Friday, 27 March 2020

ಮನೆಯ ಪಕ್ಕ

ಮನೆಯ ಪಕ್ಕ ವರ್ಷಗಳಿಂದ
ಇರುವ ಈ ಬೃಹತ್ತಾದ ಮರ
ನಮಗೆ ಅಂದಿನಿಂದ ಬಯಸದೇ
ದೊರೆತಿರುವ ದೊಡ್ಡದೊಂದು ವರ.

ಈ ಪುಟ್ಟ ಮನೆಯ ತಣ್ಣಗಾಗಿಸುತ
ಕಾಡುವ ಪ್ರತಿ ಸುಡುಬೇಸಿಗೆಯಲ್ಲಿ
ಹದ್ದು, ಕೋಗಿಲೆ, ಕಾಗೆಗಳಂತೆ
ಅಳಿಲು ಕೂಡ ಕ್ಷೇಮ ವಾಸಿಯಿಲ್ಲಿ.

ರಸ್ತೆಯಗಲವ ದಾಟಿ ಹರಡಿದೆ
ಈ ದೊಡ್ಡ ಮರದ ನೆರಳು
ಕತ್ತಲಾವರಿಸಿದಾಗ ನೋಡಲು
ಇದು ಲಲನೆಯೊಬ್ಬಳ ಹೆರಳು!

ಬಲಹೀನ ಮರಿ ಟೊಂಗೆಗಳು
ಆಗೀಗ ಮುರಿದು ಬೀಳುತ್ತವೆ ನಿಜ
ಬಳಲಿದ  ಜಾನುವಾರುಗಳಿಗಿದು
ಸಾಂತ್ವನದ ತಂಗುದಾಣವೂ ನಿಜ.

ಬೆಳಗಿನಿಂದ ಕೇಳುತಲಿರುವ
ಇಲ್ಲಿನ ಪುಟ್ಟ ಹಕ್ಕಿಗಳ ಚಿಲಿಪಿಲಿ
ಮರೆಸುವುದು ಖಂಡಿತ ಜನಗಳ
ಹೊರಗಿನ ಅನವಶ್ಯ ಗಲಿಬಿಲಿ!! 

Saturday, 14 March 2020

ಮಾರು ದೂರ

ಸರಳತೆಯ
ಮಾತಿಗೆ
ಮಾರು
ಹೋದೆ...
ಮಾತು
ಸರಳತೆಗೆ
ದೂರ
ಹೋದಾಗ
ಮಾರು
ದೂರ
ಹೋದೆ!

Monday, 9 March 2020

ಸಂವಾದ


  
ಈವರೆಗೆ
ಇತ್ತು ನಿನ್ನ
ಮಾತುಗಳ
ವರದಿ.....
ಈಗ
ಇದೋ ನನ್ನ
ಮೌನದ
ಸರದಿ!!

ಹನಿಗವನ

ಹನಿಗವನ
ಬರೆಯಲು ಈಗ
ಬೇಕಿಲ್ಲ
penಉ.....
ಆದರೂ
ಓದಿಸಿಕೊಳ್ಳಲು
ಇರಬೇಕು
punಉ..
ಹೌದು
ಹಾಗೇ
ಸ್ವಲ್ಪ
funಉ!

ಸೂರ್ಯನಮಸ್ಕಾರ

ವಿಜ್ಞಾನ ಹೇಳುವ
ನಿನ್ನ ಸುತ್ತ ಭೂಮಿ...
ಅದರ ಸುತ್ತ ಚಂದ್ರ
ಸುತ್ತುವ ಕಥೆಯೆಲ್ಲಾ
ನಾ ನಂಬುವುದಿಲ್ಲ ಬಿಡು.
ಸಮುದ್ರದಲ್ಲಿ
ನೆನ್ನೆ ಮುಳುಗಿದವ
ಎರಡು ಬೆಟ್ಟಗಳ
ನಡುವೆ ಅರ್ಧ ಕಂಡು
ಮೇಲೆದ್ದ ನೀನು
ನನಗೊಬ್ಬ
ದೇವರೇ ಸರಿ.
ಹೇ ಚೇತೋಹಾರಿ ನಿನಗೆ ವಂದನೆ.

lateಉ

ನನ್ನವ ಮನೆ ಸೇರಿದ್ದು
ನೆನ್ನೆ ಬಹಳ
lateಉ
ಬಾಯಿ ಮುಚ್ಚಿದ
ಬಂದೊಡನೆ ಕೈಲಿಟ್ಟು
chocolateಉ!

