Sunday, 26 April 2015

ARE WE?

Me and
my life...
I never
shouted but
lived that way
everyday since
I knew myself.
Maybe I
crossed the limit
sometimes...and promptly
correted self...and
mended my ways.
Now I am
aware where my
boundary ends....
and beyond
it belongs to
somebody else who
like me has his own
space...and better know
his boundaries.
Stretched hand
even beyond boundary
to lift somebody or
to wipe a tear
sure makes one - human
and if it is to hurt
or for some nasty reason
alas.....it is the
victory of inner demon!
human we are.....or
are WE?

Friday, 24 April 2015

ಮನೆಯಾಕೆ.

ಮನೆಯ ಎಲ್ಲರ
ಬೇಕು ಬೇಡ ಪೂರೈಸುತ್ತಾಳೆ
ಮನೆಯಾಕೆ....

ಅದಕೇ ಇರಬೇಕು
ಎನಿಸುತ್ತದೆ ಅವಳಿಲ್ಲದ
ಮನೆ ಯಾಕೆ?

Thursday, 23 April 2015

ನಾನಿಲ್ಲದೆ ನೀನಿಲ್ಲ

ನಾನಿಲ್ಲದೆ
ನೀನಿಲ್ಲವೆ೦ಬ ಅರಿವೇ
ಇಲ್ಲವೇ ನಿನಗೆ?
ನನಗಿ೦ತ ಬೆಳೆವ
ಉದ್ಧಟತನವೇ....
ನೆನಪಿರಲಿ ಇದು
ಆ ಉರಿವ ರವಿಯ ಭಿಕ್ಷೆ!
ಒಮ್ಮೆ ನಾ ಅವನೆಡೆ
ಮುಖ ಮಾಡಿ ನಡೆ-
ದರೆ ನೀ ನನ್ನತ್ತ
ನೋಡುವ೦ತೆಯೂ ಇಲ್ಲ!
ನನ್ನ ಬೆನ್ನ ಹಿ೦ದೆ
ಮುಖ ಮರೆಸಿ ನಡೆವುದಷ್ಟೇ
ನೆರಳಾಗಿ ನಿನ್ನ
ಹಣೆಬರಹ!!

Tuesday, 21 April 2015

ಅಕ್ಷಯ

ಅಕ್ಷಯತದಿಗೆಯ೦ದು
ಕೊ೦ಡದ್ದೆಲ್ಲಾ 
ವೃದ್ಧಿಯಾಗುವುದ೦ತೆ.....

ಕರವಸ್ತ್ರ ತ೦ದಿದ್ದೇನೆ
ಪ೦ಚೆಯಾಗುವುದಾ
ನೋಡೋಣ೦ತೆ!

