Monday, 25 October 2021

ರಾಮ-ಅನುಜ



ಸುಂದರಿಯಾಗಿ ಬಂದ

ಶೂರ್ಪನಖಿಯ 

ಕಂಡು ಲಕ್ಷ್ಮಣ

ವಿಚಲಿತನಾಗಲಿಲ್ಲ...


ಆದರೂ

ಅಣ್ಣನಂತೆ ಅವನೂ 

ಏಕಪತ್ನೀವ್ರತಸ್ಥನೆಂದು

ಪ್ರಚಲಿತನಾಗಲಿಲ್ಲ!

Tuesday, 12 October 2021

 


ಕೆಲ ಕ್ರಿಕೆಟ್ ಗಾದೆಗಳು


೧.  ಕಟಿಂಗ್ ನೋಡಿ ಬೆಟಿಂಗ್ ಮಾಡಬೇಡ.

೨.  ಕಪ್ ಸಿಗದಿದ್ದರೆ ತೆಪ್ಪಗಿರ್ಬೇಕು!

೩.  ರನ್ ಹೊಡೆಯೋ ಅಂದ್ರೆ ರನ್ ಹೊಡೆಸ್ಕೋತಾನೆ  ಈ ಕ್ರಿಶ್ಚಿಯನ್.

೪.  ಕ್ಯಾಚ್ ಹಿಡಿದ್ರೆ ಶಾಭಾಸ್ ಬಿಟ್ಟರೆ ಶಾಭಾಜ್!

೫.  ನಾರಾಯಣ್ ಕೈಗೆ ಬಾಲ್ ಕೊಟ್ಟರೆ ಬ್ಯಾಟ್ಟರ್ ಆಚೆ  ಅದೇ ಬ್ಯಾಟ್ ಕೊಟ್ಟರೆ ಬಾಲ್ ಬೌಂಡರಿ ಆಚೆ!

೬.  ಕೋಲ್ಕತ್ತಾ ಹೇಳಿದ್ರು ಅಂಗಡಿ ಎತ್ತಪ್ಪ ಚೆನ್ನೈಗೆ ಬಂದು ಮಿಂಚಿದ ಉತ್ತಪ್ಪ

೭.  ಹೆಚ್ಚು ರನ್ ಬಂದ್ರೆ ಏಬಿಗೆ ಮ್ಯಾಚ್ ಖಂಡಿತ ಆರ್ಸಿಬಿ ಜೇಬಿಗೆ!

೮.  ಕ್ಲಿಕ್ ಆದರೆ ಮ್ಯಾಕ್ಸಿ ಮೀಟರ್ ಇಲ್ಲದ ಟ್ಯಾಕ್ಸಿ!

೯.  ಸಿಕ್ಸ್ ಹೊಡೆದು ನೋಡು ಕ್ಯಾಚ್ ಹಿಡಿದು ನೋಡು!

Tuesday, 5 October 2021

ಇರುವೆ


"ಹೆದರದಿರು
ನಾ ಇರುವೆ"
ಎಂದೆ
"ಹೆದರಿಕೆ
ನೀ ಇರುವೆ
ಎಂದೇ"
ಎಂದಳು!

