Sunday, 22 November 2015

ಮೊದಲ ಪಾಠಶಾಲೆ

ಮನೆಯೇ ಮೊದಲ ಪಾಠಶಾಲೆ
ತಾಯಿಯೇ ಅಲ್ವಾ ಮೊದಲ ಗುರು
ಬಯಸಿದುದ ಕೊಡುವ ಕಾಮಧೇನು
ನಾನೆಂದಿಗೂ ಅವಳ ಮುದ್ದು ಕರು
ಮನೆಯೇ ಮೊದಲ ಗಾನಮಂದಿರ
ಅಮ್ಮನ ಜೋಗುಳ ತೋರುತ ಚಂದಿರ
ಮನೆಯಲೇ ಇಟ್ಟದ್ದು ಮೊದಲ ಹೆಜ್ಜೆ
ಆಗಲೇ ಅಮ್ಮ ತಂದು ಕಟ್ಟಿದಳು ಗೆಜ್ಜೆ
ಮನೆಯೇ ಮೊದಲ ನಾಟ್ಯಶಾಲೆ
ಬೆಳೆಸಿದಳವಳು ಇದ ಕಲಿಸುತಲೆ
ಮನೆಯಲೇ ಇದ್ದುದು ಮೊದಲ ಗುಡಿ
ಸ್ತೋತ್ರವ ಹೇಳಿದ ತೊದಲ ನುಡಿ
ಮನೆಯೇ ಮೊದಲ ವ್ಯಾಯಾಮಶಾಲೆ
ಬಗ್ಗುತ ಬೀಳುತ ತಟ್ಟಿದ ಚಪ್ಪಾಳೆ
ಮನೆಯಲೇ ತೆಗೆದುದು ನನ್ನ ಮೊದಲ ಚಿತ್ರ
ಫೋನಿನಲ್ಲೇ ಕ್ಯಾಮರ..ಎಂಥ ವಿಚಿತ್ರ
ಮನೆಯ ಟೀವಿಯೇ ತೋರಿದೆ ನನಗೆ ವಿಶ್ವವೆಲ್ಲ
ನಾ ಕಂಡದೆಷ್ಟೋ ಪಾಪ ನೀವೇ ಕಂಡಿಲ್ಲ!

ಸೆಲ್ಫಿ

ಎಲ್ಲ ರಾಜಕೀಯ 
ಮುಖಂಡರೊಡನೆಯ ಸೆಲ್ಫಿಗಳು
ಮುರುಕು ಗೋಡೆಯಲಿ
ರಾರಾಜಿಸುತ್ತಿದ್ದವು
ಒಲೆ ಹಚ್ಚಲು ಇದ್ದ
ಸೀಮೆಣ್ಣೆ ಸುರಿದುಕೊಂಡು
ಸತ್ತ ಆ ರೈತನ
ಮೃತದೇಹದೊಂದಿಗೆ!