Saturday, 18 April 2015

ವಾಕಿ೦ಗ್

ಎ೦ದಿನ೦ತೆ ವಾಕಿ೦ಗ್ ಹೊರಟಿದ್ದೆ. ತುಸು ದೂರ ನಡೆವಷ್ಟರಲ್ಲಿ...ಹಿ೦ದೆ ಹೆಜ್ಜೆ ಸಪ್ಪಳ. ಕಣ್ಣ೦ಚಿನಿ೦ದ ನೋಡಿದೆ.ಯಾರೋ ಪರಿಚಿತರೇನಲ್ಲ. ಮು೦ದೆ ಹೋಗುತ್ತಿದ್ದ೦ತೆ ಹೆಣ್ ವಾಸನೆ. ಹೌದು ಮಳೆಗೆ ಮೊದಲು ಬರುವ ಮಣ್ ವಾಸನೆ ಹೆಣ್ಣಿಗೆ ಬೇಗ ತಿಳಿಯುತ್ತೆ. ಅದೇ ಹೆಣ್ಣಿನ ವಾಸನೆ ಗ೦ಡಿಗೆ.ಈಗ ತಿರುಗಿ ನೋಡಿದೆ. ಎ೦ಟು ಹತ್ತು ಹೆ೦ಗಸರು. ಎದುರು ಅ೦ಗಡಿಯಲ್ಲಿದ್ದವರು...ತರಕಾರಿ ಗಾಡಿಯ ಬಳಿ ಇದ್ದವರು ಎಲ್ಲರೂ ಈ ಗು೦ಪು ಸೇರುತ್ತಿದ್ದ೦ತೆ ನನಗೆ  ಕೈ ಕಾಲು ನಡುಗತೊಡಗಿತು. ಯಾವುದಾದರೂ ರೇಪ್ ಸುದ್ದಿಯ ಜತೆ ನನ್ನ ಫೋಟೋ ಏನಾದರೂ ಮುದ್ರಿಸಿಬಿಟ್ಟಿದ್ದಾರಾ? ಅಯ್ಯೋ ಶಿವನೇ...ಎ೦ದುಕೊ೦ಡೆ.ಗು೦ಪು ದೊಡ್ಡದಾಗಿತ್ತು.ಸೀರೆ,ಚೂಡಿದಾರ್,ಮಿನಿ ಪ್ಯಾ೦ಟ್ ಎಲ್ಲ ಇದ್ದವು.ತಟ್ಟನೆ ನೆನಪಾಯಿತು. ಮನೆಯಲ್ಲಿ ಯಾರೂ ಇರದಿದ್ದರಿ೦ದ ವಾಕಿ೦ಗ್ ಹೊರಟಾಗ ಎ೦ದೂ ಇಲ್ಲದೆ..ಅದೇನೋ ನನ್ನ ಮಗ ಯಾವಾಗಲೂ ಪುಸ್ ಪುಸ್ ಎ೦ದು ಪೂಸಿಕೊಳ್ಳುತ್ತಿದ್ದ 'AXE' ಮೈಗೆ ಪೂಸಿಕೊ೦ಡಿದ್ದೆ. ಅದರ ಜಾಹಿರಾತು ನೆನಪಾಯಿತು.ಹಾಗೇ ನನ್ನವಳ ಸಿಟ್ಟಾದ ಮುಖವೂ. ತಕ್ಷಣ ಹಿ೦ದೆ ತಿರುಗಿ  ಜೋರಾಗಿ 'ಸ್ಟಾಪ್' ಎ೦ದು ಕಿರುಚಿದೆ. ಯಾಕ್ರೀ ಕನಸಲ್ಲಿ ಪೋಲೀಸ್ ಆಗಿದ್ರಾ.........ಎ೦ದ ನನ್ನವಳಿಗೆ ಏನೂ ಉತ್ತರಿಸದೆ ಮುಸುಕೆಳೆದುಕೊ೦ಡೆ.

ನಾ ನಾರು

'ನನ್ನ who
ಎನ್ನಲು ನೀನಾರು?'
'ನಿನ್ನ ಹೂ
ಎ೦ದ ನಾ ನಾರು!'

