Monday 29 February 2016

ವಾಸ್ತವ2


ಕುದುರೆಯೊಂದ ಹಿಡಿದು
ಅಪ್ಪ ಮಗ ಬಿಸಿಲಿನಲ್ಲಿ
ನಡೆದು ಹೋಗುತಿದ್ದರು.
ಸುಮ್ಮನಿರದೆ ಕಂಡವರು
ಕುದುರೆಯಿದ್ದೂ ನಡೆದವರ
ಕುಹಕ ಮಾಡುತಿದ್ದರು.
ಬೇಸರಿಸಿದ ಅಪ್ಪ ಮಗ
ಥಟ್ಟನೆ ಆ ಕುದುರೆಯೇರಿ
ಮುಂದೆ ಮುಂದೆ ನಡೆದರು.
ಸುಮ್ಮನಿರದೆ ಕಂಡವರು
'ಪಾಪ ಕುದುರೆಗಿಬ್ಬರ ಹೊರೆ'
ಎಂದು ಮತ್ತೆ ಆಡಿಕೊಂಡರು.
ಅಪ್ಪ ಇಳಿದ ಕೆಳಗೆ
ಮಗ ಕುದುರೆ ಮೇಲೆ
ಈಗ ಸರಿಯೆಂದು ನಡೆದರು.
ಸುಮ್ಮನಿರದೆ ಕಂಡವರು
ಅಪ್ಪನ ನಡೆಸಿ ಕುದುರೆ ಏರಿದ
ಮಗನ ಆಡಿಕೊಂಡರು.
ಅಪ್ಪ ಹತ್ತು ಮೇಲೆ ನಾನು
ಕೆಳಗಿಳಿಯುವೆನೆಂದ ಮಗ
ಸಮಾಧಾನದಿಂದ ನಡೆದನು.
ಸುಮ್ಮನಿರದೆ ಕಂಡವರು
ಚಿಕ್ಕವನಿನ್ನೂ ಪಾಪ ಮಗನ
ನಡೆಸುತಿರುವೆಯಲ್ಲಾ ಎಂದರು.
ಮುಖ ಮುಖ ನೋಡಿ ಅವರು
ಕುದುರೆಯನ್ನೇ ಎತ್ತಿ ಹೊತ್ತು
ಮುಂದೆ ತಮ್ಮ ಹೆಜ್ಜೆ ಇಟ್ಟರು.
ಸುಮ್ಮನಿರದ ಜನ ಈಗ
ಕುದುರೆ ಹೊತ್ತ ಹುಚ್ಚರಿವರು
ಎಂದವರತ್ತ ಕಲ್ಲು ಎಸೆದರು.
ತಿಳಿದರೀಗ ಅಪ್ಪ ಮಗ
ಅನ್ನುವುದು ಈ ಜನರ ರೋಗ
ಬೇಡ ಇವರ ಗೊಡವೆ ಎಂದು
ಕಿವಿ ಮುಚ್ಚಿ ನಡೆದರು
ತಮ್ಮಿಷ್ಟದಂತೆ ನಡೆದರು.

No comments:

Post a Comment