Sunday 22 November 2015

ಅಂತಿಮ ಆಕ್ರಮಣ


 
ಸೀಟಿ ಶಬ್ದ ಮಾಡಿತು
ಮಧ್ಯದ ಗೆರೆ ಕಣ್ಣಿಗೊತ್ತಿಕೊಂಡು
ಮುಂದೆ ನುಗ್ಗಿದೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಕೊನೆಯ ಆಕ್ರಮಣ
ನನ್ನ ಈ ಆಕ್ರಮಣದ ಮೇಲೇ
ಈ ಪಂದ್ಯ ನಿಂತಿದೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಎದುರಲ್ಲಿರುವವರ ಕಣ್ಣಲ್ಲಿ ಸವಾಲು
ಹಿಂದಿನಿಂದ ಒಕ್ಕೊರಲಿನ
ಪ್ರಚೋದನೆ 'ಕಮಾನ್'
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಈಗ ಕಣ್ಣು ಅವರುಗಳ ಕಾಲಿನ
ಕೈಗಳ ಮೇಲೆ ಕೇಂದ್ರೀಕೃತ
ಒಮ್ಮೆ ಒಬ್ಬರನ್ನಾದರೂ ಮುಟ್ಟೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇದೇನು ಎದುರಿಗೆ ಇಷ್ಟೊಂದು
ಕಾಲುಗಳು..ತಲೆ ಎತ್ತಿದೆ ಅಲ್ಲಿ
ಎಷ್ಟೊಂದು ಜನ ಎಲ್ಲ ಔಟಾಗಿದ್ದವರು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಗಾಂಧಿ,ನೆಹರು,ಭಗತ್,ಆಝಾದ್
ಅಣ್ಣಾವ್ರು,ಶಂಕರ್,ವಿಷ್ಣು ಕೂಡ
ಕಾರಂತ ಕುವೆಂಪು ಬೇಂದ್ರೆ ಅಜ್ಜಂದಿರು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಲಕ್ಷಾಂತರ ಜನ ಎಲ್ಲ ಅಲ್ಲೆ
ದೂರು ಸಲ್ಲಿಸುವೆನೆಂದು ಅತ್ತ
ರೆಫರಿಯೆಡೆಗೆ ನೋಡಿದರೆ-ನಿರ್ಲಿಪ್ತ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇರಲಿ ನಾನು ವಿರೋಧ ಸೂಚಿಸುವೆ ನಂತರ
ನನ್ನ ಪಂದ್ಯಶ್ರೇಷ್ಟ ಪ್ರಶಸ್ತಿಗಳ ಹಿಂದಿರುಗಿಸಿ
ಮೊದಲು ಒಂದಾದರೂ ಅಂಕ ಬೇಕು
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ವೌವ್! ಅಲ್ಲಿ ನೋಡು ಅಪ್ಪ ಅಮ್ಮ ಅಣ್ಣ
ಅಜ್ಜಿ ಅಜ್ಜಂದಿರು ಎಲ್ಲ ನನ್ನವರು
ಅಲ್ಲಿಂದಲೇ ಹುರಿದುಂಬಿಸುತ್ತಿದ್ದಾರೆ
"ಕಬಡ್ಡಿ...ಕಬಡ್ಡಿ...ಕಬಡ್ಡಿ'
ಇದೇನು ಅಷ್ಟರಲ್ಲಿ ಈ ಗಟ್ಟಿ ಹಿಡಿತ
ಓ...ಕೇಡಿ ಏಡಿ ಹಿಡಿದಿರುವುದು
ಹಿಂದೆ ತಿರುಗಿದೆ ಗೆರೆ ಮುಟ್ಟಲು
"ಕಬಡ್ಡಿ...ಕಬ..ಡ್ಡಿ...ಕ..ಬ..ಡ್ಡಿ'
'ಕಮಾನ್','ನಿಧೀ','ಟಿಕ‍ಎಸ್'
'ಸರ್','ಗುರೂ','ರೀ','ಅಪ್ಪಾ'
ಎಷ್ಟೊಂದು ಜನರ ಬೆಂಬಲ ಮತ್ತೆ
"ಕ ಬ ಡ್ಡಿ ಕ ಬ ಡ್ಡಿ ಕ ಬ ಡ್ಡಿ'
ಸಿಕ್ಕಲಿಲ್ಲ ಇನ್ನೂ..ಇನ್ನೂ ಹಿಡಿದವು
ಏಡಿಗಳು ಎಲ್ಲೆಡೆ..ಕೊಸರಿದೆ ಆಗಲಿಲ್ಲ
ಬಿದ್ದೆ..ತಲೆ ಕೆಳಗೆ ಅಮ್ಮನ ಮಡಿಲು
"ಕ ..ಬ.. ಡ್ಡಿ...ಕ ...ಬ '
ಗೆರೆ ಸಿಕ್ಕಂತಾಯಿತು ಒಮ್ಮೆ
ರೆಫರಿಯತ್ತ ನೋಡಿದೆ ಆಸೆಯಿಂದ
ಅವನ ಕತ್ತಲ್ಲಿ ಸ್ಟೆತಾಸ್ಕೋಪ್ ಹೇಗೆ?
ತಲೆಯಾಡಿಸಿದ.......ಎಲ್ಲ ಸ್ತಬ್ಧ
ನಾನು...ಅವನು.....ಎಲ್ಲರೂ!

No comments:

Post a Comment