Saturday, 29 August 2015

ಸ್ಪರ್ಧೆ

ಮೊನ್ನೆ ಇತ್ತು
ನಮ್ಮ ಬಡಾವಣೆಯಲ್ಲಿ
ಗೀತೆ ಹಾಡುವ
ಸ್ಪರ್ಧೆ
ನನಗೇ ಬಂತು
ಮೊದಲ ಬಹುಮಾನ
ಹಾಡೋಕೆ ಯಾರೂ
ಬರದೆ!

ಈರುಳ್ಳಿ

ಎದುರಂಗಡಿ ಶೆಟ್ರ
ಮಗಳು ಬಲು ಕಿಲಾಡಿ
ಕುಳ್ಳಿ
ದ್ರಾಕ್ಷಿ ಗೋಡಂಬಿ
ಮುಂದಿಟ್ಟು ಹಿಂದೆ ಸರಿಸಿದ್ದಾಳೆ
ಈರುಳ್ಳಿ!

ಚುನಾವಣೆ

ನೋಟಿಗೊಂದು
ವೋಟು ಕೊಡುವ
ಮತದಾರ
ಇರುವವರೆಗೆ...
ಇರುತ್ತಾನೆ
ವೋಟಿಗೊಂದು
ನೋಟು ಕೊಡುವ
ಉಮೇದುವಾರ!!

ಕುಡುಕವಾಣಿ:


ಕುಡಿದು ಟೈಟಾಗಿದ್ದಾಗ
ಮಾತ್ರ ನಾನೊಬ್ಬ ಸಂತ
ಅದಕ್ಕೇ ದಿನಾ ಕುಡಿಯುತ್ತೇನೆ
ಹಾಗೇ ಬದುಕಬೇಕು ಅಂತ!

ನಿನ್ನೆ ಇಂದು ನಾಳೆ

ನಿನ್ನೆ 
ಪ್ರೀತಿಸಿದ್ದು
ನಿನ್ನೆ
ಇಂದು
ಏಕೋ
ಪ್ರಿಯವಾಗಿದ್ದು
ಇಂದು
ನಾಳೆ?????????

ರಂಡೆ!

ಗುಂಡ ಬೆಳಿಗ್ಯೆ ಕಾಫಿ ಕುಡಿಯುತ್ತಾ ಕುಳಿತಿದ್ದ.
ಮಗಳ ಗೆಳತಿ ಬಂದವಳೇ ' ಅಂಕಲ್, ಪೂಜಾ ಇದ್ದಾಳಾ?' ಎಂದು ಕೇಳಿದಳು. 'ಇಲ್ಲಮ್ಮ. ಆರು ಘಂಟೆಗೇ ಓಡೋಕೆ ಹೋದಳು ರಂಡೆ!' ಎನ್ನಬೇಕೇ ಗುಂಡ. 
ಅವಳು ಸುಮ್ಮನಿರಲಿಲ್ಲ. 'ಯಾಕೆ ಅಂಕಲ್ ಓಡೋಕೆ ಹೋಗಿದ್ರೆ ಬೈತೀರಾ' ಪ್ರಶ್ನಿಸಿದಳು 
'ಅಯ್ಯೋ ಹುಡುಗೀ ಹಾಗಲ್ಲ....ನಾ ಹೇಳಿದ್ದು RUN DAY ಅಂತ' ಎಂದ ಗಡಿಬಿಡಿಯಿಂದ.

ಉತ್ತರಗಳು

ಜೀವನದಲ್ಲಿ ಹಾಗೇ...
ಒಂದೇ ಪ್ರಶ್ನೆಗೆ
ತರಹಾವಾರು ಉತ್ತರಗಳು
ಎಲ್ಲವೂ ಸರಿಯೇ ಅವರವರಿಗೆ
ಸಮಯಕ್ಕೆ ತಕ್ಕಂತೆ
ವ್ಯಕ್ತಿಗಳಿಗೆ ತಕ್ಕಂತೆ!

