Saturday, 13 October 2018

nage131018

#ನಗ್ತೀರಾ_ಪ್ಲೀಸ್

'ರ್ರೀssssss' ಅವಳ ಗಾಭರಿಯ ಕೂಗು ಮಲಗಿದ್ದ ಗಂಡನನ್ನು ಬಡಿದೆಬ್ಬಿಸಿತು. ಅರ್ಧ ತೆರೆದ ಕಂಗಳಿಂದ ಅವಳತ್ತ ನೋಡಿದ. ಬೆಳಿಗ್ಯೆ ಐದೂವರೆಗೆ ಎದ್ದೊಡನೆ ಮೊಬೈಲ್ ನೋಡಿ ನಂತರ ಕರಾಗ್ರೇ ವಸತೇ ಲಕ್ಷ್ಮೀ ಎನ್ನುವ ಅವಳ ಅಭ್ಯಾಸ ಗೊತ್ತೇ ಇತ್ತು. ಈಗಲೂ ಕೈಯಲ್ಲಿ ಮೊಬೈಲ್ ಇರುವುದು ಕಾಣಿಸ್ತಿತ್ತು. ಆದರೆ ನಿದ್ದೆಗಣ್ಣಿಗೂ ಅವಳ ಮುಖದ ಮೇಳಿದ್ದ ಗಾಭರಿ ಎದ್ದು ಕಾಣುತ್ತಿತ್ತು. ಎದ್ದು ಕುಳಿತು ಏನಾಯ್ತೇ ಎಂದ. 'ಈ ಫೇಸ್‍ಬುಕ್ ಫ್ರೆಂಡ್ಸ್ ಎಲ್ಲಾ ತುಂಬಾ ಮೋಸರೀ....' ಅಂದಳು. ಛಾನ್ಸ್ ಸಿಕ್ಕಾಗ ಬಿಟ್ಟಾನಾ? 'ಅದಕ್ಕೇ ಅಲ್ವೇನೇ ಆ ದರಿದ್ರ ಫೇಸ್‍ಬುಕ್ ಟ್ವಿಟ್ಟರ್ ಎಲ್ಲ ಬಿಟ್ಟು ಹಾಕು ಅಂತ ನಾ ಹೇಳ್ತಾ ಇದ್ದದ್ದು' ಅಂದ. 'ಅಯ್ಯೋ...ನಿಮಗೇನೂ ಗೊತ್ತಾಗೊಲ್ಲ ಬಿಡಿ' ಎಂದಳು. ಸರಿ ಎಂದವನೇ ಮತ್ತೆ ದಿಂಬಿಗೆ ತಲೆ ಇಟ್ಟ. ಆದರೆ ಅವಳ ಬಿಕ್ಕು ಕೇಳಿಸಿ ಮತ್ತೆ ಎದ್ದು ಕುಳಿತ. 'ಸರಿ ಏನಾಯ್ತು ಹೇಳು' ಎಂದ ಸಮಾಧಾನ ಪಡಿಸುವ ದನಿಯಲ್ಲಿ. ಮೂಗೊರೆಸುತ್ತಾ ಹೇಳಿದಳು ' ನೆನ್ನೆ ವರೆಗೆ 3200 ಫ್ರೆಂಡ್ಸ್ ಇದ್ದರು. ಈಗ ಬರೀ 800ಕ್ಕೆ ಇಳಿದಿದೆಯಲ್ಲರೀ.....ಇದೇಕೆ ಹೀಗಾಯ್ತು? ಯಾರೋ ನನ್ನ ಅಕೌಂಟ್ ಹ್ಯಾಕ್ ಮಾಡಿರಬೇಕು ರೀ...ಈಗ ಏನು ಮಾಡಲಿ....ಸೈಬರ್ ಕಂಪ್ಲೇಂಟ್ ಮಾಡ್ಬೇಕಾ..." ಕೇಳುತ್ತಲೇ ಹೋದಳು. ಅವನು ಎದ್ದಾಗಲೂ ಬಿದ್ದಾಗಲೂ ಯಾವಾಗಲೂ ಮಹಿ ತರ ಕೂಲ್ ಕೂಲ್. ತಲೆ ಮೇಲೆ ಕೈ ಆಡಿಸಿದ ಕೂದಲಲ್ಲಿ....ಅಲ್ಲ ಅಲ್ಲ...ಕೂದಲೆಲ್ಲಿತ್ತು? ಬೊಕ್ಕ ತಲೆಯ ಮೇಲೆ. ನೆನ್ನೆ ಮಲಗುವ ಮೊದಲು ಹಾಕಿದ ಕಡೆಯ ಸ್ಟೇಟಸ್ ಯಾವುದು ಎಂದು ಪತ್ತೇದಾರನ ಸ್ಟೈಲಲ್ಲಿ ಕೇಳಿದ. ಅದು ಏನೂ ಇಲ್ಲ ಬಿಡಿ ಎಂದು ಹಾರಿಕೆಯ ಉತ್ತರ ಕೊಟ್ಟಳು. ಪರವಾಗಿಲ್ಲ ಹೇಳು ಅದರ ಪರಿಣಾಮ ಇತಬಹುದಲ್ಲವಾ ಎಂದ. 'ಏನಿಲ್ಲ ಎಲ್ಲರೂ ಹಾಕ್ತಾ ಇದ್ದಾರಲ್ಲ ಅಂತ ..... ಒಂದು app  ಇದೆಯಲ್ಲಾ ಅದನ್ನು download ಮಾಡಿಕೊಂಡು ಒಂದು ದೇವರನಾಮ ಹಾಡಿದೆ ರೀ.....ನಿಮ್ ಫ್ರೆಂಡ್ ಜನಾರ್ಧನ್ ತಕ್ಷಣವೇ ತುಂಬಾ ಚೆನ್ನಾಗಿದೆ ಅಂತ ಹಾಕಿದ್ರು.....ಅದರಿಂದ ಇರಲಿಕ್ಕಿಲ್ಲ' ಅಂದಳು. ಸರಿ ಅವಳ ಮೊಬೈಲ್ ಕಿತ್ತುಕೊಂಡು ಅದಾವ ಹಾಡು ಎಂದು ಕೇಳ ಹೊರಟ. ಹಾಗೇ ಅಲ್ಲ ಕಿವಿಗೆ ಈ ಇಯರ್ಫೋನ್ ಹಾಕಿ ಕೇಳಿ ಚೆನ್ನಾಗಿರುತ್ತೆ ಅಂತ ಕಿವಿಗೆ ತುರುಕಿದಳು. ಕಣ್ಣೂ ಮುಚ್ಚಿದ್ದ ಅವನ ಪ್ರತಿಕ್ರಿಯೆ ಅವಳಿಗೆ ಕಾಣದಿರಲೆಂದು. ಮೂರು ನಿಮಿಷದ ಹಾಡು ಮುವತ್ತು ನಿಮಿಷ ಆದರೂ ಕೇಳುತ್ತಲೇ ಇದ್ದ. ಅವಳಿಗೆ ಯಾಕೋ ಅನುಮಾನ. ಮೆಲ್ಲಗೆ ಅವನನ್ನು ಅಲುಗಿಸಿದಳು. ಮೊಬೈಲ್ ಕೈಯಿಂದ ಬಿತ್ತು. ಅವನು ಪಾಪ ಪ್ರಜ್ಣ್ಯೆ ತಪ್ಪಿದ್ದ. ಅವಳಿಗೆ ಅರ್ಥ ಆಗಿರಬೇಕು.