Saturday, 11 April 2015

ಹುಲ್ಲು ಹುಲ್ಲೆ

ನನ್ನವಳಿಗೆ ಒ೦ದೇ ಅಚ್ಚರಿ. "ಇಷ್ಟು ಹೊತ್ತು ರೂಮ್ ಬಾಗಿಲು ಹಾಕಿ ಏನು ಮಾಡುತ್ತಿದ್ದಿರಿ?"
ಕುತೂಹಲದಷ್ಟೇ ಅನುಮಾನವೂ ಪ್ರಶ್ನೆಯಲ್ಲಿತ್ತು.
"ಊಹಿಸು" ಎ೦ದೆ.
"ಇನ್ನೇನು ಯಾರದೋ ಜತೆ ಚಾಟ್ ಇರಬೇಕು"
"ಅಲ್ಲ"
"ನಿದ್ರೆ? ...ಇಲ್ಲ ಬಿಡೀ ನೀವು ಮಲಗೋವ್ರಲ್ಲ.....ಮತ್ತೆ ಏನಾದರೂ ಕವಿತೆ ಬರೀತಿದ್ದಿರಾ?"
"ಊ೦ಹೂ೦...ಅಲ್ಲ"
"ಮತ್ತೇ ಏನು ಹೇಳ್ರೀ" ಅನುಮಾನ ಪೂರ್ತಿ ಕುತೂಹಲವಾಗಿತ್ತು.
"ಇಲ್ಲಿ ನನ್ನ ಫೇಸ್‍ಬುಕ್ ಮಿತ್ರರೆಲ್ಲಾ ( Gurunath Boragi Latha Damle Shiela Nayak Mahantesh DiMahi Upendra Uppie ... ಹೀಗೇ ಸುಮಾರು ಜನ) ಚಿತ್ರ ಬರೀತಾರೆ ಅಥವಾ ಪೈ೦ಟ್ ಮಾಡ್ತಾರೆ. ಅದಕ್ಕೇ ನಾನೂ ಯಾಕೆ ಬರೀಬಾರ್ದೂ ಅ೦ತ...."
" ನೀವು ...ಚಿತ್ರ???" ಕಿಸಕ್ಕನೆ ನಕ್ಕಳು.
ನನ್ನ ಮುಖ ಗ೦ಭೀರವಾಗಿದ್ದದ್ದು ನೋಡಿ ಮೆಲ್ಲಗೆ "ತೋರಿಸ್ರೀ ಮತ್ತೆ" ಎ೦ದಳು.
ಜ೦ಭದಿ೦ದ ಮುಚ್ಚಿದ್ದ ಆ ಚಿತ್ರವನ್ನು ನಿಧಾನವಾಗಿ ಅನಾವರಣ ಮಾಡಿ ತೋರಿದೆ.
"ಹುಲ್ಲು ಹುಲ್ಲೆ" ಏನ್ರೀ ಇದೆ೦ತಹ ತಲೆಬರಹ.ಹುಲ್ಲು ಹುಲ್ಲೇ ಎಲ್ಲರಿಗೂ ಗೊತ್ತು. ಎಲ್ಲಿ ಹುಲ್ಲು?" ಎ೦ದಳು.
"ಹುಲ್ಲೆ ತಿ೦ದಿತು" ಎ೦ದೆ.
"ಮತ್ತೆ ಹುಲ್ಲೆ ಎಲ್ಲಿ?" ಎ೦ದಳು ಅಸಮಾಧಾನದಿ೦ದ.
"ಹುಲ್ಲು ತಿ೦ದ ಮೇಲೆ ಅದು ಯಾಕೆ ಇರುತ್ತೆ...ಹೊರಟು ಹೋಗಿದೆ" ಎ೦ದೆ ಬೀಗುತ್ತಾ.
"ನೀವೋ ನಿಮ್ಮ ಚಿತ್ರಾನೋ" ಹೊರ ನಡೆದಳು ತಲೆ ಚಚ್ಚಿಕೊಳ್ಳುತ್ತಾ.
(ಹಿ೦ದೆ ಓದಿದ್ದ ಒ೦ದು ನಗೆಹನಿ ಪ್ರೇರಿತ)

Thursday, 9 April 2015

ಮುತ್ತು

ಸಾಕಾಯಿತು ಕತ್ತಲು
ಇಲ್ಲೆಲ್ಲೋ ಕಳೆದಿದೆ ಮುತ್ತು
ಗೊಣಗಿದಳಾಕೆ
ಚ೦ದ್ರ ಸೂರ್ಯರನು
ತರುವೆ ಕಿತ್ತು
ಎದೆ ತಟ್ಟಿ ನಿ೦ತೆ
ಗೊತ್ತು.....ಗೊತ್ತು
ನಿಮ್ಮ ತಾಕತ್ತು
ಮೊದಲೇ ಕುಳ್ಳ
ಏಣಿಯೂ ಇಲ್ಲ
ಬಲ್ಬ್ ಬದಲಿಸಬೇಕಿತ್ತು
ನಿನ್ನ ಕಣ್ಣ ಬೆಳಕಲಿ
ಕಾಣುತಿದೆ ಕೆನ್ನೆ ತುಟಿ ಗಲ್ಲ
ಇರಲಿ ಬಿಡು ಕತ್ತಲೇ
ನನಗೂ ಬೇಕಿತ್ತು
ಒ೦ದು ಎರಡು....ಹತ್ತು!

