Tuesday, 2 October 2018

ಕನಸುಗಳು

ಕನಸುಗಳು...ಓಹ್
ಯಾರಿಗೆ ಬೇಡ?
ಅಲ್ಲೊಬ್ಬ ನಿಂತು ಮಾರುತ್ತಿದ್ದಾನೆ
ಇಲ್ಲ ಸುಮ್ಮನೆ ಹಂಚುತ್ತಿದ್ದಾನೆ
ಅದಕ್ಕೇ ದೊಡ್ಡ ಗುಂಪು
ಬೆಳೆಯುತ್ತಲೇ ಇದೆ....
ಸನಿಹದಲ್ಲೇ
ಇನ್ನೊಬ್ಬ ಅಂಗಡಿ ತೆಗೆದ
ನೋಡು...ಅಲ್ಲೂ ಜನ
ಸೇರುತ್ತಿದ್ದಾರೆ ಅಷ್ಟಿಲ್ಲ ..ಹೌದು
ಇವನೂ ಬಿಟ್ಟಿ ಕೊಡುತ್ತಿದ್ದಾನೆ
ಕನಸಲ್ಲ ...ಪೆನ್ನುಗಳು
ಇಂಕಿಲ್ಲದ ಪೆನ್ನುಗಳು!
ಕನಸು ನನಸಾಗದೆಂಬ ನಂಬಿಕೆ-
ಯ ಪಿನ್ನುಗಳು ಚುಚ್ಚಲು
ಆ ಕನಸುಗಳ.....ಆದರೆ
ಬೇಕಿತ್ತಾ? ಕನಸೇ ಇಲ್ಲದ ಇಂದಿನ
ವಾಸ್ತವದ ಅಬ್ಬರಗಳು
ಕಲೆಗಳು ನಿರ್ವೀರ್ಯಗೊಳಿಸುತ್ತಿರುವ
ಮೂಕ ರೋದನಗಳು
ಸಹಸ್ರನಾಮಗಳ ಕಕ್ಕುವ ಚೇಷ್ಟೆಗಳು
ಕಣ್ಣು ಮುಚ್ಚಿ ಎಳೆವ ಉರುಳುಗಳು!
ಊಂಹೂಂ....
ಕನಸು ಹತ್ತು ಕಣ್ಣಿಗೆ ಕಟ್ಟಿದರೆ
ನಾಲ್ಕರಲ್ಲಾದರೂ ನನಸು ಮಾಡುವ ಕಿಚ್ಚು
ಹತ್ತಿಸಬಲ್ಲುದು...ಕಾಯುವಾ
ಬೇಕಿದ್ದರೆ ಕನಸ ಪಡೆದು ಇಲ್ಲದಿದ್ದರೆ
ಪಿನ್ನುಗಳ ಸಧ್ಯಕ್ಕೆ ದೂರವಿಟ್ಟು!

No comments:

Post a Comment