Tuesday, 2 October 2018

ಕನಸುಗಳು

ಕನಸುಗಳು...ಓಹ್
ಯಾರಿಗೆ ಬೇಡ?
ಅಲ್ಲೊಬ್ಬ ನಿಂತು ಮಾರುತ್ತಿದ್ದಾನೆ
ಇಲ್ಲ ಸುಮ್ಮನೆ ಹಂಚುತ್ತಿದ್ದಾನೆ
ಅದಕ್ಕೇ ದೊಡ್ಡ ಗುಂಪು
ಬೆಳೆಯುತ್ತಲೇ ಇದೆ....
ಸನಿಹದಲ್ಲೇ
ಇನ್ನೊಬ್ಬ ಅಂಗಡಿ ತೆಗೆದ
ನೋಡು...ಅಲ್ಲೂ ಜನ
ಸೇರುತ್ತಿದ್ದಾರೆ ಅಷ್ಟಿಲ್ಲ ..ಹೌದು
ಇವನೂ ಬಿಟ್ಟಿ ಕೊಡುತ್ತಿದ್ದಾನೆ
ಕನಸಲ್ಲ ...ಪೆನ್ನುಗಳು
ಇಂಕಿಲ್ಲದ ಪೆನ್ನುಗಳು!
ಕನಸು ನನಸಾಗದೆಂಬ ನಂಬಿಕೆ-
ಯ ಪಿನ್ನುಗಳು ಚುಚ್ಚಲು
ಆ ಕನಸುಗಳ.....ಆದರೆ
ಬೇಕಿತ್ತಾ? ಕನಸೇ ಇಲ್ಲದ ಇಂದಿನ
ವಾಸ್ತವದ ಅಬ್ಬರಗಳು
ಕಲೆಗಳು ನಿರ್ವೀರ್ಯಗೊಳಿಸುತ್ತಿರುವ
ಮೂಕ ರೋದನಗಳು
ಸಹಸ್ರನಾಮಗಳ ಕಕ್ಕುವ ಚೇಷ್ಟೆಗಳು
ಕಣ್ಣು ಮುಚ್ಚಿ ಎಳೆವ ಉರುಳುಗಳು!
ಊಂಹೂಂ....
ಕನಸು ಹತ್ತು ಕಣ್ಣಿಗೆ ಕಟ್ಟಿದರೆ
ನಾಲ್ಕರಲ್ಲಾದರೂ ನನಸು ಮಾಡುವ ಕಿಚ್ಚು
ಹತ್ತಿಸಬಲ್ಲುದು...ಕಾಯುವಾ
ಬೇಕಿದ್ದರೆ ಕನಸ ಪಡೆದು ಇಲ್ಲದಿದ್ದರೆ
ಪಿನ್ನುಗಳ ಸಧ್ಯಕ್ಕೆ ದೂರವಿಟ್ಟು!