ಕಣ್-ಡಾಕ್ಟರ್

'ಮೇಲೆ ನೋಡಿ...ಡ್ರಾಪ್ಸ್ ಹಾಕಿದ ಮೇಲೆ ಮುಕ್ಕಾಲು ಗಂಟೆಯಾದ ಮೇಲೆ ಡಾಕ್ಟರ್ ನೋಡ್ತಾರೆ.ಮೂರು ನಾಕು ಗಂಟೆಗಳ ಕಾಲ ಕಣ್ಣು ಮಂಜಿರುತ್ತೆ' ಎಂದವಳು ಎರಡೂ ಕಣ್ಣಿಗೆ ಒಂದೊಂದು ತೊಟ್ಟು ಔಷಧಿ ಬಿಟ್ಟವಳೇ ಕೈಯಲ್ಲೊಂದು ಸಣ್ಣ ಟಿಶ್ಯೂ ಇಟ್ಟು ಹೋದಳು. ಕಣ್ಣೆಲ್ಲಾ ಉರಿ...ನೀರಾಡತೊಡಗಿತು.ಕಣ್ಣು ಮುಚ್ಚಿಯೇ ಆ ಟಿಶ್ಯೂಯಿಂದ ಬಂದ ನೀರನ್ನು ಒರೆಸಿದೆ. ಈಗ ಸ್ವಲ್ಪ ಸಮಾಧಾನ. ಆದರೂ ಕಣ್ಣು ಬಿಡುವಂತಿಲ್ಲ.ಅಂಧರ ಕಷ್ಟದ ಸಣ್ಣ ಅರಿವಾಗತೊಡಗಿತು.ಮುಂದೆ ಯಾರ್ಯಾರೋ ಸುಳಿದಾಡುತ್ತಿರುವುದು ತಿಳಿದರೂ ಯಾರೆಂದು ಕಾಣದು. ಜೊತೆಯಲ್ಲಿ ಬಂದ ನನ್ನಾಕೆ ಪಕ್ಕದಲ್ಲೇ ಇರುವುದನ್ನು ಖಾತ್ರಿ ಪಡಿಸಿಕೊಂಡೆ. ಮುಕ್ಕಾಲು ಗಂಟೆ? ಯಪ್ಪಾ.....ಮೆತ್ತಗೆ ಕಣ್ಣು ತೆರೆಯಲಾ ಎಂಬ ಯೋಚನೆ ಬಂದರೂ ನಂತರ ಕಣ್ಣಿನ ತಪಾಸಣೆ ತಡವಾದೀತೆಂದು ಸುಮ್ಮನಾದೆ. ಸುಮ್ಮನೆ ಹೇಗೆ ಕೂಡುವುದು? ಹೆಂಡತಿಗೆ ಹೇಳಿದೆ....ಕೇಳುವ ಧ್ವನಿಗಳ ಮೂಲಕ ಜನಗಳ ಬಗ್ಯೆ ನನ್ನ ಅನಿಸಿಕೆ ಹೇಳ್ತೀನಿ ಕೇಳು. ಖುಷಿಯಾಗೆ ಸುಡೋಕು ಮಾಡುತ್ತಿದ್ದ ಅವಳು ಹೂಂ ಅಂದರೂ ಕಣ್ಣು ಮುಚ್ಚಿಯೇ ಅವಳ ಮುಖದಲ್ಲಿ ಅಸಮಾಧಾನ ಗುರುತಿಸಿದೆ.