Monday 9 March 2020

ಕಣ್-ಡಾಕ್ಟರ್

'ಮೇಲೆ ನೋಡಿ...ಡ್ರಾಪ್ಸ್ ಹಾಕಿದ ಮೇಲೆ ಮುಕ್ಕಾಲು ಗಂಟೆಯಾದ ಮೇಲೆ ಡಾಕ್ಟರ್ ನೋಡ್ತಾರೆ.ಮೂರು ನಾಕು ಗಂಟೆಗಳ ಕಾಲ ಕಣ್ಣು ಮಂಜಿರುತ್ತೆ' ಎಂದವಳು ಎರಡೂ ಕಣ್ಣಿಗೆ ಒಂದೊಂದು ತೊಟ್ಟು ಔಷಧಿ ಬಿಟ್ಟವಳೇ ಕೈಯಲ್ಲೊಂದು ಸಣ್ಣ ಟಿಶ್ಯೂ ಇಟ್ಟು ಹೋದಳು. ಕಣ್ಣೆಲ್ಲಾ ಉರಿ...ನೀರಾಡತೊಡಗಿತು.ಕಣ್ಣು ಮುಚ್ಚಿಯೇ ಆ ಟಿಶ್ಯೂಯಿಂದ ಬಂದ ನೀರನ್ನು ಒರೆಸಿದೆ. ಈಗ ಸ್ವಲ್ಪ ಸಮಾಧಾನ. ಆದರೂ ಕಣ್ಣು ಬಿಡುವಂತಿಲ್ಲ.ಅಂಧರ ಕಷ್ಟದ ಸಣ್ಣ ಅರಿವಾಗತೊಡಗಿತು.ಮುಂದೆ ಯಾರ್ಯಾರೋ ಸುಳಿದಾಡುತ್ತಿರುವುದು ತಿಳಿದರೂ ಯಾರೆಂದು ಕಾಣದು. ಜೊತೆಯಲ್ಲಿ ಬಂದ ನನ್ನಾಕೆ ಪಕ್ಕದಲ್ಲೇ ಇರುವುದನ್ನು ಖಾತ್ರಿ ಪಡಿಸಿಕೊಂಡೆ. ಮುಕ್ಕಾಲು ಗಂಟೆ? ಯಪ್ಪಾ.....ಮೆತ್ತಗೆ ಕಣ್ಣು ತೆರೆಯಲಾ ಎಂಬ ಯೋಚನೆ ಬಂದರೂ ನಂತರ ಕಣ್ಣಿನ ತಪಾಸಣೆ ತಡವಾದೀತೆಂದು ಸುಮ್ಮನಾದೆ. ಸುಮ್ಮನೆ ಹೇಗೆ ಕೂಡುವುದು? ಹೆಂಡತಿಗೆ ಹೇಳಿದೆ....ಕೇಳುವ ಧ್ವನಿಗಳ ಮೂಲಕ ಜನಗಳ ಬಗ್ಯೆ ನನ್ನ ಅನಿಸಿಕೆ ಹೇಳ್ತೀನಿ ಕೇಳು. ಖುಷಿಯಾಗೆ ಸುಡೋಕು ಮಾಡುತ್ತಿದ್ದ ಅವಳು ಹೂಂ ಅಂದರೂ ಕಣ್ಣು ಮುಚ್ಚಿಯೇ ಅವಳ ಮುಖದಲ್ಲಿ ಅಸಮಾಧಾನ ಗುರುತಿಸಿದೆ.ಇರಲಿ. ಗುಸುಗುಸು ಕೇಳಿಸಿತು. ನಾವು ರಿಜಿಸ್ಟ್ರರ್ ಮಾಡಿದಾಗ ಅಲ್ಲಿ ಕೂತಿದ್ದವಳಲ್ಲವಾ ಇದು ಎಂದೆ. ಕರೆಕ್ಟ್ ಎಂದಳು. ಈಗ ಕೇಳಿದ ದನಿ ಆ ಕೆಂಪು ಚೂಡಿದಾರ್ ಹೆಂಗಸು ಎದುರು ಸಾಲಿನಲ್ಲಿ ಕುಳಿತಿರುವಳು ತಾನೇ ಎಂದೆ. ಅದು ಹೇಗ್ರೀ ಹೇಳಿದ್ರಿ ಎಂದವಳ ದನಿಯಲ್ಲಿ ಮೆಚ್ಚುಗೆ ಇದ್ದ ಹಾಗಿತ್ತು. ಹೀಗೇ ಬರೀ ಹೆಣ್ಣು ಮಕ್ಕಳ ಬಗ್ಯೆಯೇ ಹೇಳುತಿದ್ದುದನ್ನು ಗ್ರಹಿಸಿದ ಅವಳು 'ಸಾಕು ನಿಮ್ಮಾಟ ತೆಪ್ಪಗೆ ಕೂತ್ಕೊಳ್ಳಿ; ಎಂದವಳು ಸುಡೋಕು ಮಂದುವರೆಸಿದಳು ಅನ್ನಿಸುತ್ತೆ. ಎಲ್ಲೋ ನಾಕೈದು ಗಂಟೆ ಆದಂತಿದೆ...ಇನ್ನೂ ಆಯಮ್ಮ ಕಣ್ಣಿಗೆ ಟಾರ್ಚ್ ಬಿಡೋಕೆ ಬರ್ಲೇ ಇಲ್ವಲ್ಲ. ಪಕ್ಕದಲ್ಲಿದ್ದ ನನ್ನವಳಿಗೆ ತಿವಿದು 'ಒಂದು ಸಾರಿ ಕೇಳೇ ಅವಳನ್ನ' ಎಂದೆ. ಚಟಾರ್ ಕೆನ್ನೆಗೆ ಬಿತ್ತು. 'ಯ್ ಯ ಯಾಕೇ ಹೋಡಿತೀಯಾ' ಅನ್ನುವುದರೊಳಗೆ ಅವಳ ಧ್ವನಿ ಕೇಳಿತು 'ಅವರು ನಾನು ಅಂದುಕೊಂಡು ನಿಮಗೇನೋ ಹೇಳಿರಬೇಕು ಸಾರಿ .... ನಡೀರಿ ಡಾಕ್ಟರ್ ಕರೀತಿದ್ದಾರೆ' ಎಂದಾಗ ಮೆಲ್ಲಗೆ ಕಣ್ಣು ಬಿಟ್ಟೆ. ಇವಳು ಕೇಳಲು ಹೋದಾಗ ಸದ್ದಿಲ್ಲದೆ ಅಲ್ಲಿ ಕುಳಿತಿದ್ದ ಇನ್ನೊಬ್ಬ ಸುಂದರಿಯನ್ನು ಈಗ ಕಂಡೆ. ಅವಳು 'ಸಾ....ರೀ' ಅಂದಳು. ಹಲ್ಲು ಕಿರಿದು ಡಾಕ್ಟರ ಕೋಣೆಯತ್ತ ಹೆಜ್ಜೆ ಹಾಕಿದೆ.

No comments:

Post a Comment