Tuesday, 7 April 2015

ಹೀಗೂ ಒಬ್ಬ..

ಹೀಗೂ ಒಬ್ಬ..
------------
ನನ್ನದು ವಿಶಾಲ ಹೃದಯ
ಎ೦ದ
ನನಗಲ್ಲಿ ಜಾಗ ಇದೆಯಾ
ಎ೦ದುದಕ್ಕೆ ಒಳಗೆ
ಕರೆದೊಯ್ದು ತೋರಿಸಿದ!
ಎಲ್ಲ ಹೃದಯಗಳೂ
ಹೀಗೇ ಅಲ್ಲವಾ ಎ೦ದೆ
ಹುಚ್ಚಿ...ಇ೦ತಹದು ಇನ್ನೂ
ಮೂರಿದೆ ಎ೦ದ!
ಶಾಲೆಯಲ್ಲಿನ ವಿಜ್ಞಾನ ನೆನಪಾಯಿತು
ಇದು...ರಾಗ ಎಳೆದೆ
ಹೌದು ಎಡ ಹೃತ್ಕುಕ್ಷಿ ಎ೦ದ
ಹೊರಗೋಡಿ ಬ೦ದೆ!
ಪೆದ್ದಾ..ಹೃದಯ
ಹ೦ಚಬಾರದು..ಅದು ಎ೦ದಿಗೂ
ಒಬ್ಬರಿಗೇ ಎ೦ದೆ
ಮತ್ತೆ ಅವಳು ಮೊದಲೇ ಬ೦ದವಳು
ಏನೂ ಹೇಳಲೇ ಇಲ್ಲ
ಇರು ಕೇಳುತ್ತೇನೆ ಎ೦ದು
ಒಳ ಹೊಕ್ಕು ಬ೦ದವ ಗಾಭರಿ...
ಅವಳಿಲ್ಲ ಅಲ್ಲಿ!
ಹೌದೋ ಮಾರಾಯಾ...
ನನ್ನ ಒಳಗೆ ತ೦ದೆಯಲ್ಲಾ ಆಗಲೇ
ಅವಳು ಮಾಯ
ಈಗ ಹೇಳು
ಒಬ್ಬಳೇ ಆದರೆ ನಾನು ಒಳಗೆ
ಇಲ್ಲದಿದ್ದರೆ
ಇದೋ ವಿದಾಯ!

Saturday, 4 April 2015

ಮಿತಿ

ಅಳೆಯಹೊರಟೆ
ಅವಳ....
ಅದಕಿ೦ತ ದೊಡ್ಡ ತಪ್ಪು
ಇದುವರೆಗೆ ಮಾಡಿರಲಿಲ್ಲ!

ಅಳತೆಗೆ
ಸಿಗದಷ್ಟು
ಬೆಳೆದಿದ್ದಳಾಕೆ!

ನನ್ನ ವಾಮನನ ಮಾಡಿ
ತ್ರಿವಿಕ್ರಮನ೦ತೆ
ನನ್ನ ಇರುವೆಯ ಮಾಡಿ
ಆನೆಯ೦ತೆ
ನನ್ನ ಕಾಣದ೦ತೆ ಮಾಡಿ
ಸೂರ್ಯನ೦ತೆ
ಬೆಳೆದಿದ್ದ ಅವಳ
ಕಳೆದುಕೊ೦ಡೆ!

ನನ್ನ ಮತಿಯ ಮಿತಿಯ
ತಿಳಿದುಕೊ೦ಡೆ
ಸುಮ್ಮನಾದೆ
ಉಳಿದುಕೊ೦ಡೆ!

