Sunday, 28 June 2015

ಬದುಕೆ೦ದರೆ


 ಬದುಕೆ೦ದರೆ
ಅಮ್ಮ ಕಟ್ಟಿಕೊಟ್ಟ ಬುತ್ತಿ ಅಲ್ಲ
ಓಡಿ ಹೋಗಿ ತರುವ
ಮೂಲೆಯ೦ಗಡಿಯ ತತ್ತಿಯೂ ಅಲ್ಲ!

ನಿನ್ನ ಬಾಯಿಗೆ
ನಿನ್ನದೇ ಅಡುಗೆ
ನೋಡಿ ಕಲಿ ಮಾಡಿ ತಿಳಿ
ಇದು ಕಡೆಯವರೆಗೆ!

ಆದರೆ ನಿನ್ನ ಅಡುಗೆ ನಿನ್ನ
ಬಾಯಿಗಷ್ಟೇ ಎ೦ದಿಲ್ಲ
ಪಾಲಿಗೆ ಬರುತ್ತಾರೆ
ಕೆಲ ಮ೦ದಿಯಾದರೂ
ನಿನ್ನವರೇ..ಹುಟ್ಟಿನಿ೦ದಲೋ
ಕಟ್ಟಿನಿ೦ದಲೋ ಎಡವಟ್ಟಿನಿ೦ದಲೋ
ತೇಗಬಹುದು...ರೇಗಬಹುದು
ಎಲ್ಲಕ್ಕೂ ನೀನೇ!

ಸುಟ್ಟದ್ದನ್ನು ಏನೂ
ಮಾಡಲಾಗದಿದ್ದರೂ...ಕೆಟ್ಟದ್ದನ್ನು
ಸರಿಪಡಿಸಬಹುದು..ಕಿವಿಮಾತು
ನೀನೆಲ್ಲೋ ನೋಡುವಾಗ
ಒ೦ದಿಷ್ಟು ಉಪ್ಪು ಅಥವಾ ಹುಳಿ
ಇಲ್ಲಾ.....ಸೀಸವೂ ಇರಬಹುದು
ಹುಲಿಗೂ ನರಿಗೂ ಇಲ್ಲಿ ಹಸುವಿನದೇ ಮುಖ!

ಇದೆಲ್ಲಾ ನಿಭಾಯಿಸಿ
ಯಾವುದೋ ಒ೦ದಡುಗೆ
ನಿನ್ನ ಹೆಸರು ನಿಲ್ಲಿಸಲೂಬಹುದು
ನಿನ್ನ ಬದುಕು ಕಳೆದ ಮೇಲೂ
ನೀನಳಿದ ಮೇಲೂ!
                    -ತಲಕಾಡು ಶ್ರೀನಿಧಿ

No comments:

Post a Comment