Sunday 22 November 2015

ಕನ್ನಡಕ

ಮೊದಲ ಆ ದೊಡ್ಡ ಅಕ್ಷರ
ನಂತರದ ಎರಡು, ನಾಲ್ಕು ಅಕ್ಷರಗಳ ಸಾಲು
ಇಷ್ಟೇ ಓದಲಿಕ್ಕಾದದ್ದು
ಈಗ ಒಂದೆಡೆ ನನ್ನ ಗಲ್ಲವಿಟ್ಟು ಯಂತ್ರದ
ಇನ್ನೊಂದೆಡೆಯಿಂದ ಬೆಳಕಿನ ಕಿಡಿಯೊಂದು
ಆ ಕಿರಿಯ ವೈದ್ಯೆಯ ಕಡೆಯಿಂದ
ಮತ್ತೆ ಕಣ್ಣಿಗೆರಡು ತೊಟ್ಟು ತಂಪು ಹನಿಗಳು
ಆಗಸ..ಅಲ್ಲ ಸೂರಿಗೆ ಮುಖ ಮಾಡಿ
ಕಣ್ಣು ಮುಚ್ಚಿ ಅದೆಷ್ಟು ಹಾಡು ಗುನುಗುಟ್ಟಿದೆನೋ...
ಎರಡು ಬಾರಿ ಕಣ್ತೆರೆಸಿ ಮತ್ತೆ ಹನಿಸಿ ಹೋದವರು
ಬರುವುದೇ ಇಲ್ಲವೇ?....ಅಗೋ
ಇಂಪು ದನಿ ನನ್ನ ಹೆಸರು ಕರೆದಾಗ
ಕಾಯುತ್ತ ಕುಳಿತ ಉಳಿದವರತ್ತ ಒಂದು ಸಣ್ಣ ನಗೆ
ಮತ್ತೆ ಈ ಹಿರಿಯ ವೈದ್ಯರೂ ಅದೇ ಆಟಗಳಾಡಿ
ದೂರದೃಷ್ಟಿಗೆ ಒಂದು prescription
ಎದುರಿನ ಕನ್ನಡಕದಂಗಡಿ ..ಹೊರಗೇ ಕೆಲವರು
ಅಡ್ಡ ಹಾಕಿ
ಯಾವ ಬಣ್ಣ....ಹಸಿರಾ? ಕೇಸರಿಯಾ?
ಇಲ್ಲ ನೀಲಿ? ಮೈ ಝುಮ್.....
ಹಳದಿ? ...ಎಲ್ಲ ಬಣ್ಣಗಳಿಗೂ ಒಂದೊಂದು ಬಣ್ಣ
ಬಣ ನೆನಪಾಗುತ್ತಿದೆಯಲ್ಲ....
plain...ದೂರದ್ದು ಸ್ಪಷ್ಟ ಕಾಣಲು ಅಷ್ಟೇ ಎಂದೆ
ಎಲ್ಲರೂ ಮಾಯ....ಅಂಗಡಿಯವನು
ನಗುತ್ತಾ ಚೀಟಿಗೆ ಕೈ ಚಾಚಿದ.

No comments:

Post a Comment