ಅಂತಿಮ ಆಕ್ರಮಣ


 
ಸೀಟಿ ಶಬ್ದ ಮಾಡಿತು
ಮಧ್ಯದ ಗೆರೆ ಕಣ್ಣಿಗೊತ್ತಿಕೊಂಡು
ಮುಂದೆ ನುಗ್ಗಿದೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಕೊನೆಯ ಆಕ್ರಮಣ
ನನ್ನ ಈ ಆಕ್ರಮಣದ ಮೇಲೇ
ಈ ಪಂದ್ಯ ನಿಂತಿದೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಎದುರಲ್ಲಿರುವವರ ಕಣ್ಣಲ್ಲಿ ಸವಾಲು
ಹಿಂದಿನಿಂದ ಒಕ್ಕೊರಲಿನ
ಪ್ರಚೋದನೆ 'ಕಮಾನ್'
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಈಗ ಕಣ್ಣು ಅವರುಗಳ ಕಾಲಿನ
ಕೈಗಳ ಮೇಲೆ ಕೇಂದ್ರೀಕೃತ
ಒಮ್ಮೆ ಒಬ್ಬರನ್ನಾದರೂ ಮುಟ್ಟೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇದೇನು ಎದುರಿಗೆ ಇಷ್ಟೊಂದು
ಕಾಲುಗಳು..ತಲೆ ಎತ್ತಿದೆ ಅಲ್ಲಿ
ಎಷ್ಟೊಂದು ಜನ ಎಲ್ಲ ಔಟಾಗಿದ್ದವರು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಗಾಂಧಿ,ನೆಹರು,ಭಗತ್,ಆಝಾದ್
ಅಣ್ಣಾವ್ರು,ಶಂಕರ್,ವಿಷ್ಣು ಕೂಡ
ಕಾರಂತ ಕುವೆಂಪು ಬೇಂದ್ರೆ ಅಜ್ಜಂದಿರು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಲಕ್ಷಾಂತರ ಜನ ಎಲ್ಲ ಅಲ್ಲೆ
ದೂರು ಸಲ್ಲಿಸುವೆನೆಂದು ಅತ್ತ
ರೆಫರಿಯೆಡೆಗೆ ನೋಡಿದರೆ-ನಿರ್ಲಿಪ್ತ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇರಲಿ ನಾನು ವಿರೋಧ ಸೂಚಿಸುವೆ ನಂತರ
ನನ್ನ ಪಂದ್ಯಶ್ರೇಷ್ಟ ಪ್ರಶಸ್ತಿಗಳ ಹಿಂದಿರುಗಿಸಿ
ಮೊದಲು ಒಂದಾದರೂ ಅಂಕ ಬೇಕು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ವೌವ್! ಅಲ್ಲಿ ನೋಡು ಅಪ್ಪ ಅಮ್ಮ ಅಣ್ಣ
ಅಜ್ಜಿ ಅಜ್ಜಂದಿರು ಎಲ್ಲ ನನ್ನವರು
ಅಲ್ಲಿಂದಲೇ ಹುರಿದುಂಬಿಸುತ್ತಿದ್ದಾರೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇದೇನು ಅಷ್ಟರಲ್ಲಿ ಈ ಗಟ್ಟಿ ಹಿಡಿತ
ಓ...ಕೇಡಿ ಏಡಿ ಹಿಡಿದಿರುವುದು
ಹಿಂದೆ ತಿರುಗಿದೆ ಗೆರೆ ಮುಟ್ಟಲು
"ಕಬಡ್ಡಿ...ಕಬ..ಡ್ಡಿ...ಕ..ಬ..ಡ್ಡಿ'
'ಕಮಾನ್','ನಿಧೀ','ಟಿಕ‍ಎಸ್'
'ಸರ್','ಗುರೂ','ರೀ','ಅಪ್ಪಾ'
ಎಷ್ಟೊಂದು ಜನರ ಬೆಂಬಲ ಮತ್ತೆ
"ಕ ಬ ಡ್ಡಿ ಕ ಬ ಡ್ಡಿ ಕ ಬ ಡ್ಡಿ'
ಸಿಕ್ಕಲಿಲ್ಲ ಇನ್ನೂ..ಇನ್ನೂ ಹಿಡಿದವು
ಏಡಿಗಳು ಎಲ್ಲೆಡೆ..ಕೊಸರಿದೆ ಆಗಲಿಲ್ಲ
ಬಿದ್ದೆ..ತಲೆ ಕೆಳಗೆ ಅಮ್ಮನ ಮಡಿಲು
"ಕ ..ಬ.. ಡ್ಡಿ...ಕ ...ಬ '
ಗೆರೆ ಸಿಕ್ಕಂತಾಯಿತು ಒಮ್ಮೆ
ರೆಫರಿಯತ್ತ ನೋಡಿದೆ ಆಸೆಯಿಂದ
ಅವನ ಕತ್ತಲ್ಲಿ ಸ್ಟೆತಾಸ್ಕೋಪ್ ಹೇಗೆ?
ತಲೆಯಾಡಿಸಿದ.......ಎಲ್ಲ ಸ್ತಬ್ಧ
ನಾನು...ಅವನು.....ಎಲ್ಲರೂ!

