ಬೆರೆಯಬೇಕೆನಿಸುತ್ತದೆ ಕೆಲವೊಮ್ಮೆ
ಬೇರೆ ಇರಬೇಕೆನಿಸುತ್ತದೆ ಇನ್ನು ಕೆಲವೊಮ್ಮೆ
ಬಿರಿದ ಹೂವಾಗುತ್ತದೆ ಮನ ಕೆಲವೊಮ್ಮೆ
ಬರಿದೆ ಮೊಗ್ಗಾಗಿಯೇ ಇರುತ್ತದೆ ಮತ್ತೆ ಕೆಲವೊಮ್ಮೆ
ಬುರುಬುರನೆ ಉಕ್ಕುವ ಉತ್ಸಾಹ ಕೆಲವೊಮ್ಮೆ
ಬರದೆ ಮೊಂಡು ಹಿಡಿದು ನಿಂತ ದನದಂತೆ ಕೆಲವೊಮ್ಮೆ
ಬೇರೆ ಬೇರೆಯದೇ ಆಯಾಮಗಳು ಬದುಕಿನುದ್ದಕೂ
ಬೇರಿಗೆ ಬೆಸೆದುಕೊಂಡ ನೂರು ಕೊಂಡಿಗಳು
ಬರಸೆಳೆದೋ ಬರೆ ಎಳೆದೋ ನಾ
ಬರಿದಾಗುವವರೆಗೆ ಬರೆಸುತ್ತಲೇ ಇರಬೇಕು!