ಯಮ

ಯಾರೋ ತಿವಿದಂತಾಯಿತು. ಅರ್ಧ ಕಣ್ತೆರೆದು ನೋಡಿದೆ. ಕೆಂಪು ಕಣ್ಣು ಕೋಣ. ಸ್ವಲ್ಪ ಮೇಲೆ ನೋಡಿದರೆ......ಅದೇ ಕೆಂಪುಕಣ್ಣಿನ ಯಮ ಹಲ್ಲು ಕಿರಿಯುತ್ತಿದ್ದ. ಆಕಳಿಸುತ್ತಾ ಕೇಳಿದೆ 'ಇಲ್ಲೇನು ಕೆಲಸ?'. ಗಲ್ಲು ಎಂದು ಕೇಳ್ಪಟ್ಟೆ ಅದಕ್ಕೇ ಬಂದೆ ಎಂದ. ಗಾಬರಿಯಿಂದ 'ನನಗಾ?' ಎಂದೆ.ನಕ್ಕು ಹಿಂದೆ ನೋಡಿದ. ಅವನ ಶಿಷ್ಯ ಉರುಲು ಸರಿ ಮಾಡುತ್ತಿದ್ದ. ಅದೇನೋ ನೋಡಬಾರದ್ದು ಹುಡುಕುತ್ತಿದ್ದೆಯಂತೆ ಕಂಪ್ಯೂಟರ್ನಲ್ಲಿ ಅಂದ. ಈಗ ಜ್ಞಾನೋದಯ ಆಯಿತು. ಯೋ.....ಅದು ಗಲ್ಲಲ್ಲ....ಗೂಗಲ್ ಅಂದೆ. 'ಅಂದ್ರೆ? ' ಪ್ರಶ್ನಿಸಿದ. ಏನಿಲ್ಲ ನೀವೆಲ್ಲ ಸ್ವರ್ಗದಲ್ಲಿ ದಿನಾ ನೋಡೋದೇ ಅಂದೆ. ನಾವು ದೇವತೆಗಳು ಏನಾದರೂ ಮಾಡ್ತೀವಿ ನೋಡ್ತೀವಿ ಎಂದ ಮೀಸೆ ತಿರುವುತ್ತಾ. ನಮ್ಮಲ್ಲೂ ಎಷ್ಟೋ ರಾಜಕಾರಣಿಗಳು ಸಭೆಯಲ್ಲೇ ನೋಡುತ್ತಾರೆ...ಕೆಲಸದ ಸಮಯದಲ್ಲಿ. ನಾನು ಮನೆಯಲ್ಲಿ ನೋಡಿದರೆ ಏನು ತಪ್ಪು ಯಮಣ್ಣ ಅಂದೆ. ತಪ್ಪಿಲ್ಲ ಬಿಡು ಎಂದ. ಸರಿ ಮತ್ತೆ ಹೊರಡು ಎಂದೆ. ನಿನ್ನನ್ನು ಇಲ್ಲಿ ನೋಡಿದರೆ ಅಂತ್ಯಕ್ರಿಯೆ ಗೆ ರೆಡಿ ಮಾಡಿಬಿಟ್ಟಾರು ಯಾರಾದರೂ .....ರೈಟ್ ಹೇಳು ಎಂದೆ. ಬರಿ ಕೈಲಿ ಹೋಗೋ ಹಾಗಿಲ್ಲ ಎಂದ. ಅದಕ್ಕೆ ನಾನೇನು ಮಾಡಲಿ ಅಂದೆ. ಆ ಕಂಪ್ಯೂಟರ್ ಎತ್ತಿಕೊಂಡು ಹೋಗ್ತೀನಿ ಅಂದ. ಸರಿ ತಗೊಂಡು ಸಾಯಿ ಎಂದೆ. ದನಿ ತಗ್ಗಿಸಿ ' ಅದೇನೋ ನೋಡ್ತಿದ್ಯಲ್ಲ ಅದು ಹೇಗೆ ಅಂತ ಸ್ವಲ್ಪ ಹೇಳಿಬಿಡು ಹೋಗ್ತೀನಿ ' ಎಂದ ನಗುತ್ತಾ. ಸರಿ ಅಂತ ಎದ್ದು ಕುಳಿತೆ. ಬೆಳಕು ಹರಿದಿತ್ತು.

