೆಸರಿಟ್ಟು ಕರೆಯೋದ್ರಲ್ಲಿ ಭಾರಿ. ಕೆಲವರ ಬಗ್ಯೆ ಸನ್ನೆ ಮಾಡಿ ಹೇಳ್ತಿದ್ದರು (ಅವರಿಗೆ ಕಿವಿ ಕೇಳ್ತಿರಲಿಲ್ಲ ಅದಕ್ಕೆ). ಉದಾ: ಡೂಪ್ಲೆ, ಜಲ್ಲೆಬೋರಿ, ಮೋಟುಪೂಚಿ, ಗಿಣಿಯ, ಮೂಗ್ರಾಣಿ, ಕೆಂಚಿ ,ಏರೋಪ್ಲೇನ್ ಇತ್ಯಾದಿ. ಈ ಏರೋಪ್ಲೇನ್ ವಾಯುಸೇನೆಲಿದ್ದ ಬಂಧುವೊಬ್ಬರಿಗೆ. ಆಮೇಲೆ ನಾವೆಲ್ಲ ಬೇರೆ ರೀತಿಯಲ್ಲಿ ಇನ್ನೊಬ್ಬರನ್ನು ಏರೋಪ್ಲೇನ್ ಅಂತಿದ್ವಿ ( ಪೋಲೀಸ್ ಟ್ರೀಟ್ಮೆಂಟ್). ಅದರಲ್ಲಿ ಮೋಟುಪೂಚಿ ಅಂದ್ರೆ ನನ್ನ ಅಡ್ದಹೆಸರೇ. ಯಾಕೆ ಬಂತು ಅಂತ ನೆನಪಿಲ್ಲ. ನನಗೆ ಬೇಸರವೇನೂ ಆಗ್ತಿರಲಿಲ್ಲ ಅವರು ಹಾಗೆ ಕರೆದರೆ. ಅದಲ್ಲದೆ ನನಗೆ ಚೊತ್ತ(ಕುಟ್ಟಿ) ಅಂತಿದ್ದರು ಎಡಗೈ ಮುಂದು ಅಂತ. ಟಿಕೆ ಅಂದ್ರೆ ತಲಕಾಡ್ ಕಪಿ ಅಂದವರೂ ಇದ್ದಾರೆ. ಇನ್ನು ಕುಳ್ಳ ಹೊಟ್ಟೆ ಡುಮ್ಮ ಅನ್ನೋ ಹೆಸರುಗಳು ನನ್ನ ಮೈಮಾಟಕ್ಕೆ ಸಿಕ್ಕವು. ನಿಧಿ ಅಂತ ಪ್ರೀತಿಯಿಂದ ಕರೆದವರು ಬಹಳ. ಒಬ್ಬ ಸಹೋದ್ಯೋಗಿ ರೊನಾಲ್ಡಿನೋ ಅಂತ ಕರೆದದ್ದು ನನಗೆ ಅರ್ಥವಾಗದ್ದು.
ಇನ್ನು ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಹೆಸರುಗಳು ಸಾಮಾನ್ಯವಾಗಿ ಎರಡು ಅಥವಾ ಮೂರು ತುಂಡುಗಳಾಗೇ ಇರುತ್ತವಲ್ಲ..... ಅದರಲ್ಲೇ ಒಂದನ್ನು ಕರೆಯುತ್ತಾರೆ ಅಲ್ವಾ? ಟೀಚರ್ ಎಲ್ಲರಿಗೂ ಇನಿಷಿಯಲ್ ಕರೆವುದು ಸಾರ್ವತ್ರಿಕ ಅಭ್ಯಾಸ. ರಾಜಕೀಯದಲ್ಲಿ
ಯಡ್ಡಿ ಸಿದ್ಧು ಕುಮಾರಣ್ಣ ರಾಗಾ ನಮೋ ಡಿಕೆಶಿ ಎಲ್ಲ ಅಡ್ಡಹೆಸರುಗಳೇ. ಪುರಾಣ ಸಾಕಾಯ್ತಾ?
ಮರೆತ ಮಾತು: ನನಗೆ ನೀವು ಯಾರಾದರೂ ಬೇರೆ ಹೆಸರಿಟ್ಟಿದ್ದರೆ ಬರೆದು ಕಳಿಸ್ತೀರಲ್ಲ. ತ್ಯಾಂಕ್ಸ್

Sunday, 19 June 2022

ಮನದ ಮಜಲುಗಳು

 ಅಲೆಯ ಮೇಲೆ

ತೇಲಿ ಬರುವ
ಎಲೆಯ ತೆರದಿ
ಅಲೆಯಬಯಸಿದೆ ಮನ.

ಬಳಿಗೆ ಬಂದು
ಹೊರಳಿ ಹೋಗುವ
ಮರುಳ ಅಲೆಯ ಹಾಗೆ
ಇರಲು ಬಯಸಿದೆ ಮನ.