ಮನುಷ್ಯತ್ವ

ಇಲ್ಲಿ
ಬೀಳುವ ಹೆಣಗಳಿಗೆ
ಬ್ರಹ್ಮ ವಿಧಿ ಎಂಬೆಲ್ಲಾ 
ಲಿಖಿತಗಳಿಲ್ಲ
ಈಗ ತುಂಬಾ
ಮುಂದೆ ಹೋಗಿಯಾಗಿದೆ
ನರಜನ್ಮದ ಕಬಂಧ ಬಾಹುಗಳು
ಯಾರು
ಯಾರನ್ನಾದರೂ ಹೇಗೆಯಾದರೂ
ಎಲ್ಲಿಯಾದರೂ
ಕೊಚ್ಚಿ ಇಲ್ಲವಾಗಿಸಿಬಿಡುತ್ತೇವೆ
ಹೌದು
ಮೊದಲು ಆ ಮನುಷ್ಯತ್ವ
ಎಂಬುದನ್ನೇ
ಕೊಂದು ಹಾಕಿದ್ದೇವೆ
ಈಗೇನು
ಮನುಷ್ಯ ಮಾನವ ಎಂದೆಲ್ಲಾ
ಅನ್ನದಿದ್ದರೆ.....
who cares
ರಕ್ತ ಕೆಂಪಗೂ ಇದೆ
ತಂಪಾಗೂ ಇದೆ!

ಅಹವಾಲು!

ಪಟ್ಟಿಯಲ್ಲಿರುವ
ಸಾಲು ಸಾಲು
ಗೆಳೆಯರಲ್ಲಿ
ನನ್ನದೊಂದು ಪುಟ್ತ
ಅಹವಾಲು!
ದಿನಕ್ಕೊಮ್ಮೆ
ನೋಡಬಾರದೇಕೆ
ನನ್ನ ಈ wallಉ?
ಒಂದಾದರೂ ಸಿಗಬಹುದು
ಒಳ್ಳೆಯ ಸಾಲು
ಬೇಡವಾ? ಬಿಡಿ ನನಗೆ
ಅದು ಮಾಮೂಲು!

ಅಳಿಸುವುದು

ಅಳಿಸುವುದು ಸುಲಭ
ಗೆಳೆಯಾ
ಕೆನ್ನೆಮೇಲಿನ
ಕಂಬನಿಯ ಕಲೆ
ಅಳಿಸಲಾರೆ 
ಘಾಸಿಗೊಂಡ
ಹೃದಯದ ಕಲೆ!

ಲೇಖನಿ

ಅಂದು ಬರೆವವರ
ಲೇಖನಿಗಿತ್ತು ವಿಷ ಕಕ್ಕದೆ
ಸಮಾಜ ತಿದ್ದುವ 
ಶಕ್ತಿ 
ಇಂದು ಮಸಿ ಮುಖಕೆ
ಲೇಖನಿಯಲಿ ವಿಷ
ಹಿಂತಿರುಗಿಸುತ್ತಿದ್ದಾರೆ
ಪ್ರಶಸ್ತಿ!

ಗೋಡೆಗಳು

ಗೋಡೆಗಳು
ಎಷ್ಟು ವಿಧ ಎಷ್ಟು ಭಿನ್ನ!
ಒಂದಕ್ಕೊಂದು
ಅಂಟಿಕೊಂಡೂ ಒಂದಕ್ಕೊಂದು
ಸಂಭಂಧವಿಲ್ಲದ್ದು
ದಿನಕ್ಕೊಂದು ಪಟ
ಬದಲಿಸುತ್ತಾ ಅಥವಾ
ಅಕ್ಕರಗಳ ಮೆರವಣಿಗೆ ಮಾಡುತ್ತಾ
ಕೆಲವರ ಬೆನ್ನುತಟ್ಟುತ್ತಾ
ಮತ್ತೆ ಕೆಲವರ ಕಾಲೆಳೆಯುತ್ತಾ
ಖುಷಿಯ ಬಣ್ಣದೋಕುಳಿಯಂತೆಯೇ
ಕೆಸರೆರಚಾಟದ ಕೀಟಲೆಗಳು
ನಗಿಸುವ ಅಳಿಸುವ
ಅಳಿಸಲಾಗದೆ ಮನದಲ್ಲೇ ಉಳಿಸುವ
ನೂರು ಬರಹಗಳು
ಆಗೀಗ ತಡೆಗೋಡೆಗಳು
ಒಂದೊಮ್ಮೆ
ನಿರಾಳವಾಗಬೇಕೆಂದರೆ ಮತ್ತೆ
ಪ್ರೈಮರ್ ಹೊಡೆದು ಒಂದೆರಡು
ಪದರ ಬಿಳಿಯ ಬಣ್ಣ ಬಳಿದ
ಶುಭ್ರ ಸ್ವಚ್ಛ ಗೋಡೆ
ಬೇಕೆನಿಸುತ್ತಿದೆ!