ಆಗಸದ ಏರ್ಪಾಡು

ಭಾರಿ ಕುತೂಹಲ
ಈ ಆಗಸದ ಏರ್ಪಾಡು
ಹಗಲಿನ ನಡವಳಿಕೆಗೆ
ಇರುಳಲಿ ಮಾರ್ಪಾಡು!
ಬೆಳಿಗ್ಗೆ ಪೂರಾ ಇಹುದು
ಸೂರ್ಯನ ಸರ್ವಾಧಿಕಾರ
ಇರುಳಾದರೆ ತಾರೆಗಳೊಡನೆ
ಚಂದಿರನ ಸ್ವೇಚ್ಛಾ ಚಾರ!
ಸೂರ್ಯ ಉರಿಯುವುದು
ಚಂದ್ರನ ಜನಪ್ರಿಯತೆ ಕಂಡೇ?
ಚಂದ್ರನ ತಂಪು ನೀಡುವ ಪರಿ
ಸೂರ್ಯನ ಬೆಳಕನುಂಡೇ!
ರವಿ ಸುತ್ತುವ ಇಳೆಯ ಸುತ್ತುವ
ಚಂದಿರನೆನ್ನುವುದು ವಿಜ್ಞಾನ
ಇಬ್ಬರೂ ನಮಗಾಗಿಯೇ ಬಂದು
ಹೋಗುವರೆನ್ನುವುದು ನನ್ನ ಜ್ಞಾನ!

ಮತ್ತೆ ಮುತ್ತು

ಮುತ್ತಿನ
ವ್ಯವಹಾರದ
ಲೆಕ್ಕಾಚಾರ
ಬಲು ಕಷ್ಟ....
ಕೊಟ್ಟವರು
ಪಡೆದವರು
ಇಬ್ಬರಿಗೂ
ಇಲ್ಲ ನಷ್ಟ!

ತೆರೆ

'ತೆರೆ'
ಎಂದೊಡನೆ
ತೆರೆಯ ಹಿಂದೆ
ಮರೆಯಾದವರು
ತೆರೆಯಲು ಗೋಗರೆದರೂ
ಮರೆತೂ
ತೆರೆಯಾಚೆ
ಬಾರದಿರುವುದು
ದುರಂತ!

ಸರಳಾ!

ನಿನ್ನೆಡೆಗೆ ನನ್ನ
ಸೆಳೆದದ್ದು
ಆ ಕಾಡುತಿರುವ
ಮುಂಗುರುಳಾ?
ಅದರೊಡನೆ ಆಡುತಿರುವ
ಆ ತೋರ ಬೆರಳಾ?
ಮೆಲ್ಲನೆ ಗುನುಗುತಿರುವ
ಇನಿದನಿಯ ಕೊರಳಾ?
ನನಗೆ ತಿಳಿಯುತ್ತಿಲ್ಲ
ನೀನೇ ಹೇಳಿಬಿಡು ಸರಳಾ!

ಅಭಿಷೇಕ

ನಾನು ನಾಸ್ತಿಕನಲ್ಲ. ಆದರೆ ದೇವರು ದೇವಸ್ಥಾನದ ಸುತ್ತಾಟದಲ್ಲಿ ತೊಡಗಿದವನು ಅಲ್ಲ.ಅಕಸ್ಮಾತ್ ಹೋದಾಗ ಕೈ ಮುಗಿಯದೆ ಓಡಿ ಬರುವ ಪ್ರವೃತ್ತಿಯವನೂ ಅಲ್ಲ.ಏನೆಂದರೆ ಈ ಅಭಿಷೇಕದ ಹೆಸರಿನಲ್ಲಿ ಹಾಲು ಮೊಸರು ಜೇನುತುಪ್ಪ ಎಲ್ಲ ಪೋಲಾಗುವುದು ಕಂಡಾಗ ಸಂಕಟ ಆಗುವುದು ನಿಜ.ಮಾಡಲೇಬೇಕೆಂದಿದ್ದರೆ ಒಂದು ಪುಟ್ಟ ಉತ್ಸವಮೂರ್ತಿ ಇಟ್ಟು ಆ ಆಸೆ ತೀರಿಸಿಕೊಳ್ಳಬಹುದಲ್ಲವೇ! ದೊಡ್ಡ ವಿಗ್ರಹಗಳು ....ಅದರಲ್ಲೂ ಎಲ್ಲ ಬಿಟ್ಟೆನೆಂದು ನಿಂತ ಭವ್ಯ ಗೊಮ್ಮಟ........ಅಭಿಷೇಕ ಅವಶ್ಯವಾ?

