Monday, 27 September 2021

ರೆಕ್ಕೆಗಳು

 ಬೇಕಿದೆ ನನಗೀಗ

ಎರಡು ಬಲಿಷ್ಟ ರೆಕ್ಕೆಗಳು||

ಅಡಿಯಿಡಲು ಎಡವಿ
ಆಗದಿರಲು ನಗೆಪಾಟಲು
ನಗರದ ರಸ್ತೆಯಲ್ಲದ
ರಸ್ತೆಗಳನ್ನು ಒಮ್ಮೆ ದಾಟಲು|
ಪಕ್ಕದ ಮರದ ಮೇಲೆ
ಮರೆಯಾಗಿ ಕುಳಿತ ಕೋಗಿಲೆ
ದೂರ ಹಾರುವ ಮುನ್ನ
ಅದಿರುವ ಎತ್ತರಕೆ ಹಾರಿ ನೋಡಲು|
ಮನೆಯ ತಾರಸಿಯಲಿ ನಿಂತಾಗ
ಕಾಣುವ ಮೊರದಗಲ ಆಗಸವ
ಸುತ್ತಿ ನಿಂತ ಅಪ್ಪನಂಥ
ಬೃಹದಾಕಾಶವನು ಅಪ್ಪಿಕೊಳ್ಳಲು!
ಎದುರು ಬರುವ ಬೈರಿಗೆಗಳ
ಕೊರೆತ ತಪ್ಪಿಸಿಕೊಳ್ಳಲೆಂದು
ಅವರ ದಾಟಿ ಮುಂದೆ ಸಾಗಿ
ಬದುಕಿಗೆ ಪೂರ್ತಿ ತೆರೆದುಕೊಳ್ಳಲು!
ಬೇಕಿದೆ ನನಗೀಗ
ಎರಡು ಬಲಿಷ್ಟ ರೆಕ್ಕೆಗಳು||

Tuesday, 14 September 2021

ಹೊನ್ನ ಜಿಂಕೆ

 ಯಾಕೆ ಕಾಡಲಿಲ್ಲ ರಾಮನನು

ಇನಿತೂ ಶಂಕೆ...
ಇರಬಹುದು ರಕ್ಕಸರ ಮಾಯೆ
ಆ ಹೊನ್ನ ಜಿಂಕೆ?
ಯಾರದೇ ದುಷ್ಕೃತ್ಯಗಳಿಗೆ
ಇರಬೇಕು ಅಂಕೆ
ದುರಾಡಳಿತದಿಂದ ದೂರ
ಆಗಬೇಕು ಲಂಕೆ.
ಆಗಬೇಕಿತ್ತು ಕುಂಭಕರ್ಣ
ರಾವಣರ ಸಂಹಾರ
ಅದಕೇ ಆದುದು ಈ ಅವತಾರ
ತಿಳಿಯೊ ಮಂಕೇ!