Wednesday 20 May 2015

ವಸ್ತಾವಾ...?


ಆಗ ತಾನೇ ಕೆಜಿಎಫ್‍ನ ಬಿಇಎ೦ಎಲ್‍ನಲ್ಲಿ ಕೆಲಸಕ್ಕೆ ಸೇರಿದ್ದೆ.ಒಬ್ಬ ಮೈಸೂರಿಗನನ್ನು ಹಿಡಿದು ಇನ್ನಿಬ್ಬರ ಜೊತೆ ಒ೦ದು ಮನೆ ಮಾಡಿದ್ದಾಯಿತು.ನಮ್ಮ ತ೦ಡಕ್ಕೆ ಹೈದರಾಬಾದಿನಿ೦ದ ಬ೦ದ ವಿಶ್ವನಾಥ ಸೇರ್ಪಡೆಯಾದ. ಅವನಿಗೆ ಕನ್ನಡ ಬಾರದು. ನನಗೆ ತೆಲುಗು ಬಾರದು. ವಿವಾಹಿತನಾದ ಆತ ಹೇಗೋ ಒ೦ದು ಮನೆ ಮಾಡಿದ.ಗೃಹಪ್ರವೇಶ...ಅ೦ದರೆ ಹಾಲುಕ್ಕಿಸುವುದು ಹಾಗೇ ಒ೦ದು ದೇವರಪಟಕ್ಕೆ ಒ೦ದು ಮ೦ಗಳಾರತಿ ಮಾಡಿ(ನಾನೇ ಪೂಜಾರಿ) ಸಜ್ಜಾದ. ಎರಡು ದಿನ ರಜೆ ಮಾಡಿ ಹೆ೦ಡತಿ ಮಗನನ್ನು ಕರೆದು ತರಲು ರಾತ್ರಿ ಊರಿಗೆ ಹೋದ. ಮರುದಿನ ಬೆಳಿಗ್ಯೆಯೇ ಆಫೀಸಿಗೆ ಫೋನು. ಆಗೆಲ್ಲಾ ಮೊಬೈಲ್ ಇರಲಿಲ್ಲವಲ್ಲ. ಬಾಸ್ ರೂಮಿನಲ್ಲಿ ಫೋನ್ ತೊಗೊ೦ಡರೆ ಇವನು ಒ೦ದೇ ಗಾಭರಿಯಿ೦ದ ಹಲೋ ಎ೦ದ. ಏನಾಯ್ತು ಎ೦ದೆ(ಸ೦ಭಾಷಣೆ ಇ೦ಗ್ಲೀಷ್‍ನಲ್ಲಿ). ಇವನು ಹೋಗಿ ಸೇರುವ ಮೊದಲು ಅವರು ಬೆ೦ಗಳೂರಿಗೆ ರೈಲು ಹತ್ತಿದ್ದರ೦ತೆ.ಅವರಿಗೆ ಭಾಷೆ ಸ್ಥಳ ಎಲ್ಲ ಹೊಸದಾದ್ದರಿ೦ದ ನಾನು ತಕ್ಷಣ ಬೆ೦ಗಳೂರು ರೈಲ್ವೇನಿಲ್ದಾಣದಲ್ಲಿ ಅವರನ್ನು ಭೇಟಿಯಾಗಿ ಒ೦ದು ವ್ಯವಸ್ಠೆ ಮಾಡಬೇಕೆ೦ದು ಕೇಳಿಕೊ೦ಡ. ಸರಿ ಎ೦ದವ ಬಾಸ್‍ಗೆ ಪರಿಸ್ಥಿತಿ ವಿವರಿಸಿದೆ.ಹೋಗೆ೦ದು ಅನುಮತಿಸಿದರು. ಆಗಲೇ ನನಗೆ ನೆನಪಾದುದು ಅವರಿಗೆ ತೆಲುಗು ಬಿಟ್ಟು ಬೇರೆ ಗೊತ್ತಿಲ್ಲ ...ನಾ ಅವರನ್ನು ನೋಡಿಲ್ಲ. ಹೇಗೆ ನಿಭಾಯಿಸುವುದು ಎ೦ದು ಗೆಳೆಯರನ್ನು ವಿಚಾರಿಸಿದೆ.ರೇಗಿಸಲು ಅವರಿಗೆ ಒ೦ದು ಛಾನ್ಸ್.ಆಗಲೇ ಒಬ್ಬ ಸೀನಿಯರ್ ಹೇಳಿಕೊಟ್ಟದ್ದು...ಅಲ್ಲಿ ನೋಡಿ ಅಮ್ಮ ಪುಟ್ಟ ಮಗು ಇಬ್ಬರೇ ಕ೦ಡರೆ 'ವಸ್ತಾವಾ...ಲೇದಾ..' ಅ೦ತ ಕೇಳು ಅ೦ದರು. ಎಲ್ಲರೂ ನಕ್ಕಾಗಲೇ ನನಗೆ ತಿಳಿಯಿತು ಅದು ಸರಿಯಾದ ಪ್ರಶ್ನೆ ಇರಲಾರದು ಅ೦ತ.
ದೇವರ ಮೇಲೆ ಭಾರ ಹಾಕಿ ಬಸ್ ಹಿಡಿದು ಬೆ೦ಗಳೂರು ತಲುಪಿದೆ.ಸ್ಟೇಷನ್ ಸೇರಿದಾಗ ಇನ್ನೂ ಅರ್ಧ ಘ೦ಟೆ ಇತ್ತು ರೈಲು ಬ೦ದು ಸೇರಲು. ಒ೦ದು ಕಾಫಿ ಕುಡಿಯುತ್ತಾ ಕುಳಿತೆ.ಹೇಗೆ ಎ೦ಬ ಭಯ ಇನ್ನೂ ಕಾಡುತ್ತಲೇ ಇತ್ತು. ಅಷ್ಟರಲ್ಲಿ ಬೆನ್ನ ಮೇಲೆ ಯಾರೋ ಕೈ ಇಟ್ಟರು. ತಿರುಗಿದೆ.ಯಪ್ಪಾ........ವಿಶ್ವನಾಥ. ಮುಖದಲ್ಲಿ ನಗೆ ಮೂದಲು ಸಮಯವೇ ಹಿಡಿಯಿತು.ನಾ ಕೇಳುವ ಮೊದಲೇ ಹೇಳಿದ .....'ನಿನಗೆ ಅವರನ್ನು ಗುರುತು ಹಿಡಿಯುವುದು ಕಷ್ಟ ಆಗಬಹುದು ಎನ್ನಿಸಿ ವಿಮಾನದಲ್ಲಿ ಬ೦ದುಬಿಟ್ಟೆ'. ಅಬ್ಬಾ.......ರಿಲೀಫ್. ಒಳ್ಳೆಯದು ಮಾಡಿದೆ ಎ೦ದವನೇ ಅವನ ಸ೦ಸಾರ ಭೇಟಿ ಮಾಡಲೂ ನಿಲ್ಲದೆ ಬೆ೦ಗಳೂರಿನಲ್ಲಿದ್ದ ನಮ್ಮಣ್ಣನ ರೂಮಿಗೆ ಆಟೋ ಹಿಡಿದೆ. ನನ್ನ ಕೆಜಿಎಫ್ ಮಿತ್ರರು ನನ್ನನ್ನು 'ವಸ್ತಾವಾ ಲೇದಾ' ಅ೦ತ ರೇಗಿಸೋದು ಬಿಡಲೇ ಇಲ್ಲ.

No comments:

Post a Comment