ಇರಲಿ. ಗುಸುಗುಸು ಕೇಳಿಸಿತು. ನಾವು ರಿಜಿಸ್ಟ್ರರ್ ಮಾಡಿದಾಗ ಅಲ್ಲಿ ಕೂತಿದ್ದವಳಲ್ಲವಾ ಇದು ಎಂದೆ. ಕರೆಕ್ಟ್ ಎಂದಳು. ಈಗ ಕೇಳಿದ ದನಿ ಆ ಕೆಂಪು ಚೂಡಿದಾರ್ ಹೆಂಗಸು ಎದುರು ಸಾಲಿನಲ್ಲಿ ಕುಳಿತಿರುವಳು ತಾನೇ ಎಂದೆ. ಅದು ಹೇಗ್ರೀ ಹೇಳಿದ್ರಿ ಎಂದವಳ ದನಿಯಲ್ಲಿ ಮೆಚ್ಚುಗೆ ಇದ್ದ ಹಾಗಿತ್ತು. ಹೀಗೇ ಬರೀ ಹೆಣ್ಣು ಮಕ್ಕಳ ಬಗ್ಯೆಯೇ ಹೇಳುತಿದ್ದುದನ್ನು ಗ್ರಹಿಸಿದ ಅವಳು 'ಸಾಕು ನಿಮ್ಮಾಟ ತೆಪ್ಪಗೆ ಕೂತ್ಕೊಳ್ಳಿ; ಎಂದವಳು ಸುಡೋಕು ಮಂದುವರೆಸಿದಳು ಅನ್ನಿಸುತ್ತೆ. ಎಲ್ಲೋ ನಾಕೈದು ಗಂಟೆ ಆದಂತಿದೆ...ಇನ್ನೂ ಆಯಮ್ಮ ಕಣ್ಣಿಗೆ ಟಾರ್ಚ್ ಬಿಡೋಕೆ ಬರ್ಲೇ ಇಲ್ವಲ್ಲ. ಪಕ್ಕದಲ್ಲಿದ್ದ ನನ್ನವಳಿಗೆ ತಿವಿದು 'ಒಂದು ಸಾರಿ ಕೇಳೇ ಅವಳನ್ನ' ಎಂದೆ. ಚಟಾರ್ ಕೆನ್ನೆಗೆ ಬಿತ್ತು. 'ಯ್ ಯ ಯಾಕೇ ಹೋಡಿತೀಯಾ' ಅನ್ನುವುದರೊಳಗೆ ಅವಳ ಧ್ವನಿ ಕೇಳಿತು 'ಅವರು ನಾನು ಅಂದುಕೊಂಡು ನಿಮಗೇನೋ ಹೇಳಿರಬೇಕು ಸಾರಿ .... ನಡೀರಿ ಡಾಕ್ಟರ್ ಕರೀತಿದ್ದಾರೆ' ಎಂದಾಗ ಮೆಲ್ಲಗೆ ಕಣ್ಣು ಬಿಟ್ಟೆ. ಇವಳು ಕೇಳಲು ಹೋದಾಗ ಸದ್ದಿಲ್ಲದೆ ಅಲ್ಲಿ ಕುಳಿತಿದ್ದ ಇನ್ನೊಬ್ಬ ಸುಂದರಿಯನ್ನು ಈಗ ಕಂಡೆ. ಅವಳು 'ಸಾ....ರೀ' ಅಂದಳು. ಹಲ್ಲು ಕಿರಿದು ಡಾಕ್ಟರ ಕೋಣೆಯತ್ತ ಹೆಜ್ಜೆ ಹಾಕಿದೆ.

