ಸ೦ಜೆಗತ್ತಲು
ನಿರ್ಜನ ರಸ್ತೆ
ಬದಿಯ ಕಸದತೊಟ್ಟಿ
ತಪಸ್ಸಿಗೆ ಕುಳಿತಿದ್ದ ನಾಯಿಗಳು
ಎಲ್ಲ ಕೆ೦ಪು ಕೆ೦ಪು
ಥೊಪ್ಪನೆ ಏನೋ
ಬಿದ್ದ ಶಬ್ದ ತೊಟ್ಟಿಯಲಿ
ಬರಿಗಾಲಲ್ಲಿ
ಬ೦ದವಳ ಹೆಜ್ಜೆ ಸದ್ದಿರಲಿಲ್ಲ
ಅವಳುಟ್ಟದ್ದು...
ಎಸೆದ ಚಿ೦ದಿ ಗ೦ಟು
ಎಲ್ಲ ಕೆ೦ಪು ಕೆ೦ಪು
ನಾಯಿಗಳಿಗೆ ಚೇತನ
ತಿರುಗಿ ನೋಡಿದಳೊಮ್ಮೆ
ತೇವವಿರಲಿಲ್ಲ ಕಣ್ಣು
ಭಾವವಿರಲಿಲ್ಲ ಮುಖದಿ
ಜೀವವಿರಲಿಲ್ಲವಲ್ಲ ಭ್ರೂಣಕೆ....
ನಾಯಿಗಳು ಕಚ್ಚಾಡತೊಡಗಿದವು
ನಿರ್ಲಿಪ್ತೆ
ಮು೦ದೆ ನಡೆದಳು
ಸದ್ದಿಲ್ಲದೆ
ಬರಿಗಾಲು ತಾನೇ..
ಒ೦ದು..ಎರಡು...ಮೂರು....
ಹತ್ತು ಹೆಜ್ಜೆ ಹೋಗಿರಬಹುದು
ಹಿ೦ದೆ
'ಚರ್...ಚರ್'
ಚಪ್ಪಲಿಯ ಶಬ್ದ!!!!
- ತಲಕಾಡು ಶ್ರೀನಿಧಿ
No comments:
Post a Comment