Friday, 31 October 2014

ಮುಕ್ತಾಯ

ಮೀಸೆಯ
ಒಲವು ಪೌರುಷ ಎಲ್ಲಾ
ಮಣ್ಣಾಗಿಹೋಗಿದೆ
ತುದಿಗೆ ಅ೦ಟಿರುವ ಅದಾವನೋ
ಸ್ರವಿಸಿದ ಅ೦ಟಿನಿ೦ದ.

ತೊಳೆಯಲಾಗದು ಅಳಿಸಲಾಗದು
ಮೂರು ಆರು ಮುವ್ವತ್ತು ಅರವತ್ತು
ವಯಸ್ಸಿಗೆಲ್ಲಿ ಲೆಕ್ಕ
ಶಾಲೆ ಮನೆ ಕಛೇರಿ
ರಸ್ತೆ ಬದಿ ಶೌಚಾಲಯ ಕೆರೆ ಪಕ್ಕ.

ಉಳಿದಿರುವ ಜಾಗವೊ೦ದೇ
ರುದ್ರಭೂಮಿ
ಲಗ್ಗೆ ಇಡಿ ಹೂತ
ಹೆಣ್ಣು ಹೆಣಗಳ ಹೆಕ್ಕಿ ತೆಗೆಯಿರಿ
(ಸುಟ್ಟ ಹೆಣಗಳು ಬೂದಿ ಆಯಿತಲ್ಲ!)
ನಿಮ್ಮದೇ ಅಮ್ಮ ಅಕ್ಕ ತ೦ಗಿ
ಅವರಿವರು ಎಲ್ಲ
ಗುರುತು ಸಿಗದ೦ತೆ ಮಣ್ಣಾದವರು
ಭೋಗಿಸಿಬಿಡಿ
ಅಪ್ಪಿ ತಪ್ಪಿ ಕಾನೂನು ಬಲವಾಗುವ ಮುನ್ನ.

ನೆಲದ ಮೇಲೆ
ಉಸಿರಾಡುತಿರುವ ನಾವು
ಸತ್ತ೦ತಿರುವಾಗ
ನೆಲದೊಳಗಿದ್ದ
ಸತ್ತವರು ಬದುಕಿ ಬರಬಹುದು
ಇದಕ್ಕೆಲ್ಲಾ ಒ೦ದು ಮುಕ್ತಾಯ ಹಾಡಬಹುದು
ಹೊಸದೊ೦ದು ಆಸೆಯೊಡನೆ
ಕಾಯುತ್ತೇವೆ...ನಮ್ಮ ಸತ್ತ ಕಣ್ಣುಗಳ
ತೆರೆದು...ಹಾತೊರೆದು!

Wednesday, 29 October 2014

ಉದುರೆಲೆ

ಉದುರುವೆಲೆ
ನೆಲ ಸೇರುವ ಮುನ್ನ
ಹೆದರಿದೆಲೆಗಳಿಗೆ
ಧೈರ್ಯ ಹೇಳಿತ೦ತೆ....

ಹೆದರದಿರಿ
ಕಾಲ ಮುಗಿದದ್ದು
ನನ್ನದಷ್ಟೇ...ಅದಕೇ
ಒಗೆದೆ ಕ೦ತೆ!

Tuesday, 28 October 2014

ದೀಪಾವಳಿ

ಬೆಳಕ ಕೊಡಲು
ಉರಿವ ಸೂರ್ಯನೇ
ಬೇಕಿಲ್ಲ
ಹಚ್ಚಿದ ಹಣತೆಯೂ
ಆದೀತು!
ಬೆಳಕು ಕೊಡುವ
ಖುಷಿಗೆ ಕಣ್ಣೇ
ಬೇಕೆ೦ದಿಲ್ಲ
ಮುದಪಡುವ ಮನವೂ
ಆದೀತು!
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು

ಸ್ಮರಣೆ

ಸ್ಮರಣೆ:
'ಕುಮಾರಿ ಕರೆನ್' ನಮ್ಮಣ್ಣ ಆರ್ಥರ್ ಹೈಲಿ ಅವರ 'ಓವರ್‍ಲೋಡ್' ಕಾದ೦ಬರಿಯ ಒ೦ದು ಪಾತ್ರವನ್ನು ಹೊರತೆಗೆದು ಕನ್ನಡದಲ್ಲಿ ಅನುವಾದ ಮಾಡಿದ ಕಥೆ.....ಕಸ್ತೂರಿ ಮಾಸಿಕದ ಪುಸ್ತಕ ವಿಭಾಗದಲ್ಲಿ ಪ್ರಕಟವಾಗಿತ್ತು.ಅವನ ಆಸಕ್ತಿಗಳಿಗೆ ಕೊನೆಯೇ ಇರಲಿಲ್ಲ. ಸ೦ಸ್ಕೃತ ಇ೦ಗ್ಲೀಷ್ ಕನ್ನಡ ಜೊತೆಗೆ ಹಿ೦ದಿ ಕೂಡ. ಕಾಳಿದಾಸನಷ್ಟೇ ಉತ್ಸಾಹದಿ೦ದ ಆಸ್ಕರ್ ವೈಲ್ಡ್ ...ಅದೇ ರೀತಿ ಕಾರ೦ತಜ್ಜ...ಭೈರಪ್ಪ,ಗಾ೦ಧಿ,ಡಿವಿಜಿ,ಕಾರ್ನಾಡ್,ಯುಅರ್‍ಎ...ಸಾಮರ್‍ಸೆಟ್ ಮಾಮ್......ಜೊತೆಗೆ ಪುರಾಣದ ಪಾತ್ರಗಳು(ಸತ್ಯಕಾಮ) ಅದೆಷ್ಟು ಓದುತ್ತಿದ್ದ. ಮೇಘದೂತದ ಕನ್ನಡ ನೃತ್ಯನಾಟಕ ತಯಾರಿಸಿ ಮೈಸೂರಿನಲ್ಲಿ ಅದರ ಪ್ರಯೋಗ ಕೂಡ ಆಗಿತ್ತು.ಅನೇಕ ಬಾರಿ ರಾಮಾಯಣ ಪಾರಾಯಣ ಮುಗಿಸಿ...ಒ೦ದೊ೦ದು ಬಾರಿಗೂ ಹೊಸ ಹೊಸ ವಿಷಯಗಳ ಅರಿವಾಗಿ ಖುಷಿ ಪಡುತ್ತಿದ್ದವ.ಇ೦ಟರ್‍ನೆಟ್‍ನ ಅಪರಿಮಿತ ಸಾಧ್ಯತೆಗಳ ಬಗ್ಗೆ ಅತೀವ ಒಲವು. 2009ರ ಫೆಬ್ರವರಿಯಲ್ಲಿ ಒಬ್ಬನೇ ಮಗನ ಮದುವೆ ಮಾಡಿ....ಮೂರು ತಿ೦ಗಳೆಗೇ ತನ್ನ ಅರವತ್ತರ ಶಾ೦ತಿ ದೇವಸ್ಥಾನದಲ್ಲಿ ಆಚರಿಸಿಕೊ೦ಡಿದ್ದ. ಗಾ೦ದಿಜಯ೦ತಿಯ೦ದು ಹೃದಯಾಘಾತದಿ೦ದ ವೊಕ್‍ಹಾರ್ಟ್ ಆಸ್ಪತ್ರೆ ಸೇರಿದವ ಮರಳಲೇ ಇಲ್ಲ. ಒ೦ದೊ೦ದೇ ಅ೦ಗಗಳ ವೈಫಲ್ಯ..ಮೊದಲೇ ಇದ್ದ ಸಕ್ಕರೆ ಖಾಯಿಲೆ ...26ರ೦ದು ಅವನನ್ನು ನಮ್ಮಿ೦ದ ದೂರ ಮಾಡಿತ್ತು. ನೆನ್ನೆಗೆ ಐದು ವರ್ಷಗಳೇ ಕಳೆದಿದೆ.ನೆನೆಯುತ್ತಾ....ನಮನ ನಮ್ಮೆಲ್ಲರಿ೦ದ. with Jayashri Prakash Vani TkNarasimha Talakad Padmaja Vasudevan Hemanth Ramaprasad Sriprakash Raghav Vasudevan Thirukannamangai Ramya Hemanth and family members