Monday, 27 September 2021

ರೆಕ್ಕೆಗಳು

 ಬೇಕಿದೆ ನನಗೀಗ

ಎರಡು ಬಲಿಷ್ಟ ರೆಕ್ಕೆಗಳು||

ಅಡಿಯಿಡಲು ಎಡವಿ
ಆಗದಿರಲು ನಗೆಪಾಟಲು
ನಗರದ ರಸ್ತೆಯಲ್ಲದ
ರಸ್ತೆಗಳನ್ನು ಒಮ್ಮೆ ದಾಟಲು|
ಪಕ್ಕದ ಮರದ ಮೇಲೆ
ಮರೆಯಾಗಿ ಕುಳಿತ ಕೋಗಿಲೆ
ದೂರ ಹಾರುವ ಮುನ್ನ
ಅದಿರುವ ಎತ್ತರಕೆ ಹಾರಿ ನೋಡಲು|
ಮನೆಯ ತಾರಸಿಯಲಿ ನಿಂತಾಗ
ಕಾಣುವ ಮೊರದಗಲ ಆಗಸವ
ಸುತ್ತಿ ನಿಂತ ಅಪ್ಪನಂಥ
ಬೃಹದಾಕಾಶವನು ಅಪ್ಪಿಕೊಳ್ಳಲು!
ಎದುರು ಬರುವ ಬೈರಿಗೆಗಳ
ಕೊರೆತ ತಪ್ಪಿಸಿಕೊಳ್ಳಲೆಂದು
ಅವರ ದಾಟಿ ಮುಂದೆ ಸಾಗಿ
ಬದುಕಿಗೆ ಪೂರ್ತಿ ತೆರೆದುಕೊಳ್ಳಲು!
ಬೇಕಿದೆ ನನಗೀಗ
ಎರಡು ಬಲಿಷ್ಟ ರೆಕ್ಕೆಗಳು||

Tuesday, 14 September 2021

ಹೊನ್ನ ಜಿಂಕೆ

 ಯಾಕೆ ಕಾಡಲಿಲ್ಲ ರಾಮನನು

ಇನಿತೂ ಶಂಕೆ...
ಇರಬಹುದು ರಕ್ಕಸರ ಮಾಯೆ
ಆ ಹೊನ್ನ ಜಿಂಕೆ?
ಯಾರದೇ ದುಷ್ಕೃತ್ಯಗಳಿಗೆ
ಇರಬೇಕು ಅಂಕೆ
ದುರಾಡಳಿತದಿಂದ ದೂರ
ಆಗಬೇಕು ಲಂಕೆ.
ಆಗಬೇಕಿತ್ತು ಕುಂಭಕರ್ಣ
ರಾವಣರ ಸಂಹಾರ
ಅದಕೇ ಆದುದು ಈ ಅವತಾರ
ತಿಳಿಯೊ ಮಂಕೇ!

Monday, 30 August 2021

ಶ್ರೀಕೃಷ್ಣ ಜನ್ಮಾಷ್ಟಮಿ

 

 
ಬಿದ್ದು ಯಮುನೆಯ ಒಳಗೆ
ಎದ್ದು ಕಾಳಿಂಗನ ಮೇಲೆ
ಒದ್ದ ಶಕಟಾಸುರನ
ಮುದ್ದು ಬಾಲಗೋಪಾಲ!
ಸದ್ದು ಮಾಡದೆ ತಾನು
ಕದ್ದ ಬೆಣ್ಣೆಯನೆಲ್ಲ
ಮೆದ್ದ ಮರೆಯಲ್ಲಿಯೇ
ಮುದ್ದು ಬಾಲಗೋಪಾಲ!
ತಿದ್ದಿ ನೋಡಿದ ಮೊದಲು
ಖುದ್ದು ತಾನೇ ಬಂದ
ಬುದ್ಧಿ ಹೇಳಿದ ನಮಗೆ
ಮುದ್ದು ಬಾಲಗೋಪಾಲ!
ಬುದ್ಧ ಇವನೇ ಪರಿ-
ಶುದ್ಧ ಇವನೇ ಜಗದಿ
ಬದ್ಧ ಒಳಿತು ಮಾಡಲು ಈ
ಮುದ್ದು ಬಾಲಗೋಪಾಲ!