ಕನ್ನಡಕ

ಮೊದಲ ಆ ದೊಡ್ಡ ಅಕ್ಷರ
ನಂತರದ ಎರಡು, ನಾಲ್ಕು ಅಕ್ಷರಗಳ ಸಾಲು
ಇಷ್ಟೇ ಓದಲಿಕ್ಕಾದದ್ದು
ಈಗ ಒಂದೆಡೆ ನನ್ನ ಗಲ್ಲವಿಟ್ಟು ಯಂತ್ರದ
ಇನ್ನೊಂದೆಡೆಯಿಂದ ಬೆಳಕಿನ ಕಿಡಿಯೊಂದು
ಆ ಕಿರಿಯ ವೈದ್ಯೆಯ ಕಡೆಯಿಂದ
ಮತ್ತೆ ಕಣ್ಣಿಗೆರಡು ತೊಟ್ಟು ತಂಪು ಹನಿಗಳು
ಆಗಸ..ಅಲ್ಲ ಸೂರಿಗೆ ಮುಖ ಮಾಡಿ
ಕಣ್ಣು ಮುಚ್ಚಿ ಅದೆಷ್ಟು ಹಾಡು ಗುನುಗುಟ್ಟಿದೆನೋ...
ಎರಡು ಬಾರಿ ಕಣ್ತೆರೆಸಿ ಮತ್ತೆ ಹನಿಸಿ ಹೋದವರು
ಬರುವುದೇ ಇಲ್ಲವೇ?....ಅಗೋ
ಇಂಪು ದನಿ ನನ್ನ ಹೆಸರು ಕರೆದಾಗ
ಕಾಯುತ್ತ ಕುಳಿತ ಉಳಿದವರತ್ತ ಒಂದು ಸಣ್ಣ ನಗೆ
ಮತ್ತೆ ಈ ಹಿರಿಯ ವೈದ್ಯರೂ ಅದೇ ಆಟಗಳಾಡಿ
ದೂರದೃಷ್ಟಿಗೆ ಒಂದು prescription
ಎದುರಿನ ಕನ್ನಡಕದಂಗಡಿ ..ಹೊರಗೇ ಕೆಲವರು
ಅಡ್ಡ ಹಾಕಿ
ಯಾವ ಬಣ್ಣ....ಹಸಿರಾ? ಕೇಸರಿಯಾ?
ಇಲ್ಲ ನೀಲಿ? ಮೈ ಝುಮ್.....
ಹಳದಿ? ...ಎಲ್ಲ ಬಣ್ಣಗಳಿಗೂ ಒಂದೊಂದು ಬಣ್ಣ
ಬಣ ನೆನಪಾಗುತ್ತಿದೆಯಲ್ಲ....
plain...ದೂರದ್ದು ಸ್ಪಷ್ಟ ಕಾಣಲು ಅಷ್ಟೇ ಎಂದೆ
ಎಲ್ಲರೂ ಮಾಯ....ಅಂಗಡಿಯವನು
ನಗುತ್ತಾ ಚೀಟಿಗೆ ಕೈ ಚಾಚಿದ.

ಖಾಲಿ ಹಾಳೆ!

ನಿನ್ನೆಯದು
ಇ೦ದಿಲ್ಲ ಇರದು
ಇ೦ದಿನದು
ನಾಳೆ....
ಬೇಕೋ ಬೇಡವೋ
ಪ್ರತಿದಿನದ
ಬೆಳಗು ಖಾಲಿ
ಹಾಳೆ!

