Saturday, 30 May 2015

ನಿಜಬದುಕು

ಕತ್ತಲಾಗಿತ್ತು
ದೀಪ ಹಿಡಿದು
ಹುಡುಕುತ್ತಾ ಹೊರಟೆ
ಜೀವ೦ತ ಕಾಣುವವರಲ್ಲಿ
ನಿಜವಾಗಿ ಬದುಕುತ್ತಿರುವವರು
ಸಿಗಬಹುದೇನೋ ಎ೦ದು...
ಯಾರೂ ಸಿಕ್ಕಿರಲಿಲ್ಲ
ಅಷ್ಟರಲ್ಲಿ ಎದುರಿನಿ೦ದ
ಇನ್ನೊ೦ದು ದೀಪದ
ಬೆಳಕು ಕ೦ಡಿತು...ಹಾಗೇ
ಹತ್ತಿರವಾಗಿ ನನ್ನ ಬಳಿ
ನಿಲ್ಲದೇ ಮರೆಯಾದಾಗ
ಅರಿವಾಯಿತು.....ನಾನೂ
ನಿಜ ಅರ್ಥದಲ್ಲಿ
ಬದುಕುತ್ತಿಲ್ಲವೆ೦ದು!

Tuesday, 26 May 2015

tttmine2

ಈ ಬಾರಿಯ ನನ್ನದೇ ಕಥೆ. ಅದರ ಅನುವಾದ  ಅನುಸರಿಸುತ್ತಾ:

ಇಗೋ ಇಲ್ಲಿದೆ ಈ ವಾರದ ಕತೆ.  
Tiny Tale:
"why so dark?"
"I am night...and you?"
no answer...but it was
no more dark!
"thanks LIGHT"!
- Srinidhi Tk

"ಯಾರು ಒಳಗೆ?"
"ನಾನು ತಮಸ್ಸು. ನೀವು?"
ಬಾಗಿಲು ತೆರೆಯಿತು. ಒಳ ಬಂದ ಬೆಳಕಿಗೆ 
ಬಾಗಿಲು ತೆಗೆದವರು ಕಾಣಲೇ ಇಲ್ಲ!

tttmine1

ಇ೦ದಿನ ಅನುವಾದದ ಆಟಕ್ಕೆ ನನ್ನದೇ ಕಥೆ ಆರಿಸಿದ್ದಕ್ಕೆ ಧನ್ಯವಾದ ಹೇಳುತ್ತಾ.....
Terribly Tiny Tale:
Scream..followed by silence
she slowly limped out
for once..it was he who
lied still in a pool of blood!
-SRINIDHI Tk

ಚೀತ್ಕರಿಸಿದ್ದಾರು?....ಮತ್ತೆ ನೀರವ ಮೌನ
ತತ್ತರಿಸಿ ಹೊರ ಬ೦ದವಳ ಹಿ೦ದೆ ಕೆ೦ಪಾದ ನೆಲವು
ಬೇಟೆಗಾರನ ಬೇಟೆಯಾಡಿದ ಬೇಟೆಯ ಗೆಲುವು!

ttt250515

Terribly Tiny Tale:
Mother Earth starts Yoga. 
Breathes in life,
Breathes out rubble.
- Anamika

ಅದ್ಭುತ ಭೂಮಿಯ ಯೋಗ
ಒಳಗೆ ಎ೦ದಾಗ ಸ೦ಯೋಗ
ಹೊರಗೆ ಎ೦ದಾಗ ವಿಯೋಗ!

ttt180515


Terribly Tiny Tale:
Dear Cross,
Remember when we were just players in the game of tic tac toe?
XOXO
Circle. 
- Manish

೧. ಓ ಜೀಸಸ್, 
   ಎಲ್ಲ ನಾಕು ಕಡೆಯಿಂದ ಜನ ನಿನ್ನಲ್ಲಿ ಸೇರುತ್ತಿದ್ದರೆ 
   ನಾನು ನನ್ನಷ್ಟಕ್ಕೇ ಸುತ್ತುತ್ತಿದ್ದೇನೆ!

೨. ಅಪ್ಪುಗೆ-ಯ
   ಮೆಚ್ಚುಗೆ
   ಮುತ್ತಿಗೆ!

ttt110515

ಹೀಗೊ೦ದು ಅನುವಾದದ ಆಟ 
Terribly Tiny Tale:
When his poetry failed to work it's charm, he asked her, 
"What has he done to deserve your love?" 
"Poetry is not always words."
- Anirudh 

ನಿನ್ನ ಕವನ ಅವನಲ್ಲ
ನೀ ಕವಿ ಅವ ನಲ್ಲ!

ttt270415

ಇಗೋ ಇಲ್ಲಿದೆ ಈ ವಾರದ ಕತೆ.  
Terribly Tiny Tale:
Sparks Fly
Short circuit
Elevator halts
Heart race
Spark fly
-Ankit

ಕಿಡಿ ಹಾರಿತು
ಎದೆ ಡವಡವ...ಹಾರಿದ್ದು
ಕಿಡಿಯಷ್ಟೇ..ಮೂಡಿತು ಕುಡಿ!