#ಜೋರ್_ಕಾ_ಝಟ್ಕಾ


ಇದೇನು.. ಅಟ್ಟದಲ್ಲಿದ್ದ
ಪುಸ್ತಕಗಳ ನಡುವೆ
ನನ್ನವನ ಪತ್ರ..ಹಾಂ
ಪ್ರೇಮಪತ್ರ..ಅದೂ
ನನಗೆಂದೇ ಬರೆದದ್ದು
ಬಣ್ಣ ಮಾಸಿದ್ದರೂ
ಏನೋ ಕಂಪು
ಮನವೆಲ್ಲಾ ತಂಪು ತಂಪು
cool cool!
ಹೋಗಿ ಅವನ ಕೈಯಲ್ಲಿದ್ದ
ರೆಮೋಟ್ ಕಿತ್ತು
ಕೊಂಕಿಸಿ ಕತ್ತು
ಅವನ ಮುಂದೆ ಹಿಡಿದೆ
ಮೆಲ್ಲಗೆ ಪ್ರೀತಿಯಿಂದಲೇ
ಗದರಿದೆ 'ಯಾಕೆ?
ನಾಚಿದೆಯಾ ಆ ದಿನ
ನನಗಿದ ಕೊಡಲು?'
ನಕ್ಕ...ಕಳ್ಳ ನಗೆ
'ಲತಾ ಎಂದರೆ...
ನೀನೊಬ್ಬಳೇನಾ...
fool fool'!!

ಸಿಕ್ಕು

ಸಿಕ್ಕು
ಸಿಕ್ಕಂತೆಲ್ಲಾ
ಸಿಕ್ಕಾದ ಬದುಕಿನಲಿ
ಸಿಕ್ಕ ಎಳೆಯೆಳೆದು ಮತ್ತೂ
ಸಿಕ್ಕಾಗಿಸುವಾಗ ಬದುಕು
ಸಿಕ್ಕ ಭ್ರಮೆಗೆ ನೀ
ಸಿಕ್ಕಾಗಷ್ಟೇ ಆ..ರಾ...ಮ!

#'ಲ'ಕ್_ಲ_ಒತ್ತು


ಹಲ್ಲಿರದ ಕೂಸಿನ
ಗಲ್ಲದ ಕುಳಿಯಲಿ
ನಿಲ್ಲದೆ ಇಳಿದ
ಜೊಲ್ಲ ಹನಿಗಳ
ಎಲ್ಲರೆದುರು ತಾ
ಮೆಲ್ಲ ಒರೆಸಿದ-
ನಲ್ಲ ನನ್ನ ನಲ್ಲ
ಎಲ್ಲರಂತವನಲ್ಲ
ಬೆಲ್ಲದಂತವನವ!