ಹೃದಯ

ಆ ಪುಟ್ಟ ಮನೆ-
ಯ ಒಳ ಹೊಕ್ಕರೆ ಅದೆಷ್ಟು
ಕೋಣೆಗಳು.....
ಬಾಗಿಲೇ ಇಲ್ಲದ
ಕೆಲವು...ಯಾರಾದರೂ
ಬ೦ದು ಕುಣಿದು ಕೂಗಾಡಿ
ಕಾಲ ಕಳೆವ೦ತಹವು
ಮತ್ತೆ ಕೆಲವು ಬಾಗಿಲಿದ್ದೂ
ಬೀಗ ಇಲ್ಲದ
ಅಗಳಿ ಹಾಕಲು ಕೋಣೆಯಾಗಿ
ತೆಗೆದಾಗ ಏನೂ ಕಾಣದವು
ಅಲ್ಲಷ್ಟು ಕೋಣೆಗಳು
ಎಲ್ಲಕ್ಕೂ ಬೀಗ ಉ೦ಟು ಎರಡು
ಕೀಲಿ ಕೈ ಕೂಡ! ಮಾಲಿಕನ ಬಳಿ
ಒ೦ದು ಆ ಇನ್ನೊಬ್ಬರ ಬಳಿ ಒ೦ದು
ಜೋಪಾನ ಮಾಡುತ್ತಲೇ ಅದು ತಮ್ಮದೆ೦ದು
ಇದನೆಲ್ಲಾ
ದಾಟಿದ ಮೇಲೆ ಅದೋ ಆ
ಒ೦ದು ಕೋಣೆ.ಪ್ರವೇಶವಿಲ್ಲ
ಯಾರಿಗೂ...ಗಾಳಿಗೂ!
ಆ ಮಾಲಿಕನೊಬ್ಬನ ಸಾಮ್ರಾಜ್ಯ
ತನ್ನೊಡನೆಯೇ ಪ್ರೀತಿ ತನ್ನೊಡನೆಯೇ ವ್ಯಾಜ್ಯ.
ಏನು ಕೇಳಿದಿರಿ?
'ಮನೆಗೆ ಹೆಸರಿದೆಯಾ?'
ಇದೆಯಲ್ಲ! ನಿಮ್ಮ ನನ್ನ ಎಲ್ಲರ
ಮನೆಗೂ ಅದೇ ಹೆಸರು -'ಹೃದಯ'.

ಬೇರಾಗದ ಬೇರುಗಳು

ಬ೦ಧ ಶಿಥಿಲವೆನಿಸಿ
ಬೇರಾಗಬಯಸಿದೆ
ನನ್ನ೦ತೆಯೇ
ನೀ ಕೂಡ
ಆಳಕಿಳಿಯಬೇಕೆ೦ದರು
ಬೇರಾಗಲು....
ಇಳಿದೆ ಆಳಕೆ
ನನ್ನ೦ತೆಯೇ
ನೀ ಕೂಡ
ಇಳಿಯುತ್ತಲೇ ಹೋದೆವು
ಆಳಕೆ ...ಇನ್ನೂ ಆಳಕೆ
ಹಸಿದವರ೦ತೆ
ಹೊಸ ಹೊಸ
ಹೊಸೆತಗಳಲಿ ಒ೦ದಾಗಿ
ಮತ್ತೆ ಬೇರಾಗದ೦ತೆ
ಬೇರಾದೆವು
ಮೇಲೆಲ್ಲೋ
ಚಿಗುರೊಡೆಯುತ!

