Saturday, 29 June 2019

ಜೋರ್_ಕ_ಝಟ್ಕ

#ಸಣ್ಣಕಥೆ

ತಂಗಾಳಿ. ಏಕಾಂತ. ಹುಣ್ಣಿಮೆಯ ಬೆಳದಿಂಗಳು. ಬಾಲ್ಕನಿಯಲ್ಲಿ ಕುಳಿತ ಅವರಿಗೆ ಇಹದ ಪರಿವೆಯೇ ಇರಲಿಲ್ಲ. ಒಂದು ಕೈಯಿಂದ ಅವಳನ್ನು ಅಪ್ಪಿ ಮತ್ತೊಂದು ಕೈ ಅವಳ ಕೈ ಬೆರಳುಗಳೊಡನೆ ಬೆಸೆದಿದ್ದ. ಅವಳು ಹಾಗೆಯೇ ಅವನೆದೆಗೆ ಒರಗಿ ತೆಳುನಗೆಯೊಂದಿಗೆ ಕಣ್ಣು ಮುಚ್ಚಿ ಮೈ ಮರೆತಿದ್ದಳು. ಇದ್ದಕ್ಕಿದ್ದಂತೆ ಅವ ಮೆಲ್ಲನುಲಿದ "ಕಚ್ಚಿಬಿಡುವಾಸೆ". ಸ್ವಗತವೋ ಎನ್ನುವಷ್ಟು ಮೆಲ್ಲಗೆ. ಅವನು "ಬೇಡ" ಎಂಬುದನ್ನು ನಿರೀಕ್ಷಿಸಿರಲಿಲ್ಲ. ಅವಳೂ ಹೇಳಲಿಲ್ಲ. ಮೌನ ಸಮ್ಮತಿಯಲ್ಲವೇ. ಅವಳು ಇನ್ನೂ ಹತ್ತಿರವಾಗಿ ಮುಖ ತುಸು ಮೇಲೆತ್ತಿದಳು. ಕಣ್ಣು ಮಾತ್ರ ಮುಚ್ಚಿಯೇ ಇತ್ತು. ಕೆನ್ನೆ ರಂಗೇರಿತ್ತು. ತುಟಿ ಗಾಳಿಗೆ ಮಾತ್ರ ಪ್ರವೇಶ ಕೊಡುವಷ್ಟು ಬಿರಿದಿತ್ತು. ನಿಮಿಷಗಳೇ ಕಳೆದರೂ ಅವನ ಬಿಸಿಯುಸಿರು ಕೂಡ ಅವಳ ಅನುಭವಕ್ಕೆ ಬರದಿದ್ದಾಗ ಮೆಲ್ಲನೆ ಕಣ್ಣು ತೆರೆದಳು. ಅವನ ಬೆರಳುಗಳೊಂದಿಗೆ ಬೆಸೆದಿದ್ದ ಅವಳ ಕೈ ಬೆರಳೊಂದು ಅವನ ತುಟಿಯ ಬಳಿ. ಈಗ ಅವ ಕಣ್ಣು ಮುಚ್ಚಿದ್ದ. ಆ ಬೆರಳ ನೀಳ ಉಗುರನ್ನು ಮೆಲ್ಲನೆ ಅವಳಿಗೇ ತಿಳಿಯದಂತೆ ಕಚ್ಚುತ್ತಿದ್ದ. ಇನ್ನೆರಡು ಬೆರಳ ಉಗುರುಗಳು ಆಗಲೇ ಮಾಟವಾಗಿ ಮಾಯವಾಗಿದ್ದವು. ಅವಳ ಗೊಂದಲ ದೂರ ಮಾಡುತ್ತ ಅವನೆಂದ " ನಿನ್ನ ನೀಳ ಉಗುರುಗಳ ಕಚ್ಚುವಾಸೆ ತಡೆಯದಾದೆ. ಕ್ಷಮಿಸು". ಮೇಲೆ ಚಂದ್ರ ನಗುತ್ತಿದ್ದ.

No comments:

Post a Comment