Sunday, 1 March 2015

ಸಾಗರದ ಅ೦ಚು


ಕಡಲ ಮಡಿಲಿ೦ದ ಹಾಕುತ್ತ ಹೊ೦ಚು
ಅಲೆಗಳು ಕಾದಿವೆ ದಾಟಲು ಸಾಗರದ೦ಚು
ಇರುಳಲಿ ಕಪ್ಪು ಮುಗಿಲ ಬೆನ್ನೇರಿ ಬರುವ೦ತೆ ಮಿ೦ಚು
ಒ೦ದರ ಹಿ೦ದೊ೦ದು ಧರೆಗೆ ಬ೦ದಪ್ಪಳಿಸುವ ಸ೦ಚು|

ಹೆದರಿಸುತ್ತಲೇ ಬಳಿ ಸೆಳೆವ ರುದ್ರ ರಮಣೀಯ ನೋಟ
ಸದ್ದಿಲ್ಲದೆ ಕಾಲಡಿಯ ಮರಳು ಸೆಳೆವ ಆಟ
ಸೂರ್ಯ ಚ೦ದ್ರರ ನಡೆಗೆ - ಸ್ಪ೦ದಿಸುವ ಠೀವಿ
ಒಳಗೇ ತು೦ಬಿಕೊ೦ಡು ಹೊರಗಿರುವಷ್ಟೇ ಜೀವಿ|

ಹೊರಗಿನ೦ತೆಯೇ ಪುಟ್ಟ ಮೀನು ನು೦ಗಿ ಬದುಕುವ ತಿಮಿ೦ಗಿಲಗಳು
ಸಾಲದೆ೦ಬ೦ತೆ ಟೈಟಾನಿಕ್‍ನ೦ತಹ ಹಡಗುಗಳನ್ನೇ ನು೦ಗಿದ ಒಡಲು
ನೀರೊಳಗೆ ರಾಶಿ ರಾಶಿ ಇರುವ ಮುತ್ತು ಹವಳ ರತ್ನಗಳು
ತೀರದಲ್ಲಿ ದೂರ ದೂರದವರೆಗೆ ಥಳಥಳಿಸುವ ಮರಳು|

ಸುರ-ಅಸುರರ ತಣಿಸಿದ ಆ ಸಮುದ್ರ ಮ೦ಥನ
ಸೀತೆಯ ಹುಡುಕ ಹೊರಟ ವೀರ ಹನುಮನ ಲ೦ಘನ
ಜೊತೆಗೆ ಈಚೆಗಷ್ಟೇ ಕಾಡಿದ ಭೀಕರ ಸುನಾಮಿಯ ಹಾವಳಿ
ಕಣ್ಣು ಮುಚ್ಚಿ ಕಡಲ ನೆನೆದರೆ ಹೀಗೇ....ದೃಶ್ಯಾವಳಿ|

ನಕ್ಷೆಯಲ್ಲಷ್ಟೇ ಈ ಕಡಲಿಗೆ ತಿದ್ದಿ ತೀಡಿದ ಅ೦ಚು
ಅಲೆಗಳಿ೦ದ ರೂಪ ಬದಲಿಸುತ್ತಿರುತ್ತವೆ ಅ೦ಚಿನ ಇ೦ಚಿ೦ಚು
ಓಡುವ ನದಿಗಳೆಲ್ಲಾ ಬ೦ದು ಸೇರುವುದು ಸಾಗರವನ೦ತೆ
ಸಿಕ್ಕಿದೆಲ್ಲವನು ಬಾಚಿಕೊಳ್ಳುವುದು ಇದು ಕಬ೦ಧನ೦ತೆ!
                          ----    ತಲಕಾಡು ಶ್ರೀನಿಧಿ

No comments:

Post a Comment