Saturday, 29 August 2015

ಒಡನಾಟ

ಎರಡು ದಾರಿಗಳು
ಸೇರಿದಲ್ಲಿ ಜೊತೆಯಾದೆವು
ಒಂದು 'ಹಲೋ' ಹೇಳಿ
ಹೆಜ್ಜೆ ಹಾಕುತ್ತಾ ಹಾಕುತ್ತಾ
ಕೈಗಳು ಹೆಣೆದುಕೊಂಡಿದ್ದವು
ಮನಗಳಂತೆಯೇ.....
ಒಂದು ಎರಡು ಮೂರು...ಏಳು
ದಾಟಿ ಸಪ್ತಪದಿಯ ಮಿತಿಯ
ನಡೆಯುತ್ತಲೇ ಇದ್ದೆವು ಎಚ್ಚರ ತಪ್ಪಿ
ರಸ್ತೆ ಕವಲೊಡೆದುದರ ಅರಿವೇ ಇಲ್ಲದೆ
ಯಾಕೆ ಬೇಕು? ನಡೆವುದು ಒಟ್ಟಿಗೆ ತಾನೇ
ನನಗೆ ಕಾಲುನೋವೆಂದಾಗ ನೀ ಕುಳಿತು
ಕಾಲನೊತ್ತಿದೆ....ನೀ ಬಸವಳಿದಾಗ
ನಾ ಗಾಳಿ ಬೀಸಿದೆ ....ಇಬ್ಬರೂ
ದಣಿದಾಗ ಕಣ್ಣಲಿ ಕಣ್ಣಿಟ್ಟು ಬಾಯಿಬಿಡದೆ
ಡ್ಯೂಯೆಟ್ ಹಾಡಿ...ಹಾದಿ ಸವೆಸುತ್ತಾ
ಹಿಂದೆ ತಿರುಗಿ ನೋಡುವ ಅಗತ್ಯವಿಲ್ಲದೆ
ಮುಂದೆ ತುಂಬ ದೂರಕೆ ನೋಡಲಾಗದೆ
ಈಗ ಇಡುತ್ತಿರುವ ಈ ಹೆಜ್ಜೆಗಳು ಬಯಸುವುದು
ಒಂದನೊಂದು ಅಗಲದ ಒಡನಾಟ....ಅಷ್ಟೇ!

No comments:

Post a Comment