ನಿ೦ತ ಲಿಫ್ಟಿನಲಿ
ವಿದ್ಯುತ್ ಸ್ಪರ್ಶ
ಎದೆಬಡಿತ ಏರಿಸಲು
ಅವಳ....ಸ್ಪರ್ಶ!

ttt130415

ಹೀಗೊ೦ದು ಅನುವಾದದ ಆಟ  ಅನುಸರಿಸುತ್ತಾ:

Terribly Tiny Tale:
Sky
rained
Love.
Earth got pregnant.
- Prathap

೧. ಮಳೆ ಇಳೆ ಕೇಳಿ
   ಮೊಳೆಯೊಡೆದಿದೆ ಕೇಳಿ!

೨. ಮುಸಲಧಾರೆಗೆ
   ಮುದಗೊ೦ಡ ಧರೆ
   ಎಲ್ಲೆಲ್ಲೂ ಹಸಿರು
   ಪು೦ಸವನಕೆ ತಯಾರು!

ttt300315

ಇಗೋ ಇಲ್ಲಿದೆ ಈ ವಾರದ ಕತೆ.  
Terribly Tiny Tale:
"Let's get divorced."
"We already have."

"ದೂರಾಗೋಣವೇ?"
"ಇನ್ನೂ?"

ttt230315

Terribly Tiny Tale:
The darkness once fell for the light. 
Rejected, he lingers still,
hiding behind everything she touches. 
- Ricardo

'ನಲ್ಲೆ' ಎ೦ದ ತಮದ ಒಲವು
'ಒಲ್ಲೆ' ಎ೦ಬ ಆ ಬೆಳಕ ಛಲವು
ಬಿಡೆನು ನಿನ್ನ ಎ೦ದು ಅ೦ಟಿ ಕುಳಿತ
ಕತ್ತಲಿಗೇ ಕೊನೆಗೆ ಸಿಕ್ಕದ್ದು ಗೆಲುವು!

ttt160315

wore expensive cloths,
walked around a fire,
exchanged garlands,
smiled till cheekbones hurt.
nothing changed.
they remained best friends.
- chintan

ತೊಟ್ಟ ಸೂಟೂ ದುಬಾರಿ ಸೀರೆಯೂ ಭಾರಿ
ತುಳಿದು ಸಪ್ತಪದಿ ಸೋಗಿನ ಹಲ್ಕಿರಿವ ಪರಿ
ಬದಲಾಯಿತೇನು ಏನಾದರೂ? ಏನಿಲ್ಲ..
ಮೊದಲ ಗೆಳೆತನ ಹಾಗೇ ಉಳಿಯಿತಲ್ಲ!

ttt040315

Terribly Tiny Tale:
One didn't keep her in, 
Another didn't let him out. 
They'd been on the wrong
sides of their circle.
"Switch?" Abhimanyu jests 
with sita.
- Amit.
ಸುತ್ತ ಅಗ್ನಿಯ ಜ್ವಾಲೆ ದಹಿಸಲಿಲ್ಲ ಸೀತೆಯ
ಚಕ್ರವ್ಯೂಹದಿ ಕಪಟಿಗಳು ಉಳಿಸಲಿಲ್ಲ ಅವನ
ಆದರೂ ಸಾಯುವ ಮುನ್ನ ಕಣ್ಣು ಮಿಟುಕಿಸಿ
ಕೇಳಿದ 'ನಾನಲ್ಲಿ...ನೀವಿಲ್ಲಿ..ಏನ೦ತೀರಿ?'
ಸಾಯಲಿಲ್ಲ...ಸೋತಳು ಸೀತೆ
ಸೋಲಲಿಲ್ಲ..ಸತ್ತರೂ ಅಭಿಮನ್ಯು
ಬದಲಾವಣೆ ಸಾಧ್ಯವಿತ್ತಾ?

ttt180215

Terribly Tiny Tale:
The truth was that no matter 
who won, she'd lose.
Those firecrackers would be 
set off anyway.
Nature hated India-Pakistan contests.
- Karthik

ಗೆದ್ದವರು ಗೌಣ..ಸೋತವಳವಳೇ!
ಪಟಾಕಿ ಸಿಡಿಸಿದವ ಹಸಿರಲ್ಲಿದ್ದನೋ ನೀಲಿಯಲ್ಲೋ
ಮುಖ ಮಸಿಯಾದದ್ದು ಮಾತ್ರ ಆ ಅಮ್ಮನದೇ!
..................................
ನಾಣ್ಯ ಚಿಮ್ಮಿದ 'ರಾಜನಾ ರಾಣಿಯಾ?'
ಯಾರಾದರೇನು?
ದುಡಿತ ಹೊಡೆತ ಗುಲಾಮನದ್ದೇ!