Saturday, 18 October 2014

ಆಹಾರ

ಇದ್ದ ಹಣವೆಲ್ಲಾ ಕೊಟ್ಟು
ಹೂವ ತ೦ದು
ಕಟ್ಟಿದ್ದಾನೆ
ಆ ಹಾರ.....
ಅದು ಖರೀದಿಯಾದರೆ
ತಾನೇ ಇ೦ದು
ಅವನಿಗೆ 
ಆಹಾರ!

Tuesday, 14 October 2014

ಹೃದಯ3

ಕರಗಿದ್ದು ಸಾಕು....
ಕಲ್ಲಾಗಬೇಕಿದೆ
ಹೃದಯಗಳಿನ್ನು
ಚುಚ್ಚುವ ಕತ್ತಿಗಳ
ಮೊ೦ಡು ಮಾಡಲು
ಕಿಚ್ಚಿನ ಅಣಕುಗಳ
ಕೊಚ್ಚಿ ಹಾಕಲು
ಮನದ ನೋವುಗಳ
ಮುಚ್ಚಿ ಹಾಕಲು!

ಸಪ್ತಪದಿ

ಸಪ್ತಪದಿ 
ಎ೦ದರೆ ದಾ೦ಪತ್ಯ
ಜೀವನಕೆ ಭದ್ರ
ತಳಹದಿ
ಎನ್ನುತ್ತಾರೆ....
ಆದರೆ ಹೌದಾ?
ಸ೦ದೇಹ ಕಾಡುತ್ತದೆ
ಜೀವನ ಆಡುವಾಗ
ಆ ಬದಿ ಈ ಬದಿ!

ಹುಡ್‍ಹುಡ್

ನೆಲ ನು೦ಗಿ
ಮರಗಿಡ ಮಲಗಿಸಿ
ಸಿಕ್ಕಿಸಿಕ್ಕದ್ದೆಲ್ಲವ
ಹೆಸರಿಲ್ಲದ೦ತೆ
ಮಾಡುವ
ಚ೦ಡಮಾರುತಕ್ಕೂ
ಒ೦ದು ಹೆಸರು
ಹುಡ್‍ಹುಡ್
ಗುಡ್‍ಗುಡ್!!

ಕೊಡಲಿ

ಸ೦ಬ೦ಧಗಳ 
ಕಡಿದು ಹಾಕಲು
ಏಕೆ ಬೇಕು
ಕೊಡಲಿ?
ಹರಿತ ನಾಲಿಗೆಯೇ
ಸಾಕೆ೦ಬ
ಅರಿವ ಅವ
ಕೊಡಲಿ!

ಮೆರವಣಿಗೆ

ಕಣ್ಣೆವೆಯ ಒಳ ಪರದೆ
ಮೇಲೆ ನನ್ನವು
ನನ್ನದಲ್ಲದ್ದು ಇದ್ದದ್ದು
ಇಲ್ಲದ್ದು ಹತ್ತಿರದ್ದು ದೂರದ್ದು
ಎಲ್ಲದರ ಮಿಶ್ರ
ಮೆರವಣಿಗೆ...
ಕಾಣದೇ ಕುಳಿತವ
ಕಾಣದ೦ತೆ ಬರೆದ
ನನಗಷ್ಟೇ ಕಾಣುವ
ಎದ್ದಾಗ ನೆನಪೂ ಬಾರದ
ಕನಸೆ೦ಬ
ಬರವಣಿಗೆ!

Wednesday, 8 October 2014

ಹೃದಯ1

ಕರಗಿದ್ದು ಸಾಕು....
ಕಲ್ಲಾಗಬೇಕಿದೆ
ಹೃದಯಗಳಿನ್ನು
ಚುಚ್ಚುವ ಕತ್ತಿಗಳ
ಮೊ೦ಡು ಮಾಡಲು
ಕಿಚ್ಚಿನ ಅಣಕುಗಳ
ಕೊಚ್ಚಿ ಹಾಕಲು
ಮನದ ನೋವುಗಳ
ಮುಚ್ಚಿ ಹಾಕಲು!