Sunday, 21 March 2021

ಗುಬ್ಬಿ


ಕಾಗೆಯೂ ಗಿಣಿಯೂ
ಹದ್ದೂ ಬಂದಿವೆ ನೋಡ
ಬಂದವು ಮೈನಾ
ಬುಲ್ಬುಲ್ ಕೂಡ|
ಎಲ್ಲಿರುವೆ ನೀನು
ಬೇಗ ಬಾರೇ ಗುಬ್ಬಿ
ಕಾಯುತಿರುವೆ ನಾನು
ಆಡಲು ನಿನ್ನ ತಬ್ಬಿ|
ಬೂದು ಮೈಯಲಿ
ಕಣ್ಣು ಕಪ್ಪು ಚುಕ್ಕೆ
ದೇಹ ಪುಟ್ಟವಾದರೂ
ಗಟ್ಟಿ ನಿನ್ನ ರೆಕ್ಕೆ|
ಸಣ್ಣನೆ ದನಿಯು
ತಣ್ಣಗಿದೆ ಮೈ
ನಿಂತಲ್ಲಿ ನಿಲ್ಲದೆ
ಕುಣಿವೆ ಥೈಥೈ|
ಕಾಗೆ ಹದ್ದುಗಳ
ಓಡಿಸುವೆ ದೂರ
ಹೆದರದೆ ಈಗಲೇ
ನನ್ನೆಡೆ ಬಾರ||
- ತಲಕಾಡು ಶ್ರೀನಿಧಿ

Friday, 5 March 2021

ಬಿಕರಿ

 


(ಶ್ರೀ ಹರಿವಂಶರಾಯ್ ಬಚ್ಚನ್ ಅವರ ಒಂದು ಸುಂದರ ಕವನದ ಅನುವಾದದ ಪ್ರಯತ್ನ. )

ಇಲ್ಲಿ ಎಲ್ಲ ಬಿಕರಿಯಾಗುತ್ತದೆ
ಗೆಳೆಯಾ ಜಾಗರೂಕನಾಗಿರು
ಗಾಳಿಯನ್ನೂ ಬಲೂನಿನಲ್ಲಿ
ತುಂಬಿ ಮಾರಿಬಿಡುವರು|
ನಿಜ ಮಾರಾಟವಾಗುತ್ತದೆ, ಸುಳ್ಳು ಕೂಡ
ಕಥೆ ಕಟ್ಟಿ ಎಲ್ಲವನ್ನೂ ಮಾರಬಹುದಿಲ್ಲಿ
ಮೂರು ಲೋಕಗಳಲ್ಲು ಸಮೃದ್ಧವಾಗಿ
ಹರಡಿರುವ ನೀರೂ ದೊರೆವುದು ಬಾಟಲಿಯಲ್ಲಿ|
ಹೂವಿನಂತೆಂದೂ ಬದುಕದಿರಿಲ್ಲಿ
ಅರಳುತ್ತಿದ್ದಂತೆ ಬೇಗ ಉದುರಿಬಿಡುವೆ
ಸಾಧ್ಯವಾದರೆ ಶಿಲೆಯಾಗಿ ಬಾಳು
ಉಳಿಯ ಹೊಡೆತಕ್ಕೆ ದೇವನೇ ಆಗಿಬಿಡುವೆ||

Saturday, 23 January 2021

ಬಸಿರು


ಮತ್ತೆ ನಿನ್ನ
ಎದುರುಗೊಳ್ಳಲು
ಖಾಲಿಯಾಗಿದ್ದೆ
ನಿಜ
ಆದರೆ...
ಇಷ್ಟು ತಡ ಮಾಡಿ
ಬರುವುದು ಎಂದು
ತಿಳಿಸಬೇಕಿತ್ತಲ್ಲವೇ
ನೀನೊಮ್ಮೆ?
ಖಾಲಿ ಬಿಟ್ಟರೆ
ಪಾರ್ಥೇನಿಯಮ್ ಬೆಳೆವ
ಭೀತಿ
ಮೊದಲು ಹೃದಯ
ಎಸೆದವನಲ್ಲೇ ಮೂಡಿತ್ತು
ಪ್ರೀತಿ
ತಬ್ಬಿಕೊಂಡೆ
ಬಾಚಿ ತುಂಬಿಕೊಂಡೆ
ಹುಲ್ಲುಕಡ್ಡಿಗೂ ಜಾಗ
ಬಿಡದಂತೆ.
ಈಗಿಲ್ಲಿ
ಚಿಗುರೊಡೆದಿದೆ
ಹೆಸರಾದರೂ ನಿನ್ನದಿರಲಿ
ಯಾರೂ ನಿನ್ನನ್ನ
'ಬಿಟ್ಟು ಹೋದ ಬುದ್ಧನಂತೆ'
ಎನ್ನದಿರಲಿ.