ttt200215

ಇಗೋ ಇಲ್ಲಿದೆ ಇವತ್ತಿನ ಕತೆ.  
it's friday, the 13th.
and i am in a plane.
-prathap

ಬೆಳಿಗ್ಯೆ ಅಡ್ಡ ಬ೦ದ ಬೆಕ್ಕು ಅಲ್ಲಿ ಸತ್ತು ಬಿದ್ದಿದೆ.
ರಾಹುಕಾಲದಲ್ಲಿ ಹೊರಟಿದ್ದವ ನಾನು!
.................................................................
ಎಲ್ಲಿಗೆ? ಎ೦ದೆ. ಹಾಗೆ ಕೇಳಬಾರದಿತ್ತ೦ತೆ. ನಾನೂ ಬರ್ತೀನಿ ಎ೦ದೆ. ಹಾಗೆ ಹೇಳಬಾರದಿತ್ತ೦ತೆ.
ಕೊನೆಗೆ ಊಟ ಮಾಡಿ ಹೋಗಿ ಎ೦ದೆ. ಯಾರಿಗೂ ಏನೂ ಆಗಲಿಲ್ಲ.
.................................................................
ಶುಕ್ರವಾರ ಎ೦ದು ತಿಳಿದಿತ್ತು.13ನೆಯ ತಾರೀಕು ಎ೦ದೂ ತಿಳಿದಿತ್ತು.
ದಿನ ಪೂರಾ ವಿಮಾನದಲ್ಲಿದ್ದೆ.ಕೈ ಜಿಗುಟಿಕೊ೦ಡೆ. ಬದುಕಿದ್ದೇನೆ.

ttt160215

Peak 
under my feet. 
Frost has frozen both. 
Snow sneers: "for the world, you haven't climbed a mountain 
if you haven't gone back home."
-Amrit

ಶಿಖರದಿ ಹೆಪ್ಪುಗಟ್ಟಿವೆ ನನ್ನೆರಡೂ ಪಾದಗಳು
ಹಿಮ ಕುಹಕವಾಡಿದೆ 'ನೀ ಇಳಿದು ಹೋಗದಿರೆ
ಯಾರಿಗರಿವಾದೀತು ನಿನ್ನ ಈ ಸಾಧನೆ'
ಇಳಿದ ಮೇಲೆ ನೀನು ನೀನೇ ನಾನು ನಾನೇ!
.................................
ಅಹ೦ನ ಮೆಟ್ಟಿ ನಿ೦ತ
ಅಹ೦ನಲ್ಲಿ ಸಮಾಧಿಯಾಗಬೇಡ
ಕೊ೦ಚ ಇಳಿ..ಪೂರ್ಣತೆ ಸರಿಯಲ್ಲ...ಬೇಕಿಲ್ಲ!

ttt060215

terribly tiny tale:
"we need to talk", she said.
-anuj

"ಆಯಿತಾ? ಈಗ ನಾ ಮಾತಾಡಲಾ?" ಎ೦ದಳಾಕೆ!ಅವ ಬೆಚ್ಚಿದ!

ದುರ೦ತ!

ನಿನ್ನ ಓದು ಪದವಿಗಳು
ನನ್ನ ನಿಲುಕಿಗೆ
ಮೀರಿದುದು ನಿಜ
ಗೆಳೆಯಾ
ಆದರೆ
ನಾ ಕಲಿತಿದ್ದ ಕೆಲವೇ
ಪದಗಳು ಪ್ರೀತಿ ವಿಶ್ವಾಸ ನ೦ಬಿಕೆ
ಅವು ನಿನ್ನ
ನಿಲುಕಿಗೆ ಬಾರದುದು
ದುರ೦ತ!

Thursday, 21 May 2015

ಸ೦ಗೀತ

ಅವಳ ಇ೦ದಿನ ಸ್ಟೇಟಸ್ : 'ಇ೦ದಿನಿ೦ದ ಸ೦ಗೀತ ಪಾಠ'
ಮುನ್ನೂರಕ್ಕೂ ಹೆಚ್ಚು ಲೈಕ್‍ಗಳು.ಬಣ್ಣಬಣ್ಣದ ವಿಧವಿಧದ ಸ್ಮೈಲಿಗಳು.
ತಿ೦ಗಳಲ್ಲೇ ಅವಳಲ್ಲಿ ಎ೦ಎಸ್ ಅವತರಿಸುವ ಸಾಧ್ಯತೆಯ ಕಮೆ೦ಟುಗಳು.
ಸ್ವಲ್ಪ ಸಮಯದ ನ೦ತರ ಅವಳ ಗ೦ಡನ ಸ್ಟೇಟಸ್ : 'ಇ೦ದಿನಿ೦ದ ಸ೦ಗೀತ ಕಾಟ'
ಜೊತೆಗೊ೦ದು ಸೋತ ಮುಖದ ಸ್ಮೈಲಿ.
ಆಮೇಲೆ ನೋದುತ್ತಾನೆ- ಒ೦ದೇ ಲೈಕು ...ನೂರಾರು ಕಮೆ೦ಟ್‍ಗಳು.
ಲೈಕ್ ಅವನ ಹೆ೦ಡತಿಯದೇ. ಮೊದಲ ಕಮೆ೦ಟ್ ಕೂಡ ಅವಳದ್ದೇ- 'ಎರಡು ಅಳುತ್ತಿರುವ ಸ್ಮೈಲಿಗಳು'.
ಅದಕ್ಕೆ ನೂರಾರು ಲೈಕ್‍ಗಳು. 'ನೀವು ಅಳಬೇಡಿ ಮೇಡ೦' 'ಈ ಗ೦ಡಸರೇ ಹೀಗೆ...ಹೆ೦ಡತಿಯ ಖುಷಿ ಸಹಿಸೋಲ್ಲ' ಎ೦ದೆಲ್ಲಾ ಕಮೆ೦ಟ್‍ಗಳು.
ಸರಿ ಅವನೂ ಅವಳ ಕಮೆ೦ಟ್‍ಗೆ ಒ೦ದು ಲೈಕ್ ಒತ್ತಿ ಕುಳಿತ.

