ಒಂದು ತಣ್ಣನೆಯ ರವಿವಾರದ ನಸುಕು
ಸುತ್ತ ಎಲ್ಲವೂ ಮುಸುಕು ಮುಸುಕು
ಸೂರ್ಯೋದಯದ ಸೊಬಗಿನ ಗುಂಗಿನಲಿ
ಓಡಿ ಸೇರಿದೆ ನೋಡಲು ಲಾಲ್‍ಬಾಗಿನಲಿ!
ತೀವ್ರ ಗತಿಯಲಿ ಓಡುತ್ತಿರುವವರ
ಮಂದಗತಿಯಲಿ ಓಡಾಡುತ್ತಿರುವವರ
ಸುಮ್ಮನೇ ಕುಳಿತು ನೋಡುತ್ತಿರುವವರ
ದಾಟಿ ಸೇರಿದೆ ಬಂಡೆ ಮೇಲಿನ ಎತ್ತರದ ಗೋಪುರ!
ಆಗಸ ಇನ್ನೂ ನೀಲಿಯಾಗೇ ಇತ್ತು
ಅಲ್ಲೊಂದು ಇಲ್ಲೊಂದು ಬಿಳಿ ಮೋಡ ತೇಲುತ್ತಿತ್ತು
ಮರೆತು ಇಹದ ಎಲ್ಲ ಚಿಂತೆ
ಮೂಡಲ ದಿಕ್ಕಿನಲಿ ನೋಡುತ್ತ ನಿಂತೆ!
ಅಗೋ ಬಾನಿನಲಿ ಒಂದು ಬಣ್ಣದೋಕುಳಿ
ಮೈ ಮನಗಳಲಿ ಕಾತರದ ಕಚಗುಳಿ
ಹೊರಗಿನ ಚಿಲಿಪಿಲಿಗಳಿಗೆ ಕಿವುಡಾದೆ
ಇತರರ ಇರುವಿಗೆ ಕುರುಡಾದೆ!
ಮೂಡಿತಾಗ ದೂರದಲಿ ಕಿತ್ತಳೆಯ ಚೆಂಡು
ನಾಚಿ ಕೆಂಪಾಗುತ್ತಾ ಈ ಇಳೆಯ ಕಂಡು
ಕಣ್ಣಲಿ ತುಂಬಿಕೊಂಡೆ ಈ ಸೂರ್ಯೋದಯವ
ಕ್ಷಣದಲಿ ಧನ್ಯನೆನಿಸಿದ ಸೂರ್ಯನ ದಯವ!!
No comments:
Post a Comment