Friday 27 March 2020

ಮನೆಯ ಪಕ್ಕ

ಮನೆಯ ಪಕ್ಕ ವರ್ಷಗಳಿಂದ
ಇರುವ ಈ ಬೃಹತ್ತಾದ ಮರ
ನಮಗೆ ಅಂದಿನಿಂದ ಬಯಸದೇ
ದೊರೆತಿರುವ ದೊಡ್ಡದೊಂದು ವರ.

ಈ ಪುಟ್ಟ ಮನೆಯ ತಣ್ಣಗಾಗಿಸುತ
ಕಾಡುವ ಪ್ರತಿ ಸುಡುಬೇಸಿಗೆಯಲ್ಲಿ
ಹದ್ದು, ಕೋಗಿಲೆ, ಕಾಗೆಗಳಂತೆ
ಅಳಿಲು ಕೂಡ ಕ್ಷೇಮ ವಾಸಿಯಿಲ್ಲಿ.

ರಸ್ತೆಯಗಲವ ದಾಟಿ ಹರಡಿದೆ
ಈ ದೊಡ್ಡ ಮರದ ನೆರಳು
ಕತ್ತಲಾವರಿಸಿದಾಗ ನೋಡಲು
ಇದು ಲಲನೆಯೊಬ್ಬಳ ಹೆರಳು!

ಬಲಹೀನ ಮರಿ ಟೊಂಗೆಗಳು
ಆಗೀಗ ಮುರಿದು ಬೀಳುತ್ತವೆ ನಿಜ
ಬಳಲಿದ  ಜಾನುವಾರುಗಳಿಗಿದು
ಸಾಂತ್ವನದ ತಂಗುದಾಣವೂ ನಿಜ.

ಬೆಳಗಿನಿಂದ ಕೇಳುತಲಿರುವ
ಇಲ್ಲಿನ ಪುಟ್ಟ ಹಕ್ಕಿಗಳ ಚಿಲಿಪಿಲಿ
ಮರೆಸುವುದು ಖಂಡಿತ ಜನಗಳ
ಹೊರಗಿನ ಅನವಶ್ಯ ಗಲಿಬಿಲಿ!! 

No comments:

Post a Comment