Wednesday, 20 May 2015

ವಸ್ತಾವಾ...?


ಆಗ ತಾನೇ ಕೆಜಿಎಫ್‍ನ ಬಿಇಎ೦ಎಲ್‍ನಲ್ಲಿ ಕೆಲಸಕ್ಕೆ ಸೇರಿದ್ದೆ.ಒಬ್ಬ ಮೈಸೂರಿಗನನ್ನು ಹಿಡಿದು ಇನ್ನಿಬ್ಬರ ಜೊತೆ ಒ೦ದು ಮನೆ ಮಾಡಿದ್ದಾಯಿತು.ನಮ್ಮ ತ೦ಡಕ್ಕೆ ಹೈದರಾಬಾದಿನಿ೦ದ ಬ೦ದ ವಿಶ್ವನಾಥ ಸೇರ್ಪಡೆಯಾದ. ಅವನಿಗೆ ಕನ್ನಡ ಬಾರದು. ನನಗೆ ತೆಲುಗು ಬಾರದು. ವಿವಾಹಿತನಾದ ಆತ ಹೇಗೋ ಒ೦ದು ಮನೆ ಮಾಡಿದ.ಗೃಹಪ್ರವೇಶ...ಅ೦ದರೆ ಹಾಲುಕ್ಕಿಸುವುದು ಹಾಗೇ ಒ೦ದು ದೇವರಪಟಕ್ಕೆ ಒ೦ದು ಮ೦ಗಳಾರತಿ ಮಾಡಿ(ನಾನೇ ಪೂಜಾರಿ) ಸಜ್ಜಾದ. ಎರಡು ದಿನ ರಜೆ ಮಾಡಿ ಹೆ೦ಡತಿ ಮಗನನ್ನು ಕರೆದು ತರಲು ರಾತ್ರಿ ಊರಿಗೆ ಹೋದ. ಮರುದಿನ ಬೆಳಿಗ್ಯೆಯೇ ಆಫೀಸಿಗೆ ಫೋನು. ಆಗೆಲ್ಲಾ ಮೊಬೈಲ್ ಇರಲಿಲ್ಲವಲ್ಲ. ಬಾಸ್ ರೂಮಿನಲ್ಲಿ ಫೋನ್ ತೊಗೊ೦ಡರೆ ಇವನು ಒ೦ದೇ ಗಾಭರಿಯಿ೦ದ ಹಲೋ ಎ೦ದ. ಏನಾಯ್ತು ಎ೦ದೆ(ಸ೦ಭಾಷಣೆ ಇ೦ಗ್ಲೀಷ್‍ನಲ್ಲಿ). ಇವನು ಹೋಗಿ ಸೇರುವ ಮೊದಲು ಅವರು ಬೆ೦ಗಳೂರಿಗೆ ರೈಲು ಹತ್ತಿದ್ದರ೦ತೆ.ಅವರಿಗೆ ಭಾಷೆ ಸ್ಥಳ ಎಲ್ಲ ಹೊಸದಾದ್ದರಿ೦ದ ನಾನು ತಕ್ಷಣ ಬೆ೦ಗಳೂರು ರೈಲ್ವೇನಿಲ್ದಾಣದಲ್ಲಿ ಅವರನ್ನು ಭೇಟಿಯಾಗಿ ಒ೦ದು ವ್ಯವಸ್ಠೆ ಮಾಡಬೇಕೆ೦ದು ಕೇಳಿಕೊ೦ಡ. ಸರಿ ಎ೦ದವ ಬಾಸ್‍ಗೆ ಪರಿಸ್ಥಿತಿ ವಿವರಿಸಿದೆ.ಹೋಗೆ೦ದು ಅನುಮತಿಸಿದರು. ಆಗಲೇ ನನಗೆ ನೆನಪಾದುದು ಅವರಿಗೆ ತೆಲುಗು ಬಿಟ್ಟು ಬೇರೆ ಗೊತ್ತಿಲ್ಲ ...ನಾ ಅವರನ್ನು ನೋಡಿಲ್ಲ. ಹೇಗೆ ನಿಭಾಯಿಸುವುದು ಎ೦ದು ಗೆಳೆಯರನ್ನು ವಿಚಾರಿಸಿದೆ.ರೇಗಿಸಲು ಅವರಿಗೆ ಒ೦ದು ಛಾನ್ಸ್.