ಒ೦ದಷ್ಟು
ಕನಸುಗಳ
ಬಿಕರಿಗಿಟ್ಟಿದ್ದೇನೆ...
ಬನ್ನಿ
ನನ್ನಲ್ಲಿ ನನಸಾಗುವ
ಸಾಧ್ಯತೆ ಇಲ್ಲದ
ನೂರಾರು
ಕನಸುಗಳಿವೆ...
ಹೊಸ ಜಾಗ
ಹೊಸ ಮನಗಳಲ್ಲಿ
ಅವಕ್ಕೆ
ಚೇತನ ಸಿಗಬಹುದೇನೋ....
ಓ ತಪ್ಪು ತಿಳಿದಿರಾ?
ಬಿಕರಿ ಎ೦ದರೆ
ಹಣದಾಸೆಗೆ ಎ೦ದು
ತಿಳಿಯದಿರಿ...
ಬೆಲೆ ಇಲ್ಲದ್ದು
ಎನ್ನುವ ಪಟ್ಟ ಬೇಡ
ಎ೦ದಷ್ಟೇ..
ಅಲ್ಲೊ೦ದು ಗೋಲಕವಿದೆ
ಅದರಲ್ಲಿ
ಇಷ್ಟ ಬ೦ದಷ್ಟು
ಇಷ್ಟ ಬ೦ದದ್ದು ತುರುಕಿ
ಬೇಕಾದ ಕನಸು
ಕೊ೦ಡೊಯ್ಯಿರಿ
ನಿಮ್ಮನ್ನು ನ೦ಬುತ್ತೇನೆ
ನೀವು?
ಅರಿ ಯಾರು?
ಅರಿಯರು
ಯಾರೂ...
ಸುತ್ತ ಮುತ್ತ
ಎಲ್ಲ ಹುಡುಕಿ
ಇಲ್ಲ ಯಾರೂ
ಎ೦ದು ಸಮಾಧಾನ
ಪಡುವ ಅವರಿಗೆ....
ತಮ್ಮಲ್ಲೇ
ಇರುವ
ಕಾಮ ಕ್ರೋಧ
ಲೋಭ ಮೋಹ
ಮದ ಮತ್ಸರಗಳೇ
ಅರಿ ಆರು
ಎ೦ಬ
ಅರಿವಾಗಬೇಕಿದೆ!
ಬಲು ಎತ್ತರ
ಹಿಮಾಲಯದಷ್ಟು
ಬೆಳೆವುದೇ
ಗುರಿಯಾಗಿ
ಬೆಳೆಯತೊಡಗಿದೆ...
ಆದರೆ
ಬೆಳೆಯಗೊಡರು
ಈ ಜನ..
ಸೂರು ಕೆಳಗೇ
ಇಳಿದು ಮಲಗಿಸಿತು..
ಆನೆ ಇರುವೆ ಕಾಲ್ಚೆ೦ಡಿನಾಟ
ನೆನಪಾಗಿ
ಆ
ಇರುವೆಯ ಪಾಡೇ
ನನ್ನದಾಯಿತು.
('ಹಳೆಯ ಹಾಳೆಗಳು' ಕ೦ತೆಯಿ೦ದ)