ನಾದತರಂಗ

ಯಮುನೆಯ ದಂಡೆಯಲಿ
ವಿರಹದಿ ಕುಳಿತಿರಲು
ದೂರದ ಆ ಬದಿಯಲಿ
ಕೊಳಲ ನಾದ ಕೇಳಿತು!
ಬಂದನೇ ಗೋಪಾಲ
ಕಾತುರದಿ ಎದ್ದು ಹೊರಟೆ
ಕಂಗಳು ಮುಚ್ಚಿದವು
ಕಾಲ್ಗಳು ಕಣ್ಣಾದವು
ನಾದದ ತರಂಗಗಳೇ
ದಾರಿಯಾದವು!
ನಡೆದೆ...ಇಲ್ಲ ಓಡಿದೆ
ಕ್ಷಣದಲ್ಲಿ ಅವನೆದುರು
ಮುಚ್ಚಿದ ಕಂಗಳು ತೆರೆದಿದ್ದವು
ಕಾಣಲು ಆ ಮೊಗದ ಬೆಳದಿಂಗಳು
ಸಮಯ ಕಳೆದಿದ್ದು ಹೇಗೋ
ತಿಳಿದವರು ಯಾರು?
ಮುರಳೀನಾದ ನಿಂತಿತೇಕೆ?
ಸ್ಮಿತವದನ ಹೊರಡುವನೇ?
ನದಿಯ ಆ ದಂಡೆಯ ಮತ್ತೆ
ತಲುಪುವುದೆಂತು?
ಬರುವಾಗ ಕರೆತಂದ ನಾದತರಂಗ
ಸ್ತಬ್ದವಾಗಿದೆಯಲ್ಲ....
ಶರಣು ಗೋವಿಂದ
ನೀನೇ ದಾರಿ ತೋರೋ
ಎಂದದ್ದು ಸಾಕಾಯ್ತು...
ಅವ ಆ ದಂಡೆಯಲಿ ನಿಂತು
ನಗುತ ಮುರಳಿಯನೂದಲು
ತನ್ನಷ್ಟಕೇ ಅತ್ತ ಚಲಿಸಿದವು
ಕಾಲ್ಗಳು ಮುಚ್ಚಿದ್ದವು ಕಂಗಳು!