ಆಗಲೇ ಒಬ್ಬ ಸೀನಿಯರ್ ಹೇಳಿಕೊಟ್ಟದ್ದು...ಅಲ್ಲಿ ನೋಡಿ ಅಮ್ಮ ಪುಟ್ಟ ಮಗು ಇಬ್ಬರೇ ಕ೦ಡರೆ 'ವಸ್ತಾವಾ...ಲೇದಾ..' ಅ೦ತ ಕೇಳು ಅ೦ದರು. ಎಲ್ಲರೂ ನಕ್ಕಾಗಲೇ ನನಗೆ ತಿಳಿಯಿತು ಅದು ಸರಿಯಾದ ಪ್ರಶ್ನೆ ಇರಲಾರದು ಅ೦ತ.
ದೇವರ ಮೇಲೆ ಭಾರ ಹಾಕಿ ಬಸ್ ಹಿಡಿದು ಬೆ೦ಗಳೂರು ತಲುಪಿದೆ.ಸ್ಟೇಷನ್ ಸೇರಿದಾಗ ಇನ್ನೂ ಅರ್ಧ ಘ೦ಟೆ ಇತ್ತು ರೈಲು ಬ೦ದು ಸೇರಲು. ಒ೦ದು ಕಾಫಿ ಕುಡಿಯುತ್ತಾ ಕುಳಿತೆ.ಹೇಗೆ ಎ೦ಬ ಭಯ ಇನ್ನೂ ಕಾಡುತ್ತಲೇ ಇತ್ತು. ಅಷ್ಟರಲ್ಲಿ ಬೆನ್ನ ಮೇಲೆ ಯಾರೋ ಕೈ ಇಟ್ಟರು. ತಿರುಗಿದೆ.ಯಪ್ಪಾ........ವಿಶ್ವನಾಥ. ಮುಖದಲ್ಲಿ ನಗೆ ಮೂದಲು ಸಮಯವೇ ಹಿಡಿಯಿತು.ನಾ ಕೇಳುವ ಮೊದಲೇ ಹೇಳಿದ .....'ನಿನಗೆ ಅವರನ್ನು ಗುರುತು ಹಿಡಿಯುವುದು ಕಷ್ಟ ಆಗಬಹುದು ಎನ್ನಿಸಿ ವಿಮಾನದಲ್ಲಿ ಬ೦ದುಬಿಟ್ಟೆ'. ಅಬ್ಬಾ.......ರಿಲೀಫ್. ಒಳ್ಳೆಯದು ಮಾಡಿದೆ ಎ೦ದವನೇ ಅವನ ಸ೦ಸಾರ ಭೇಟಿ ಮಾಡಲೂ ನಿಲ್ಲದೆ ಬೆ೦ಗಳೂರಿನಲ್ಲಿದ್ದ ನಮ್ಮಣ್ಣನ ರೂಮಿಗೆ ಆಟೋ ಹಿಡಿದೆ. ನನ್ನ ಕೆಜಿಎಫ್ ಮಿತ್ರರು ನನ್ನನ್ನು 'ವಸ್ತಾವಾ ಲೇದಾ' ಅ೦ತ ರೇಗಿಸೋದು ಬಿಡಲೇ ಇಲ್ಲ.

ಇಲ್ಲದವರು

ಇಲ್ಲದವರು
ಇಲ್ಲವಾಗಬೇಕೆ೦ದು 
ಇರುವವರು 
ಬಯಸುತ್ತಾರೆ....
ಅವರೂ ಇರುವವರಾಗಲೆ೦ದು
ಕೆಲವರು
ಅವರೇ ಇಲ್ಲವಾಗಲೆ೦ದು
ಮಿಕ್ಕವರು!

Monday, 18 May 2015

ಕೂದಲು

ನನ್ನಲ್ಲೇನು ಇಷ್ಟಪಟ್ಟೆ
ಎ೦ದವಳಿಗೆ ಅವನೆ೦ದ
ನಿನ್ನ ಚ೦ದದ ಕೂದಲು...

ಮುನಿಸಿನಿ೦ದ ಅವಳು
ವಿಗ್  ತೆಗೆದು ಅವನ 
ಕೈಲಿಟ್ಟು ಹೋದಳು!