ಕೇಶ

ಬಿಳಿಯ ಅ೦ಗಿಯ
ಮೇಲೊ೦ದು
ಉದ್ದದ ಕಪ್ಪನೆಯ
ಕೇಶ...
ಸಾಕಾಯಿತು ನೆಪ
ಅವಳಿಗೆ
ತಾಳಲು ದುರ್ಗೆಯ
ವೇಷ!

ಎಲೆ ಶಿಶಿರ...!!!

ಇದು ಕವಿತೆಯಲ್ಲ
ಏಕೆ೦ದರೆ ...ನಾನು ಕವಿಯಲ್ಲ
ಗತವಾಗುವಾಗಿನ ಸ್ವಗತ ಇದು
ಭಲೇ ಎನ್ನದಿದ್ದರೆ ಬೇಡ
ಎಲೆ ಎ೦ದರೆ ಸಾಕು!

ಮಳೆ ಬಿಸಿಲುಗಳ ಮುದ್ದಾಡಿ
ಗಾಳಿಯೊಡನೆ ಗುದ್ದಾಡಿ
ಎತ್ತರ ಎತ್ತರ ಹೋದ೦ತೆ
ಹಸಿರಾಗೇ ಉಳಿದುಬಿಡುತ್ತೇನೆ೦ಬ
ಕೆಟ್ಟ ಭ್ರಮೆ .....

ಹಸಿರೆಲೆಯಾಗಿದ್ದವ ಉದುರೆಲೆ ಆಗಿ
ಮೇಲಿ೦ದ ಕೊ೦ಡಿ ಕಳಚಿ
ಕ೦ಠಪೂರ್ತಿ ಕುಡಿದವನ೦ತೆ
ಸ್ವಾಧೀನ ತಪ್ಪಿದ ಹಾರಾಟ
ನೆಲ ತಲುಪುವ ಮುನ್ನ
ಕೆಲ ನೆನಪುಗಳು...ಸವಿಯಾ?
ತಿಳಿಯದು

ಈ ಕೆಳಗಿನ ಕಟ್ಟೆಯ ಪ೦ಚಾಯತಿ
ಆಗಸ ಸೂರಾಗಿಸಿ ಹೊಡೆದ ಗೊರಕೆ
ತೊಯ್ದು ನಿ೦ತ ಪ್ರೇಮಿಗಳ ಬಿಸಿಯುಸಿರು
ಕೊ೦ಬೆ ಜಗ್ಗಿದ ಕೋತಿಗಳು
ಸ೦ಚುಗಳು...ಹೊ೦ಚುಗಳು
ಒ೦ದು ರಾತ್ರಿ ತ೦ದು ಹೂತಿಟ್ಟ
ಇ೦ದು ಗುಡಿಯಾಗಿರುವ ಉದ್ಭವಮೂರ್ತಿ.....

ಎಷ್ಟೆಲ್ಲಾ ನೆನಪಾಗುತ್ತಿದೆ
ಎಲ್ಲದಕ್ಕೂ ಮೂಕ ಸಾಕ್ಷಿಯಾಗಿದ್ದವ
ಈಗ ನನ್ನ೦ತೆಯೇ ನೆಲ ತಬ್ಬಿದವರೆಲ್ಲರ
ಜೊತೆ ಕಾಯುತ್ತಿದ್ದೇನೆ
ಆ ಒ೦ದು ಕಿಡಿಗೆ.....
ವಿದಾಯ ಹೇಳಲು ನನ್ನ ಸ೦ಸಾರಕ್ಕೆ
ಹೌದು ನನ್ನ ಸ೦ಸ್ಕಾರಕ್ಕೆ!

ಕಡಲೇ..

ಲೆಕ್ಕವಿಟ್ಟಿಲ್ಲ ಯಾರೂ
ನೀನಿತ್ತ ಮುತ್ತುಗಳಿಗೆ
ಕಡಲೇ....
ಕೊಡುತ್ತಲೇ ಇರುವ
ನಿನ್ನದೆ೦ಥ ಮಮತೆಯ
ಮಡಿಲೇ!