Saturday 4 April 2015

ಎಲೆ ಶಿಶಿರ...!!!

ಇದು ಕವಿತೆಯಲ್ಲ
ಏಕೆ೦ದರೆ ...ನಾನು ಕವಿಯಲ್ಲ
ಗತವಾಗುವಾಗಿನ ಸ್ವಗತ ಇದು
ಭಲೇ ಎನ್ನದಿದ್ದರೆ ಬೇಡ
ಎಲೆ ಎ೦ದರೆ ಸಾಕು!

ಮಳೆ ಬಿಸಿಲುಗಳ ಮುದ್ದಾಡಿ
ಗಾಳಿಯೊಡನೆ ಗುದ್ದಾಡಿ
ಎತ್ತರ ಎತ್ತರ ಹೋದ೦ತೆ
ಹಸಿರಾಗೇ ಉಳಿದುಬಿಡುತ್ತೇನೆ೦ಬ
ಕೆಟ್ಟ ಭ್ರಮೆ .....

ಹಸಿರೆಲೆಯಾಗಿದ್ದವ ಉದುರೆಲೆ ಆಗಿ
ಮೇಲಿ೦ದ ಕೊ೦ಡಿ ಕಳಚಿ
ಕ೦ಠಪೂರ್ತಿ ಕುಡಿದವನ೦ತೆ
ಸ್ವಾಧೀನ ತಪ್ಪಿದ ಹಾರಾಟ
ನೆಲ ತಲುಪುವ ಮುನ್ನ
ಕೆಲ ನೆನಪುಗಳು...ಸವಿಯಾ?
ತಿಳಿಯದು

ಈ ಕೆಳಗಿನ ಕಟ್ಟೆಯ ಪ೦ಚಾಯತಿ
ಆಗಸ ಸೂರಾಗಿಸಿ ಹೊಡೆದ ಗೊರಕೆ
ತೊಯ್ದು ನಿ೦ತ ಪ್ರೇಮಿಗಳ ಬಿಸಿಯುಸಿರು
ಕೊ೦ಬೆ ಜಗ್ಗಿದ ಕೋತಿಗಳು
ಸ೦ಚುಗಳು...ಹೊ೦ಚುಗಳು
ಒ೦ದು ರಾತ್ರಿ ತ೦ದು ಹೂತಿಟ್ಟ
ಇ೦ದು ಗುಡಿಯಾಗಿರುವ ಉದ್ಭವಮೂರ್ತಿ.....

ಎಷ್ಟೆಲ್ಲಾ ನೆನಪಾಗುತ್ತಿದೆ
ಎಲ್ಲದಕ್ಕೂ ಮೂಕ ಸಾಕ್ಷಿಯಾಗಿದ್ದವ
ಈಗ ನನ್ನ೦ತೆಯೇ ನೆಲ ತಬ್ಬಿದವರೆಲ್ಲರ
ಜೊತೆ ಕಾಯುತ್ತಿದ್ದೇನೆ
ಆ ಒ೦ದು ಕಿಡಿಗೆ.....
ವಿದಾಯ ಹೇಳಲು ನನ್ನ ಸ೦ಸಾರಕ್ಕೆ
ಹೌದು ನನ್ನ ಸ೦ಸ್ಕಾರಕ್ಕೆ!

No comments:

Post a Comment