ಅರ್ಜುನನಲ್ಲ.

ಹೂಂ....ಕಾಣುತ್ತಿದೆ
ಮೇಲೆ ಹಸಿರೆಲೆಗಳ ನಡುವೆ
ಆ ಹಸಿರು ಗಿಣಿ ...ಸುಂದರ ಗಿಣಿ
ಅದರ ಕಣ್ಣು?.....ಹುಂ...ಈಗ
ಕಾಣುತ್ತಿದೆ ಅದರ ಕಣ್ಣು
ಕಣ್ಣೊಳಗೆ.....ಇನ್ನೂ ಒಳಗೆ
ನಿಷ್ಕಪಟ ಹೃದಯ....
ಒಲವ ಸೆಲೆ
ಹಾಂ? ಬಾಣವಾ?
ಕಣ್ಣಿಗೇ ಗುರಿ?
ಇಲ್ಲ....ಆಗದು
ಒಲ್ಲೆ
ನಾ ಅರ್ಜುನನಲ್ಲ.....
ಆಗುವುದೂ ಇಲ್ಲ!

ಒಡನಾಟ

ಎರಡು ದಾರಿಗಳು
ಸೇರಿದಲ್ಲಿ ಜೊತೆಯಾದೆವು
ಒಂದು 'ಹಲೋ' ಹೇಳಿ
ಹೆಜ್ಜೆ ಹಾಕುತ್ತಾ ಹಾಕುತ್ತಾ
ಕೈಗಳು ಹೆಣೆದುಕೊಂಡಿದ್ದವು
ಮನಗಳಂತೆಯೇ.....
ಒಂದು ಎರಡು ಮೂರು...ಏಳು
ದಾಟಿ ಸಪ್ತಪದಿಯ ಮಿತಿಯ
ನಡೆಯುತ್ತಲೇ ಇದ್ದೆವು ಎಚ್ಚರ ತಪ್ಪಿ
ರಸ್ತೆ ಕವಲೊಡೆದುದರ ಅರಿವೇ ಇಲ್ಲದೆ
ಯಾಕೆ ಬೇಕು? ನಡೆವುದು ಒಟ್ಟಿಗೆ ತಾನೇ
ನನಗೆ ಕಾಲುನೋವೆಂದಾಗ ನೀ ಕುಳಿತು
ಕಾಲನೊತ್ತಿದೆ....ನೀ ಬಸವಳಿದಾಗ
ನಾ ಗಾಳಿ ಬೀಸಿದೆ ....ಇಬ್ಬರೂ
ದಣಿದಾಗ ಕಣ್ಣಲಿ ಕಣ್ಣಿಟ್ಟು ಬಾಯಿಬಿಡದೆ
ಡ್ಯೂಯೆಟ್ ಹಾಡಿ...ಹಾದಿ ಸವೆಸುತ್ತಾ
ಹಿಂದೆ ತಿರುಗಿ ನೋಡುವ ಅಗತ್ಯವಿಲ್ಲದೆ
ಮುಂದೆ ತುಂಬ ದೂರಕೆ ನೋಡಲಾಗದೆ
ಈಗ ಇಡುತ್ತಿರುವ ಈ ಹೆಜ್ಜೆಗಳು ಬಯಸುವುದು
ಒಂದನೊಂದು ಅಗಲದ ಒಡನಾಟ....ಅಷ್ಟೇ!