ಗಾಳಿ ಬೀಸಲು
ಗೋಳಾಡುತ
ಸುಳಿಗೆ ಸಿಲುಕಿದಂತೆ
ಬಳಲಿ ಬೆಂದಿದೆ ಮನ.

ಬಿಸಿಲೇರಲು
ಹಸಿವಿನಲೆತ
ಉಸಿರ ಭಾರ ಹೆಚ್ಚಿ
ಬಸಿರ ಹೆಜ್ಜೆ ಇಟ್ಟಿದೆ ಮನ.

ದನಿಯಿಲ್ಲದ
ಮೌನದೊಡನೆ
ಮುನಿದು ಕುಳಿತು ತಾ
ನೆನೆದು ಬಿಕ್ಕಿದೆ ಮನ||

Sunday, 8 May 2022

ಸೋಲು

 ನಿನಗೆ ನಾನು ಸೋತಿದ್ದು

ಬೇಸರದ ಸಂಗತಿ ಅಲ್ಲ

ಪ್ರಿಯೆ.....


ಹೆಣ್ಣಿಗೆ ಗಂಡು ಸೋಲುವುದು

ವಿಶ್ವದಲ್ಲಿ ಬಹಳ ಸಹಜ

ಕ್ರಿಯೆ!

Saturday, 30 April 2022

ನಳ

 ಅವಳೆಂದಳು ಜಂಭದಿಂದ

'ನಿನಗೆ ಗೊತ್ತಾ ನನ್ನ 

ಭಾವ ನಳ'


ನಂಬಿಕೆ ಬರುತ್ತಿಲ್ಲ

ದಮಯಂತಿಯ ತಂಗಿ ಇದೇ

ಭಾವನಳಾ?

Monday, 25 April 2022

ಕೋಗಿಲೆ

    ಏಕತಾನತೆಯ

ಕುಹೂ ಬಿಟ್ಟು ಹಾಡಲಾರೆಯಾ
ಕೋಗಿಲೆ?
ಬೇಕಿದ್ರೆ ಕೇಳು
ಇಲ್ಲಾಂದ್ರೆ ಸುಮ್ಮನೆ ಆ ಕಡೆ
ಹೋಗೋ ಲೇ!
Jayashri Prakash, Lokesh Srikantaiah and 11 others
2 comments
Like
Comment
Share

ಕುರ್ಚಿ

 ರಾಜಕಾರಣಿ

ಅಂಟಿಕೊಂಡಿರಬೇಕೆಂದರೆ
ಕುರ್ಚಿಗೆ...
ಬೆಂಬಲಿಗರಿಗೆ
ಆಗಾಗ ಕೊಡುತಿರಬೇಕು
ಖರ್ಚಿಗೆ!

#ನೆರಳು


ನಾನಿಲ್ಲದೆ
ನೀನಿಲ್ಲವೆಂಬ ಅರಿವೇ
ಇಲ್ಲವೇ ನಿನಗೆ?
ನನಗಿಂತ ಬೆಳೆವ
ಉದ್ಧಟತನವೇ....
ನೆನಪಿರಲಿ ಇದು
ಆ ಉರಿವ ರವಿಯ ಭಿಕ್ಷೆ!
ಒಮ್ಮೆ ನಾ ಅವನೆಡೆ
ಮುಖ ಮಾಡಿ ನಡೆ-
ದರೆ ನೀ ನನ್ನತ್ತ
ನೋಡುವಂತೆಯೂ ಇಲ್ಲ!
ನನ್ನ ಬೆನ್ನ ಹಿಂದೆ
ಮುಖ ಮರೆಸಿ ನಡೆವುದಷ್ಟೇ
ನೆರಳಾಗಿ ನಿನ್ನ
ಹಣೆಬರಹ!!

ಕಪ್ಪು

 ಹಾಲು ಬೇಡವೆನಿಸಿತು

ಕಪ್ಪು ಕಾಫಿ ಕೇಳಿದೆ

ಕಾಫಿ ಬಂತು
ಕಪ್ಪಿರಲಿಲ್ಲ....

ಅರ್ಥ ಎರಡಿತ್ತು
ಅವನದೂ
ತಪ್ಪಿರಲಿಲ್ಲ!!

ಬೆವರು

ಉರಿವ ಸೆಖೆಯಲಿ
ಬೆವರ ವಾಸನೆ
ಮರೆಯಾಗದು
scentನಿಂದ...
ತೊಟ್ಟದ್ದೆಲ್ಲಾ ನೆನೆದು
ಒದ್ದೆಯಾಗಿರುತ್ತದೆ
ಅದೇ ಬೆವರ
ಅಂಟಿನಿಂದ!
Jayashri Prakash, Sundari Devi and 5 others
3 comments
Like
Comment
Share