ಯಾರೋ ತಿವಿದಂತಾಯಿತು. ಅರ್ಧ ಕಣ್ತೆರೆದು ನೋಡಿದೆ. ಕೆಂಪು ಕಣ್ಣು ಕೋಣ. ಸ್ವಲ್ಪ ಮೇಲೆ ನೋಡಿದರೆ......ಅದೇ ಕೆಂಪುಕಣ್ಣಿನ ಯಮ ಹಲ್ಲು ಕಿರಿಯುತ್ತಿದ್ದ. ಆಕಳಿಸುತ್ತಾ ಕೇಳಿದೆ 'ಇಲ್ಲೇನು ಕೆಲಸ?'. ಗಲ್ಲು ಎಂದು ಕೇಳ್ಪಟ್ಟೆ ಅದಕ್ಕೇ ಬಂದೆ ಎಂದ. ಗಾಬರಿಯಿಂದ 'ನನಗಾ?' ಎಂದೆ.ನಕ್ಕು ಹಿಂದೆ ನೋಡಿದ. ಅವನ ಶಿಷ್ಯ ಉರುಲು ಸರಿ ಮಾಡುತ್ತಿದ್ದ. ಅದೇನೋ ನೋಡಬಾರದ್ದು ಹುಡುಕುತ್ತಿದ್ದೆಯಂತೆ ಕಂಪ್ಯೂಟರ್ನಲ್ಲಿ ಅಂದ. ಈಗ ಜ್ಞಾನೋದಯ ಆಯಿತು. ಯೋ.....ಅದು ಗಲ್ಲಲ್ಲ....ಗೂಗಲ್ ಅಂದೆ. 'ಅಂದ್ರೆ? ' ಪ್ರಶ್ನಿಸಿದ. ಏನಿಲ್ಲ ನೀವೆಲ್ಲ ಸ್ವರ್ಗದಲ್ಲಿ ದಿನಾ ನೋಡೋದೇ ಅಂದೆ. ನಾವು ದೇವತೆಗಳು ಏನಾದರೂ ಮಾಡ್ತೀವಿ ನೋಡ್ತೀವಿ ಎಂದ ಮೀಸೆ ತಿರುವುತ್ತಾ. ನಮ್ಮಲ್ಲೂ ಎಷ್ಟೋ ರಾಜಕಾರಣಿಗಳು ಸಭೆಯಲ್ಲೇ ನೋಡುತ್ತಾರೆ...ಕೆಲಸದ ಸಮಯದಲ್ಲಿ. ನಾನು ಮನೆಯಲ್ಲಿ ನೋಡಿದರೆ ಏನು ತಪ್ಪು ಯಮಣ್ಣ ಅಂದೆ. ತಪ್ಪಿಲ್ಲ ಬಿಡು ಎಂದ. ಸರಿ ಮತ್ತೆ ಹೊರಡು ಎಂದೆ. ನಿನ್ನನ್ನು ಇಲ್ಲಿ ನೋಡಿದರೆ ಅಂತ್ಯಕ್ರಿಯೆ ಗೆ ರೆಡಿ ಮಾಡಿಬಿಟ್ಟಾರು ಯಾರಾದರೂ .....ರೈಟ್ ಹೇಳು ಎಂದೆ. ಬರಿ ಕೈಲಿ ಹೋಗೋ ಹಾಗಿಲ್ಲ ಎಂದ. ಅದಕ್ಕೆ ನಾನೇನು ಮಾಡಲಿ ಅಂದೆ. ಆ ಕಂಪ್ಯೂಟರ್ ಎತ್ತಿಕೊಂಡು ಹೋಗ್ತೀನಿ ಅಂದ. ಸರಿ ತಗೊಂಡು ಸಾಯಿ ಎಂದೆ. ದನಿ ತಗ್ಗಿಸಿ ' ಅದೇನೋ ನೋಡ್ತಿದ್ಯಲ್ಲ ಅದು ಹೇಗೆ ಅಂತ ಸ್ವಲ್ಪ ಹೇಳಿಬಿಡು ಹೋಗ್ತೀನಿ ' ಎಂದ ನಗುತ್ತಾ. ಸರಿ ಅಂತ ಎದ್ದು ಕುಳಿತೆ. ಬೆಳಕು ಹರಿದಿತ್ತು.
No comments:
Post a Comment