ಮೂಡಿಲ್ಲ!

ದೂರಿದಳಾಕೆ
ಬೆಳಗಿನಿಂದ
ನೀ ಏನೂ 
ಮಾಡಿಲ್ಲ....
ಆಕಳಿಸುತ್ತಾ
ಅವನೆಂದ
ನನಗೆ ಇನ್ನೂ
ಮೂಡಿಲ್ಲ!

ಕನಸುಗಳು

ಬಾಲ್ಯದ
ನನಸಾಗಲೊಲ್ಲದ
ಅನ೦ತ ಕನಸುಗಳ...
ಹರಯದ
ಹತ್ತಾರು
ಹುಚ್ಚು ಕನಸುಗಳ...
ಕ೦ಡ ಮೇಲೆ
ಈಗ
ಅಲ್ಲೊ೦ದು ಇಲ್ಲೊ೦ದು
ಕಾಣುತಿರುವ
ಕನಸುಗಳು
ಜೀವ೦ತವೆನಿಸುತ್ತವೆ
ಬದುಕಿಗೆ ಹತ್ತಿರವೆನಿಸುತ್ತವೆ
ನನ್ನವಾಗಿ......ನನಗಾಗಿ....
ನನಸಾಗಬಲ್ಲವೆನಿಸುತ್ತದೆ!!!

ಒ೦ದು ಹನಿ

ಸುರಿವ
ಮಳೆಯಿ೦ದ
ಒ೦ದು ಹನಿ
ಹಿಡಿದು ತ೦ದೆ
ನೀನಾರು? ಎ೦ದೆ
ನಿನ್ನ ಅಕ್ಕ ಪಕ್ಕ ಹಿ೦ದೆ ಮು೦ದೆ
ಬ೦ದ ಇತರ ಹನಿಗಳಿಗೆ
ನೀನೇನು? ಎ೦ದೆ
ಬಿಕ್ಕಿತು...
ಅಲ್ಲ ನಕ್ಕಿತು ಮತ್ತೆ ಹೇಳಿತು...
ನಮ್ಮಲ್ಲಿ ನೀನು ನಾನು
ಜಾತಿ ಧರ್ಮ ಗ೦ಡು ಹೆಣ್ಣು
ಎ೦ದೆಲ್ಲಾ ಇಲ್ಲವಲ್ಲ
ನಾ ತಿಳಿದಿರುವುದಿಷ್ಟೇ
ನಾವೆಲ್ಲಾ ಒ೦ದೇ!

ಮಳೆಯೆ೦ದರೆ....

ಮಳೆಯೆ೦ದರೆ....
ಹೀಗೇ.....
ನಿಮ್ಮ ನೂರು
ಕಾರ್ಯಕ್ರಮಕ್ಕೆ
ಅಡ್ಡಿ ಪಡಿಸಬಹುದು
ಫಕ್ಕನೆ....ದೀಪಗಳೆಲ್ಲಾ
ಆರಿ ತಣ್ಣಗಾಗಬಹುದು
ಹೊರಗಿದ್ದರೆ
ಸುತ್ತಲಿನೆಲ್ಲರ ಮೇಲೆ
ಉರಿದು ಬೀಳುವ೦ತಾಗಬಹುದು

ಆದರೂ.......
ಕುಳಿತು ನೋಡುತ್ತಿದ್ದರೆ...
ಹೌದು
ಕುಳಿತು ನೋಡುತ್ತಿದ್ದರೆ...
ಈ ಭುವಿಯಾಗಸದ
ಮಿಲನ.....
ಮುದ
ಕೊಡದಿರದು!!!