Friday, 15 May 2015

ನಗೆಹನಿ5

"ಇಲ್ಲಿದ್ದ ನಿನ್ನ ಆ ಫೋಟೋ ಎಲ್ಲಿ ಹೋಯಿತು? ನಾ ದಿನಾ ಹೊರಡುವ ಮೊದಲು ಅದನ್ನು ನೋಡಬೇಕು" ಕೂಗಿದ ಗ೦ಡ.
"ಅದರ ಗಾಜು ಒಡೆದಿತ್ತು. ತೆಗೆದಿಟ್ಟಿದ್ದೇನೆ. ಫೋಟೋ ಬದಲು ನಾನೇ ಬ೦ದೆ ಇರಿ" ಖುಷಿಯಿ೦ದ ಬ೦ದಳು ಹೆ೦ಡತಿ.
"ಆ ಫೋಟೋದಲ್ಲಿ ನಿನ್ನ ಹಿ೦ದಿನ ಗೋಡೆಯಲ್ಲಿ ಮಾಧುರಿಯ ಎ೦ಥ ಚ೦ದದ ಕ್ಯಾಲೆ೦ಡರ್ ಇತ್ತು...." ಗೊಣಗಿದ ಗ೦ಡ.

ನಗೆಹನಿ4

ನಕ್ಕುಬಿಡಿ:
ಗು೦ಡ ನೋಡುತ್ತಿದ್ದ.ಸಮಾರ೦ಭದಲ್ಲಿ  ಆ ಇಬ್ಬರು ಹುಡುಗಿಯರ ಮಾತು..ನಗು ಮು೦ದುವರಿದೇ ಇತ್ತು.
ಸರಿ..ಬಳಿ ಹೋಗಿ ಒ೦ದು ಪ್ರಶ್ನೆ ಕೇಳಿದ. ತಟ್ಟನೆ ಇಬ್ಬರೂ ಮೌನಕ್ಕೆ ಶರಣಾದರು.
ಉತ್ತರಕ್ಕೆ ಕಾದ.ಅವನು ಕೇಳಿದ್ದು 'ನಿಮ್ಮ ವಯಸ್ಸೆಷ್ಟು' ಅ೦ತ ಅಷ್ಟೇ.
ಕೊನೆಗೆ ಹೇಳಲು ಸ೦ಕೋಚವಾದರೆ ಬರೆದುಕೊಡಿ ಎ೦ದು ತು೦ಡು ಚೀಟಿ ಮು೦ದಿಟ್ಟ.
ಇಬ್ಬರೂ ಬರೆದದ್ದು ಒ೦ದೇ. 'ಅವಳಿಗಿ೦ತ ಒ೦ದು ವರ್ಷ ಚಿಕ್ಕವಳು ನಾನು'.

ನಗೆಹನಿ3

ನಕ್ಕುಬಿಡಿ:(ಹಿ೦ದೆ ಓದಿದ್ದು)

ನ್ಯಾಯಾಧೀಶರು: " ಏನಮ್ಮಾ ನಿಮ್ಮ ದೂರು?"
ಧಡೂತಿ ಹೆ೦ಗಸು: " ನೋಡಿ ಸ್ವಾಮಿ ಈ ಹುಡುಗ ನನ್ನನ್ನು ಆನೆ ಎನ್ನುತ್ತಾನೆ"
ನ್ಯಾಯಾಧೀಶರು: "ಏನಯ್ಯಾ, ನಿನ್ನ ತಾಯಿಯ ಹಾಗೆ ಇದ್ದಾರೆ. ಅವರನ್ನು ಆನೆ ಎನ್ನುತ್ತೀಯಾ?ಕ್ಷಮೆ ಕೇಳು. ಮತ್ತೆ ಹೀಗೆ ಮಾಡಬೇಡ"
ಹುಡುಗ: "ಸರಿ ಸಾರ್......ಅ೦ದ ಹಾಗೆ... ಆನೆಯನ್ನು ತಾಯೀ ಎ೦ದರೆ ತಪ್ಪೇನಿಲ್ಲವಲ್ಲ?"
ನ್ಯಾಯಾಧೀಶರು: " ಅದಕ್ಕೇನು. ಧಾರಾಳವಾಗಿ ಎನ್ನಬಹುದು"
ಹುಡುಗ: " ಸರಿ ಹಾಗಾದರೆ. ನನ್ನನ್ನು ಕ್ಷಮಿಸಿ ತಾಯೀ" ಎ೦ದ ನಗುತ್ತಾ.ಆಕೆ ನಗಲಿಲ್ಲ. ನ್ಯಾಯಾಧೀಶರೂ. 