ಒಪ್ಪಿದೆ!

ಮಾತಾಡಿ
ನೋಯಿಸುವೆನೆಂದು
ಹಿಂಜರಿದು
ಮೌನವ
ಅಪ್ಪಿದೆ.....
ಮರೆತಿದ್ದೆ
ಗುಲಗಂಜಿಯಲ್ಲೂ
ಕಪ್ಪಿದೆ....
ಕೆಲವೊಮ್ಮೆ
ಮೌನ ವಹಿಸುವುದೂ
ತಪ್ಪಿದೆ....
ಎಂಬ ಅರಿವಾಗಿ
ಮಾತು-ಮೌನಗಳ
ಭಿನ್ನತೆಯ ಸಾಮ್ಯವ
ವಿಧಿಯಿಲ್ಲದೆ
ಒಪ್ಪಿದೆ!

nage030320

#ಬೇಕಾದ್ರೆ_ನಗಿ(ಹಿಂದೆ ನಮ್ಮಣ್ಣ ಹೇಳಿದ್ದು)
ಆ ಮೊದಲ ದರ್ಜೆ ಕಂಪಾರ್ಟ್‍ಮಂಟಿನಲ್ಲಿ ನಾಲ್ಕು ಜನವಷ್ಟೇ ಇದ್ದರು. ಯಾರೂ ಯಾರ ಜೊತೆಯೂ ಮಾತಿಲ್ಲ. ಆ ಮುದುಕ ಯಾವುದೋ ಪೇಪರ್ ಹಿಡಿದಿದ್ದ. ಮದ್ಯವಯಸ್ಕ ಮಹಿಳೆ ಪದಬಂಧ ಮಾಡುತ್ತಿದ್ದರೆ...ಅತ್ತ ಕುಳಿತಿದ್ದ ಪ್ಯಾಂಟ್ ಧರಿಸಿದ್ದ ಯುವತಿ ಮೊಬೈಲಿನಲ್ಲಿ ಆಡುತ್ತಿದ್ದಳು. ಆ ಯುವಕ ಮಾತ್ರ ಒಂದು ರೀತಿ ಚಡಪಡಿಸುತ್ತಿದ್ದ. ಈಗ ರೈಲು ಒಂದು ಟನಲ್ ಹೊಕ್ಕಿತು. ಶಬ್ದ ಜೋರು ....ಆದರೆ ಪೂರ್ತಿ ಕತ್ತಲು. ಆಗ ಇದ್ದಕ್ಕಿದ್ದಂತೆ ಲೊಚಕ್ಕನೆ ಮುತ್ತಿಟ್ಟ ಶಬ್ದದ ಹಿಂದೆಯೇ ಚಟಾರ್ ಎಂದು ಹೊಡೆದ(mostly ಕೆನ್ನೆಗೆ) ಸದ್ದು ಕೂಡ. ಟನಲ್ ದಾಟಿ ರೈಲು ಹೊರಬಂದಾಗ ಆ ಹುಡುಗ ನಗುತ್ತಾ ಕಿಟಕಿಯಾಚೆ ನೋಡುತ್ತಿದ್ದ.
ಹುಡುಗಿ ಅಂದುಕೊಂಡಳು 'ಹೋಗಿ ಹೋಗಿ ಆ ಮುದುಕಿಗೆ ಮುತ್ತಿಡೋಕೆ ಹೋಗಿದ್ದಾನೆ.....'
ಆ ಹೆಂಗಸು 'ಕತ್ತಲೆಯಲ್ಲಿ ಆ ಹುಡುಗಿಗೆ ಮುತ್ತಿಡಲು ಹೋಗಿ ಏಟು ತಿಂದಿದ್ದಾನೆ' ಎಂದುಕೊಂಡಳು.
ಆ ಯುವಕ 'ಸರಿಯಾದ ಮುದುಕ. ಮುತ್ತಿಡೋಕೆ ಹೋಗಿ ಏಟು ತಿಂದಿದ್ದಾನೆ' ಎಂದುಕೊಂಡ
ಮುದುಕ ಮಾತ್ರ ಮುತ್ತಿಟ್ಟುಕೊಂಡ ತನ್ನ ಕೈಯನ್ನು, ಸ್ವಲ್ಪ ಜೋರಾಗೇ ಕೆನ್ನೆಗೆ ಹೊಡೆದುಕೊಂಡ ಇನ್ನೊಂದು ಕೈಯಲ್ಲಿ ಹೆಣೆದು ಸ್ಥಿತಪ್ರಜ್ಞನಂತೆ ಕುಳಿತಿದ್ದ.

ಮಡಿಕೆ

ಎದ್ದೊಡನೆ ಕೊಡವದೆ
ಹೊದಿಕೆಯ
ಮೆಲ್ಲ ಸರಿಸಿ
ಎದೆಗಾನಿಸಿ
ಮಡಿಚಿಟ್ಟಿರುವೆ.
ಇರುಳಿನ
ಸವಿಗನಸಿನ
ಕೆಲ ತುಣುಕುಗಳು
ಇದರ
ಮಡಿಕೆಗಳಲಿರಬಹುದಲ್ಲವೇ!