ಫೇಸ್‍ಬುಕ್‍ನಲ್ಲಿ:


ಭಾವನೆಗಳಿಗೆ ಬಣ್ಣ ತು೦ಬಿ
ಬರೆಯುವರಿದ್ದಾರೆ.
ಚಿತ್ರಗಳಿಗೆ ಜೀವ ತು೦ಬುವ
ಗೆರೆ ಎಳೆಯುವವರಿದ್ದಾರೆ.
ತಿಳಿಹಾಸ್ಯದ ಮಾತುಗಳಿ೦ದ ನೋವ
ಮರೆಸುವರಿದ್ದಾರೆ.
ದಿನಕ್ಕೊ೦ದು ರೀತಿ ತಮ್ಮನ್ನೇ
ಮೆರೆಸುವರಿದ್ದಾರೆ.
ವಿಷಯವೇ ಇಲ್ಲದೇ ಸುಮ್ಮನೆ
ಕೊರೆಯುವವರಿದ್ದಾರೆ.
ಯಾರು ಏನಾದರೂ ತಿಳಿಯಲಿ
ಖರೆ ನುಡಿಯುವವರಿದ್ದಾರೆ.
ಓದಿದ ಬರಹಗಳಿಗೆ
ಮರೆಯದೇ ಸ್ಪ೦ದಿಸುವವರಿದ್ದಾರೆ.
ಓದಿದರೋ ಇಲ್ಲವೋ ತಿಳಿಯದ೦ತೆ
ಮರೆಯಲ್ಲಿರುವವರೂ ಇದ್ದಾರೆ.
ಯಾವುದೋ ಪ್ರೊಫೈ‍ಲ್‍ಗಳಲ್ಲಿ
ಬೇರೆ ಯಾರೋ ಇರುತ್ತಾರೆ.
ಸುಮ್ಮನೆ ಕಿರಿಕಿರಿ ಮಾಡುವ ಇವರು
ಮೋರೆ ಯಾರದೋ ತೋರುತ್ತಾರೆ.

ಆಶ್ವಾಸನೆ

ಚುನಾವಣೆ ಗೆಲ್ಲಲು
ಸಾಲದು ಬರಿಯ
ಆಶ್ವಾಸನೆ.........
ತೋರುತಿರಬೇಕು
ಹಂಚಲು ತಂದ
Cash ವಾಸನೆ!

ಕಾಮೇಚ

ನಮ್ಮ 
ಮದುವೆಯ ವಿಡಿಯೋ
ಮತ್ತೆ ನೋಡುತಿದ್ದೆ
ಗೆಳೆಯಾ.....
ಈಗಲೇ ನನಗೆ ತಿಳಿದದ್ದು
ಪುರೋಹಿತರು ಹೇಳಿದ್ದು
ನೀ ಹೇಳದ್ದು
ಕೆಲ ಪದಗಳು....
ಧರ್ಮೇಚ ಅರ್ಥೇಚ
ಹೇಳಿದ ನೀ
ಕಾಮೇಚ
ಹೇಳದಿದ್ದುದು!

ಎಡ-ಬಲ

ಗುಡಿಯ ಬಾಗಿಲಲ್ಲಿ
ನೂರಾರು ಪಾದರಕ್ಷೆಗಳು
ಎಡಕ್ಕೆ ಸವೆದವೂ ಇದೆ
ಬಲಕ್ಕೆ ಸವೆದವೂ.....
ಹೊಸದಲ್ಲದೆಯೂ
ಸಮನಾಗಿರುವುದು ಸಹ
ನೆಲದ ಮಣ್ಣಲ್ಲಿ ನೋಡು
ಹೆಜ್ಜೆ ಗುರುತುಗಳು
ಸ್ಪಷ್ಟ ಎಡ...ಸ್ಪಷ್ಟ ಬಲ
ಪೂರಾ ಕಾಣದಿದ್ದರೂ
ಕಣ್ಣು ಹೇಳುತ್ತದೆ ...ಇದು ಹೀಗೇ
ಆದರೂ ಅಲ್ಲೊಂದು ಇಲ್ಲೊಂದು
ದಿಟ್ಟ ಹೆಜ್ಜೆಗಳು....ಅವಕ್ಕೆ ಎಡಬಲ
ಇಲ್ಲ......
ಎಡಕ್ಕೂ ಬಲವಿದೆ
ಬಲವೂ ಎಡವಿದೆ
ಊಂಹೂಂ....ನೀ ಸ್ಪಷ್ಟವಿಲ್ಲ
ನೀನು ನೀನೇ....ನಾನು ನಾನೇ!