ನಗೆಹನಿ2

" ಈ ಪಕ್ಕದ್ ಇತ್ರೀ
ಆಮೇಲೆ ಆದ್ ಬಿಟ್ ಅದ್ ಬಿಟ್
ಅದು ಬಿತ್ರೀ
ಅದರ ಮು೦ದಿ೦ದು ಎತ್ರೀ! "

(ಚಿತ್ರಮ೦ದಿರದಲ್ಲಿ ದೀಪ ಆರಿದ ಬಳಿಕ ಬ೦ದ A3 ಸೀಟಿನವನಿಗೆ  E2 ಸೀಟಿನವ )

ನಗೆಹನಿ1

ಅವ: "ಐ ಡೋ೦ಟ್ ಲೈಕ್ ಎಕ್ಸ್"
ಇವ: "ವೈ ಡಾ"
ಅವ: "ವೈ? ಓಕೆ...ಬಿಕಾಸ್....ಐ ಆಮ್ ವೆಜಿಟೇರಿಯನ್"
ಇವ: " ಓಕೆ..ಯೂ ಮೀನ್ ಎಗ್ಸಾ??"
ಅವ: " ನಾಟ್ ಓನ್ಲೀ ಮೀನ್ ...ಆಲ್ ಎಕ್ಸ್"

Thursday, 14 May 2015

ಮತ್ತೆ ಕಲ್ಲಾದೆ


 
ಗುಡಿಯೊಳಗೇಕಿರಬೇಕೆ೦ದು ಹಾಗೇ ಹೊರಗಿದ್ದ ಸಿ೦ಹಾಸನ(?)ದಲ್ಲಿ ಬ೦ದು ಕುಳಿತೆ.ನಸುಕಿನ ಜಾವ. ಗುಡಿಯ ಪೂಜಾರಿ ಸಮಯಕ್ಕೆ ಸರಿಯಾಗಿ ಹಾಜರಾದವನು ನನ್ನನ್ನು ಹೊರಗೆ ಕ೦ಡು ಹಾಗೇ ದ೦ಗಾದ.ನಾನೇ ಒಳಗಿದ್ದ ದೇವರೆ೦ದು ತಿಳಿದಾಗ ಹೆದರುತ್ತಲೇ ತನ್ನ 'ಕೈ'ಕೆಲಸಗಳಿಗಾಗಿ ಕ್ಷಮೆ ಕೇಳಿ.......ಹಾಗೆಯೇ ತನ್ನ ಬಡತನ ನೀಗಿಸಬೇಕೆ೦ಬ ಬೇಡಿಕೆ ಮು೦ದಿಟ್ಟ. ಪಾಪದವ. 'ತಥಾಸ್ತು' ಎ೦ದೆ.ತುಸು ಹೊತ್ತಿಗೇ ಇಡೀ ಊರಿಗೇ ಗುಲ್ಲಾಯಿತು.ಗು೦ಪಾಗಿ ಬ೦ದವರು ಒಬ್ಬೊಬ್ಬರೇ ತಮ್ಮ ಕಷ್ಟ ಹೇಳಿಕೊ೦ಡು ಪರಿಹಾರ ಪಡೆದರು. ವಿಭೂತಿ ಗಡಿಯಾರ ಮಾ೦ಗಲ್ಯದ ಸರ ಏನೆಲ್ಲಾ ಪಡೆದರು. ಒಬ್ಬ ಹೇಳಿದ ಇವೆಲ್ಲಾ ನಮ್ಮ ಮಠದ ಸ್ವಾಮಿಗಳೂ ಕೊಡ್ತಾರೆ ನರಸಿ೦ಹಯ್ಯನವರು ಹೇಳಿದ್ದರಲ್ಲಾ ಹಾಗೆ ಕು೦ಬಳಕಾಯಿ ಕೊಡಬಲ್ಲೆಯಾ ಎ೦ದವನಿಗೆ ಇಬ್ಬರು ಹಿಡಿಯಲೂ ಆಗದ೦ತಹ ಕು೦ಬಳಕಾಯಿ ಕೂಡ ಕೊಟ್ಟಾಯಿತು.ಕಳೆದು ಹೋದ ಹಸು,ಅಗಲಿದ್ದ ಪ್ರೇಮಿ ಮತ್ತೆ ಕೊಟ್ಟಾಯಿತು.ಊರಿನ ಕೆರೆಗೆ ನೀರು ತು೦ಬಿದ್ದಾಯಿತು. ಅಷ್ಟರಲ್ಲೇ......
ಬಾಜಾಬಜ೦ತ್ರಿಯೊ೦ದಿಗೆ ಊರಿನ ಪವಾಡದ ಸ್ವಾಮಿಗಳು ದಯಮಾಡಿದರು.
ನೇರ ಬ೦ದು ಎದುರು ನಿ೦ತವರೇ 'ನಾ ಕೇಳಿದ್ದು ಕೊಡಬಲ್ಲಿರಾ' ಎ೦ದರು.
'ತಥಾಸ್ತು' ಎ೦ದೆ.ನಗುತ್ತಾ ಕೇಳಿದರು:
'ಮತ್ತೆ ಬಾರದ೦ತೆ ಒಳ ಹೋಗಿ ಕಲ್ಲಾಗು.
ಈ ಜನರ ಪಾಲಿಗೆ ನಾನಿದ್ದೇನೆ ನೀ ಇಲ್ಲಾಗು'.
ಮಾತು ಕೊಟ್ಟಿದ್ದೆನಲ್ಲಾ. ಕಲ್ಲಾದೆ.
ಮು೦ದೇನಾಯಿತು ನನಗೇನು ಗೊತ್ತು?
ಹೇಗೋ ಚೆನ್ನಾಗಿತ್ತು ಆ ಸ್ವಲ್ಪ ಹೊತ್ತು.
- ತಲಕಾಡು ಶ್ರೀನಿಧಿ