nage080320

ಗುಂಡ ಆರಾಮವಾಗಿ ಪೇಪರ್ ಓದುತ್ತಾ ಕುಳಿತಿದ್ದ.
"ಏನ್ರೀ...ಇನ್ನೂ ಆಡಿಗೆಗೆ ಇಟ್ಟಿಲ್ಲ.....ಕೂತ್ಬಿಟ್ರಿ" ಸಿಂಗರಿಸಿಕೊಳ್ಳುತ್ತಲೇ ಕೇಳಿದಳು ಗುಂಡಿ.
"ಒಬ್ಬನಿಗೆ ತಾನೇ ನಿಧಾನವಾಗಿ ಮಾಡ್ಕೋತೀನಿ....ನೀ ಹೇಗಿದ್ರೂ ನಿಮ್ಮ ಕ್ಲಬ್‍ನಲ್ಲಿ ಸಮಾರಂಭಕ್ಕೆ ಅಧ್ಯಕ್ಷೆ ಅಲ್ವಾ" ಖುಷಿಯಂದ ಉತ್ತರಿಸಿದ ಗುಂಡ.
"ಸಮಾರಂಭ ಮುಗಿದ ಮೇಲೆ ನಮ್ಮ ಸಮಿತಿಯವರನ್ನೆಲ್ಲಾ ನಮ್ಮನೇಗೇ ಊಟಕ್ಕೆ ಕರೆದಿದ್ದೀನಿ....ಒಂದು ಘಂಟೆಗೆ ಮೊದಲು ಅಡಿಗೆ ರೆಡಿ ಮಾಡಿ"
"ಪಾಪಿ ಸಮುದ್ರಕ್ಕೆ ಹೋದ್ರೂ ಮೊಣಕಾಲುದ್ದ ನೀರು" ಮೆಲ್ಲಗೆ ಗೊಣಗಿದ ಗುಂಡ.
"ಏನ್ರೀ ಅದು ಗೊಣಗ್ತಿದ್ದೀರಿ?" ಗುಡುಗಿದಳು.
"ಏನೂ ಇಲ್ಲ ... ಕಾಫಿನೂ ಮಾಡಿರಲಾ ಅಂತ ಕೇಳಿದೆ ಕಣೆ" ಮುಖದಲ್ಲಿ ನಗೆ ತಂದುಕೊಂಡು ಉತ್ತರಿಸಿ ಅಲ್ಲಿ ನಿಲ್ಲದೇ ಅಡಿಗೆಮನೆಗೆ ನುಗ್ಗಿದ.
ಮಹಿಳಾ ದಿನಾಚರಣೆಯ ಮುಗುಳ್ನಗೆ ಗುಂಡಿಯ ಮುಖದಲ್ಲಿ. ಗುಂಡ......ಪಾ....ಪ!

nage090320

ಗುಂಡಿ ಕ್ಲಬ್‍ನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಅವಳ ಗಂಡ ಮಹಾನ್ ಸಾಹಿತಿ ಗುಂಡನೇ ಮುಖ್ಯ ಅತಿಥಿ.ಮನೆಯಿಂದ ಹೊರಡುವಾಗಲೇ ಯಾವ ಕಾರಣಕ್ಕೂ ನನ್ನಮ್ಮ ನನ್ನಮ್ಮ ಅಂತ ಕಥೆ ಹೊಡೀಬೇಡಿ ಅಂತ ಕಿವಿ ಹಿಂಡಿದ್ದಳು.ನನ್ನ ಬಗ್ಯೆ ಕೊಚ್ಚಿಕೊಳ್ಳಿ ಪರವಾಗಿಲ್ಲ ಅಂತ ಸೇರಿಸಲು ಮರೆಯಲಿಲ್ಲ. ಗುಂಡ ಭಾಷಣ ಮಾಡುತ್ತಾ ಹೇಳಿದ "ನನ್ನ ಈ ಎಲ್ಲ ಸಾಧನೆಗಳಿಗೆ ನನ್ನ ಪ್ರೀತಿಯ ಹೆಂಡತಿ ಗುಂಡಿ ಹಾಗೂ ಅವಳತ್ತೆ ಅವರುಗಳೇ ಕಾರಣ'. ಎಲ್ಲ ಚಪ್ಪಾಳೆ ತಟ್ಟಿದರು. ತನ್ನ ಹೆಸರು ಕೇಳಿದ ಗುಂಡಿ ಕೂಡ. ತನ್ನ ಮಾತಿನ ಚಾಣಾಕ್ಷತನಕ್ಕೆ ತಾನೇ ಒಮ್ಮೆ ಬೆನ್ನು ತಟ್ಟಿಕೊಂಡ ಗುಂಡ.

(un)holi!.

#(un)holi!.
ಎರಚಿದ ಬಣ್ಣಗಳಲಿ
ಕೆಂಪೇಕೆ
ಹೆಚ್ಚಿದೆ?

ಅರಚಿದ ದನಿಗಳಲಿ
ದ್ವೇಷದ
ಕಿಚ್ಚಿದೆ
ತಿರುಚಿದ ಸತ್ಯಗಳ
ಕಂಡ ಮನ
ಬೆಚ್ಚಿದೆ
ಪರಚಿದ ತೋಳಗಳು
ವಿವೇಕವ
ಮುಚ್ಚಿದೆ
!