#ಅನುವಾದ1


ನೆನ್ನೆ ಡಾ||ಕೃಷ್ಣಮೂರ್ತಿ Krishna Murthy ಅವರು ಒಂದು ಸುಂದರ ಇಂಗ್ಲೀಷ್ ಕವಿತೆ ಇದೆ ಅದನ್ನು ಕನ್ನಡಕ್ಕೆ ಅನುವಾದಿಸಬಹುದಾ ಎಂದು ಕೇಳಿದರು. ಯಾಕೆ ಪ್ರಯತ್ನಿಸಬಾರದು ಎನ್ನಿಸಿತು. ಪ್ರಯತ್ನ ಅವರ ಮೆಚ್ಚುಗೆ ಪಡೆಯಿತು. ಈಗ ನೀವು ಓದಿ ಹೇಳಿ.
Beautiful poem by Mario de Andrade (San Paolo 1893-1945) Poet, novelist, essayist and musicologist. One of the founders of Brazilian modernism.
________________________________________________________________________
I counted my years and realized that I have less time to live by, than I have lived so far.
I feel like a child who won a pack of candies: at first, he ate them with pleasure but when he realized that there was little left, he began to taste them intensely.
I have no time for endless meetings where the statutes, rules, procedures and internal regulations are discussed, knowing that nothing will be done.
I no longer have the patience to stand absurd people who, despite their chronological age, have not grown up.
My time is too short: I want the essence; my spirit is in a hurry. I do not have much candy in the package anymore.
I want to live next to humans, very realistic people who know how to laugh at their mistakes and who are not inflated by their own triumphs and who take responsibility for their actions. In this way, human dignity is defended and we live in truth and honesty.
It is the essentials that make life useful.
I want to surround myself with people who know how to touch the hearts of those whom hard strokes of life have learned to grow with sweet touches of the soul.
Yes, I'm in a hurry. I'm in a hurry to live with the intensity that only maturity can give.
I do not intend to waste any of the remaining desserts. I am sure they will be exquisite, much more than those eaten so far.
My goal is to reach the end satisfied and at peace with my loved ones and my conscience.
We have two lives and the second begins when you realize you only have one.
ನನ್ನಾತ್ಮಕ್ಕೊಂದು ಟೋಪಿ!
ನಾ ಕಳೆದ ವರುಷಗಳೆಣಿಸಿದೆ...ಅರಿವಾಯ್ತು
ಉಳಿದದ್ದಕ್ಕಿಂತಾ ಕಳೆದದ್ದು ಹೇಚ್ಚಾಯ್ತು!
ಕ್ಯಾಂಡಿ ಪ್ಯಾಕೆಟ್ ಗೆದ್ದ ಮಗುವಿನಂತಾಗಿದ್ದೆ
ಮೊದಮೊದಲು ಖುಷಿಯಿಂದ ಎಲ್ಲ ಚಪ್ಪರಿಸಿದರೂ
ಕೆಲವೇ ಉಳಿದಾಗ ಸಿಹಿಯ ಅನುಭವಿಸುವ
ತುಸುತುಸುವೇ ಸವಿಯುವ ಜ್ಞಾನೋದಯ!
ನನಗೆಲ್ಲಿಯ ಸಮಯ ಕೆಲಸಕ್ಕೆ ಬಾರದ
ಹರಟೆ,ಭಾಷಣ ಸಮಾಲೋಚನೆಗೆಲ್ಲ
ಅದಾವುದೂ ಬದುಕಿಗೆ ನಡೆವ ದಾರಿಗೆ
ಒಂದಿನಿತೂ ಪೂರಕವಲ್ಲದ ಮೇಲೆ!
ವರುಷಗಳ ಎಣಿಕೆಯಲ್ಲಿ ವಯಸ್ಸಾಗಿದ್ದರೂ
ನಿಜವಾಗಿ ಬೆಳೆಯದ ಜನರ ಸಂಗ ಬೇಡವಾಗಿದೆ!
ನನ್ನ ಬದುಕಿಗೆ ಕ್ಷಣಗಣನೆ ಆರಂಭವಾಗಿದೆ
ಉಳಿದ ಒಂದೊಂದು ಕ್ಷಣಗಳೂ ಅಮೂಲ್ಯ
ನನ್ನ ಚೀಲದಲ್ಲಿ ಉಳಿದಿರುವುದು ಕೆಲವೇ ಕ್ಯಾಂಡಿಗಳು!
ಇನ್ನಾದರೂ ಬದುಕಬೇಕಿದೆ ಮನುಷ್ಯರ ನಡುವೆ
ತನ್ನ ತಪ್ಪಿಗೆ ನಕ್ಕು ಮರೆಯಬಲ್ಲವರ ನಡುವೆ
ಸಾಧಿಸಿದೊಡನೆ ನಿಗುರಿ ಬೀಗದವರ ನಡುವೆ
ತನ್ನೆಲ್ಲ ನಡೆಗಳಿಗೆ ಜವಾಬ್ದಾರರಾಗುವವರ ನಡುವೆ!
ಹೀಗಾದರೂ ಉಳಿಯಬಹುದಲ್ಲ ಮಾನವೀಯತೆ
ಘನತೆಗಳ ಬೆನ್ನಿಗೇ ಸತ್ಯ ಪ್ರಾಮಾಣಿಕತೆ!
ಬದುಕಲು ಬೇಕಾದುದಷ್ಟೇ ತಾನೇ
ಬದುಕನ್ನು ಉಪಯುಕ್ತವಾಗಿಸುವುದು!
ಇರಬೇಕು ನನ್ನ ಸುತ್ತ ಇತರರಿಗೆ
ಸ್ಪಂದಿಸುವ ಹೃದಯವಂತಿಕೆಯ ಜನ
ಬದುಕಿನ ದಾರಿಯಲ್ಲಿನ ಪ್ರಹಾರಗಳಿಂದ
ಮಾಗಿದವರಾಗಿ ಆತ್ಮಸ್ಪರ್ಶಿಗಳಾದ ಜನ!
ನಾನು ಈಗ ತರಾತುರಿಯಲ್ಲಿದ್ದೇನೆ ಹೌದು
ಆತುರನಾಗಿದ್ದೇನೆ ಕಾತುರನಾಗಿದ್ದೇನೆ
ಬದುಕನ್ನು ಹೆಚ್ಚು ತೀವ್ರವಾಗಿ
ಪ್ರಬುದ್ಧನಾಗಿ ಮುಕ್ತಾಯಗೊಳಿಸಲು!
ಉಳಿದಿರುವ ಕ್ಯಾಂಡೀಗಳನ್ನು ಯಾವುದೇ
ಕಾರಣಕ್ಕೂ ಅನುಪಯುಕ್ತಗೊಳಿಸಲಾರೆ
ಗೊತ್ತೆನಗೆ ಅವುಗಳು ಈ ಮೊದಲು
ನುಂಗಿದವೆಲ್ಲಕ್ಕಿಂತ ವಿಶೇಷವಾದುವುಗಳೆಂದು!
ಈಗ ಉಳಿದಿರುವ ಆಸೆಯೊಂದೇ
ಕೊನೆ ಮುಟ್ಟಬೇಕು ನನ್ನ ಪ್ರೀತಿಪಾತ್ರರೊಡನೆ
ನನ್ನ ತೃಪ್ತ ಆತ್ಮಸಾಕ್ಷಿಯೊಂದಿಗೆ!
ನಮಗಿರುವುದು ಎರಡು ಜೀವನ
ಇರುವುದೊಂದೇ ಎಂದರಿತಾಗ
ಮಾತ್ರ ಎರಡನೆಯದರಾಗಮನ!