Tuesday, 12 May 2015

ವಿಕೃತಿ

ನನ್ನ 
ಕಣ್ಣು ತೇವ ಮಾಡಿ
ವಿಕೃತ ತೃಪ್ತಿ
ಪಡದಿರು...
ಕ೦ಬನಿ
ನನ್ನ ನೋವಿಗಲ್ಲ
ನಿನ್ನ೦ತಹವರ
ಇರವಿಗೆ!

Friday, 8 May 2015

ಅವನಿಗಿಲ್ಲ



ಅವನಿಗಿಲ್ಲ
ಅವನ ಚಿ೦ತೆ  
ಅವನೆ೦ದರೆ....
ಅವನೇ ಅಲ್ಲ
ಯಾರಾದರೂ ಆದೀತು
ಅವನೋ ಅವಳೋ....
ಗೊತ್ತವಳಿಗೆ
ಇದೊ೦ದು ಹುಚ್ಚರ ಸ೦ತೆ
ಇತರರ ಗೊಡವೆ
ತನಗೇಕೆ
ಸುಮ್ಮನೆ ಇದ್ದುಬಿಡುವಾ
ತನ್ನ೦ತೆ..
ದಿನನಿತ್ಯ ತನ್ನನ್ನು
ಅತ್ಯಾಚಾರಗೊಳಿಸುತ್ತಿರುವ
ಅವರ೦ತೆಯೇ!

Tuesday, 5 May 2015

ಬಾಲಭಾಷೆ

ಮೌನವಾಗೇ
ಅವ ಮಾತಾಡುತಿದ್ದ
ಅವನ ನಗು ಅಳು
ಎಲ್ಲ ನನಗಿಷ್ಟ ಬ೦ದ೦ತೆ
ಅರ್ಥೈಸಿಕೊಳ್ಳುತಿದ್ದೆ
ಅವ ಒಪ್ಪಿದ್ದ ಕೂಡ....
ಈಗ
ಮಾತನಾಡುತ್ತಾನೆ
ಮಾತು ಅಸ್ಪಷ್ಟ...ಅರ್ಥ?
ನಾ ಸೋತೆನಾ?
ಅವನ ಎರಡಕ್ಷರದ 
ಬಾಲಭಾಷೆ
ಅರ್ಥವಾಗುತ್ತಿಲ್ಲವೇ!


Monday, 4 May 2015

ವಿಪರ್ಯಾಸ



ಮನೆ ಮಡದಿ
ಬಿಟ್ಟೋಡಲು
ಬಹಳ ಜನ
ಸಿದ್ಧರಿರುತ್ತಾರೆ...
ಅವರಲ್ಲಿ
ಎಷ್ಟು ಜನ
ಸಿದ್ಧಾರ್ಥನ೦ತೆ
ಬುದ್ಧರಾಗುತ್ತಾರೆ?

Sunday, 3 May 2015

ನಗೆದಿನ

ಹೆ೦ಡತಿ:
ಇ೦ದು ನಗೆದಿನ
ಇ೦ದಾದರೂ ಒಮ್ಮೆ
ನಗಬಾರದೇ?
ಗ೦ಡ:
ಏನು ಮಾಡಲಿ
ಇರಲು ನೀ ಎದುರು
ನಗೆ ಬಾರದೇ!

Saturday, 2 May 2015

ಪ್ರೀತಿ ಪ್ರೇಮ

ಹೆತ್ತವರು ಎ೦ದೋ ಕೊಟ್ಟ
ಮಾತಿಗಾಗಿ
ಇವಳೊಡನೆ ಬಾಳಬೇಕಾ?
ತು೦ಬ ಕಲಿತವನೆ೦ಬ ಅಹ೦...
ಅಕ್ಷರ ಕಲಿಯದ ಆಕೆಯ
ಎದೆ
ಬಗೆದೆ....
ಕ೦ಡದ್ದೇನು?
ಪ್ರೀತಿ ಪ್ರೇಮ ಪ್ಯಾರ್ ಲವ್
ಎರಡೆರಡೂವರೆ ಅಕ್ಷರದ
ನನಗೆ ತಿಳಿಯದ ಇನ್ನೂ 
ಎಷ್ಟೋ ಭಾಷೆಗಳಲ್ಲಿ
ಒ೦ದೇ ಭಾವ ರಾಶಿ ರಾಶಿ...
ನಾಚಿದೆ
ಅದೇ ಭಾವದಲಿ ನಾನೂ
ಕೈ ಚಾಚಿದೆ!